ದೇಹವೇ ದೇವಳ, ಕೈಲಾಸ, ಪ್ರಿಯನ ನೈವೇದ್ಯ! : ಕೇಶವ ಮಳಗಿ ಬರಹ

Untitledಮೇ 22ರಂದು ತಾಳ್ಳಪಾಕ ಅನ್ನಮಯ್ಯ ಅವರ ಜನ್ಮದಿನ. ಭಾರತೀಯ ಭಾಷೆಯೊಂದರಲ್ಲಿ ಭಕ್ತಿಶೃಂಗಾರ ಉತ್ತುಂಗಕ್ಕೇರಿಸಿದ ಮಹಾನುಭಾವ ಎಂದು ಅನ್ನಮಯ್ಯನನ್ನು ಗುರುತಿಸಲಾಗುತ್ತದೆ | ಕೇಶವ ಮಳಗಿ

ನರನ ’ದೇಹ’ ಮತ್ತು ದೇಹದೊಳಗೆ ಅಗೋಚರವಾಗಿ ಅಡಗಿರುವ ’ಆತ್ಮ’ ಅಥವ ‘ಪ್ರಜ್ಞೆ’ಯೇ ದೈವ ಎಂದು ವಿಶ್ವದ ಬಹುತೇಕ ಧರ್ಮಸಿದ್ಧಾಂತಗಳು ಹೇಳುತ್ತವೆ. ಇಹಲೋಕದಲ್ಲಿ ಏನನ್ನೇ ಸಾಧಿಸಬೇಕಾದರೂ ದೇಹವೇ ಅದಕ್ಕೆ ಪ್ರಾಥಮಿಕ ಮಾಧ್ಯಮ. ಏಕೆಂದರೆ, ಅದರೊಳಗಿನ ಪ್ರಜ್ಞೆ ಇಲ್ಲವೆ ಆತ್ಮ ಅಗೋಚರ. ಆದರೆ, ದೇಹ ಮತ್ತು ಪ್ರಜ್ಞೆಗಳನ್ನು ನಿಯಂತ್ರಿಸಿ, ಸಿದ್ಧಿ-ಸಾಧನೆಗಳ ಮೂಲಕ ಪರಾತ್ಪರವನ್ನು ಪಡೆಯಬಹುದಾಗಿದೆ. ಇದರರ್ಥ ಮನುಷ್ಯ, ದೇವನಾಗಬಹುದು, ಇಲ್ಲವೆ ದೇವಸಮಾನನಾಗಬಹುದು.

ಮನುಷ್ಯನ ದೇಹವನ್ನು ಹೊದಿಕೆ, ತಡಿಕೆ, ಚೀಲ, ತೊಗಟೆ, ಚಾದರ ಇತ್ಯಾದಿಗಳಿಗೂ ಧರ್ಮಗಳು ಸಮೀಕರಿಸಿವೆ. ದೇಹ ಹೊದಿಕೆಯನು ಕಳಚಿದ್ದೇ ಆತ್ಮ, ’ಪರ’ಮಾತ್ಮವಾಗುತ್ತದೆ. ಸ್ವಪ್ರಜ್ಞೆ, ’ಪರಮ’ಪ್ರಜ್ಞೆಯಾಗುತ್ತದೆ. ಆದರೆ, ಅದಕ್ಕಾಗಿ ಮಾಂಸಮಜ್ಜೆಗಳಿಂದ ಕೂಡಿದ ದೇಹದ ಚೀಲವನು ಖಾಲಿ ಮಾಡಬೇಕಾಗುತ್ತದೆ. ದೇಹ ಕಣ್ಮರೆಯಾದರೆ, ದೈವ ಸನ್ನಿಧಿ ದೊರಕುತ್ತದೆ!

