ಪಂಚಾಂಗ ಎಂದರೇನು? ಅದರಲ್ಲಿ ಏನೇನು ಇರುತ್ತದೆ? : ನೀವು ತಿಳಿದಿರಲೇಬೇಕಾದ ಅಂಶಗಳು ಇಲ್ಲಿವೆ…

ತಿಥಿ ನಿರ್ಣಯ ಹೇಗೆ ಮಾಡುತ್ತಾರೆ? ವಾರಗಳು ಏಳೇ ಏಕಿವೆ? 27 ನಕ್ಷತ್ರಗಳ ಹೆಸರೇನು? ಯೋಗಗಳು ಎಂದರೇನು? ಕರಣಗಳು ಎಂದರೇನು? ಅವು ಎಷ್ಟಿವೆ ಮತ್ತು ಅವು ಯಾವುವು?  ಪಂಚಾಂಗದ ಮುಖ್ಯ ಮಾಹಿತಿ ಇಲ್ಲಿದೆ…

ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳು – ಇವೇ ಆ ಐದು ಅಂಗಗಳು. ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ಮೊದಲನೇ ಅಂಗ : ತಿಥಿಗಳು
ತಿಥಿ ಎಂದರೆ, ಭೂಮಿಯನ್ನು ಸುತ್ತಲು ಚಂದ್ರನು ಒಂದು ದಿನದಲ್ಲಿ ತೆಗೆದುಕೊಳ್ಳುವ ಅವಧಿ. ಚಂದ್ರನು ನಿತ್ಯ ಸುಮಾರು 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಈ ಚಲನೆಯಿಂದ ಉಂಟಾಗುವ ವೃದ್ಧಿ ಕ್ಷಯಗಳ ವಿವಿಧ ಹಂತಗಳನ್ನು ತಿಥಿಯ ಮೂಲಕ ಗುರುತಿಸಲಾಗುತ್ತದೆ.
ಈ ಪ್ರಕಾರವಾಗಿ ತಿಥಿಗಳು ಮೂವತ್ತು . 30 ತಿಥಿಗಳನ್ನು ಎರಡು ಪಕ್ಷಗಳಲ್ಲಿ 15ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ 15 ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂದೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ 15 ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂದೂ ಕರೆಯುತ್ತಾರೆ. ಎರಡೂ ಪಕ್ಷಗಳ ಹದಿನೈದು ತಿಥಿಗಳನ್ನು ಹೀಗೆ ಗುರುತಿಸಲಾಗುತ್ತದೆ:
ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಹುಣ್ಣಿಮೆ ಅಥವಾ ಅಮಾವಾಸ್ಯೆ.

ಎರಡನೇ ಅಂಗ : ವಾರಗಳು
ವಾರಗಳು ಒಟ್ಟು ಏಳು. ನವಗ್ರಹಗಳಲ್ಲಿ ರಾಹು ಕೇತುಗಳನ್ನು ಬಿಟ್ಟು ಮಿಕ್ಕ ಏಳು.
ಭೂಮಿ ತನ್ನ ಅಕ್ಷದ ಸುತ್ತ ಸುತ್ತು ಹಾಕುವ 7 ಅವಧಿಯನ್ನು ವಾರಗಳ ಮೂಲಕ ಗುರುತಿಸಲಾಗಿದೆ. (24 ಗಂಟೆ x 7 ದಿನ) ಈ ಚಲನೆ 7 ದಿನಕ್ಕೊಮ್ಮೆ ಪುನರಾವರ್ತನೆ ಆಗುವುದರಿಂದ ಇವುಗಳನ್ನು 7 ಗ್ರಹಗಳು ಎಂದು ಗುರುತಿಸಲಾಗಿದೆ. ಆ ಪ್ರಕಾರವಾಗಿ ಏಳು ದಿನಗಳಲ್ಲಿ ರವಿವಾರ, ಸೋಮ (ಚಂದ್ರ) ವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಎಂದು ಗುರುತಿಸಲಾಗಿದೆ.

