ಆಲಸ್ಯವೇ ನಮ್ಮನ್ನು ಕೆಟ್ಟವರನ್ನಾಗಿಸುವುದು!

ಜ್ಞಾನೋದಯ ಹೊಂದುವುದು ಬಹಳ ಕಷ್ಟದ ಕೆಲಸ. ಆದರೆ ದೂಷಿಸುವುದು ಬಹಳ ಸುಲಭ. ಜ್ಞಾನೋದಯ ಹೊಂದುವುದು ಎಂದರೆ ಎಲ್ಲಕ್ಕಿಂತ ಮೊದಲು ನಮ್ಮ ಅಹಂ ಪ್ರವೃತ್ತಿಯನ್ನು ಕುಟ್ಟಿ ಪುಡಿ ಮಾಡಿ ಬಿಸುಟುವುದು. ಆಲಸಿಗಳಿಗೆ ಅದು ಸಾಧ್ಯವಿಲ್ಲದ ಮಾತು. ಉತ್ತಮರಾಗುವಿಕೆಯ ಪ್ರಯತ್ನದಲ್ಲಿ ಆಲಸ್ಯ ತೋರುವುದೇ ಯಾವುದೇ ವ್ಯಕ್ತಿಯು ದುಷ್ಟನಾಗುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ ~ ಓಶೋ

ಳ್ಳೆಯವರಿಗೆ ಕೆಟ್ಟದ್ದನ್ನ ಮಾಡುವುದು ಎಂದರೆ ಅದು ಆಕಾಶಕ್ಕೆ ಉಗುಳಿದಂತೆ. ಆದ್ದರಿಂದ ಸಜ್ಜನರ ತಂಟೆಗೆ ಹೋಗಬಾರದು.

ಮೊದಲು ನಾವು ಕೆಟ್ಟ ಜನರೇಕೆ ಒಳ್ಳೆಯವರ ತಂಟೆಗೆ ಹೋಗುತ್ತಾರೆಂದು ಅರ್ಥ ಮಾಡಿಕೊಳ್ಳೋಣ. ಅವರೇಕೆ ಸಜ್ಜನರನ್ನು ದೂಷಿಸುತ್ತಾರೆ? ಕಿರುಕುಳ ನೀಡುತ್ತಾರೆ? ಒಳ್ಳೆಯವರನ್ನು ನಿರ್ಮೂಲನೆ ಮಾಡಲು ಅವರೇಕೆ ಬಯಸುತ್ತಾರೆ? ಏಕೆಂದರೆ ಕೆಟ್ಟ ಜನರಿಗೆ ಮತ್ತೊಬ್ಬ ವ್ಯಕ್ತಿ ಒಳ್ಳೆಯವರಾಗಿರುವುದನ್ನು, ಬುದ್ಧಿವಂತರಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಮತ್ತೊಬ್ಬರ ಒಳ್ಳೆಯತನ ಅವರನ್ನು ನಿರಂತರವಾಗಿ ಹಿಂಸಿಸುತ್ತ ಇರುತ್ತದೆ. ಅದು ಅವರಿಗೆ ತಾವೆಷ್ಟು ಕೆಳ ಮಟ್ಟದಲ್ಲಿ ಇದ್ದೇವೆ ಅನ್ನುವುದನ್ನು ನೆನಪಿಸುತ್ತಲೇ ಇರುವುದು ಈ ಹಿಂಸೆಗೆ ಕಾರಣ. ಮತ್ತು ಈ ಹಿಂಸೆಯಿಂದ ಅವರು ಅಶಾಂತರಾಗುತ್ತಾರೆ. ಸಹನೆ ಕಳೆದುಕೊಂಡು ಚಡಪಡಿಸುತ್ತಾರೆ. ಆದ್ದರಿಂದಲೇ ಅವರು ಒಳ್ಳೆಯ ಜನರ ಮನಶ್ಶಾಂತಿ ಹಾಳುಗೆಡವಲು ಯತ್ನಿಸುವುದು.