ಹುಟ್ಟು ಮತ್ತು ಸಾವಿನ ನಡುವಿನ ’ಬದುಕಿ’ನಲ್ಲಿ ಅಲ್ಲಿ ’ದೇಹ’ವೇ ಸರ್ವಸ್ವವಾಗಿರುವಾಗ ಅದನ್ನೇನು ಮಾಡಬೇಕು? ದೇಹ ಕಣ್ಮರೆಯಾಗುವವರೆಗೆ ಮುಕ್ತಿ ದೊರಕುವುದಿಲ್ಲವೆ? ಹಾಗಿದ್ದರೆ, ದೇಹದ ಸಾರ್ಥಕತೆ ಏನು? ಕನ್ನಡದ ಶರಣರು ಹಾಗೂ ಮರಾಠಿ ವಾರಕರಿ ಸಂತರು ’ಕಾಯ’ ಮತ್ತು ’ಕಾಯಕ’ವನ್ನು ನೋಡಿದ ಬಗೆ ಬೇರೆ. ಆ ಮೂಲಕ ಎರಡಕ್ಕೂ ಮಹಾ ಘನತೆಯನ್ನವರು ತಂದುಕೊಟ್ಟರು. ಇದರಿಂದ ತಾರತಮ್ಯಗಳಿಂದ ನರಳುವ ರೋಗಗ್ರಸ್ತ ಸಮಾಜವನ್ನು ವಿಮರ್ಶೆಗೆ ಒಳಪಡಿಸಲು ಅವರಿಗೆ ಸಾಧ್ಯವಾಯಿತು. ಕಾಯ ಮತ್ತು ಕಾಯಕ ಎರಡನ್ನೂ ಸೃಷ್ಟಿಸಿರುವವನೆಂದು ನಂಬಲಾಗುವ ದೈವದೊಡನೆ ಅವರ ಜಗಳ-ನಿಂದನೆ ನಿರಂತರ. ಕಾಯಕದಲ್ಲಿ ಕಾಯವನು ಹಣ್ಣಾಗಿಸುತ ಕೈಲಾಸವನು ಪಡೆಯುವಲ್ಲಿ ಇರುವ ಅನಿಷ್ಟಗಳನ್ನು ಎತ್ತಿತೋರಿಸಬೇಕಿರುವುದು ಭಕ್ತನೆ ಅಲ್ಲವೆ? ಹೀಗಾಗಿ, ಕಾಯ ಮತ್ತು ಕೈಲಾಸದ ನಡುವಿರುವ ಸಮಾಜದ ಕೊಳೆಕಸವನ್ನು ತೋರಿಸಲು ಭಕ್ತಿಪಂಥದ ಕವಿಗಳು ಕನ್ನಡಿಗಳಾದರು. ಇಂತಹ ಕಾಲಘಟ್ಟದಲ್ಲಿ ಹುಟ್ಟಿದ ವೈರುದ್ದ್ಯ, ವೈಚಾರಿಕ ಸಂಘರ್ಷ ಮತ್ತು ಹಿಂಸೆಗಳು ಈ ಚರ್ಚೆಯಲ್ಲಿ ಒಳಗೊಂಡಿಲ್ಲ.

ಅಂತರ್ಮುಖತೆಗೆ ಹೆಚ್ಚು ಬೆಲೆ ಕೊಟ್ಟ ಕವಿಗಳು ದೇಹವನು ಬ್ರಹ್ಮಾಂಡಕ್ಕೆ, ಯೋಗ-ತಂತ್ರ ಪದ್ಧತಿಗೆ ಒಗ್ಗಿಸಿ, ಆ ವ್ಯವಸ್ಥೆಯ ಅತ್ಯಂತ ಸಂಕೀರ್ಣ ಉಪಮೆಗಳಿಗೆ ದೇಹವನು ಸಮೀಕರಿಸಿದರು. ಐದು, ಒಂಬತ್ತು, ಇಪ್ಪತ್ತೈದು, ಮೂವತ್ತಾರು ಹೀಗೆ ಸಂಖ್ಯೆಗಳನು ಜೈವಿಕ ಯಂತ್ರದಲಿ ಕಂಡರು. ಈ ಜೀವಯಂತ್ರದ ಒಂದೊಂದು ಅಂಗಾಂಗವೂ ಒಂದೊಂದು ಒಡಪುಗಳು ಅಡಗಿರುವಂತೆ ಕಲ್ಪಿಸಿದರು. ಪ್ರಜ್ಞೆಗೆ ಇಲ್ಲಿ ಪಾರಮ್ಯ. ಅಲ್ಲಮ ಪ್ರಭು ಮತ್ತು ಕಬೀರ ಇಂಥ ಕಾವ್ಯಕ್ಕೆ ಉದಾರಣೆಯಾಗಬಲ್ಲರು.

