ವಿಶ್ವದೆಲ್ಲೆಡೆ ಮಾತೃದೇವತೆಯ ಪರಿಕಲ್ಪನೆ : ಜನನಿ ಮಾತ್ರವಲ್ಲ, ಮೃತ್ಯು ದೇವತೆ ಕೂಡಾ!

ಸಕಲ ಜೀವಿಗಳಲ್ಲಿ ಭಗವಂತನ  ಅಂಶ ತಾಯಿ ಭಾವದಲ್ಲಿ ನೆಲೆಸಿರುತ್ತದೆ. ಪುರುಷರಲ್ಲೂ ಕೂಡಾ ಅದು ಇರುತ್ತದೆ. ನಮ್ಮನಮ್ಮಲ್ಲಿನ ಮಾತೃಭಾವವನ್ನು ಜಾಗೃತಗೊಳಿಸಿಕೊಂಡರೆ, ಮಾತೃದೇವತೆಯ ಅನುಗ್ರಹ ಪಡೆಯುವುದು ಕೂಡ ಸುಲಭ. ಆದರೆ, ಆ ಭಾವ ಜಾಗೃತಿ, ಜೈವಿಕವಾಗಿ ತಾಯಿಯಾಗಬಲ್ಲ ಮಹಿಳೆಯರಿಗೂ ಕಷ್ಟ!  ~ ಗಾಯತ್ರಿ

ಮಾತೃದೇವತೆಯ ಪರಿಕಲ್ಪನೆ ಮತ್ತು ಆರಾಧನೆ ಅತ್ಯಂತ ಪ್ರಾಚೀನವಾದವೆಂಬುದಕ್ಕೆ ಪ್ರಾಚೀನ ವಿಗ್ರಹಗಳು ಹಾಗೂ ವರ್ಣಚಿತ್ರಗಳು ಪುರಾವೆ ಒದಗಿಸುತ್ತವೆ. ಭಾರತ ಸೇರಿದಂತೆ ಪೂರ್ವ ಪಶ್ಚಿಮ ಎನ್ನದೆ ವಿಶ್ವಾದ್ಯಂತ ಮಾತೃದೇವತೆಗೆ ಪ್ರಾಧಾನ್ಯವಿತ್ತೆಂದು ಪುರಾಣ ಕಥನಗಳು ತಿಳಿಸುತ್ತವೆ. ಪಶ್ಚಿಮ ದೇಶಗಳಲ್ಲಂತೂ ಉತ್ಖನನದಲ್ಲಿ ದೊರೆತ ಪ್ರಾಚೀನ ಮಣ್ಣಿನ ಹಾಗೂ ಕಲ್ಲಿನ ಪ್ರತಿಮೆಗಳೆಂದರೆ ಮಾತೃದೇವತೆಯ ಪ್ರತಿಮೆಗಳೇ ಎನ್ನುತ್ತವೆ ಪುರಾತತ್ವ ದಾಖಲೆಗಳು. ಅವುಗಳ ಪ್ರಕಾರ ವಿವಿಧ ಉತ್ಖನನಗಳಲ್ಲಿ ದೊರೆತ ಅತ್ಯಂತ ಪ್ರಾಚೀನ ಕಾಲದ 60 ಮೂರ್ತಿಗಳಲ್ಲಿ 55 ಮಾತೃದೇವತೆಯ ಮೂರ್ತಿಗಳೇ ಆಗಿವೆ.

