ಕನ್ನಡದ ಮುಖ್ಯ ಕಥೆಗಾರರಲ್ಲಿ ಒಬ್ಬರಾಗಿರುವ ಕೇಶವ ಮಳಗಿಯವರು ಭಕ್ತಿಯ ನೆಲೆಗಳ ಹುಡುಕಾಟವನ್ನು ಕೇಂದ್ರವಾಗಿಟ್ಟುಕೊಂಡ “ದೈವಿಕ ಹೂವಿನ ಸುಗಂಧ:- ಮಧ್ಯಯುಗದ ಭಕ್ತಿಲೀಲೆಯ ಸ್ವರೂಪ” ಎಂಬ ಕೃತಿಯನ್ನು ಈ ವರ್ಷಾಂತ್ಯದಲ್ಲಿ ಪ್ರಕಟಿಸಲಿದ್ದಾರೆ. ಈ ಕೃತಿಯಲ್ಲಿ ಭಾರತದ ಉಪಖಂಡದ ಭಕ್ತಿಪರಂಪರೆಯ ಕೆಲವು ಕವಿತೆಗಳು, ಪರ್ಷಿಯನ್ ಸೂಫಿ ಕವಿಗಳ ಕಾವ್ಯ ಇರಲಿದೆ. ಈ ಪ್ರಕಟಣೆಯ ಸಿದ್ಥತೆಯಲ್ಲಿರುವ ಕೃತಿಯ ಕೆಲವು ಪುಟಗಳನ್ನು ಮಳಗಿಯವರ ಅನುಮತಿ ಪಡೆದು ಇಲ್ಲಿ ಪ್ರಕಟಿಸಲಾಗಿದೆ.
ಭಾಗ 1ನ್ನು ಇಲ್ಲಿ ಓದಿ : https://aralimara.com/2019/05/11/sufi-42/
ನಾವು ನಂಬುವ ದೈವ ಸಗುಣವೊ, ನಿರ್ಗುಣವೊ, ಸಾಕಾರವೋ ಇಲ್ಲ ನಿರಾಕಾರವೊ? ಎಂಬ ತಾತ್ತ್ವಿಕ ಚಿಂತೆ ಮನುಷ್ಯನನ್ನು ಅಕ್ಷರಶಃ ಸಾವಿರಾರು ವರ್ಷಗಳಿಂದ ಕಾಡಿದೆ. ಮಾತ್ರವಲ್ಲ, ಹಿಂಸಾತ್ಮಕ ಸಂಘರ್ಷಗಳಿಗೆ ಕಾರಣವಾಗಿದೆ. ಅಂದರೆ, ದೇವರು ನಮ್ಮಂತೆಯೇ ಸೀದಾಸಾದಾ ಮನುಷ್ಯನಾಗಿರುವುದು ಹಾಗೂ ದೈವಕಲ್ಪನೆಯೆಂಬುದು ಒಂದು ಸೈದ್ಧಾಂತಿಕ ನಂಬಿಕೆಯಷ್ಟೇ ಎನ್ನುವುದರ ನಡುವಿನ ತಿಕ್ಕಾಟವಿದು.