ಮೇಲಿನ ಎರಡು ಉದಾಹರಣೆಗಳಿಗಿಂತ ದೇಹವನು ಬೇರೊಂದು ರೀತಿಯ ಪ್ರತಿಮೆಯಾಗಿ ಬಳಸುವ ಭಕ್ತರೂ ಉಂಟು. ಮೂಳೆಮಾಂಸಗಳ ಈ ಜೀವಯಂತ್ರವನು ಇಹದ ಸುಗಂಧದ ಕನಸಲ್ಲಿ, ಕಾವ್ಯದಲ್ಲಿ ದೈವಕ್ಕೆ ನೈವೇದ್ಯದಂತೆ ಅರ್ಪಿಸಿದಾಗ, ದೈವಸಾನಿಧ್ಯದಿಂದ ಅದು ಪವಿತ್ರವಾಗುತ್ತದೆ. ದೇವ ಪುರುಷನಾದರೆ ಪ್ರೇಮರಸವನು ಕುಡಿದ ಕವಿ ಶುಚಿಗೊಂಡ ಕನ್ನೆಯಾಗುತ್ತಾನೆ. ತನ್ನ ದೇಹವನು ದೇವೋತ್ತಮ ಪರಮಪುರುಷನಿಗೆ ಸಮರ್ಪಿಸಿ ಪಾವನಗೊಳ್ಳುತ್ತಾನೆ. ದೇವ ಪ್ರಕೃತಿಯಾದರೆ ಭಕ್ತಿಪರವಶ ಪುರುಷ ಆಕೆಯೊಂದಿಗೆ ಚೆಲ್ಲಾಟವಾಡಿ ಸಗ್ಗಸುಖವನು ಉಣ್ಣುತ್ತಾನೆ! ಇಲ್ಲಿನ ರಾಸಲೀಲೆ, ದೈವಲೀಲೆ! ಭಕ್ತ, ದೈವವನು ತನಗೆ ಬೇಕಾದಂತೆ ಬಾಗಿಸಬಲ್ಲ! ಕಠಿಣ ತಪೋನಿಷ್ಠೆಯ ಮೂಲಕ ಸಾಕ್ಷಾತ್ಕಾರ ಸಾಧಿಸುವ ತಪಸ್ವಿಗಿಂತ ಈ ಗೋಪಿಕೆಯರು, ಸೂಫಿಗಳು ಕೃಷ್ಣನ, ಅಲ್ಲಾಹುವಿನ ಸಾಮೀಪ್ಯವನು ತಮ್ಮ ಅನುರಾಗ, ಆರ್ದ್ರತೆ, ಸಮರ್ಪಣೆ ಮತ್ತು ತನ್ಮಯತೆಯ ಮೂಲಕ ಕ್ಷಣ ಮಾತ್ರದಲಿ ಸಾಧಿಸಬಲ್ಲರು! ಶ್ರುತಿ, ಲಯ, ನಾದ, ಸ್ಮರಣೆ, ಪಠಣ ತಲುಪುವಿಕೆಯ ಸಾಧನಗಳಾಗಿವೆ.