La chitra 2.jpg

ಸುಮೇರಿಯನ್ ಅಥವಾ ಮೆಡಿಟರೇನಿಯನ್ ನಾಗರಿಕತೆಯಿಂದ ಪ್ರೇರೇಪಣೆ ಪಡೆದ ರೋಮನ್ನರು ಆ ಭಾಗದಲ್ಲಿ ಮಾತೃದೇವತಾ ಪೂಜೆಯನ್ನು ಜನಪ್ರಿಯಗೊಳಿಸಿದರು. ಮೆಡಿಟರೇನಿಯನ್ ಜನಪದದಲ್ಲಿ ಎಲ್ಲ ಸೃಷ್ಟಿಗೂ ಮಹಾತಾಯಿಯೇ ಮೂಲ ಎನ್ನುವ ನಂಬಿಕೆ ಇತ್ತು. ಈ ನಂಬಿಕೆಯ ಛಾಪು ಮತ್ತಷ್ಟು ವಿಸ್ತರಿಸಿ ಜನಪದರ ಆಚರಣೆಗಳಲ್ಲಿ ಬಲವಾಗಿ ಬೇರೂರಿತು. ಇದರ ಮುಂದುವರಿಕೆಯಾಗಿ ಕ್ರೈಸ್ತರಲ್ಲಿ `ಹೋಲಿ ಮದರ್’ ಮೇರಿಯನ್ನು ನಾವು ಕಾಣಬಹುದು. ಮೇರಿ ಮಾತೆ, ಕ್ರೈಸ್ತ ಸಮುದಾಯದ `ದಿವ್ಯತ್ರಯ’ರಲ್ಲಿ ಒಬ್ಬಳಾಗಿರುವಳು.

ಜಗತ್ತಿನಲ್ಲಿ ಅತ್ಯಂತ ಕೌತುಕದ ಸಂಗತಿ ಎಂದರೆ ಸೃಷ್ಟಿ. ಒಂದು ಏಕ ಕೋಶ ಜೀವಿಯ ಉಗಮದಿಂದ ಹಿಡಿದು ಆಕಾಶ ಗಂಗೆಯವರೆಗೆ ಇವೆಲ್ಲವೂ ರೂಪುಗೊಂಡ ಬಗೆ ಹಾಗೂ ಹೆಣ್ಣಿನಲ್ಲಿ ಸಂತಾನೋತ್ಪತ್ತಿಯಾಗುವ ಬೆರಗು – ಇವೆರಡೂ ಸೇರಿ ಮಾತೃದೇವತೆಯ ಪರಿಕಲ್ಪನೆ ಮೂಡಿರಬೇಕು ಎನ್ನುತ್ತಾರೆ ಸಂಶೋಧಕರು. ಪಾಶ್ಚಾತ್ಯ ನಾಗರಿಕತೆಗಳಲ್ಲಿ ಅನಂತರ ವ್ಯಾಪಿಸಿಕೊಂಡ ಸೆಮೆಟಿಕ್ ಧರ್ಮಗಳು ಪುರುಷನಾದ ಪರಮ ಪಿತನಿಂದ ಜಗತ್ತು ಏಳು ದಿನಗಳಲ್ಲಿ ಸೃಷ್ಟಿಗೊಂಡಿತು ಎಂದು ಸಾರಿದವು. ಅದಕ್ಕೆ ಮುನ್ನ ಪಶ್ಚಿಮದಲ್ಲಿಯೂ ಮಾತೃದೇವತೆಯ ಆರಾಧನೆ ವ್ಯಾಪಕವಾಗಿತ್ತಲ್ಲದೆ, ಭಾರತದಲ್ಲಿ ಇರುವಂತೆಯೇ ಜಗನ್ಮಾತೆ, ಲಯಕಾರಿಣಿ ಪರಿಕಲ್ಪನೆಗಳೂ, ಬಲಿ ಪೂಜೆ ಮೊದಲಾದ ಆಚರಣೆಗಳೂ ಚಾಲ್ತಿಯಲ್ಲಿದ್ದವು ಎಂದು ಅಧ್ಯಯನಗಳು ಸಾರುತ್ತವೆ. ಕಾಲಕ್ರಮೇಣ ಬಹುಸಂಸ್ಕೃತಿ ನಶಿಸುತ್ತಾ ಸಾಗಿ, ಮಾತೃ ದೇವತಾ ಪೂಜೆ ಬಹುತೇಕ ಮೂಲ ನಿವಾಸಿಗಳ, ಬುಡಕಟ್ಟು ಜನಾಂಗಗಳ ಆಚರಣೆಯಾಗಿ ಉಳಿಯಿತು.

