ಮರಳಿ ಇರಾನಿಗೆ ಬಂದಮೇಲೆ ಸುನ್ನಿ ಬಂಡಾಯಕ್ಕೆ ಮನ್ಸೂರ್ ಗುಪ್ತವಾಗಿ ಬೆಂಬಲ ನೀಡುತ್ತಿದ್ದಾನೆಂದು, ರಾಜದ್ರೋಹದ ಆಪಾದನೆ ಹೊರಿಸಿ, ರಾಜಬಂಧನದಲ್ಲಿರಿಸಲಾಯಿತು. ಆತನ ರಾಜದ್ರೋಹವೆಂದರೆ, ಸಾರ್ವಜನಿಕವಾಗಿ ಘಂಟಾಘೋಷವಾಗಿ: ‘ಅನಲ್ ಹಕ್, ಅನಲ್ ಹಕ್’ (’ನಾನೇ ಸತ್ಯ, ನಾನೇ ದೈವ’) ಎಂದು ಹೇಳಿದ್ದು! ~ ಕೇಶವ ಮಳಗಿ | ರಮದಾನಿನ ಕಾವ್ಯೋಪಾಸನೆ : ಧ್ಯಾನ, ಸೂಫಿ ಸತ್ಸಂಗ (ಭಾಗ 2)
ಹಿಂದಿನ ಭಾಗ ಇಲ್ಲಿ ಓದಿ : https://aralimara.com/2019/05/13/sufi-43/
ಮನ್ಸೂರ್ ಅಲ್- ಹಲ್ಲಾಜ್ ಹುಟ್ಟಿದ್ದು (ಕ್ರಿ.ಶ. ೮೫೮), ಇರಾನಿನ ತೂರ್ ಎಂಬ ಹಳ್ಳಿಯಲ್ಲಿ, ಅರಬ್ಬರ ಪ್ರಾಬಲ್ಯವಿದ್ದ ಪ್ರದೇಶದಲ್ಲಿ. ಆತನ ಹೆಸರಿನಿನೊಂದಿಗಿರುವ ‘ಹಲ್ಲಾಜ್’ ಉಣ್ಣೆ ನೇಯುವ ನೇಕಾರಿಕೆಯ ಕಸುಬನ್ನು ಸೂಚಿಸುತ್ತದೆ. ಈತನ ಅಜ್ಜ ಮಹಮ್ಮ ಜರಾಷ್ಟ್ರ ಧರ್ಮಿ. ಬದುಕಿರುವವರೆಗೂ ಆ ಧರ್ಮವನೇ ಪಾಲಿಸಿದವನು. ಮನ್ಸೂರನ ತಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವನು.
ಮನ್ಸೂರ್ ಬಾಲ್ಯದಲ್ಲಿಯೇ ಶ್ರೇಷ್ಠ ಸೂಫಿಗಳ ಬಳಿ ಇಸ್ಲಾಂನ ಪಾಠಗಳನ್ನು ಕಲಿತ. ಆತನ ನಿರಂತರ ಅತೃಪ್ತಿ, ಹುಡುಕಾಟ, ಒಂದೆಡೆ ನಿಲ್ಲದ ಮನಸ್ಸು ಪದೇ ಪದೇ ಸ್ಥಳಗಳನ್ನು ಬದಲಿಸುವಂತೆ ಮಾಡುತ್ತಿತ್ತು. ಆತ ಅಂತರಂಗದಲಿ ಪರಿಶುದ್ಧನಾದಂತೆ ನಡೆದಂತೆಲ್ಲ, ಹೊರಗಿನ ಕರ್ಮಠ ಸಂಪ್ರದಾಯವಾದಿಗಳೊಂದಿಗೆ ಆತನ ಜಗಳಗಳು ತಾರಕಕ್ಕೇರಿದವು. ಈ ಬೆಂಕಿಗೆ ಷಿಯಾ-ಸುನ್ನಿ ತಿಕ್ಕಾಟ, ಅಧಿಕಾರದ ಮೇಲಾಟ, ಅರಬ್ಬಿ-ಪರ್ಷಿಯನ್‌ಭಾಷೆಗಳ ನಡುವಿನ ಅಹಮ್ಮಿಕೆಯ ಸಂಘರ್ಷಗಳು ತುಪ್ಪ ಸುರಿದವು. ಸಂಕೀರ್ಣತಯೇ ತುಂಬಿದ್ದ ಸಮಾಜದಲ್ಲಿ ಮನ್ಸೂರ್, ಷಿಯಾ ಆಳುವ ವರ್ಗಕ್ಕೆ ಸಮಸ್ಯೆಯಾಗಿ ಕಾಣತೊಡಗಿದ. ಆದರೆ, ಆತನ ವಿಚಾರಗಳಿಗೆ, ಆಕರ್ಷಕ ಪ್ರವಚನಗಳಿಗೆ ಮನಸೋತ ಶಿಷ್ಯರೂ ಇದ್ದರು.
