ಸೂಫಿ, ಶರಣ, ಯೋಗಿ… ಇವರೆಲ್ಲ ನಮಗೆ ಏನು ಹೇಳುತ್ತಿದ್ದಾರೆ?

Untitledನಿಸ್ವಾರ್ಥ ಪ್ರೇಮ, ತಾನು ಮಾಡುವ ಕೆಲಸದಲಿ ತನ್ಮಯತೆ, ಸಿದ್ಧಿಸಲು ರಾಗದ್ವೇಷಗಳಿಂದ ಮುಕ್ತನಾಗಿರಬೇಕಾದ ಅಗತ್ಯ, ಕುಹಕ, ತರತಮ, ಅವಹೇಳನ, ಶೋಷಣೆ ಮಾಡುವ, ಕೀರ್ತಿ-ಪ್ರಸಿದ್ಧಿಗಾಗಿ ಹಾತೊರೆಯುವುದರ ಹೊರತಾಗಿಯೂ ಬೇರೊಂದು ವಿಧಾನವಿರಲು ಸಾಧ್ಯ, ಎಂದು ಈ ಹೂವಿನ ಮೃದುತ್ವದ ಮನುಷ್ಯರು ಹೇಳುತ್ತಿದ್ದಾರೆಂದು ಅನ್ನಿಸಿದರೆ, ಅಂಥ ನಿಷ್ಕಲ್ಮಶ ಲೋಕವನು ನಿರ್ಮಿಸಬೇಕಾದ ಹೊಣೆ ನಮ್ಮ ಮೇಲೆಯೇ ಇದೆ…. | ಕೇಶವ ಮಳಗಿ

ದೇಹವನು ಕಾಯಕದಲಿ ಕರಗಿಸುವ ಶರಣ, ದೇಹವನು ವ್ಯೂಮದಲಿ ಸಿಲುಕಿಸಿ ಸಿಕ್ಕುಸಿಕ್ಕಾದ ಲೋಕದ ಅರ್ಥ ಒಡೆದು ಬ್ರಹ್ಮಾಂಡದಲಿ ಲೀನನಾಗುವ ಯೋಗಿ, ತನ್ನನ್ನು ಕನ್ನೆಯಂತೆ ಪರಮಪುರುಷನಿಗೆ ಸಮರ್ಪಸಿಕೊಳ್ಳುವ ಸೂಫಿ ಸಂತ, ಇವರೆಲ್ಲ ನಮಗೆ ಏನನ್ನಾದರೂ ಹೇಳುತ್ತಿದ್ದಾರೆಯೆ?

ನಿಸ್ವಾರ್ಥ ಪ್ರೇಮ, ತಾನು ಮಾಡುವ ಕೆಲಸದಲಿ ತನ್ಮಯತೆ, ಸಿದ್ಧಿಸಲು ರಾಗದ್ವೇಷಗಳಿಂದ ಮುಕ್ತನಾಗಿರಬೇಕಾದ ಅಗತ್ಯ, ಕುಹಕ, ತರತಮ, ಅವಹೇಳನ, ಶೋಷಣೆ ಮಾಡುವ, ಕೀರ್ತಿ-ಪ್ರಸಿದ್ಧಿಗಾಗಿ ಹಾತೊರೆಯುವುದರ ಹೊರತಾಗಿಯೂ ಬೇರೊಂದು ವಿಧಾನವಿರಲು ಸಾಧ್ಯ, ಎಂದು ಈ ಹೂವಿನ ಮೃದುತ್ವದ ಮನುಷ್ಯರು ಹೇಳುತ್ತಿದ್ದಾರೆಂದು ಅನ್ನಿಸಿದರೆ, ಅಂಥ ನಿಷ್ಕಲ್ಮಶ ಲೋಕವನು ನಿರ್ಮಿಸಬೇಕಾದ ಹೊಣೆ ನಮ್ಮ ಮೇಲೆಯೇ ಇದೆ.
*
ಮೇಲಿನ ಮೂರೂ ಭಾವಗಳನು ಎತ್ತಿ ತೋರಿಸುವ ಕೆಲವು ಕವಿತೆಗಳು ಇಲ್ಲಿವೆ.

