ವೃದ್ಧರಾಗುವ ಕಷ್ಟ ಯಾರಿಗೂ ಬೇಡ! : ಭರ್ತೃಹರಿಯ ವೈರಾಗ್ಯ ಶತಕ

ನಾವು ಯಾವುದನ್ನು ನಿತ್ಯವೆಂದು ಭ್ರಮಿಸುತ್ತೇವೆಯೋ ಅವು ಅನಿತ್ಯವಾಗಿರುತ್ತದೆ. ಶರೀರ, ಸಂಪತ್ತು, ಅಧಿಕಾರ, ರೂಪ ಇವೆಲ್ಲಾ ಇದ್ದಾಗ ಅವು ಶಾಶ್ವತವೆಂಬ ಭ್ರಮೆಯನ್ನುಂಟು ಮಾಡುತ್ತವೆ. ಆದರೆ ಅವೆಲ್ಲಾ ಹೋದಾಗ ಭ್ರಮೆ ನಿರಶನವಾಗಿ ಹುಚ್ಚು ಮನಸ್ಸು ಪುನಃ ಅವುಗಳ ಹಿಂದೆ ಧಾವಿಸುತ್ತದೆ….

ಗಾತ್ರಂ ಸಂಕುಚಿತಂ ಗತಿರ್ವಿಗಲಿತಾ ಭ್ರಷ್ಟಾಚದಂತಾವಲಿ-
ರ್ದೃಷ್ಟಿರ್ನಶ್ಯತಿ ವರ್ಧತೇ ಬಧಿರತಾ ವಕ್ತ್ರಂ ಚ ಲಾಲಾಯತೇ |
ವಾಕ್ಯಂ ನಾದ್ರಿಯತೇ ಚ ಬಾಂಧವಜನೋ ಭಾರ್ಯಾನ ಶುಶ್ರೂಷತೇ
ಹಾ! ಕಷ್ಟಂ ಪುರುಷಸ್ಯ ಜೀರ್ಣವಯಸಃಪುತ್ರೋಪ್ಯಮಿತ್ರಾಯತೇ || ವೈರಾಗ್ಯ ಶತಕ ||

ಅರ್ಥ: (ವೃದ್ಧನಾದವನ) ಶರೀರ ಕುಗ್ಗುತ್ತದೆ. ಸಂಚಾರ ಶಕ್ತಿ ಕುಂಠಿತವಾಗುತ್ತದೆ. ಹಲ್ಲುಗಳು ಬಿದ್ದು ಹೋಗುತ್ತವೆ. ದೃಷ್ಟಿ ಶಕ್ತಿ ಕುಗ್ಗುತ್ತದೆ. ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಬಾಯಲ್ಲಿ ಜೊಲ್ಲು ಸುರಿಯುತ್ತದೆ. ಪತ್ನಿ ಪುತ್ರರೂ ಕೈಬಿಡುತ್ತಾರೆ! ವೃದ್ಧಾಪ್ಯದ ಕಷ್ಟ ಯಾರಿಗೂ ಬೇಡ!!

ತಾತ್ಪರ್ಯ: “ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂ, ಯೌವನಂ, ಜರಾ. ತಥಾ ದೇಹಾಂತರ ಪ್ರಾಪ್ತಿಃ ಧೀರಸ್ತತ್ರ ನ ಮುಹ್ಯತೇ” ಇದು ಗೀತಾಚಾರ್ಯನ ನಲ್ನುಡಿ. ಈ ದೇಹ ವಿಕಾರಕ್ಕೆ ಒಳಗಾಗುತ್ತದೆ. ವಿಕಾರ ಅಂದರೆ ಬದಲಾವಣೆ ಎಂದು ಅರ್ಥ. ಬಾಲ್ಯ, ಕೌಮಾರ, ಯೌವನ, ವೃದ್ಧಾಪ್ಯ ಈ ನಾಲ್ಕು ಅವಸ್ಥೆಗಳಲ್ಲಿಯೂ ಶರೀರದ ಬಾಹ್ಯ ಸ್ವರೂಪ ನಿರಂತರವಾಗಿ ಬದಲಾಗುತ್ತದೆ. ಬಾಹ್ಯ ಸ್ವರೂಪ ಬದಲಾಗಿ ಅದು ಒಳಗಿನ ಪಕ್ವತೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ

ಜೀವನದಲ್ಲಿ ಪ್ರತಿ ಅವಸ್ಥೆಯೂ ಅನಿವಾರ್ಯ. ಎಷ್ಟು ಪ್ರಯತ್ನಪಟ್ಟರೂ ಯಾರಿಂದಲೂ ದೇಹಕ್ಕೆ ಬರುವ ಈ ಅವಸ್ಥೆಗಳನ್ನು ತಡೆಯಲಿಕ್ಕೆ ಆಗುವುದಿಲ್ಲ. ಯಾಕೆಂದರೆ, ಅವೆಲ್ಲಾ ಪ್ರಕೃತಿಕೃತವೇ ಹೊರತೂ, ಮನುಷ್ಯಕೃತವಲ್ಲ. ಆದರೆ ಪ್ರತಿ ಅವಸ್ಥೆಗೂ ಅದರದೇ ಆದ ವಿಶೇಷತೆ ಇದೆ. ಬಹುತೇಕವಾಗಿ ಬಾಲ್ಯ ಮತ್ತು ಮುಪ್ಪಿಗೆ ಹೆಚ್ಚಿನ ಅಂತರವಿಲ್ಲ. ಬಾಲ್ಯವು ಅವಲಂಬನೆಯಿಂದ ಕೂಡಿದ್ದು. ಅದರಂತೆ ಮುಪ್ಪೂ ಸಹ ಪರಾವಲಂಬನೆಗೆ ಒಳಗಾಗುತ್ತದೆ.

ಭರ್ತೃಹರಿ ನಿತ್ಯಾನಿತ್ಯ ವಸ್ತು ವಿಚಾರದಲ್ಲಿ ನಮ್ಮ ಗಮನವನ್ನು ಸೆಳೆಯುತ್ತಾನೆ. ನಾವು ಯಾವುದನ್ನು ನಿತ್ಯವೆಂದು ಭ್ರಮಿಸುತ್ತೇವೆಯೋ ಅವು ಅನಿತ್ಯವಾಗಿರುತ್ತದೆ. ಶರೀರ, ಸಂಪತ್ತು, ಅಧಿಕಾರ, ರೂಪ ಇವೆಲ್ಲಾ ಇದ್ದಾಗ ಅವು ಶಾಶ್ವತವೆಂಬ ಭ್ರಮೆಯನ್ನುಂಟು ಮಾಡುತ್ತವೆ. ಆದರೆ ಅವೆಲ್ಲಾ ಹೋದಾಗ ಭ್ರಮೆ ನಿರಶನವಾಗಿ ಹುಚ್ಚು ಮನಸ್ಸು ಪುನಃ ಅವುಗಳ ಹಿಂದೆ ಧಾವಿಸುತ್ತದೆ.

ವೃದ್ಧಾಪ್ಯದಲ್ಲಿ ಶರೀರ ಶಿಥಿಲವಾಗುತ್ತದೆ. ದೂರ ಓಡಾಡಲಿಕ್ಕೆ ಆಗುವುದಿಲ್ಲ. ಬಾಲ್ಯದ ಸಹವಾಸಿಗಳಾದ ಹಲ್ಲುಗಳು ಉದುರಿ ಹೋಗುತ್ತವೆ. ದೃಷ್ಟಿ ಶಕ್ತಿ ಕಡಿಮೆಯಾಗುತ್ತವೆ. ಕೇಳುವ ಶಕ್ತಿಯೂ ಕುಂಠಿತವಾಗುತ್ತದೆ.
ಆದ್ದರಿಂದ, ಯೌವನ ಕಾಲವನ್ನು, ವಯಸ್ಕ ಜೀವನವನ್ನು ಸಾರ್ಥಕತೆಯಿಂ ಕಳೆಯಬೇಕು; ಸದೃಢ ದೇಹವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು ಎಂಬುದು ಭರ್ತೃಹರಿಯ ಇಂಗಿತಾರ್ಥ.

Leave a Reply