ಆತನದು ಒಂದೆಡೆ ನಿಲ್ಲದ ಮನಸು. ತನ್ನ ಶಿಷ್ಯಗಣದ ಜತೆಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಮೂರು ಸಲ ಮೆಕ್ಕಾ ಯಾತ್ರೆಯನ್ನು, ಪ್ರವಾಸವನ್ನು ಮನ್ಸೂರ್ ಪೂರ್ಣಗೊಳಿಸಿದ. ಕ್ರಿ.ಶ. ೯೦೭ರಲ್ಲಿ ತನ್ನ ಶಿಷ್ಯರೊಂದಿಗೆ ಐದು ವರ್ಷಗಳ ಸುದೀರ್ಘ ತೀರ್ಥಯಾತ್ರೆಗೆ ಹೊರಟ. ತನ್ನ ನಂಬಿಕೆಯ ಇಸ್ಲಾಂ ಧರ್ಮವನ್ನು ಲೋಕಕ್ಕೆ ಹರಡುವುದು ಆತನ ಉದ್ದೇಶವಾಗಿತ್ತು. ಈ ಸಮಯದಲ್ಲಿಯೇ ಮನ್ಸೂರ್, ಅಂದಿನ ಪಶ್ಚಿಮ ಭಾರತದ (ಇಂದಿನ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಮತ್ತು ಕಾಶ್ಮೀರ (?) ) ಪ್ರದೇಶಕ್ಕೆ ಭೇಟಿ ನೀಡಿ ಜನಾನುರಾಗ, ಶಿಷ್ಯರನ್ನು ಸಂಪಾದಿಸಿದ. ಆತ ಅಂದು ನೆಟ್ಟ ಆಧ್ಯಾತ್ಮದ ಬೀಜಗಳು ಮುಂದೆ ಅಪ್ರತಿಮ ಸೂಫಿ ಸಂತರು, ಕವಿಗಳು ಆದ ಬಾಬಾ ಫರೀದ್ (ಕ್ರಿ.ಶ. ೧೨ನೆಯ ಶತಮಾನ), ಬುಲ್ಲೆಹ್ ಷಹಾ (ಕ್ರಿ.ಶ. ೧೭ನೆಯ ಶತಮಾನ), ಅಲಿ ಹುಜ್ವಿರಿ (ಕ್ರಿ.ಶ. ೧೧ನೆಯ ಶತಮಾನ) ರಂಥವರನ್ನು ಸೃಷ್ಟಿಸಿತು.
