ಝೆನ್ ಗುರುವಿನ ಪೆನ್ ಮತ್ತು ವೈನ್ : Tea time story

ಝೆನ್ ಗುರು ತನ್ನ ಪೆನ್ ಮತ್ತು ವೈನ್ ಬಾಟಲಿಗಳೆರಡನ್ನೂ ಬಹಳ ಜೋಪಾನವಾಗಿಟ್ಟುಕೊಂಡಿದ್ದ. ಶಿಷ್ಯರಿಗೆ ಮುಟ್ಟಲು ಕೊಡುತ್ತಿರಲಿಲ್ಲ. ಆದರೆ ಒಂದು ದಿನ ಶಿಷ್ಯನೊಬ್ಬ ಏನು ಮಾಡಿದ ಗೊತ್ತೇ…!?

zenಒಬ್ಬ ಝೆನ್ ಗುರುವಿನ ಬಳಿ ಎರಡು ಅಮೂಲ್ಯ ವಸ್ತುಗಳಿದ್ದವು. ಒಂದು ಪೆನ್ನು, ಇನ್ನೊಂದು ವೈನ್‌ ಬಾಟಲು. ಎರಡೂ ಬಹಳ ಬೆಲೆಯುಳ್ಳವು. ಆದರೆ, ಗುರು ಎಂಥಾ ಜಿಪುಣನಾಗಿದ್ದನೆಂದರೆ, ಆ ಪೆನ್ನನ್ನು ಆತ ಯಾರಿಗೂ ಬಳಸಲು ಕೊಟ್ಟಿರಲಿಲ್ಲ. ಸ್ವತಃ ತಾನೂ ಅದರಲ್ಲೊಮ್ಮೆಯೂ ಬರೆಯಲಿಲ್ಲ. ಹಾಗೆಯೇ ಆ ವೈನ್‌ ಬಾಟಲು ಕೂಡ. ಅದರ ಒಂದೇ ಒಂದು ತೊಟ್ಟನ್ನು ಕೂಡ ಆತ ಯಾರಿಗೂ ಕುಡಿಯಲು ಕೊಟ್ಟಿರಲಿಲ್ಲ; ತಾನೂ ರುಚಿನೋಡಿರಲಿಲ್ಲ. ವೈನ್‌ ಬಾಟಲನ್ನು ಯಾರೂ ಕದಿಯಬಾರದೆಂದು ಆತ ಅದು ಮಹಾವಿಷ ಎಂದು ಪ್ರಚಾರ ಬೇರೆ ಮಾಡಿದ್ದ. ಅದರ ಒಂದೇ ಒಂದು ತೊಟ್ಟು ನಾಲಗೆಗೆ ಬಿದ್ದರೂ ಮನುಷ್ಯ ಬದುಕಿರುವುದು ಅನುಮಾನ ಎಂದು ಮಠದ ಎಲ್ಲರಿಗೂ ಹೆದರಿಸಿದ್ದ.

ಗುರುವಿನ ಜಿಪುಣತನ ವಿದ್ಯಾರ್ಥಿಯೊಬ್ಬನಿಗೆ ಬೇಸರ ತರಿಸಿತ್ತು. ಹೇಗಾದರೂ ಈ ಗುರುವಿಗೆ ಬುದ್ಧಿ ಕಲಿಸಬೇಕೆಂದು ಶಿಷ್ಯನ ಮನಸ್ಸು ಹವಣಿಸುತ್ತಿತ್ತು. ಅದಕ್ಕೆ ಸರಿಯಾಗಿ ಒಮ್ಮೆ ಬೌದ್ಧ ಗುರು ಪಕ್ಕದ ಹಳ್ಳಿಗೆ ಭೇಟಿ ಕೊಡಬೇಕಾಗಿ ಬಂತು. ಅಲ್ಲಿಗೆ ಹೋಗಿ ಸಂಜೆ ಮಠಕ್ಕೆ ಹಿಂದಿರುಗುವಷ್ಟರಲ್ಲಿ ಆತನ ಶಿಷ್ಯ ಮಠದ ಒಂದು ಮೂಲೆಯಲ್ಲಿ ಕಂಬಳಿ ಹೊದ್ದು ಮಲಗಿದ್ದ.

ಗುರು ಏನಾಯಿತೆಂದು ವಿಚಾರಿಸಿದಾಗ ಶಿಷ್ಯ ಹೇಳಿದ, “ಏನು ಮಾಡಲಿ ಗುರುಗಳೇ! ಯಾವುದೋ ಕೆಲಸಕ್ಕೆಂದು ನಿಮ್ಮ ಕೋಣೆಗೆ ಹೋಗಿದ್ದ ನಾನು ಅಲ್ಲಿ ನಿಮ್ಮ ಲೇಖನಿಯನ್ನು ಅಚಾತುರ್ಯದಿಂದ ಮುರಿದುಬಿಟ್ಟೆ. ಅದು ಎಂಥಾ ಅಮೂಲ್ಯ ಲೇಖನಿ! ನಿಮಗೆ ಅದರ ಮೇಲೆ ಜೀವ ಎಂಬುದು ನನಗೆ ಗೊತ್ತಿಲ್ಲದ ಸಂಗತಿಯೇ? ಹಾಗಾಗಿ ಘನಘೋರವಾದ ತಪ್ಪು ಮಾಡಿದ ನನಗೆ ಸಾವೇ ಸರಿಯಾದ ಶಿಕ್ಷೆ ಎಂದು ನೀವು ಇಟ್ಟಿದ್ದ ವಿಷದ ಬಾಟಲಿಯನ್ನು ಒಂದು ಹನಿಯೂ ಉಳಿಯದಂತೆ ಕುಡಿದುಬಿಟ್ಟೆ ಗುರುಗಳೇ! ಈಗ ಸಾವನ್ನು ಎದುರುನೋಡುತ್ತ ಮಲಗಿದ್ದೇನೆ”.

(ಅರಳಿಮರ ಓದುಗರ ಸಂಗ್ರಹದಿಂದ….)

Leave a Reply