ಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! ಝೆನ್ ಪರಂಪರೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಓಶೋ, ಚೀನೀ ಝೆನ್ ಕವಿ, ಸಾಧಕ Sosan ರಚಿಸಿದ್ದೆಂದು ಹೇಳಲಾಗುವ Hsin hsin ming ಕಾವ್ಯದ ಬಗ್ಗೆ ನೀಡಿದ ಉಪನ್ಯಾಸದ ಭಾವಾನುವಾದ ಇಲ್ಲಿದೆ. ಅರಳಿಬಳಗದ ಚಿದಂಬರ ನರೇಂದ್ರ ಇದನ್ನು ಕನ್ನಡಕ್ಕೆ ತಂದಿದ್ದಾರೆ.
Hsin Hsin Ming – Sosan
“ If I were to save only two books from the whole world of mystics, one would be Sosan’s Hsin Hsin Ming” Osho says. “ It contains the quintessence of Zen, the path of awareness and meditation….the very soulf of zen,”
Chapter 1 : The great way is not difficult
ಇತಿಹಾಸದ ನೆನಪಲ್ಲಿ
ಹಿಂಸೆ ಮತ್ತು ಕ್ಷೋಭೆಗೆ ಮಾತ್ರ ಜಾಗ,
ಮೌನ ಮತ್ತು ಸಮಾಧಾನವನ್ನು ನೆನಪಿನಲ್ಲಿಟ್ಟುಕೊಳ್ಳುವುದು
ಇತಿಹಾಸಕ್ಕೆ ಸಾಧ್ಯವಿಲ್ಲದ ಮಾತು.
ತಪ್ಪಲ್ಲ ಇದು ಹೀಗೇ ಇರಬೇಕು.
ಹೀಗೇ ಇದ್ದ, ಇವನೊಬ್ಬ ಸೊಸಾನ್
ಮೂರನೇ ತಲೆಮಾರಿನ ಝೆನ್ ಸಾಧಕ
ಮೌನದ ಆಳಕ್ಕಿಳಿದು ಇಳಿದು
ಇತಿಹಾಸದ ನೆನಪಿಂದ ಮರೆಯಾದವನು,
ಬದುಕಿನ ಆಮಿಷಗಳನ್ನು ದೂರ ನಿಂತು ನೋಡಿದವನು,
ಒಳಗೂ ಹೊರಗೂ
ಸ್ಥಾವರಗಳ ಕುಟ್ಟಿ ಪುಡಿ ಪುಡಿ ಮಾಡಿದವನು,
ಜಂಗಮದ ಜೋಳಿಗೆ ಹಿಡಿದು
ಭಿಕ್ಷಕ್ಕೆ ಹೊರಟವನು,
ತಾವೋ ಬಯಸಿದ ಮನುಷ್ಯ,
ಬುದ್ಧ ಕಂಡ ಕನಸು,
ಇವರಿಬ್ಬರ ಸಂಕರದಲ್ಲಿ ಅರಳಿದ ಅಪರೂಪದವನು.
ಎಂದು ಹುಟ್ಟಿದ, ಯಾವಾಗ ಸತ್ತ
ಅದು ಮೂಡಣದವರಿಗೆ ಬೇಕಿಲ್ಲ
ಇವನೊಬ್ಬನಿದ್ದ ಅದು ಮುಖ್ಯ
ಆಡಿದ ಮಾತು ಮುಖ್ಯ
ಮಾತು ಎಂದರೆ ತಪ್ಪಾದೀತು,
ಮಾತಲ್ಲ, ಊಹೆಯಲ್ಲ,
ಅನುಭವದ ಮೂಸೆಯೊಳಗೆ
ಪರಿಪಕ್ವಗೊಂಡ ಅನುಭಾವ.
ಇವನ ನೆನಪು ಇತಿಹಾಸಕ್ಕಿಲ್ಲ
ಹೌದು ಇದು ಇತಿಹಾಸದ ತಪ್ಪಲ್ಲ
ಇದು ಮೌನದ ಉದ್ದೇಶ, ಇದೇ, ಸಮಾಧಾನದ ಬಯಕೆ.
***
ಸೊಸಾನ್ ತತ್ವಜ್ಞಾನಿಯಲ್ಲ, ಸಂಗೀತಕಾರ.