ದೇವ ನಮ್ಮಂತೆಯೇ ಮನುಷ್ಯನಾದರೆ, ಆತನಲ್ಲಿ ದೈವತ್ವ ಬರಲು ಹೇಗೆ ಸಾಧ್ಯ, ಅಲ್ಲವೆ ಮತ್ತೆ?! ಆದರೆ, ಆತನನ್ನು ಸಂಪೂರ್ಣ ನಿರಾಕಾರ, ನಿರ್ಗುಣ, ನಿರ್ಭಯ ಎಂದು ಬಿಟ್ಟರೆ, ನಮ್ಮ ಕಲ್ಪನೆ, ಕನಸುಗಳನ್ನು ಎಲ್ಲಿಗೆ ಕಳಿಸಬೇಕು. ಆತನನ್ನು ಸ್ತುತಿಸುತ್ತ, ಆತನೊಂದಿಗೆ ಮಾತುಕತೆ ನಡೆಸುವುದು ಹೇಗೆ? ಅವನನ್ನು ಪ್ರೇಮಿಯಾಗಿ ಊಹಿಸಿಕೊಳ್ಳುವುದು ಹೇಗೆ? ಹಲವೊಮ್ಮೆ ಹೆಣ್ಣಾಗಿ, ಗಂಡಾಗಿ, ಮಗುವಾಗಿ ಕನಸಿ ನಮ್ಮ ಭಾವನೆಗಳನೆಲ್ಲ ವ್ಯಕ್ತಪಡಿಸುವುದು ಹೇಗೆ? ಆತನಾಕೆಯ ಚೆಲುವು, ಒಲವು, ಪ್ರೀತಿ, ವಿರಹ, ಶೃಂಗಾರಗಳನು ಹಾಡಿಹೊಗಳುವುದು ತಾನೇ ಹೇಗೆ? ದೈವವನು ಪ್ರಿಯನೆಂದು ಊಹಿಸಿಕೊಂಡು, ತುಟಿಗಳನು ಚುಂಬಿಸಿ, ಆತನ ದೈವಿಕ ಬೆವರ ಸುವಾಸನೆಯನ್ನು ಹೀರುವುದು ಹೇಗೆ? ಶರಣೆ ಸತಿಯಾದರೆ, ಲಿಂಗ ಪತಿಯಾಗಿ, ಭಕ್ತ ಪುರುಷನಾದರೆ, ದೈವ ಪ್ರಕೃತಿಯಾಗಿ; ಆದಮ – ಈವರಾಗಿ ಹುಟ್ಟು ಲೀಲೆಯನು ಹಾಡುವುದು ಹೇಗೆ? ಆಕೆಯ ಕಣ್ಣ ಚೆಲುವು, ನಾಸಿಕದ ಸೊಬಗು, ಮುಂಗುರುಳು, ಕೇಶರಾಶಿಯ ನಾಟ್ಯ, ನಿಬ್ಬೆರಗು ಮೂಡಿಸುವ ಉಬ್ಬಿದೆದೆಯ ತೊಟ್ಟುಗಳು, ಬಳಕುವ ಕಟಿ, ಜಲಪಾತ ಹರಿದು ಹೋಗಲು ರೂಪುಗೊಂಡಂತೆ ಕಾಣುವ ನಿತಂಬಗಳ ಬಣ್ಣನೆ ಹೇಗೆ ಸಾಧ್ಯ? ಇಲ್ಲ, ಇದಾಗದು, ದೈವ ನಿರಾಕಾರವಾಗಿರಲು ಸಾಧ್ಯವಿಲ್ಲ, ಎಂದು ಕೈಚೆಲ್ಲುವ ಭಕ್ತನನು ’ದ್ವೈತ’ ಸಿದ್ಧಾಂತಿ ಎಂದು ಕರೆಯಬಹುದು. ದೈವದೊಂದಿಗೆ ತನ್ನೆಲ್ಲ ಮನುಷ್ಯ ಭಾವಗಳನ್ನು ಹಂಚಿಕೊಳ್ಳಲು, ಹಾಡಿಹೊಗಳಲು, ಜಗಳವಾಡಿ ರಂಪವೆಬ್ಬಿಸಲು ಭಕ್ತನಿಗೆ ದೇವ ಸಗುಣನಾಗಿರಬೇಕು. ಹರಿ ಸರ್ವೋತ್ತಮನಾದರೆ, ನಾನು ಜೀವೊತ್ತಮನಾಗಿ ಆತನನು ಸೇರುವೆ ಎಂಬ ಭಾವವಿದು.