ಅದೇನೆ ಇದ್ದರೂ, ಮರಳಿ ಇರಾನಿಗೆ ಬಂದಮೇಲೆ ಸುನ್ನಿ ಬಂಡಾಯಕ್ಕೆ ಮನ್ಸೂರ್ ಗುಪ್ತವಾಗಿ ಬೆಂಬಲ ನೀಡುತ್ತಿದ್ದಾನೆಂದು, ರಾಜದ್ರೋಹದ ಆಪಾದನೆ ಹೊರಿಸಿ, ರಾಜಬಂಧನದಲ್ಲಿರಿಸಲಾಯಿತು. ಆತನ ರಾಜದ್ರೋಹವೆಂದರೆ, ಸಾರ್ವಜನಿಕವಾಗಿ ಘಂಟಾಘೋಷವಾಗಿ: ‘ಅನಲ್ ಹಕ್, ಅನಲ್ ಹಕ್’ (’ನಾನೇ ಸತ್ಯ, ನಾನೇ ದೈವ’) ಎಂದು ಹೇಳಿದ್ದು! ರಾಜಕಾರಣ, ಧಾರ್ಮಿಕ ಕರ್ಮಠತೆ, ಷಿಯಾ-ಸುನ್ನಿ ಪಂಗಡಗಳ ಅಧಿಕಾರ ಮತ್ತು ಪ್ರತಿಷ್ಠೆಗಳ ಹೊಡೆದಾಟ ಇತ್ಯಾದಿ ಅತ್ಯಂತ ಸಂಕೀರ್ಣ ಷಡ್ಯಂತ್ರಗಳಿಗೆ ಬಲಿಯಾದ ಮನ್ಸೂರ್‌ನನ್ನು ಬಾಗ್ದಾದ್‌ನಲ್ಲಿ ಕ್ರಿ.ಶ. ೨೬ ಮಾರ್ಚ್ ೯೨೨ರಂದು ಸಾರ್ವಜನಿಕವಾಗಿ ನೇಣು ಹಾಕಲಾಯಿತು. ಅದೂ ಭಯಾನಕ ಹಿಂಸೆಯೊಂದಿಗೆ!
ಮೊದಲಿಗೆ ಆತನ ಕೈಕಾಲುಗಳನ್ನು ಕಡಿದು, ಜನ ನಿಂದಿಸುತ್ತ ಕಲ್ಲುಗಳನ್ನು ಎಸೆಯುವಂತೆ ಮಾಡಲಾಯಿತು! ಇಡೀ ರಾತ್ರಿ ನೇಣಕುಣಿಕೆಯಲ್ಲಿ ಆತನ ಛಿದ್ರ ದೇಹವನ್ನಿಟ್ಟು ಇಡೀ ಇರುಳು ಆತನನು ನಿಂದಿಸಲಾಯಿತು. ಮರುದಿನ ಆತನ ಶಿರಚ್ಛೇದನ ಮಾಡಲಾಯಿತು. ಈ ರುದ್ರಭಯಾನಕ ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ಮನ್ಸೂರನ ಮಗ ಹಮ್ದ್ ಮತ್ತ ಸಮಕಾಲೀನ ಇತಿಹಾಸಕಾರ ಅತ್ತಾರ್ ವಿವರವಾಗಿ ದಾಖಲಿಸಿದ್ದಾರೆ.
ಮನ್ಸೂರ್ ಹಲ್ಲಾಜ್‌ನ ನಂತರದ ಸೂಫಿ ಸಂತರಾದ ರೂಮಿ, ಫರಿದುದ್ದೀನ್ ಅತ್ತಾರ್, ಶಂಷ ತಬ್ರೀಜ್, ಹಾಫಿಜ್, ಜಾಮಿ ಮುಂತಾದವರು ತಮ್ಮ ಕಾವ್ಯದಲ್ಲಿ ಆತನ ಆಧ್ಯಾತ್ಮಿಕ ಬಲಿದಾನವನ್ನು ಪ್ರಶಂಸಿಸಿ ಬಹುದೊಡ್ಡ ಸ್ಥಾನವನ್ನು ನೀಡಿದ್ದಾರೆ. ತನ್ನ ಕೊನೆಯುಸಿರು ಇರುವವರೆಗೂ ಮನ್ಸೂರ್ ಮಾಡಿದ್ದು ಅಲ್ಲಾಹ್‌ನ ಸ್ಮರಣೆ, ಮತ್ತು ನುಡಿದಿದ್ದು ಇಂಥ ಕೆಲವು ವಾಕ್ಯಗಳನು:
“ಕೊಂದು ಬಿಡಿ ನಂಬುಗೆಯ ಗೆಳೆಯರೆ ನನ್ನನು
ಬದುಕಿರುವಾಗಲೇ ಕತ್ತು ಹಿಸುಕಿದೆ ಜೀವನ .