ರೋಮನ್ನರ `ಮ್ಯಾಗ್ನಾ ಮಾಟರ್’ (ಗ್ರೇಟ್ ಮದರ್) ಸಿಂಹ ವಾಹಿನಿಯಾಗಿ ಚಿತ್ರಿತಗೊಂಡಿರುವುದು ಹಿಂದೂ ಸಂಸ್ಕೃತಿಯ ಸಿಂಹಾರೂಢಳಾದ ಜಗಜ್ಜನನಿಯೆಂದು ಪೂಜೆಗೊಳಗೊಳ್ಳುವ ದುರ್ಗೆಯನ್ನು ನೆನಪಿಸುತ್ತದೆ. ಈ ಕಲ್ಪನೆ ಅಥವಾ ಪರಿಕಲ್ಪನೆಯನ್ನು ಯಾರು ಯಾರಿಂದ ಪಡೆದರು ಅನ್ನುವುದು ಮತ್ತೊಂದೇ ಚರ್ಚೆ. ಪ್ರಾಚೀನ ರೋಮ್ ಮತ್ತು ಗ್ರೀಕ್ ಸಂಸ್ಕೃತಿಗಳಲ್ಲಿ ಸಂತಾನದ ತಾಯಿ, ಪವಿತ್ರ ಕನ್ಯೆ, ಶಾಪ ದೇವತೆ ಇತ್ಯಾದಿ ಸ್ತ್ರೀ ದೇವತೆಗಳು ಪೂಜೆಗೊಳ್ಳುತ್ತಾರೆ. ನಮ್ಮಲ್ಲಿ ಸವದತ್ತಿ ಎಲ್ಲಮ್ಮನ ಹೆಸರಲ್ಲಿ ಮುತ್ತು ಕಟ್ಟುವುದು ಚಾಲ್ತಿಯಲ್ಲಿದ್ದಂತೆ (ಕಾನೂನು ಬಾಹಿರವಾದ ಈ ಆಚರಣೆ ಈಗಲೂ ಕೆಲವೆಡೆ ನಡೆಯುತ್ತಿರುವ ವರದಿಗಳಿವೆ) ಗ್ರೀಕರಲ್ಲಿಯೂ ಅಫ್ರೋದಿತೆ ಎಂಬ ದೇವತೆಯ ಹೆಸರಲ್ಲಿ ದೇವದಾಸಿ ಪದ್ಧತಿ ಚಾಲ್ತಿಯಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಅಫ್ರೋದಿತೆ ಸೌಂದರ್ಯ ಹಾಗೂ ಪ್ರೇಮಗಳ ದೇವತೆಯಾಗಿ ಪೂಜಿಸಲ್ಪಡುತ್ತಿದ್ದುದು ಮಾತ್ರವಲ್ಲದೆ, ಒಳಪಂಗಡಗಳಲ್ಲಿ ವಿಶ್ವಜನನಿಯಾಗಿಯೂ ಗೌರವ ಪಡೆದಿದ್ದಳು. ರೋಮನ್ನರ ಮೈಟಿ ಮದರ್ ಯುನೋವಿನಾ, ಈಜಿಪ್ತನ ಈಸಿಸ್ (ಈಕೆಯ ಕೈಲಿರುವ ಮಗು ಹೊರುಸ್), ಫಿನೀಷಿಯನದ ಆಷ್ಟಾರೊತ್ ಮತ್ತು ತಾಮ್ಮುಸ್, ಏಷ್ಯಾಮೈನರಿನ ಸಾಯ್ಬಿಲಿ ಮತ್ತು ಆತ್ತಿಸ್ ಇತರ ಕೆಲವು ಮುಖ್ಯ ಮಾತೃದೇವತೆಯರು. ಮೆಕ್ಸಿಕನ್ನರ ಜಾನಪದದಲ್ಲಿ ಝೆಕಿಕ್ವೆತ್ಸಾಲ್ ಎಂಬ ಮಹಾಮಾತೆಗೆ ಅಗ್ರಸ್ಥಾನ ದೊರಕಿದ್ದರೆ, ಕೆಲ್ಟ್ ಜನಾಂಗದಲ್ಲಿ ದಾನು/ಅನು ಎಂಬ ಮಹಾಮಾತೆ ಎಲ್ಲ ದೇವತೆಗಳಿಗೂ ಮಿಗಿಲಾದ ದೇವತೆ. ಆಕೆಗೆ ನರಬಲಿಗಳನ್ನು ಕೂಡಾ ಅರ್ಪಿಸುತ್ತಿದ್ದರು. ಉತ್ತರ ಯುರೋಪಿನ ಜಾನಪದದಲ್ಲಿ ಫ್ರೇಯ ಈ ಬಗೆಯ ಮನ್ನಣೆಗೆ ಪಾತ್ರವಾಗಿದ್ದವಳು.