ಇಲ್ಲ, ಆತ ನಿರಾಕಾರ, ನಿರ್ಗುಣ ಪರಮೇಶ್ವರ. ಪರಮಪುರುಷನೆಂದರೆ ನನ್ನ ಪ್ರಜ್ಞೆಯೇ (ಆತ್ಮನ್) ಹೊರತು ಬೇರೇನಲ್ಲ, ನಾನೇ ಸತ್ಯ, ನಾನೇ ಶಿವ, ನಾನೇ ಸುಂದರ, ಎಂಬ ನಂಬಿಕೆಯ ಭಕ್ತನನು ’ಅದ್ವೈತ’ ಸಿದ್ಧಾಂತಿ ಎನ್ನಬಹುದು. ಆತನಿಗೆ ತಾನೇ ಬ್ರಹ್ಮ, ’ಅಹಂ ಬ್ರಹ್ಮಾಸ್ಮಿ’ ಅನಿಸುತ್ತದೆ. ಆದರೆ, ತಾನೇ ಬ್ರಹ್ಮನಾಗಲು ಅತಿ ಕಠಿಣವಾದ ಜಪತಪನಿಷ್ಠೆಗಳನಾತ ಪಾಲಿಸಬೇಕು. ಸ್ವಯಂ ಶಿವನಾಗುವುದು ಎಂದರೆ ಸುಮ್ಮನೆಯೆ?
ಈ ಗೊಂದಲ ನಮಗೆ ಬೇಡ, ಆತ ನಿರಾಕಾರನೂ ಇರಬಹುದು, ಸಾಕಾರನೂ ಇರಬಹುದು ಎಂಬ ವಿಶ್ವಾಸಿಗರು ’ದ್ವೈತಾದ್ವೈತಿ’ಗಳು! ಸನಿಗುರ್ಣಿಗಳು!
ದೈವ ಇಹ ಮತ್ತು ಪರಗಳೆರಡಲ್ಲೂ ಇದ್ದಾನೆ. ಇಹದಲ್ಲಿ ಲಿಂಗವಾಗಿ, ಬಗೆಬಗೆಯ ಮೂರ್ತಿಯಾಗಿ ಕಾಣಿಸುವನು. ಆತನ ಗುಣಗಳನು ಹೊಗಳಲು ಪುರಾಣಗಳನು, ಕಲ್ಪಿತಕಥೆಗಳನು ಸೃಷ್ಟಿಸುವೆ. ಕಾವ್ಯವನು ಕಟ್ಟಿ ಹಾಡುವೆ. ಪರದಲ್ಲಿ ಆತ ಅಗೋಚರನಾಗಿದ್ದು, ಆತನೊಂದಿಗೆ ಬೆರೆತುಹೋಗುವ ಮೂಲಕ ರುದ್ರ ಚೆಲುವೆ ಆಗಿಬಿಡುವೆ, ಎಂಬ ನಿಲುವು ಇವರದು. ಕನ್ನಡದ ಶಿವಶರಣರು, ತಮಿಳಿನ ಶೈವ ಕವಿಗಳು ಈ ಬಗೆಯ ಪ್ರತಿಮಾ ಉಪಾಸನೆ ಕೈಗೊಂಡವರೆಂದು ಭಾರತೀಯ ಭಕ್ತಿಸಾಹಿತ್ಯದ ಕುರಿತು ಆಳ ಅಧ್ಯಯನ ನಡೆಸಿ, ಮುತ್ತುರತ್ನಗಳಂತಿರುವ ಪ್ರಬಂಧಗಳನ್ನು ಬರೆದಿರುವ ಎ.ಕೆ. ರಾಮಾನುಜನ್ ಗುರುತಿಸುತ್ತಾರೆ. ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಕನ್ನಡದ ಶೈವ ವಚನಕಾರರ ಶಿವ ಆಕಾರವಿದ್ದೂ, ನಿರಾಕಾರ. ಅಂಗೈಯಲಿ ಬಂದು ಕೂರುವವನು. ಈ ಶರಣ ತನ್ನ ದೇಹವನು ದೇವಳವಾಗಿ ವರ್ಣಿಸಿಕೊಳ್ಳುವವನು. ತನ್ನ ಕಾಲು-ಕೈ-ಶಿರಗಳೆಲ್ಲ ದೇವಳದ ಭೌತಿಕ ಸ್ವರೂಪವಾಗಿ ಬದಲಿಸಿ, ದೇಗುಲವನು ನವಿರಾಗಿ ನಿರಾಕರಿಸುವವನು! ಇದನ್ನೇ, ’ದೇವನನು ಕಂಡು ದೇಗುಲ ಓಡಿತ್ತು’, ಎಂದು ಅಲ್ಲಮ ವ್ಯಂಗ್ಯವಾಡುತ್ತಾನೆ. ಅವರ ’ಶಿವ’ ಸಾಕಾರ. ಭಕ್ತನ ಕಂಗಳಿಗೆ ಗೋಚರನಾದರೂ ಭೌತಿಕ ನಿರ್ಮಿತ ಕಲ್ಲು ದೇವಾಲಯದ ಬಂಧಿಯಲ್ಲ. ಸಗುಣ ಮತ್ತು ನಿರ್ಗುಣ ಎರಡನ್ನೂ ಒಳಗೊಂಡ ಈ ’ಸನಿರ್ಗುಣ’ ಕಲ್ಪನೆ ಅತ್ಯಂತ ವಿಶಿಷ್ಟವಾದುದು. ಧರ್ಮವೆಂಬುದು ವ್ಯಕ್ತಿಯ ಹುಟ್ಟಿನೊಂದಿಗೆ ಬರಬೇಕಿಲ್ಲ, ಬದಲಿಗೆ ಧರ್ಮ ಹುಟ್ಟಿನ ಮೂಲವನು ದಾಟಲು ಅನುವು ಮಾಡಿಕೊಡುತ್ತದೆ, ಎಂಬುದು ಕನ್ನಡ ಶರಣರ ಮತ್ತು ಮರಾಠಿ ವಾರಕರಿ ಪಂಥದ ವಿಶ್ವಾಸವಾಗಿದೆ. ಮಾತ್ರವಲ್ಲ, ಅತ್ಯಂತ ಮಹತ್ವದ್ದಾಗಿದೆ.
ಇಲ್ಲಿಯೇ ಹೇಳಬೇಕಾದ ಅಷ್ಟೇನೂ ಮಹತ್ವ ನೀಡಬೇಕಾದ ಅಗತ್ಯವಿಲ್ಲದ ಇನ್ನೊಂದು ಅಂಶವೆಂದರೆ ಶೈವಸಿದ್ಧಾಂತವೇ ವಿಶ್ವದ ಅತ್ಯಂತ ಹಳೆಯ ತಾತ್ತ್ವಿಕ ವಿಚಾರವಾಗಿದೆ, ಎಂದು ಪ್ರಾಚ್ಯ ಸಂಶೋಧಕ ಸರ್‌ಜಾನ್‌ಮಾರ್ಶಲ್‌ಗುರುತಿಸಿರುವುದು. ಅವರ ಮಹಿಂಜೋದಾರೊ ಮತ್ತು ಹರಪ್ಪ (ಇಂಡಸ್) ನಾಗರಿಕತೆಗಳ ಉತ್ಖನನದ ಅನುಭವಗಳನ್ನು ವರ್ಗೀಕರಿಸಿ ದಾಖಲಿಸುವಾಗ, ಶೈವ ನಂಬಿಕೆಯು ಶಿಲಾಪೂರ್ವಯುಗಕ್ಕಿಂತಲೂ ಹಿಂದಿನದ್ದು ಎಂಬುದಕ್ಕೆ ಮಾರ್ಶಲ್‌ಪುರಾವೆಗಳನ್ನು ಪಟ್ಟಿ ಮಾಡುತ್ತಾರೆ.
