ಮೀನಿನ ಬಲೆ ಮತ್ತು ಮುಲ್ಲಾ ನಸ್ರುದ್ದೀನ್ : Tea time Story

Mullaಮುಲ್ಲಾ ನಸ್ರುದ್ದೀನ್ ಹೆಗಲ ಮೇಲೆ ಮೀನಿನ ಬಲೆ ಹಾಕ್ಕೊಂಡಿದ್ದು ಯಾಕೆ? ತೆಗೆದಿದ್ದು ಯಾಕೆ? ಓದಿ, Tea time Storyಯಲ್ಲಿ… | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ರಾಜ, ರಾಜ್ಯದ ನ್ಯಾಯಾಧೀಶನ ನೇಮಕಕ್ಕಾಗಿ ಅಧಿಕಾರಿಗಳ ಒಂದು ರಹಸ್ಯ ತಂಡವನ್ನು ರಚಿಸಿದ. ರಾಜ್ಯದ ಎಲ್ಲ ಊರುಗಳನ್ನು ಗುಪ್ತವಾಗಿ ಸಂದರ್ಶಿಸಿ, ಒಬ್ಬ ಪ್ರಾಮಾಣಿಕ, ಸಭ್ಯ, ವಿನಮ್ರ ವ್ಯಕ್ತಿಯನ್ನು ನ್ಯಾಯಾಧೀಶನ ಸ್ಥಾನಕ್ಕೆ ನೇಮಕ ಮಾಡುವುದು ಆ ರಹಸ್ಯ ಗುಂಪಿನ ಕೆಲಸವಾಗಿತ್ತು.

ಅದು ಹೇಗೋ ಈ ಸುದ್ದಿ ಮುಲ್ಲಾ ನಸ್ರುದ್ದೀನ್ ಗೆ ಗೊತ್ತಾಗಿಹೋಯಿತು. ರಾಜನ ಪ್ರತಿನಿಧಿಗಳ ನಿಯೋಗ ಪ್ರವಾಸಿಗಳ ವೇಷದಲ್ಲಿ ಮುಲ್ಲಾನ ಊರಿಗೆ ಆಗಮಿಸಿ, ತಮಗೆ ಬೇಕಾದ ವ್ಯಕ್ತಿಯ ಬಗ್ಗೆ ಊರಿನ ಜನರನ್ನು ವಿಚಾರಿಸತೊಡಗಿತು. ನಸ್ರುದ್ದೀನ್ ಗೆ ಈ ಸುದ್ದಿಯೂ ಗೊತ್ತಾಯಿತು.

ರಾಜನ ನಿಯೋಗ, ಬಂದು ಭೇಟಿ ಮಾಡುವಂತೆ ಮುಲ್ಲಾನಿಗೆ ಹೇಳಿ ಕಳಿಸಿತು. ನಸ್ರುದ್ದೀನ್ ಹೆಗಲ ಮೇಲೆ ಮೀನಿನ ಬಲೆ ಹಾಕಿಕೊಂಡು ನೀಯೋಗದ ಭೇಟಿಗೆ ಹೋದ. ಪ್ರಶ್ನೋತ್ತರಗಳೆಲ್ಲ ಮುಗಿದ ಮೇಲೆ ನಿಯೋಗದ ಒಬ್ಬ ಸದಸ್ಯ ಮುಲ್ಲಾನನ್ನು ಪ್ರಶ್ನೆ ಮಾಡಿದ.

“ ನಸ್ರುದ್ದೀನ್, ಏನದು ಹೆಗಲ ಮೇಲೆ ಯಾಕೆ ಮೀನಿನ ಬಲೆ ಹಾಕಿಕೊಂಡಿದ್ದೀಯಾ? “

“ ಅದು ನನ್ನ ಮೊದಲ ಕೆಲಸದ ನೆನಪಿಗಾಗಿ ಸ್ವಾಮಿ, ನಾನು ಮೊದಲು ಮೀನುಗಾರನಾಗಿದ್ದೆ. ನನಗೆ ಊಟ ನೀಡಿದ ಮೊದಲ ಕೆಲಸ ಮರೆತು ಹೋಗಬಾರದೆಂದು ನಾನು ಯಾವಾಗಲೂ ಮೀನಿನ ಬಲೆ ಹೆಗಲ ಮೇಲೆ ಹಾಕಿಕೊಂಡಿರುತ್ತೇನೆ “ ನಸ್ರುದ್ದೀನ ಉತ್ತರಿಸಿದ.

ಮುಲ್ಲಾನ ಉತ್ತರ ಕೇಳಿ ಅಧಿಕಾರಿಗಳ ನಿಯೋಗಕ್ಕೆ ತುಂಬಾ ಖುಶಿಯಾಯಿತು. ಅವರು ಮುಲ್ಲಾ ನಸ್ರುದ್ದೀನ್ ನನ್ನು ರಾಜ್ಯದ ನ್ಯಾಯಾಧೀಶನನ್ನಾಗಿ ನೇಮಿಸಿ ಅಧಿಸೂಚನೆ ಹೊರಡಿಸಿದರು.

ನಸ್ರುದ್ದೀನ್ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸಲು ಶುರು ಮಾಡಿದ. ಕೆಲವು ದಿನಗಳ ನಂತರ, ಮುಲ್ಲಾನನ್ನು ಮೂದಲು ಭೇಟಿ ಮಾಡಿದ ಅಧಿಕಾರಿ, ನ್ಯಾಯಲಯಕ್ಕೆ ನಸ್ರುದ್ದೀನ್ ನನ್ನು ನೋಡಲು ಬಂದ. ಮುಲ್ಲಾನನ್ನು ನ್ಯಾಯಾಲಯದಲ್ಲಿ ನೋಡಿ ಅಧಿಕಾರಿಗೆ ಆಶ್ಚರ್ಯವಾಯಿತು, ಮುಲ್ಲಾನ ಹೆಗಲ ಮೇಲೆ ಮೀನಿನ ಬಲೆ ಇರಲಿಲ್ಲ. ಆ ಅಧಿಕಾರಿ ಈ ಬಗ್ಗೆ ಮುಲ್ಲಾನನ್ನು ಪ್ರಶ್ನೆ ಮಾಡಿದ.

“ ನಿನ್ನ ಹೆಗಲ ಮೇಲೆ ಮೀನಿನ ಬಲೆ ಇಲ್ವಲ್ಲಾ ನಸ್ರುದ್ದೀನ್, ಯಾಕೆ ಏನಾಯಿತು? “

“ ಒಮ್ಮೆ ಮೀನು ಬಲೆಗೆ ಬಿದ್ದ ಮೇಲೆ ಮೀನಿನ ಬಲೆಯಿಂದ ಏನು ಪ್ರಯೋಜನ ಸ್ವಾಮಿ? “ ನಸ್ರುದ್ದೀನ ಉತ್ತರಿಸಿದ.

Leave a Reply