ಭಾರತೀಯ ಭಾಷೆಗಳಲ್ಲಿ ಮತ್ತು ಸೂಫಿ ಕಾವ್ಯ ನಿರ್ಮಾಣಗೊಂಡ ಭಾಷೆಗಳಲ್ಲಿ ಈ ಬಗೆಯ ಭಕ್ತಿ ಶೃಂಗಾರರಸ ಉತ್ಕಟವಾಗಿ ಅಭಿವ್ಯಕ್ತಿಗೊಂಡಿದ್ದನ್ನು ಕಾಣುತ್ತೇವೆ. ಇದೊಂದು ಗಮನಾರ್ಹ ಅಂಶ. ವಿಶ್ವದ ಉಳಿದ ಭಾಷೆಗಳಲ್ಲಿ ಅತ್ತ್ಯುತ್ತಮ ಶೃಂಗಾರಕಾವ್ಯ; ಅತ್ತ್ಯುತ್ತಮ ಭಕ್ತಿಕಾವ್ಯ ಲಭ್ಯ. ಆದರೆ ಶೃಂಗಾರವನ್ನು ಒಳಗೊಂಡ ಭಕ್ತಿಕಾವ್ಯ ಅಪರೂಪ. ಇಂಥ ಕಾವ್ಯವನ್ನು ಶೈವ -ವೈಷ್ಣವ-ಸೂಫಿ ಸಂಪ್ರದಾಯಗಳಲ್ಲಿ ಕಾಣುತ್ತೇವೆ. ಈ ವಿಶಿಷ್ಟಗುಣ ಭಾರತೀಯ ಜನಪದ ಸಾಹಿತ್ಯದಲ್ಲೂ ಹಾಸುಹೊಕ್ಕಾಗಿದೆ.

ಇದರ ಆರಂಭಿಕ ಸುಳಿಹು-ಹೊಳಹುಗಳು ತಮಿಳು ಆಳ್ವಾರ್‌ (ಕ್ರಿ.ಶ. ೭, ೮ನೆಯ ಶತಮಾನ) ಕವಿಗಳಲ್ಲಿ, ಕಾಶ್ಮೀರ ಶೈವ ಸಿದ್ಧಾಂತದ (ಕ್ರಿ.ಶ. ೧೦, ೧೧ನೆಯ ಶತಮಾನ) ಸ್ತೋತ್ರಕಾರರಲ್ಲಿ ಕಾಣಬಹುದು. ಆದಾಗ್ಯೂ, ಇಂಥ ಕಾವ್ಯದ ಸ್ಪಷ್ಟರೂಪ, ಹರಹು ಮತ್ತು ವಿಸ್ತಾರಗಳು ಮಧ್ಯಯುಗದಲ್ಲಿ ಪ್ರಖರವಾಗಿ ಪ್ರಕಟಗೊಂಡಂತೆ ಕಾಣುತ್ತದೆ. ಅದು ತನ್ನ ಉತ್ತುಂಗವನ್ನು ತಲುಪಿದ್ದು, ವಿಶಾಲ ಬಂಗಾಳದ ವೈಷ್ಣವ ಕವಿಗಳಲ್ಲಿ (ವಿದ್ಯಾಪತಿ, ಗೀತಗೋವಿಂದದ ಜಯದೇವ, ನರಸಿಂಹ ಮೆಹ್ತ, ಗೋವಿಂದದಾಸ, ಜೀವ ಗೋಸ್ವಾಮಿ ಮುಂತಾದವರು); ತೆಲುಗಿನ ತಾಳ್ಳಪಾಕ ಅನ್ನಮಾಚಾರ್ಯ ಕೀರ್ತನೆಗಳಲ್ಲಿ, ಮತ್ತು ಕನ್ನಡದ ದಾಸಸಾಹಿತ್ಯದಲ್ಲಿ.