ಭಾರತ ಉಪಖಂಡದಲ್ಲಿ ಮೂರು ಬಗೆಯ ಶೈವ ಧರ್ಮಸಿದ್ಧಾಂತಗಳನ್ನು ಕಾಣಬಹುದು: ಕರ್ನಾಟಕದ ಇಷ್ಟಲಿಂಗ ಪರಿಕಲ್ಪನೆಯ ’ಸಾನಿರಾಕಾರ’ ಶೈವಸಿದ್ಧಾಂತ, ತಮಿಳುನಾಡಿನ ಸಗುಣ ಶೈವಪರಂಪರೆ, ಅದ್ವೈತ ಶಿವಸ್ವರೂಪವನ್ನು ಪ್ರಸ್ತಾಪಿಸುವ ಕಾಶ್ಮೀರ ಶೈವಸಿದ್ಧಾಂತ. ಅಭಿನವಗುಪ್ತ, ಉತ್ಪಲದೇವ, ಸೋಮಾನಂದ ಮತ್ತಿತರರು ಈ ಸಿದ್ಧಾಂತದ ಪ್ರತಿಪಾದಕರು.
*
ಭಕ್ತ – ದೈವದ ಸಂಬಂಧ, ಶಿವಶಕ್ತಿ, ಪಾರ್ವತಿಪರಮೇಶ್ವರ, ಕೃಷ್ಣಗೋಪಿಕೆಯರಂತೆ. ಇಲ್ಲಿ ಆತ ಗೋಚರನಾಗಿದ್ದಾನೆ. ಆತನನು ಸಕಲ ಬಗೆಯಲೂ ಉಪಾಸನೆ ಮಾಡುವೆ. ದೇವಲೋಕದಲಿನ ಆತನ ರೂಪ ಎನಗೆ ಅರಿಯದು. ಹಾಗಾಗಿ, ಅಲ್ಲಿ ನಾನು, ಅವನು ಎರಡೂ ಒಂದೇ ಅನ್ನುವೆ, ಎಂಬ ವಿಶ್ವಾಸ ಈ ಭಕ್ತನಲಿ ಅಚಲವಾಗಿದೆ.
ಕಾಲದೇಶಭಾಷೆ ಯಾವುದೇ ಆದರೂ ಮನುಷ್ಯನ ವಿಚಾರ ಮತ್ತು ನಂಬಿಕೆಗಳು ಎಷ್ಟು ಏಕರೂಪವಾಗಿರುತ್ತವೆ ಎಂದು ಅಚ್ಚರಿಯಾಗುತ್ತದೆ. ನಾವು ಉಪಾಸನೆಗಾಗಿ ನಾವು ಬಳಸುವ ಪರಿಕರಗಳನು ನೋಡಿ. ಇಲ್ಲಿ ದಾಸ, ಗೊರವ, ಗುಡ್ಡ, ಅಲ್ಲಿ ದರವೇಶಿ, ಫಕೀರ. ಇಲ್ಲಿನ ಗುರು ಅಲ್ಲಿ ಮೌಲಾ, ಔಲಾ. ಶ್ರೀಗಂಧ, ಅತ್ತರು, ಜಪಮಾಲೆ, ರುದ್ರಾಕ್ಷಿ, ಏಕತಂತಿ, ಭಾವಪರವಶತೆಯನು ಬಡಿದೆಬ್ಬಿಸುವ ಸಂಗೀತ ಸಾಧನಗಳು, ಮದಿರೆ, ಸಾಕಿ, ಭಕ್ತಿಸುಧೆ, ಭಕ್ತಿ ಅಮೃತ, ಧೂಪದೀಪ, ಪೀತಾಂಬರ, ಚಾದರ ಇತ್ಯಾದಿ. ಇವೆಲ್ಲ ಮನಸ್ಸನ್ನು ದೈವಿಕತೆ, ತನ್ಮಯತೆ, ಪರವಶತೆಗೆ ಸಜ್ಜುಗೊಳಿಸುವುದಕ್ಕೆ ಮಾತ್ರ. ಇವೆಲ್ಲ ಇದ್ದೂ ಶುಂಠರಾಗಿರುವ ಕರ್ಮಠರನ್ನು ಭಕ್ತಿಸುಧೆಯನು ಹೀರಿ ಉನ್ಮತ್ತನಾದ ಭಕ್ತ, ಪರವಶತೆಯ ಮದಿರೆಯನು ಸೇವಿಸಿ ಚಿತ್ತಾದ ಸೂಫಿ ಸಹಿಸರು!