ತಾಳ್ಳಪಾಕ ಅನ್ನಮಯ್ಯ
(೧೪೦೮-೧೫೦೩)

** ನಿದಿರೆ ಹೋಗಿಹಳು **

ನಿದಿರೆ ಹೋಗಿಹಳು ಜೇನಿನಂತಹ ನುಡಿಗಳಾಡುವ ಮಾತೆ 
ಹೆಣ್ತನದ ಸಕಲ ಪಟ್ಟುಗಳಲಿ ಪ್ರಿಯನನು ಕೂಡಿದವಳಲ್ಲವೆ.

ನಿಗಿ ನಿಗಿ ಹೊಳೆವ ಮೊಗದ ಮೇಲೆ ಚದುರಿವೆ ಕೇಶಗಳು 
ಹಗಲಿಡೀ ಮಲಗಿ ವಿರಮಿಸುವಳೀಗ ನಮ್ಮ ಸಖಿ, 
ಎಡೆಬಿಡದ ಪರಿಣಿತ ಚೆಲ್ಲಾಟ, ಆತನೊಂದಿಗೆ ಕೂಟ,
ಜಗದೇಕ ಪತಿಯ ಮನಸನು ಹಿಡಿದಿಟ್ಟಳು ನಸುಕವರೆಗೆ.

ನಿದಿರೆ ಹೋಗಿಹಳು ಜೇನಿನಂತಹ ನುಡಿಗಳಾಡುವ ಮಾತೆ

ಸೆರಗು ಜಾರಿದ ಹೊಳೆವ ತುಂಬಿದೆದೆಗಳ ತರುಣಿ
ಪವಡಿಸಿರುವಳು ಚಿನ್ನದಾ ಮಹಡಿಯಲಿ. 
ಚೆಲುವ ಕಣ್ಣಂಚುಗಳು ಮಿನುಗುತಿವೆ ಸಿಂಗರದಲಿ 
ಅಂಗದನ ಪಿತನೊಡನೆ ದಣಿದಿರುವಳಲ್ಲವೆ.

ನಿದಿರೆ ಹೋಗಿಹಳು ಜೇನಿನಂತಹ ನುಡಿಗಳಾಡುವ ಮಾತೆ

ಪ್ರಣಯದಾಟದಲಿ ಮುತ್ತುಗಳ ಮೇಲೆ ಹೊರಳುತ 
ಪರವಶಳು ಎಮ್ಮ ತರುಣಿ, ಈಗ ನಿದ್ರಿಸುತಿಹಳು 
ಬೆಟ್ಟದ ವೆಂಕಟಿಗನ ಬಿಗಿದಪ್ಪಿಹಳು ಬಾಹುಗಳಲಿ
ಸಖಿಯು ನಿದ್ರಿಸುತಿಹಳಲ್ಲವೆ ಅರೆ ತೆರೆದ ಕಣ್ಣ ಹೂಗಳಲಿ. 
*

ಆಂಡಾಳ್‌
(ಏಳನೆಯ ಶತಮಾನ)

ಮಿಂಚುಗುಡುಗಿಂದ ಹೊಳಪುತ್ತಿರುವ ಮೋಡಗಳೆ,
ಸಿರಿ ಲಕುಮಿಯ ಎದೆಯ ಮೇಲೆ ಪವಡಿಸಿಹ 
ಬೆಟ್ಟದ ವೆಂಕಟಿಗನಿಗೆ ಹೇಳಿ: 
’ನನ್ನ ಕೋಮಲ ಮೊಲೆ ತೊಟ್ಟುಗಳು
ಮೆದುವಾದ ಆತನೆದೆಯನು
ತಬ್ಬಿಕೊಳಲು ಪ್ರತಿನಿತ್ಯ ಹಾತೊರೆಯುತಿವೆ’.

*

ಗೋರಕ್ಷನಾಥ
(ಹನ್ನೊಂದನೆಯ ಶತಮಾನ)

ಬ್ರಹ್ಮ, ವಿಷ್ಣು, ರುದ್ರರು ಎಂಬುವರಿಲ್ಲ, 
ಸುರಾಸುರರಿಲ್ಲ, ಬುವಿಯೋ, ಅಸ್ತಿತ್ವದಲ್ಲಿಲ್ಲ!
ನೀರು, ಬೆಂಕಿ, ಆಕಾಶ, ಕಾಲ, ದಿಕ್ಕುದೆಸೆಗಳೂ ಅಸ್ತಿತ್ವದಲ್ಲಿಲ್ಲ
ವೇದ, ಯಜ್ಞಗಳು ಅಸ್ತಿತ್ವದಲಿಲ್ಲ, 
ರವಿ-ಶಶಿಯರು, ಕಲ್ಪಗಳ ನಿಯಮಗಳೂ ಅಸ್ತಿತ್ವದಲಿಲ್ಲ.
ನಿನ್ನ ಸ್ವಯಂ ಜ್ಯೋತಿಯೆ ಬೆಳಗುವುದು ಪರಮವಾಗಿ, 
ಸತ್ಯ, ಚಿತ್ತ, ಆನಂದ ಮೂರ್ತಿಯಾಗಿ!