ಯಾವುದೇ ವ್ಯಕ್ತಿಗೆ ಎರಡು ಅವಕಾಶಗಳಿರುತ್ತವೆ. ಒಂದು, ಸ್ವತಃ ತಾನು ಬುದ್ಧಿವಂತನಾ/ಳಾಗುವುದು. ಇದು ಬಹಳ ಕಷ್ಟದ ದಾರಿ. ವಿಪರೀತ ಶಕ್ತಿಯನ್ನೂ ಬದ್ಧತೆಯನ್ನೂ ಸಂಯಮವನ್ನೂ ಬೇಡುವ ದಾರಿ. ಇನ್ನು, ಎರಡನೆಯದು – ಬುದ್ಧಿವಂತರನ್ನು ದೂಷಿಸುವುದು! ಇದು ಬಹಳ ಅಗ್ಗ ಮತ್ತು ಸುಲಭ. ತಾನು ಬುದ್ಧಿವಂತನಾಗಲು ಸಾಧ್ಯವಿಲ್ಲದಿದ್ದರೆ ಏನಂತೆ? ಬುದ್ಧಿವಂತರಾಗಿರುವ ಮತ್ತೊಬ್ಬರನ್ನು ದೂಷಿಸಿ ನಮ್ಮ ಮಟ್ಟಕ್ಕೆ ಇಳಿಸಿಕೊಂಡರಾಯ್ತು! ಇದು ಆಲಸಿಗಳ ದಾರಿ. ಇದು ಸಾಮರ್ಥ್ಯವಿಲ್ಲದ ಹೇಡಿಗಳ ದಾರಿ.

ಇದು ಬಹಳ ಹಿಂದಿನಿಂದಲೂ ನಡೆದು ಬಂದಿರುವಂಥದ್ದೇ. ಏಸುವನ್ನು ಶಿಲುಬೆಗೇರಿಸಿದ್ದು ಯಾಕೆ ಹೇಳಿ ನೋಡೋಣ? ಸಾಕ್ರಿಟೀಸನಿಗೆ ವಿಷವಿಕ್ಕಿ ಕೊಂದಿದ್ದು ಯಾಕೆ? ಬುದ್ಧ – ಮಹಾವೀರರನ್ನು ಖಂಡಿಸುವುದು, ದೂಷಿಸುವುದು ಯಾಕೆ? ಬುದ್ಧ, ಮಹಾವೀರರು ಬದುಕಿದ್ದಾಗಲೂ ನಿರಂತರವಾಗಿ ಅಪಾಯವನ್ನು ಎದುರಿಸುತ್ತಿದ್ದರು. ಯಾಕೆ ಹೀಗೆ? ಉತ್ತರ ಇಷ್ಟೇ. ಕೆಲವು ಕೊಳೆತ – ಕೆಟ್ಟ ಮನಸ್ಸುಗಳು ಅವರ ಒಳ್ಳೆಯತನವನ್ನು, ಬುದ್ಧಿವಂತಿಕೆಯನ್ನು ಸಹಿಸುತ್ತಿರಲಿಲ್ಲ. ಅವರ ಜ್ಞಾನೋದಯ, ಅವರ ತಿಳಿವಳಿಕೆ ಇವರ ‘ಅಹಂ’ ಪ್ರವೃತ್ತಿಗೆ ಘಾಸಿ ಉಂಟುಮಾಡುತ್ತಿತ್ತು.