ಅವನ ಮಾತನ್ನ ಸುಮ್ಮನೇ ಕೇಳಿ,
ಸಿತಾರ್ ನ ತಂತಿಗಳ ಸಂಭ್ರಮವನ್ನು ಕೇಳುವಂತೆ.
ಅವನ ಮಾತುಗಳಿಗೆ
ಅರ್ಥ ಹಚ್ಚುವ ಸಾಹಸಕ್ಕೆ ಮುಂದಾಗ ಬೇಡಿ,
ಅವನ ಮಾತುಗಳಿಗೆ ಮಹತ್ವವಿದೆ, ಅರ್ಥವಿಲ್ಲ
ಅವನೊಬ್ಬ ಥೇಟ್ ಭಾವಗೀತಾಕಾರ.
ಧುಮ್ಮುಕ್ಕುತ್ತಿರುವ ಜಲಪಾತವನ್ನು
ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ?
ಆದರೂ ಅದು ಏನೋ ಹೇಳುತ್ತಿದೆ,
ನಿಮಗೆ ಗೊತ್ತಾಗುತ್ತಿದೆ,
ಯಾವುದನ್ನು ಹೇಳಲಾಗುವುದಿಲ್ಲವೋ
ಅದರ ಬಗ್ಗೆಯೇ
ಮತ್ತೆ ಮತ್ತೆ ಹೇಳುತ್ತಿದೆ.
ಅವನ ಮಾತನ್ನ
ಬುದ್ಧಿಯ ಒರೆಗೆ ಹಚ್ಚಬೇಡಿ,
ಅದು ಬುದ್ಧಿಯಿಂದ ಹುಟ್ಟಿದ್ದಲ್ಲ ,
ಮೌನ ಕಳೆತು ಕಳೆತು
ಹೊರಸೂಸುತ್ತಿರುವ ಸುಗಂಧ ಇದು.
ಸುಮ್ಮನೇ ತನ್ಮಯರಾಗಿ.
ಈ ಸುಗಂಧ ನಿಮ್ಮನ್ನು ಹೊಕ್ಕು
ನಿಮ್ಮ ಕಣ ಕಣವನ್ನು ಘಮ ಘಮಿಸಿ
ಮತ್ತೆ ನಿಮ್ಮನ್ನು ಪ್ರಕೃತಿಯ
ಮಡಿಲಲ್ಲಿ ಮಲಗಿಸಿ ಲಾಲಿ ಹಾಡುತ್ತದೆ.
***
‘ಮನಸ್ಸು ಒಂದು ಕಾಯಿಲೆ’
ಇದು ಮೂಡಣದ ಸೂರ್ಯರು ಕಂಡುಕೊಂಡ ಸತ್ಯ.
ಮನಸ್ಸು ಒಂದಲ್ಲ, ನೂರು, ಸಾವಿರ.
ಹೀಗಿರುವಾಗ ಪೂರ್ಣತೆ ಹೇಗೆ ಸಾಧ್ಯ?
ಪೂರ್ಣವಾಗಿರದೇ ಆರೋಗ್ಯ ಹೇಗೆ ಸಾಧ್ಯ?
ಆದ್ದರಿಂದಲೇ
ಆರೋಗ್ಯವಂತ ಮನುಷ್ಯನಿಗೆ
ಮನಸ್ಸಿನ ಕಾಟವಿಲ್ಲ
ಆದ್ದರಿಂದಲೇ ಅವನಲ್ಲಿ
ಅದು-ಇದು ಎನ್ನುವ ಭೇದವಿಲ್ಲ.
ಮನಸ್ಸು ಆಯ್ಕೆಗೆ ಮಂದಾಗುತ್ತದೆ.
ಆಯ್ಕೆ ಒಂದು ಜಾಲ
ನೀವು ಒಂದನ್ನು ಆಯ್ಕೆ ಮಾಡಿಕೊಂಡ ಕ್ಷಣದಲ್ಲಿಯೇ
ಇನ್ನೊಂದನ್ನು ವಿರೋಧಿಸಿರುತ್ತೀರಿ.
ಪರ- ವಿರೋಧಗಳೆರಡೂ
ಒಂದು ಇನ್ನೊಂದರ ನೆರಳುಗಳು.
ಆದರೆ ಬದುಕು ಹಾಗಲ್ಲ
ಅದು ಪೂರ್ಣ, ಅದು ಅವಿಭಾಜ್ಯ.