ಭಕ್ತಿಯ ಜೇನಿನಲಿ ಶೃಂಗಾರ ರಸಾಯನ ಲೀನಗೊಂಡಿದ್ದು ಹೀಗೆ! ಶೃಂಗಾರ ಕಾವ್ಯ ಮತ್ತು ಭಕ್ತಿರಸಾಯನ ಶೃಂಗಾರ ಕಾವ್ಯದಲ್ಲಿ ವಿರಹ, ತಳಮಳ, ವಿಯೋಗದುರಿ, ಮಿಲನ, ಭಾವೋತ್ಕಟತೆ, ಕೂಟದಲಿ ದೊರಕುವ ಉನ್ಮತ್ತ ಸಂತಸಗಳು ಒಂದೇ ಬಗೆಯಾಗಿ ಕಂಡರೂ, ಕಾಣುವ ಬಹುಮುಖ್ಯ ವ್ಯತ್ಯಾಸ: ಭಕ್ತಿ ಶೃಂಗಾರರಸದಲಿ ಮಿಲನ ಆಧ್ಯಾತ್ಮದ ಉನ್ನತಿಯನ್ನು, ಅನುಭಾವಿಕ ಸಂಗದ ಮೂಲಕ ದೈವಸಂಯೋಗವನ್ನು ಸಾಧಿಸಿದ ಸಂತೃಪ್ತಿಯನ್ನು ಪಡೆವುದಾಗಿದೆ. ಇಲ್ಲಿ ದೇಹ ವರ್ಣಿತವಾಗುತ್ತಿದ್ದರೂ ಅನುಭವದ ಶೃಂಗದಲಿ ಭಕ್ತ ’ದೈವಸಾಯುಜ್ಯ’ದ ಸುಖ ಅನುಭವಿಸುತ್ತಾನೆ.

ಆದರೆ, ಶೃಂಗಾರ ಕಾವ್ಯದ ನಾಯಕ ದೇಹ ಮಿಲನದ ಉತ್ಕಟ ಸುಖವನ್ನು ಪಡೆಯುತ್ತಾನೆ. ಇಲ್ಲಿ ಚೆಲುವು ಮಿಲನದ ಮೂಲಕ ಸ್ರವಿಸುತ್ತದೆ. ಇದು ’ಸಂಭೋಗ ಶೃಂಗಾರ’ವೆಂಬ ಸಂಚಾರಿಭಾವವೆಂದು ರಸಶಾಸ್ತ್ರಗಳು ಹೇಳುತ್ತವೆ. ಎರಡೂ ಕಾವ್ಯಗಳಲ್ಲಿ ಬಳಕೆಯಾಗುತ್ತಿರುವುದು ದೇಹದ ಪ್ರತಿಮೆಯೇ. ಆದರೂ ವ್ಯತ್ಯಾಸವಿರುವುದು ಮನಸ್ಸಿಗೆ ಸಂಬಂಧಪಟ್ಟ ’ಆಧ್ಯಾತ್ಮಿಕ ಸಂಯೋಗ’, ದೇಹಕ್ಕೆ ಸಂಬಂಧಪಟ್ಟ ’ದೈಹಿಕ ಸಂತೃಪ್ತಿ’. ಒಂದು, ದೇಹ ಸುಖದ ಸಂಭ್ರಮವನು ವಿಜೃಂಭಿಸಿದರೆ, ಇನ್ನೊಂದು, ದೇಹವನು ನಿಮ್ಮಿತ್ತ ಮಾಡಿಕೊಂಡು ಪಡೆವ ಆಧ್ಯಾತ್ಮಿಕ ಸುಗಂಧದ ಆಸ್ವಾದನೆಗೆ ಜಯಕಾರ ಹಾಕುತ್ತದೆ.