ನನ್ನ ಬದುಕಲ್ಲಿ ಸಾವು, ಸಾವಲ್ಲಿ ಬದುಕು ಅಡಗಿದೆ.
ನನ್ನ ಅಸ್ತಿತ್ವ ಕೊನೆಗೊಳಿಸಿಕೊಳ್ಳುವುದರಲ್ಲಿಯೆ
ನನಗೆ ನೀಡುವ ಅತ್ತ್ಯುನ್ನತ ಗೌರವವು ಅಡಗಿದೆ
ನನ್ನ ಸ್ವ-ಭಾವದೊಂದಿಗೆ ಬಾಳುವ ಬದುಕಿದು ನರಕ”.
ಮನ್ಸೂರ್ ಅಲ್-ಹಲ್ಲಾಜ್
(ಕ್ರಿ.ಶ. ೮೫೮-೯೨೨)
ನಾನು ‘ಅವನೆ’, ನಾನು ‘ಪ್ರೀತಿಸುವವನು’
ನಾನು ಪ್ರೀತಿಸುವ ಅವನು, ’ನಾನೆ’!
ನಾವಿಬ್ಬರೂ ಒಂದೇ ದೇಹದಲಿರುವ
ಎರಡು ಚೇತನಗಳು.
ನೀನು ‘ನನ್ನ’ನು ಕಂಡರೆ
‘ಅವನ’ನು ಕಾಣುತಿರುವೆ.
ಅವನನು ಕಂಡರೆ ‘ನಮ್ಮ’ನು ನೋಡುತಿರುವೆ.
*
ಇಕೊ ನನ್ನ ಗುಟ್ಟೆ, ಇಕೊ ನನ್ನ ನಂಬಿಕೆಯೆ: ನಾನಿಲ್ಲಿರುವೆ, ನಾನಿಲ್ಲಿರುವೆ,
ಇಕೊ ನನ್ನ ಭರವಸೆಯೆ, ಇಕೊ ಎನ್ನ ಅರ್ಥವೆ: ನಾನಿಲ್ಲಿರುವೆ, ನಾನಿಲ್ಲಿರುವೆ.
ನಾ ನಿನ್ನ ಕರೆಯುತಿರುವೆ, ಅಲ್ಲಲ್ಲ! ನೀನೆ ಆಹ್ವಾನಿಸುತಿರುವೆ ಸನಿಹಕೆ.
ನೀನೆನ್ನ ಆರಾಧಿಸದಿರುವಾಗ ಅದು ನೀನೆಂದು ಹೇಳಲಿ ಹೇಗೆ? ಅದು ನಾನೆ!
ನನ್ನ ಇರುವಿಕೆಯ ಸಾರಸಂಗ್ರಹ ಸತ್ವವೆ, ನನ್ನ ಬಯಕೆಯ ಗುರಿಯೆ,
ನನ್ನ ಎವೆ, ಆಲಿಕೆ, ನುಡಿ, ದನಿ, ನೋಟ ನೀನಾಗಿರುವೆ,
ದೇಹದ ಕಣಕಣವೂ ನೀನೇ, ಒಡೆಯಲಾರದ ಒಡಪೆ!
ತೊದಲು ಮಾತುಗಳಲಿ ನುಡಿಯ ಬೇಕೆಂದಿರುವುದು ನಿನ್ನ ಕುರಿತೇ!
*
ತಾಸೀನ್: ಸಗ್ಗದ ಒರತೆ
೨)
ಪತಂಗವೊಂದು ಇರುಳಿಡಿ ದೀಪದ ಸುತ್ತ ಸುಳಿದು
ಬೆಳಗಿನ ಜಾವ ತನ್ನ ಗುಂಪನ್ನು ಕೂಡಿಕೊಂಡಿತು.
ಸಂಗಾತಿಗಳೊಂದಿಗೆ ತನ್ನ ಆಧ್ಯಾತ್ಮದ ಅನುಭವವನ್ನು
ಅಲಂಕಾರಿಕ ಪದಗಳಲ್ಲಿ ಹಂಚಿಕೊಂಡಿತು.