ನಮ್ಮಲ್ಲಿ ಇರುವಂತೆಯೇ ಪಶ್ಚಿಮದ ಭಿನ್ನ ಜನಪದಗಳಲ್ಲೂ ವಿವಿಧ ಹೆಸರುಗಳನ್ನು ಹೊತ್ತ ‘ಮಹಾಮಾತೆ’ ಒಂದು ಸಾಮಾನ್ಯ ಅಂಶದಿಂದ ಚಿತ್ರಣಗೊಂಡಿರುವುದನ್ನು ಗಮನಿಸಬಹುದು. ಈಕೆ ಸಾಮಾನ್ಯವಾಗಿ ಒಂದು ಮಗುವನ್ನು ಎತ್ತಿಕೊಂಡಿರುತ್ತಾಳೆ ಹಾಗೂ ಈಕೆಯನ್ನು ಗಿಡ ಬಳ್ಳಿಗಳು, ಪ್ರಾಣಿ ಪಕ್ಷಿಗಳು ಸುತ್ತುವರಿದಿರುತ್ತವೆ. ಈ ಎಲ್ಲ ಚಿತ್ರಗಳೂ ಮಾತೃ ದೇವತೆಯ ಫಲವಂತಿಕೆಯನ್ನು, ವಾತ್ಸಲ್ಯವನ್ನು, ಮಾರ್ದವತೆಯನ್ನು ಸಂಕೇತಿಸುತ್ತವೆ. ಮಾತೃದೇವತೆಯು ಅತ್ಯಂತ ಕೋಮಲೆಯೂ ಸುಂದರಿಯೂ ಆಗಿರುತ್ತಾಳೆ. 

ಜನನಿ ಮಾತ್ರವಲ್ಲ, ಮೃತ್ಯು ದೇವಿಯೂ…

ಯಾರು ಸೃಷ್ಟಿಸಬಲ್ಲರೋ ಅವರು ಮಾತ್ರ ಲಯವನ್ನೂ ತರಬಲ್ಲರು. ಅಂತೆಯೇ ಜಗಜ್ಜನನಿಯ ಕಲ್ಪನೆ ಇರುವಂತೆ ಜಗತ್ ಲಯಕಾರಿಣಿಯ ಕಲ್ಪನೆಯೂ ಇರುವುದು. ನಮ್ಮ ಸಂಸ್ಕೃತಿಯಲ್ಲಿ ಕಾಳಿ ಮೃತ್ಯು ದೇವಿಯಾಗಿಯೂ ವಿಜೃಂಭಿಸುವಂತೆ, ಪಾಶ್ಚಾತ್ಯ ಜನಪದಗಳಲ್ಲಿಯೂ ಹಲವು ಮೃತ್ಯುದೇವಿಯರು ಇರುವರು.