**

ಅಮೀರ್‌ ಖುಸ್ರೋ
(ಕ್ರಿ.ಶ.೧೨೫೩-೧೩೨೫)

** ಇದೇ ನನ್ನ ಬದುಕು **

ನಾನು ಮತ್ತು ಇರುಳು, ಇದೇ ನನ್ನ ಬದುಕು.
ಯಾತನೆ, ಹೃದಯ, ಇದೇ ನನ್ನ ನಲಿವು.
ಇಡೀ ಇರುಳು ನೆನಪಿಸಿಕೊಳ್ಳುತ್ತ ಕುಡಿಯುವೆ- 
ಹೃದಯದ ನೆತ್ತರನು. ಇದೇ ನನಗೆ ನಿಸ್ತೇಜ ಕೆಂಪು ಮದಿರೆ.
ನೀನಿಲ್ಲದೆ, ನಿದಿರೆ ಬಾರದೆ ಗೋಳಾಡುವೆ ಇರುಳಿಡಿ. 
ರೋಧನವೆ ಸ್ನೇಹಪೂರ್ವ ಗಾಯನ.
ನಾನು ಮತ್ತು ಇರುಳು ಗೋಳಿನ ಮೂಲೆಯಲಿ,
ಇದೇ ನನ್ನ ಗುಟ್ಟಿನ ಆನಂದದ ತಾಣ.
ಆಕೆಯ ಚಿತ್ತರೂಪ ಕಂಗಳನು ಮುಚ್ಚಿಸುತಿದೆ,
ಅದೇ ನನಗೆ ಆತ್ಮಸಂಗಾತಿ ಇರುಳಿನಲಿ.
ನನ್ನ ಬಳಲಿಕೆಯಿಂದ ಆಕೆಗೆ ಯಾತನೆಯಾಗುವುದು ಬೇಡ,
ನನ್ನ ಹೃದಯ ಇದನೆ ಮಾಡುವುದೆಂದು ಮೊದಲೆ ಅರಿತಿದ್ದೆ.
ಕೆಲವೊಮ್ಮೆ ಆಕೆಯ ಪ್ರೀತಿಗಾಗಿ ಸಾಯುವೆ,
ಹಲವೊಮ್ಮೆ ಬದುಕುವೆ, ಹೀಗೆ ನಡೆದಿದೆ ಜೀವನ.
ಇದೇ ನನ್ನ ಚಿರಕಾಲದ ಬದುಕು, 
ಸಾಯಬಿಡು ನಿನ್ನ ಪಾದಗಳಡಿಯಲಿ.

‘ಇವನೆ ಆ ಗುಲಾಮ, ನಾನು ಉಚಿತವಾಗಿ ಪಡೆದವನು’.
ಇಷ್ಟನಾದರೂ ಹೇಳೆಂದು ಖುಸ್ರೋ ಬಯಸುತಿರುವನು. 
*
ನಾಮದೇವ
(೧೨ನೆಯ ಶತಮಾನ)

ಹಿಂದೂ ಕುರುಡ, ತುರುಕ ಅರೆ-ಅಂಧ,
ಯಾರಿಗೂ ಇಲ್ಲಿಲ್ಲ ಅರಿವಿನ ಗಂಧ. 
ಹಿಂದೂ ಪೂಜಿಗೈವ ದೇವಳದಲಿ, 
ಮುಸಲ್ಮಾನ ಮಸೂತಿಯಲಿ.

ಮಂದಿರ-ಮಸೀದಿಗಳ ಹಂಗಿಲ್ಲದೆಡೆ
ಅರ್ಚಿಸುವನು ನಾಮದೇವ.

*

ಚೋಖಾ ಮೇಳಾ
(೧೨ನೆಯ ಶತಮಾನ)

ಶರಣು! ಶರಣು! ಅಪ್ಪಾ-ಅವ್ವಂದಿರ, 
ನಾ ನಿಮ್ಮ ಶ್ರೀಮಂತರ ಸೇವಕ ‘ಮಹಾರ’
ಹಸಿವಿನಿಂದ ಕಂಗೆಟ್ಟಿರುವೆ, 
ತಂಗಳನ್ನಕಾಗಿ ಬಂದಿರುವೆ.