ಇಲ್ಲಿ, ಎರಡೂ ಅನುಭವಗಳ ಭಿನ್ನತೆಯನ್ನು ಹೇಳಲು ಮಾತ್ರ ಹೋಲಿಸುತ್ತಿದ್ದೇನೆಯೇ ಹೊರತು, ಒಂದು ಶ್ರೇಷ್ಠ, ಇನ್ನೊಂದು ಕನಿಷ್ಠವೆಂದು ಸಾಧಿಸಲು ಅಲ್ಲ. ಎರಡೂ ಪ್ರಕಾರಗಳು ಸೃಜಿಸಿದ ಅತ್ತ್ಯುತ್ತಮ ಕಾವ್ಯ ಆಸ್ವಾದನೀಯ. ಬಿಲ್ಹಣ, ಕಾಳೀದಾಸರ ಕೃತಿಗಳಂತೆಯೇ, ಜಯದೇವ, ವಿದ್ಯಾಪತಿ, ಮಹಾದೇವಿಯಕ್ಕ, ಮೀರಾ, ಆಂಡಾಳ್‌, ಲಲ್ಲೇಶ್ವರಿ, ರಬಿಯ ಅಲ್‌-ಬಸ್ರ್‌, ರೂಮಿ, ಇಬ್ನೆ ಅರಬಿ, ಯೂನಸ್‌ ಎಮರೆ ಕಾವ್ಯ ರುಚಿಕರ. ದೇಹವೆಷ್ಟೇ ನಶ್ವರವಾದರೂ ಅದಕ್ಕೊಂದು ಅತ್ತ್ಯುನ್ನತ ಸ್ಥಾನವನು ಕಲ್ಪಿಸಿ, ಪ್ರಣಯ-ಆಧ್ಯಾತ್ಮ-ಗುರಿಯನ್ನು ಸಾಧಿಸುವುದು ಎರಡೂ ಬಗೆಯ ಕಾವ್ಯಗಳ ಉದ್ದೇಶ.

ಈ ಭಕ್ತಿ ರಸಾಯನದ ಅನುಭವವನ್ನು ಸೌಂದರ್ಯಪ್ರಜ್ಞೆಯ ಸೂತ್ರಗಳು ಹಿಡಿದಿಡಲಾರವೆಂಬುದು ಭಕ್ತಿಸುಧೆಯನು ಕುಡಿದ ಭಕ್ತರು; ಮದಿರಾಸಕ್ತ ಸೂಫಿಗಳು ಹೇಳುತ್ತಾರೆ. ಅವರ ಪ್ರಕಾರ ಮನುಷ್ಯನಿಗಿರುವ ಅತಿದೊಡ್ಡ ತೊಡಕೆಂದರೆ ’ಭಾಷೆ’! ಆತನ ಆಧ್ಯಾತ್ಮಿಕ ಅನುಭೂತಿಗಳು ಭಾಷೆ ಮತ್ತು ಧರ್ಮಾತೀತ. ಈ ದಿವ್ಯೋನ್ಮಾದವನ್ನು ಹೊರಗೆ ಹೇಳಲಾಗದು, ಹೇಳಬಾರದು! ಅದು ಅರ್ಥ ತಿಳಿದ ಅಥವ ಅರ್ಥ ತಿಳಿಯದ ಒಡಪಿನಂತೆ! ಶ್ರೇಷ್ಠ ಸೂಫಿ ಸಂತ ಹುಸೇನ್‌ ಮನ್ಸೂರ್‌ ಅಲ್‌-ಹಲ್ಲಾಜನ ಮೇಲಿದ್ದ ಒಂದು ಆಪಾದನೆಯೆಂದರೆ: ಆತ ಮೆಕ್ಕಾದಲ್ಲಿ ತಾನು ಕಂಡ ಒಡಪನ್ನು ಹೊರಗೆಡಹಿದ್ದು! ಕಂಡ ಪರಮಸತ್ಯವನು ಒಡೆಯುವುದು ಇಲ್ಲಿ ನಿಷಿದ್ಧ! ಹಾಗೆಂದೇ, ಆತನಿಗೆ ಧರ್ಮಭ್ರಷ್ಟನೆಂಬ ಹಣೆಪಟ್ಟಿ ಕಟ್ಟಲಾಯಿತು.