ಮೆಕ್ಸಿಕೋದ ಜಾನಪದದಲ್ಲಿ ಇಲೈತ್‍ಶುತ್ಲಿ  ಎಂಬ ಸಂಹಾರಿಣಿ ನಮ್ಮ ಕಾಳಿಗಿಂತ ಅತ್ಯಂತ ಭಯಾನಕವಾಗಿ ಕಂಡುಬರುತ್ತಾಳೆ. ಆಕೆ ಶೂರ ದೇವತೆಯಾದ ತನ್ನ ಮಗನನ್ನು ಕೊಂದು ಆತನ ಹೃದಯವನ್ನು ಕಿತ್ತೊಗೆದು, ವೃಷಣವನ್ನು ಹಿಚುಕಿ, ಹರಿದು ಬಿಸಾಡುತ್ತಾಳೆ. ಕೆಲ್ಟ್ ಜಾನಪದದಲ್ಲಿ ಮೊರಿಗನ್, ನೆಮಾನ್ ಮತ್ತು ಮಾಶಾ ಎಂಬ ಕ್ರೂರ ಮೃತ್ಯುದೇವತೆಗಳ ಉಲ್ಲೇಖವಿದೆ. ಜರ್ಮನ್ ಜಾನಪದದಲ್ಲಿ ಹೆಲ್ಲೆ ಎಂಬ ಮರಣದೇವತೆ ಇದ್ದಾಳೆ. ಈಕೆಯ ಹೆಸರಿನಿಂದಲೇ  ಇಂಗ್ಲಿಷಿನ `ಹೆಲ್’ ಪದ ರೂಪು ತಳೆದಿರುವುದು. ದೆಮೆತೆರ್ ಇತ್ಯಾದಿ ಕೆಲವು ಗ್ರೀಕ್ ದೇವತೆಗಳು ನರಕದ ಬಾಗಿಲನ್ನು ಕಾಯುವುದರಿಂದ ಅವರು ಮೃತ್ಯುದೇವತೆಗಳೂ ಹೌದು.

ಹೀಗೆ ಮಾತೃದೇವತೆ ಜನನಿಯೂ ಲಯಕಾರಿಣಿಯೂ ಆಗಿ ಜಗತ್ತಿನೆಲ್ಲೆಡೆ ಚಿತ್ರಿತಳಾಗಿದ್ದಾಳೆ. ಯಾರು ಸೃಷ್ಟಿಸಬಲ್ಲರೋ, ಜನ್ಮ ನೀಡಬಲ್ಲರೋ ಅವರಿಗೆ ಮಾತ್ರ ಪ್ರಾಣ ಹರಣದ ಅಧಿಕಾರ ಇರುವುದು ಎಂಬ ಚಿಂತನೆಯೂ ಈ ದೇವತೆಗಳ ಹುಟ್ಟಿಗೆ (ಪರಿಕಲ್ಪನೆ ಅಥವಾ ಅಸ್ತಿತ್ವಕ್ಕೆ) ಕಾರಣವಾಗಿರಬಹುದು. ಒಟ್ಟಾರೆ ತಾಯಿ ಎಂದರೆ ಎಲ್ಲೆಡೆಯೂ ಒಂದೇ ಭಾವ. ಸಕಲ ಜೀವಿಗಳಲ್ಲಿ ಭಗವಂತನ  ಅಂಶ ತಾಯಿ ಭಾವದಲ್ಲಿ ನೆಲೆಸಿರುತ್ತದೆ. ಪುರುಷರಲ್ಲೂ ಕೂಡಾ ಅದು ಇರುತ್ತದೆ. ನಮ್ಮನಮ್ಮಲ್ಲಿನ ಮಾತೃಭಾವವನ್ನು ಜಾಗೃತಗೊಳಿಸಿಕೊಂಡರೆ, ಮಾತೃದೇವತೆಯ ಅನುಗ್ರಹ ಪಡೆಯುವುದು ಕೂಡ ಸುಲಭ. ಆದರೆ, ಆ ಭಾವ ಜಾಗೃತಿ, ಜೈವಿಕವಾಗಿ ತಾಯಿಯಾಗಬಲ್ಲ ಮಹಿಳೆಯರಿಗೂ ಕಷ್ಟ! 

 

Leave a Reply