ಬೆಂಕಿಯೊಂದಿಗಿನ ತನ್ನ ಚೆಲ್ಲಾಟವನ್ನು
ಅದರೊಳಗೆ ಪರಿಪೂರ್ಣವಾಗಿ ಲೀನವಾಗುವ
ಹೆಬ್ಬಯಕೆಯನು ಹೇಳಿಕೊಂಡಿತು.
೩)
ದೀಪದ ಬೆಳಕು ‘ವಸ್ತುಸ್ಥಿತಿ’ಯ ಜ್ಞಾನ.
ಬೆಂಕಿಯ ಬಿಸಿ, ವಾಸ್ತವದ ’ವಾಸ್ತವ’.
ದೀಪದೊಂದಿಗಿನ ’ಕೂಟ’ ವಾಸ್ತವದ ’ಸತ್ಯ’.
೪)
ಪತಂಗಕೆ ದೀಪದಿಂದ, ದೀಪದ ಬಿಸಿಯಿಂದ ಸಂತೃಪ್ತಿಯಿಲ್ಲ.
ಹಾಗೆಂದೇ, ಬೆಂಕಿಯೊಂದಿಗಿನ
ಸಂಗಮದ ‘ಸಂಗ’ವನು ಬಯಸುವುದು.
ಬೆಂಕಿ ಬಿಸಿಯಿಂದಲಷ್ಟೇ ತಣಿಯದ,
ತನ್ನದಲ್ಲದ ಅನುಭವವನು ನೆಚ್ಚದಿರುವ ಪತಂಗ.
ಅದರ ಗೆಳೆಯರು ಪತಂಗವು ಮತ್ತೊಮ್ಮೆ ಬಂದು
ತನ್ನ ನಿಜವಾದ ಕಾಣ್ಕೆಯನು ಹೇಳುವುದೆಂದು ಕಾದವು.
ಆದರೆ ಅತ್ತ, ಅದೇವೇಳೆಗೆ,
ಪತಂಗವು ಬೆಂಕಿಯ ಸಂಗವನು ಮಾಡಿ,
ಸುಟ್ಟು ಕರಕಾಗಿ, ಚೂರುಚೂರಾಗಿತ್ತು.
ಅದಕೀಗ ದೇಹ, ರೂಪ, ಅಥವ ತನ್ನದೆನ್ನುವ ಚಹರೆ ಇಲ್ಲ.
ಹೀಗಿದ್ದಾಗ, ಯಾವರ್ಥದಲಿ ತನ್ನ ಗೆಳೆಯರ ಬಳಿ ಮರಳೀತು?
ಈಗದು ಪಡೆದುಕೊಂಡಿರುವ ಸ್ವರೂಪವಾದರೂ ಎಂಥದ್ದೊ?
ಕಾಣ್ಕೆಯತ್ತ ತಲುಪಲು ಸಾಧ್ಯವಾದವನು
ಅನುಭವವನು ಕಥಿಸಲು ಸಮರ್ಥನಾದನು.
ತನ್ನ ಕಾಣ್ಕೆಯ ’ಗುರಿ’ ತಲುಪಲು ಹೊರಟವನು
ತನ್ನ ’ಕಾಣ್ಮೆ’ಯ ಕುರಿತು ನಿರಾಸಕ್ತನಾದನು.
*
ಓ, ಅನಿಶ್ಚಿತನೆ, ಹಿಂದೆಗಾಗಲಿ, ಇಂದಿಗಾಗಲಿ, ಮುಂದೆಯಾಗಲಿ
’ಅಹಂ’ ಎಂಬ ನುಡಿಯನು,
ದೈವಿಕ ’ಸೋಹಂ’ನೊಂದಿಗೆ ಹೋಲಿಸಬೇಡ.
ನಾನು ’ಅವನಿಗೆ’ ಸೇರಿದವನು.
’ಅವನು’, ನಾನಲ್ಲ!