’ಭಕ್ತಿರಸಾಯನದ ಶೃಂಗಾರಕಾವ್ಯ’ವನು ಓದಿದಾಗ, ನಾಟ್ಯಶಾಸ್ತ್ರ ಗುರುತಿಸುವ ಸಂಚಾರಿಭಾವಗಳು ಅಲ್ಲಿ ಎಷ್ಟು ಅಪ್ರತಿಮ ಚೆಲುವಿನಿಂದ ಪ್ರಕಟಗೊಂಡಿವೆ ಎಂದು ಬೆರಗಾಗುತ್ತದೆ. ಉದಾಹರಣೆಗೆ, ಚಿಂತೆ, ಮೋಹ, ವಿಷಾದ, ದೈನ್ಯತೆ, ಹರ್ಷ, ಔತ್ಸುಕ್ಯ, ಅಸೂಯೆ, ಆಲಸ್ಯ, ಶಂಕೆ, ಗರ್ವ ಇತ್ಯಾದಿ. ಪ್ರಿಯಕರ ಬರಲಿಲ್ಲವೆಂಬ ’ಚಿಂತೆ’, ಆತನ ಮೇಲೆ ’ಮೋಹ’, ಅವನು ಬರುವುದಿಲ್ಲವೆಂದು ಅರಿತಾಗ ಆವರಿಸುವ ’ವಿಷಾದ’, ನನ್ನನ್ನು ಒಪ್ಪಿಕೊ ಎಂಬ ’ದೈನ್ಯತೆ’, ಬಂದು ಕೂಡಿದನಲ್ಲ ಎಂಬ ’ಹರ್ಷ,’ ಆತ ಬೇರೆಯವಳಿಗೆ ಮನಸು ಕೊಟ್ಟಿರಬಹುದೆ ಎಂಬ ’ಶಂಕೆ’ ಹಾಗೂ ’ಅಸೂಯೆ’. ಆತ ನನ್ನವನು ಎಂಬ ಗರ್ವ ಅಥವ ’ಹೆಮ್ಮೆ’. . . ಹೀಗೆ. ಆದರೆ ಉಳಿದ ನವರಸಗಳನ್ನು ಹೊರಗೆ ಪ್ರಕಟಿಸುವಂತೆ ಇಲ್ಲವೆ ಅಭಿನಯಿಸುವಂತೆ ಭಕ್ತಿರಸವನು ಅಭಿನಯಿಸಲಾಗದು, ಅದು ಕೇವಲ ಅನುಭವಜನ್ಯ! ಅನುಭವಿಸಿ ಅನುಭಾವಿಯಾಗಬಹುದು! ಈ ಏಕೈಕ ಕಾರಣಕ್ಕಾಗಿ ಭಕ್ತಿಕವಿಗಳಿಗೆ ಭಾಷೆಯ ಮೇಲೆ ನಂಬಿಕೆಯಿಲ್ಲ.