ಬಹಳೆ ಹೀನಾಯ ಸ್ವಾಮಿ ನಮ್ಮಯ ಸ್ಥಿತಿ
ಏಕೆ ಅರಿಯುತ್ತಿಲ್ಲ ಹೇಳು, ಹೇ! ಶ್ರೀಪತಿ.
ಜನುಮವೆ ಕಳೆಯಿತು ತಂಗೂಳಿನಲಿ,
ಮನ ಕರಗುವುದಿಲ್ಲವೆ ನಾಚಿಕೆಯಲಿ?
*

ವಿದ್ಯಾಪತಿ
(ಕ್ರಿ.ಶ. ೧೩೫೨-೧೪೪೮)

** ಮರಳುವನು ಮಾಧವ! **

ಹೇಗೆ ಹೇಳಲಿ ಸಖಿ ನನಗಾದ ಪರಮಾನಂದ! 
ಚಿರಕಾಲ ಉಳಿಯಲು ಬರುತಿಹನು ಮಾಧವ.

ಪಾಪಿ ಚಂದಿರ ಕೊಟ್ಟ ನೋವ ಹೇಗೊ ಸಹಿಸಿದೆನು, 
ನನ್ನ ಕಣ್ಣನೀಗ ಮಾಧವನ ಮುಖಕೆ ಮುಡಿಪೆನು.

’ಬಡವ ನಾನೆಂದು’ ಪ್ರಿಯನು ತೊರೆಯವುದು ಬೇಡ,
ಅವನೆನ್ನ ಮಹಾಧನವೆಂದು ಹೇಳಬೇಕಿದೆ ನೋಡ!

ನನ್ನ ಉಡಿಯ ತುಂಬ ಮಹಾನಿಧಿಯನು ತುಂಬು, 
ದೂರದೇಶಕೆ ಕಳುಹಿಸಲಾರೆ ಪ್ರಿಯನನು ಮತ್ತೆಂದು.

ಶಿಶಿರದ ಚಳಿಯಲಿ ಎನ್ನ ಹೊದಿಕೆ ಮಾಧವನೆ, 
ನದಿಯನು ದಾಟಿಸಲು ಹರಿಗೋಲೂ ಆತನೆ.

ಕವಿ ಚತುರ ವಿದ್ಯಾಪತಿಯ ಕಿವಿಮಾತು ಆಲಿಸು, 
ಬದುಕ ಬವಣೆಗಳು ಚಣಿಕ, ಹೆೋಗುವವು ಸಲೀಸು.
*

ಮೊಹಿನುದ್ದೀನ್ ಇಬ್ನೆ ಅರಬಿ ಶೇಕ್ ಅಲ್-ಅಕ್ಬರ್
(ಕ್ರಿ.ಶ. ೧೧೬೫-೧೨೪೦)

** ಕಸ್ತೂರಿ ಕುಡಿಕೆ **

ನಿದಿರೆ ಮುಗಿದ ಮೇಲೆ ಆಕೆಗೆ ದಣಿವು, ಬಳಲಿಕೆ
ಮನೆ ತುಂಬ ಪಸರಿಸಿರುವಳು ಪರಿಮಳವನು ಆಕೆ.

ಎದ್ದು ಹೊರಬಂದಾಗ ಬೆಳಗಿನ ಜಾವ
ಅದನವಳು ಅಲಂಕರಿಸುವಳು, 
ಆಕೆಯ ಅಂದುಗೆ, ಹೂವಿನ ಮೊಗ್ಗು
ಹರಿದು ಹೋಗುವ ನೀರನು ತಡೆಯುತಿದೆ ಎಂಬಂತೆ!

ಆಕೆಯ ಹಿಂಭಾಗ ಮರಳುದಿನ್ನೆಗಳಂತೆ
ಮಳೆ ಸುರಿದಾಗ ಬುಗ್ಗೆಯನು
ಹರಿಸುವ ಜೌಗು.