*
ಭಕ್ತಿ, ಉಪಾಸನೆ, ಪರವಶತೆಗಳೆಲ್ಲ ನನ್ನ ಸ್ವಂತದ್ದು ಎಂದು ಹೇಳಬಹುದು. ಆದರೆ ಕರ್ಮಠ ಸಮಾಜ ಇದನ್ನು ಸಹಿಸದು! ಬಹುಜನರ ನಂಬಿಕೆಯನ್ನೇ ನೀನು ಅನುಸರಿಸಬೇಕೆಂಬುದು ಅದರ ತಾಕೀತು! ಸಮೂಹಗಾನದ ವಿರುದ್ಧ ನಿಮ್ಮ ಮೆಲುದನಿಯನ್ನು ಹತ್ತಿಕ್ಕುವುದೇ ಅದರ ಕೆಲಸ, ಹುನ್ನಾರ. ನಿಮ್ಮ ಭಕ್ತಿಗೆ ತಲೆದಂಡವೇ ಗತಿ ಎಂಬ ಉದ್ಧಟತನ ಅದರದು. ಮನ್ಸೂರ್‌ಅಲ್‌ಹಲ್ಲಾಜ್, ಅಯ್ನ್‌ಅಲ್‌ಖುದಾತ್(೧೦೯೮-೧೧೩೧)ರಂಥ ಅಪ್ರತಿಮ, ಪರಿಶುದ್ಧ ಸೂಫಿ ಸಂತರು ಇಂಥ ಕರ್ಮಠ, ಹಿಂಸಾಪ್ರವೃತ್ತ ದುಷ್ಟ ಸಮಾಜಕ್ಕೆ ತಮ್ಮ ತಲೆಯನ್ನು ದಂಡವಾಗಿ ತೆರಬೇಕಾಯಿತು. ಸಾರ್ವಜನಿಕ ಮರಣ ದಂಡನೆಗೆ ಗುರಿಯಾಗಬೇಕಾಯಿತು. ಅತ್ಯಂತ ನೋವು-ಅವಮಾನಗಳಿಂದ ಕೂಡದ ಅವರ ತ್ಯಾಗ ವ್ಯರ್ಥವಾಗಲಿಲ್ಲ. ತಮ್ಮ ಬಲಿದಾನದ ಬಳಿಕ, ತಲೆಮಾರುಗಳಿಂದ ತಲೆಮಾರಿಗೆ ಅರಿವಿನ ಬೀಜ ಬಿತ್ತುತ್ತ ಶತಮಾನಗಳು ಕಳೆದರೂ ಅವರು ಭಕ್ತಿಯ ಫಸಲನು ನೀಡುತ್ತಲೇ ಇದ್ದಾರೆ.
ಮುಂದುವರೆಯುವುದು…..
ಈ ಲೇಖನಗಳನ್ನೂ ನೋಡಿ :
ಸೂಫೀ ಪಂಥ ಮತ್ತು ವೇದಾಂತ : ದ್ವೈತಾದ್ವೈತ ವಿಶಿಷ್ಠ ಸಂಗಮ : https://aralimara.com/2019/04/22/sufi-41/
ಅನ್ ಅಲ್ ಹಕ್ – ‘ನಾನೇ ಭಗವಂತ’ ಎಂದರೇನು? : https://aralimara.com/2018/04/21/sufi-6/
1 Comment