ನಾನಿಲ್ಲಿ ಹೇಳುತ್ತಿರುವುದು ಶೃಂಗಾರ ಭಕ್ತಿಕಾವ್ಯದ ಬಗೆಗೆ ಮಾತ್ರ. ಸಂಸಾರ ಅಥವ ಇಹಲೋಕದ ಬದುಕಿನ ಕುರಿತು ಭಕ್ತಿ/ಸೂಫಿ ಕವಿಯ ಒಟ್ಟಾರೆ ನಿಲುವು ಏನೆಂಬುದನ್ನು; ಇಂಥ ಸಾಹಿತ್ಯ (ವಿಚಾರಗಳು) ನಿರ್ಮಾಣವಾಗುತ್ತಿದ್ದ ಕಾಲದಲ್ಲಿ ಸಮಾಜದ ಉಳಿದ ಮುಖಗಳು ಏನಾಗಿದ್ದವು ಎಂಬುದು ಇಲ್ಲಿ ಒಳಗೊಂಡಿಲ್ಲ.
*
ನಮ್ಮನ್ನೆಲ್ಲ ನಿಯಂತ್ರಿಸುವ ಎರಡು ಅತ್ಯಂತ ಪ್ರಬಲ ಶಕ್ತಿಗಳೆಂದರೆ ಧರ್ಮ ಮತ್ತು ರಾಜಕಾರಣ. ಎರಡರಲ್ಲೂ ಕರ್ಮಠತೆ, ಕಬ್ಬಿಣದ ಕಾಠಿಣ್ಯವನ್ನು ಎಲ್ಲ ಕಾಲಗಳಲ್ಲೂ ಕಾಣುವುದು ಸಾಮಾನ್ಯ. ಅವುಗಳ ಇನ್ನೊಂದು ಮಗ್ಗುಲಿಗೆ ಹೂವಿನ ಮೃದುತ್ವವನು ಗುಣವಾಗಿ ಪಡೆದ ಇನ್ನೊಂದು ಲೋಕವೂ ಇದೆ. ನಿಜ. ಹೂವಿನ ಮೃದುತ್ವಕ್ಕಿಂತ ಕಬ್ಬಿಣದ ಕಠಿಣತೆಯ ಬಲ ಹೆಚ್ಚು. ಮೃದುತ್ವದ ಆಯುಷ್ಯ ಕಡಿಮೆ. ಆದರೆ, ಅದರ ನವುರು ಸುಗಂಧ ನಮ್ಮ ಸ್ಮೃತಿಯಲ್ಲಿ ಉಳಿದಿರುತ್ತದೆ. ನಮ್ಮ ನಾಗರಿಕತೆಗಳು ನಿರ್ಮಾಣಗೊಂಡಿರುವುದು ಇಂತಹ ಶ್ರುತಿ ಮತ್ತು ಸ್ಮೃತಿಗಳಿಂದಲೇ. ಸ್ಮೃತಿ ಮತ್ತು ಶ್ರುತಿಗೆ ಸೂಫಿ ಸಂವಾದಿ ಪದ: ’ಸಮಾ’. ಇದು ಮೋಕ್ಷ ಸಾಧನೆಯ ಹನ್ನೊಂದನೆಯ ’ಪರದೆ’. ಆಲಿಕೆ, ಸ್ಮರಣೆ, ಮನನ ಮತ್ತು ಪರಿಷ್ಕರಣೆಗಳನ್ನು ಆಚರಣೆಗೆ ತರುತ್ತ ಮುಂದಡಿ ಇಡುವುದು ಒಂದು ವಿಧಾನ. ಆರ್ದ್ರತೆಯ ಕಾಲಾವಧಿ ಕಡಿಮೆ. ನಿಜವೇ. ಆದರೆ, ಕಬ್ಬುನ ಮತ್ತು ಕಲ್ಲುಗಳಿಂದ ಕಟ್ಟಿದ ಶ್ರೇಷ್ಠ ಇಮಾರತುಗಳು ಮುಂದೊಂದು ಕಾಲಕ್ಕೆ ಪ್ರಾಚ್ಯವಸ್ತುಗಳಾಗಿ, ಪಾಳು ಕೊತ್ತಲಗಳಾಗಿ ಬದಲಾಗುವವು ಎನ್ನುವುದೂ ನಿಜವೆ!
*

(ಮುಂದುವರೆಯುವುದು….)

ಲೇಖನ ಕೃಪೆ: ಕೇಶವ ಮಳಗಿಯವರ ಸಾಮಾಜಿಕ ಜಾಲತಾಣ

Leave a Reply