ಮೂರನೇ ಅಂಗ : ನಕ್ಷತ್ರಗಳು
ಸೂರ್ಯನ ಸುತ್ತ ಇರುವ 27 ನಕ್ಷತ್ರಗಳನ್ನು ಮಾತ್ರ ಜ್ಯೋತಿಷಿಗಳು ದಿನ ಗಣನೆಗೆ ಪರಿಗಣಿಸಿದ್ದಾರೆ. ನಕ್ಷತ್ರಮಂಡಲದಲ್ಲಿ ಚಂದ್ರಸ್ಥಾನ ಗಂಟೆ ಗಂಟೆಗೂ ಬದಲಾಗುತ್ತಿರುತ್ತದೆ. ಒಂದು ರಾತ್ರಿ ಚಂದ್ರನ ಸಮೀಪದಲ್ಲಿ ಯಾವ ನಕ್ಷತ್ರ ಇರುತ್ತದೆ ಎಂದು ಗುರುತಿಸಿದ್ದಾರೆ. ಅದೇ ನಕ್ಷತ್ರದ ಸಮೀಪಕ್ಕೆ ಚಂದ್ರ ಮತ್ತೆ ಯಾವಾಗ ಬರುತ್ತಾನೆ ಎಂಬುದನ್ನೂ ಅವರು ಗುರುತಿಸಿದ್ದಾರೆ. ಇಂದು ಒಂದು ನಕ್ಷತ್ರದ ಬಳಿ ಕಾಣಿಸಿಕೊಳ್ಳುವ ಚಂದ್ರ ಮತ್ತೆ ಅದೇ ನಕ್ಷತ್ರದ ಸನಿಹಕ್ಕೆ ಬರಲು ಸುಮಾರು 27.32ದಿನಗಳು ಬೇಕಾಗುತ್ತದೆಂಬುದನ್ನು ನಿರ್ಧರಿಸಿದ್ದಾರೆ. ಹೀಗಾಗಿಯೇ ತಿಂಗಳಲ್ಲಿ 30 ದಿನ ಬಂದಿರುವುದು. ಈ ಚಲನೆಗೆ ಅನುಗುಣವಾಗಿಯೇ ಎರಡೆರಡು ದಿನ ಒಂದೇ ತಿಥಿ ಬರುವುದು.
ಈ ಇಪ್ಪತ್ತೇಳು ನಕ್ಷತ್ರಗಳ ಹೆಸರು ಹೀಗಿವೆ :
1. ಅಶ್ವಿನಿ
2. ಭರಣಿ
3. ಕೃತ್ತಿಕೆ
4.ರೋಹಿಣಿ
5.ಮೃಗಶಿರ
6.ಆರ್ದ್ರೆ
7.ಪುನರ್ವಸು
8.ಪುಷ್ಯ
9.ಆಶ್ಲೇಷ
10. ಮಖೆ
11. ಪುಬ್ಬೆ
12. ಉತ್ತರೆ
13. ಹಸ್ತ
14.ಚಿತ್ತಾ
15.ಸ್ವಾತಿ
16.ವಿಶಾಖ
17.ಅನೂರಾಧ
18. ಜ್ಯೇಷ್ಠ
19. ಮೂಲ
20. ಪೂರ್ವಾಷಾಢ
21.ಉತ್ತರಾಷಾಢ
22.ಶ್ರವಣ
23.ಧನಿಷ್ಥೆ
24.ಶತಭಿಷಾ
25.ಪೂರ್ವಾಭಾದ್ರ
26. ಉತ್ತರಾಭಾದ್ರ
27. ರೇವತಿ.

ನಾಲ್ಕನೇ ಅಂಗ : ಕರಣಗಳು
ಕರಣ ಎಂಬುದು ಒಂದು ದಿನದ ಅರ್ಧಭಾಗದಲ್ಲಿ ಸೂರ್ಯದ ಚಂದ್ರರ ನಡುವೆ ಇರುವ ದೂರದ ಪ್ರಮಾಣ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಚಂದ್ರಸೂರ್ಯರ ರೇಖಾಂಶಾಂತರ 60 ಆಗುವ ಅವಧಿಯೇ ಕರಣ. ಕರಣಗಳು ಒಟ್ಟು 11. ಅವು :
1. ಬವ,
2. ಬಾಲವ,
3. ಕೌಲವ,
4. ತೈತಲೆ,
5. ಗರಜೆ,
6. ವಣಿಕ್,
7. ಭದ್ರೆ,
8. ಶಕುನಿ,
9. ಚತುಷ್ಪಾತ್,
10. ನಾಗವಾನ್
11. ಕಿಂಸ್ತುಘ್ನ

ಐದನೇ ಅಂಗ : ಯೋಗಗಳು
ಸೂರ್ಯ ಚಂದ್ರರಿಬ್ಬರು 13 ಡಿಗ್ರಿ ಮತ್ತು 20 ಡಿಗ್ರಿ ಅಂತರಕ್ಕೆ ಬರುವುದನ್ನು ಯೋಗ ಎನ್ನುತ್ತಾರೆ. ಇನ್ನೂ ಹೆಚ್ಚು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯಚಂದ್ರರ ರೇಖಾಂಶಾಂತರ ತಿಥಿಯನ್ನು ನಿರ್ಣಯಿಸುವುದೇ ಯೋಗ. ಹಾಗೆಯೇ ಸೂರ್ಯಚಂದ್ರರ ರೇಖಾಂಶಗಳ ಮೊತ್ತ ಯೋಗವನ್ನು ನಿರ್ಣಯಿಸುತ್ತದೆ. ಇದು ಗ್ರಹಣ ಮೊದಲಾದ ವಿಷಯಗಳನ್ನು ಖಚಿತವಾಗಿ ಹೇಳಲು ನೆರವಾಗುತ್ತದೆ. ಯೋಗಗಳು ಒಟ್ಟು 27. ಅವು:
1. ವಿಷ್ಕಂಭ
2. ಪ್ರೀತಿ
3. ಆಯುಷ್ಮಾನ್
4.ಸೌಭಾಗ್ಯ
5.ಶೋಭನ
6.ಅತಿಗಂಡ
7.ಸುಕರ್ಮ
8.ಧೃತಿ
9.ಶೂಲ
10. ಗಂಡ
11. ವೃದ್ಢಿ
12. ಧ್ರುವ
13. ವ್ಯಾಘಾತ
14. ಹರ್ಷಣ
15. ವಜ್ರ
16.ಸಿದ್ಧಿ
17. ವ್ಯತೀಪಾತ
18. ವರಿಯಾನ್
19.ಪರಿಘ
20.ಶಿವ
21.ಸಿದ್ಧ
22. ಸಾಧ್ಯ
23. ಶುಭ
24. ಶುಕ್ಲ
25.ಬ್ರಹ್ಮ
26. ಐಂದ್ರ
27. ವೈಧೃತಿ

Leave a Reply