ಬೆನ್ನ ಕೆಳಭಾಗದವರೆಗೆ ಹರಡಿರುವ 
ಆಕೆಯ ಕೂದಲರಾಶಿ ತುಂಬೆ ಹೂವಂತೆ ಮೃದು, 
ಸುರಳಿಗಳ ಬಾಚಿ, ಕುಚ್ಚು ಕಟ್ಟಿರುವಳು.
ಉದ್ದ ಕೆನ್ನೆಯ ಕುಳಿಗಳು,
ಅವಳ ಕಣ್ಣೀರನು 
ಉಬ್ಬಿದೆದೆಯ ಇಳಿಜಾರಿನ ಬಳುಕಿಸಿ
ಕೆಳಗೆ ಹರಿಸುವವು.

ಕೊರಳಾಚೀಚೆಯಲಿ
ತೂಗುವ ಲೋಲಕಗಳು
ಶೂನ್ಯದಲಿರುವಂತೆ ಕಾಣುವವು.

ಸಂಜೆ ’ರಾಮಾ’ ಮರಳುಗಾಡಿನ ತೋಟದ
ಇಬ್ಬನಿ ಕುಡಿದ ಅಪರಂಜಿ ಹೂವಿನ ಎಸಳು 
ಎಲ್ಲೆಡೆ ತೊನೆದಾಡಿ, ತೋಟದ ಪರಿಮಳವ ಹೀರಿ
ಇರುಳಲಿ ಮೃದುವಾಗಿ, ಕಸ್ತೂರಿ ಕುಡಿಕೆಯಂತಿರುವವು. 
ಕೆಂಪು ಕಾರೆಹಣ್ಣಿನ ನವಿರು ಹಲ್ಲುಗಳು ಮೂಡಿವೆ
ಅವುಗಳ ಮೇಲೆ ಎಂಬುದನು 
ಈ ಬೆಳಗು ಆಕೆ ಹೆರಗೆಡಹುವಳು.

ಆಕೆಯ ಬಿಳಿಯ ಹಲ್ಲಿನ ಕಾಂತಿ,
ಕಂಡು ಕೇಳರಿಯದ 
ಮಿತಿಮೀರಿದ ನಸುನಗು
ಗುಟ್ಟುಗಳನು ಹೇಳುತಿವೆ.
ಆಕೆ ನಿವಾರಕಿ, ಆಕೆಯೇ ಕಾಯಿಲೆ. . .
*

ಜಲಾಲುದ್ದೀನ್‌ ರೂಮಿ
(ಕ್ರಿ.ಶ. ೧೨೦೭-೧೨೭೩)

ಆಹಾ! ಈ ಚಳಿ, ಮಳೆಯಲ್ಲಿ
ಪ್ರೇಮಿಯೊಬ್ಬನಿದ್ದರೆ ಎಂಥ ಸುಖ!
ಮನಸಲ್ಲಿ ಮಡುಗಟ್ಟಿದ ಪ್ರೀತಿ, 
ಹೊಳೆವ, ಮೃದು, ಬಿರುಸು ಚಿತ್ರದಂತೆ
ನವಿರು, ನಾಜೂಕಿನ ಚೆಲುವು ನಿನ್ನದಾಗಿದ್ದರೆ, ಆಹಾ!
ಹೆಪ್ಪುಗಟ್ಟುವ ಚಳಿಯಲ್ಲಿ ಆತ ವಾಸಿಸುವ
ನೆರೆಹೊರೆಗೆ ಓಡುವೆವು
(ಆತನಂಥ ಚೆಲುವನಿನ್ನೂ ಅಂಕುರಿಸಿಲ್ಲ
ಯಾವ ತಾಯಿಯ ಹೊಟ್ಟೆಯಲೂ).
ಈ ಮಂಜಿನಲಿ ನಾನಾತನ ತುಟಿಗಳ ಚುಂಬಿಸುವೆ
(ಹಿಮ, ಸವಿ ನನ್ನ ಎದೆಬಡಿತ ಹೆಚ್ಚಿಸುವವು) 
ನಾ ಸಹಿಸೆ, ನಾ ಭರಿಸೆ ಈ ಸುಖವನ್ನು
(ದೂರ ಹೊತ್ತೊಯ್ದು, ಮತ್ತೆ ತಂದಿಳಿಸಿತಿಲ್ಲಿ)
ಆತನ ಚಿತ್ತರೂಪ ಮನಸಲ್ಲಿ ಮೂಡಿದ್ದೇ
ಅದು ತಂತಾನೆ ಹುಚ್ಚೆದ್ದು ಕುಣಿಯುವುದು,
ದೇವ ಲೀಲೆ ಅಪಾರ!

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.