*
(* ಕಿತಾಬ್ ಅಲ್ ತವಾಸೀನ್, ಮೂಲದಲ್ಲಿ ಗದ್ಯಕೃತಿ. ಇಲ್ಲಿ ಗಪದ್ಯದ ರೂಪದಲ್ಲಿ ಬರೆದಿದೆಯಷ್ಟೇ. ಆತ್ಮವೊಂದು ಪರಮಾತ್ಮನಲ್ಲಿ ಲೀನವಾಗುವ ಬಗೆಯನ್ನು ಚಿಟ್ಟೆ ಮತ್ತು ಬೆಂಕಿಯ ಪ್ರತಿಮೆಯ ಮೂಲಕ ಇಲ್ಲಿ ಸಾಧಿಸಲಾಗಿದೆ. ಚಿಟ್ಟೆ ಬೆಂಕಿಯನು ಕಾಣುವುದು ’ಇಲ್-ಅಲ್ಮ್- ಯಕೀನ್’, ಎಂದು, ಅದು ಬೆಂಕಿಯ ಬಳಿ ಸಾರಿ ಬೆಂಕಿಯ ಕಾವನ್ನು ಅನುಭವಿಸುವುದನ್ನು ’ಅಯ್ನ್ ಅಲ್- ಯಕೀನ್’ ಎಂದೂ, ಕೊನೆಗೆ ಚಿಟ್ಟೆ ಬೆಂಕಿಯಲ್ಲಿ ಸುಟ್ಟು ಕರಕಾಗುವುದನ್ನು ’ಹಕ಼್ ಅಲ್-ಯಕೀನ್’ ಎಂದೂ ಕವಿತೆಯನ್ನು ಅರ್ಥೈಸಲಾಗುತ್ತದೆ. ಕೊನೆಯ ಸ್ಥಿತಿಯನ್ನು ‘ಫನಾ’ ಎಂದು ಸಂಕೇತಿಸಲಾಗುತ್ತದೆ.)
*
(ಇಲ್ಲಿ ಬಳಸಿರುವ ವರ್ಣಚಿತ್ರ ೧೯ನೆಯ ಶತಮಾನದ ಕಾಶ್ಮೀರ ಹಸ್ತಪ್ರತಿಯಲ್ಲಿ ದೊರಕಿದ್ದು. ಮನ್ಸೂರನ ಮರಣದಂಡನೆಯನ್ನು ಕಥಿಸುತ್ತದೆ.)
ಕನ್ನಡದ ಮುಖ್ಯ ಕಥೆಗಾರರಲ್ಲಿ ಒಬ್ಬರಾಗಿರುವ ಕೇಶವ ಮಳಗಿಯವರು ಭಕ್ತಿಯ ನೆಲೆಗಳ ಹುಡುಕಾಟವನ್ನು ಕೇಂದ್ರವಾಗಿಟ್ಟುಕೊಂಡ “ದೈವಿಕ ಹೂವಿನ ಸುಗಂಧ:- ಮಧ್ಯಯುಗದ ಭಕ್ತಿಲೀಲೆಯ ಸ್ವರೂಪ” ಎಂಬ ಕೃತಿಯನ್ನು ಈ ವರ್ಷಾಂತ್ಯದಲ್ಲಿ ಪ್ರಕಟಿಸಲಿದ್ದಾರೆ. ಈ ಕೃತಿಯಲ್ಲಿ ಭಾರತದ ಉಪಖಂಡದ ಭಕ್ತಿಪರಂಪರೆಯ ಕೆಲವು ಕವಿತೆಗಳು, ಪರ್ಷಿಯನ್ ಸೂಫಿ ಕವಿಗಳ ಕಾವ್ಯ ಇರಲಿದೆ. ಈ ಪ್ರಕಟಣೆಯ ಸಿದ್ಥತೆಯಲ್ಲಿರುವ ಕೃತಿಯ ಕೆಲವು ಪುಟಗಳನ್ನು ಮಳಗಿಯವರ ಅನುಮತಿ ಪಡೆದು ಇಲ್ಲಿ ಪ್ರಕಟಿಸಲಾಗಿದೆ.