ಯೋಚಿಸಿ. ವಿಚಾರ ಮಾಡಿ  ನೋಡಿ. ಜ್ಞಾನೋದಯ ಹೊಂದುವುದು ಬಹಳ ಕಷ್ಟದ ಕೆಲಸ. ಆದರೆ ದೂಷಿಸುವುದು ಬಹಳ ಸುಲಭ. ಜ್ಞಾನೋದಯ ಹೊಂದುವುದು ಎಂದರೆ ಎಲ್ಲಕ್ಕಿಂತ ಮೊದಲು ನಮ್ಮ ಅಹಂ ಪ್ರವೃತ್ತಿಯನ್ನು ಕುಟ್ಟಿ ಪುಡಿ ಮಾಡಿ ಬಿಸುಟುವುದು. ಆಲಸಿಗಳಿಗೆ ಅದು ಸಾಧ್ಯವಿಲ್ಲದ ಮಾತು. ಉತ್ತಮರಾಗುವಿಕೆಯ ಪ್ರಯತ್ನದಲ್ಲಿ ಆಲಸ್ಯ ತೋರುವುದೇ ಯಾವುದೇ ವ್ಯಕ್ತಿಯು ದುಷ್ಟನಾಗುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ನಿಮ್ಮ ಅಂತರಂಗದ ಸರೋವರದಲ್ಲಿ ಕೊಳೆತ ಆಲೋಚನೆಗಳು ಪದರುಗಟ್ಟಿವೆ. ನೀವು ಆ ಪದರಿನಲ್ಲಿ ಹೂತುಹೋಗುತ್ತಿದ್ದೀರಿ. ಈಜಿ ಮೇಲಕ್ಕೆ ಬರಲು ನಿಮಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಕುತ್ತಿಗೆಗೆ ಕಲ್ಲಿನ ಗುಂಡುಗಳನ್ನು ಕಟ್ಟಲಾಗಿದೆ. ಅವು ನಿಮ್ಮನ್ನು ತೇಲಲು ಬಿಡುತ್ತಿಲ್ಲ. ಅಹಂಕಾರ, ಗುರುತು, ಪೂರ್ವಾಗ್ರಹ ಪೀಡಿತ ಮನಸ್ಸುಗಳೇ ಈ ಕಲ್ಲುಗುಂಡುಗಳು. ಅವನ್ನು ನೀವು ತೆಗೆದುಹಾಕಿ. ಆಗ ನೀವು ಹಗುರಾಗುವಿರಿ ಮತ್ತು ಕೊಳಕಿನ ಪದರದಲ್ಲಿ ಹೂತುಹೋಗದಂತೆ ಈಜಿ ಮೇಲಕ್ಕೆ ಬರುವಿರಿ. ಒಮ್ಮೆ ನೀವು ತೇಲಲು ಆರಂಭಿಸಿದಿರಿ ಎಂದರೆ, ಅನಂತರ ದಡ ಸೇರುವುದು ಸುಲಭ. ಆ ದಡದಲ್ಲಿ ನಿಮಗೆ ಸಜ್ಜನರ ಸಜ್ಜನಿಕೆಯೊಂದೇ ಸ್ಪಷ್ಟವಾಗಿ ಗೋಚರಿಸುವುದು. ಏಕೆಂದರೆ ನೀವೀಗ ಆಲಸಿಯಲ್ಲಿ. ನೀವು ಕೈಕಾಲು ಬಡಿಯುತ್ತ ಈಜುತ್ತಿರುವಿರಿ. ನೀವೂ ಒಳ್ಳೆಯವರಾಗಲು ಪ್ರಯತ್ನಿಸುತ್ತಿರುವಿರಿ.

ಈಗ ನೋಡಿ. ನೀವು ಸಜ್ಜನರ ದೂಷಣೆ ಮಾಡುವುದು, ಕಿರುಕುಳ ಕೊಡುವುದು ನಿಂತುಹೋಗುತ್ತದೆ. ನೀವು ಹಗುರಾಗುತ್ತೀರಿ, ಮತ್ತು ಕೀಳರಿಮೆ ತೊಲಗಿ ಆನಂದ ಹೊಂದುತ್ತೀರಿ.

 

 

 

Leave a Reply