ಇದು ಸುಂದರ, ಇದು ಕುರೂಪ ಎಂದಾಗಲೇ
ಅಲ್ಲಿ ಮನಸ್ಸಿನ ಪ್ರವೇಶವಾಗಿದೆ
ಆದರೆ ಬದುಕು ಹಾಗಲ್ಲ
ಅಲ್ಲಿ ಸೌಂದರ್ಯ, ಕುರೂಪ ಎರಡೂ ಒಂದೇ.
ಒಮ್ಮೆ ಸೌಂದರ್ಯ, ಕುರೂಪದೆಡೆಗೆ ಹೆಜ್ಜೆ ಹಾಕಿದರೆ
ಇನ್ನೊಮ್ಮೆ ಕುರೂಪ, ಸೌಂದರ್ಯದ ರೂಪ ತಾಳುತ್ತದೆ.
ಇಲ್ಲಿ ಯಾವ ಗಡಿಯೂ ಇಲ್ಲ.
ಬದುಕಿನ ಗುಣಧರ್ಮವೇ ಹಾಗೆ
ಒಂದರಿಂದ ಇನ್ನೊಂದಕ್ಕೆ ರೂಪಾಂತರಗೊಳ್ಳುತ್ತಲೇ ಇರುವುದು.
ಬದುಕಿನ ಜೊತೆ ಹೆಜ್ಜೆ ಹಾಕಬಯಸುವವರಿಗೆ
ಆಯ್ಕೆಯ ಅವಕಾಶವೇ ಇಲ್ಲ.
ಪ್ರೇಮ ಮತ್ತು ದ್ವೇಷದ ಉದಾಹರಣೆಯನ್ನೇ ಗಮನಿಸಿ.
ಪ್ರೇಮಕ್ಕೆ ಬೇಸರವಾದಾಗಲೆಲ್ಲ ದ್ವೇಷದ ಮೊರೆ ಹೋಗುತ್ತದೆ
ದ್ವೇಷಕ್ಕೆ ಸುಸ್ತಾದಾಗ ಪ್ರೇಮ ಕೈ ಹಿಡಿಯುತ್ತದೆ.
ಇದು ಬದುಕಿನ ರೀತಿ.
ನಿಜದಲ್ಲಿ ಈ ವೈರುಧ್ಯ, ವೈರುಧ್ಯವಲ್ಲ
ಬದಲಾಗಿ ಬದುಕಿನ ರಾಗದ ಲಯ, ತಾಳ.
ಆಯ್ಕೆಯ ಪ್ರಶ್ನೆಯೇ ಇಲ್ಲಿಲ್ಲ.
ತರ್ಕದ ಪಯಣ ಸರಳ ರೇಖೆಯಲ್ಲಿ
ಆದರೆ ಬದುಕು ಹಾಗಲ್ಲ
ಬದುಕಿನದು ವೃತ್ತದ ಹಾದಿ.
ನೀವು ಚೀನಿಯರ
ಯಿನ್ ಮತ್ತು ಯಾಂಗ್ ವೃತ್ತ ನೋಡಿರುತ್ತೀರಿ
ಹಾಗೆ ಬದುಕು.
ವೈರುಧ್ಯಗಳು, ಒಂದರೊಡನೆ ಇನ್ನೊಂದು
ಒಂದಾಗಿರುವುದು.
ಇಲ್ಲಿ ಅರ್ಧ ಕಪ್ಪು, ಅರ್ಧ ಬಿಳೀ.
ಬಿಳಿ ಭಾಗದಲ್ಲೊಂದು ಕಪ್ಪು ಚುಕ್ಕೆ.
ಕಪ್ಪು ಭಾಗದಲ್ಲೊಂದು ಬಿಳೀ ಚುಕ್ಕೆ.
ಬಿಳೀ, ಕಪ್ಪು ಭಾಗಕ್ಕೆ ನುಸುಳುತ್ತಿದೆ
ಕಪ್ಪು, ಬಿಳಿಯ ಬಯಲಿಗೆ ನುಗ್ಗುತ್ತಿದೆ
ಹೀಗೊಂದು ಪೂರ್ಣ ವೃತ್ತ.
ಹೆಣ್ಣು , ಗಂಡಿನೊಳಗೆ ಪ್ರವೇಶ ಮಾಡುತ್ತಿದ್ದಾಳೆ
ಗಂಡು, ಹೆಣ್ಣಿನೊಳಗೆ ದಾಖಲಾಗುತ್ತಾನೆ
ಇದು ಬದುಕು.
ಹೆಣ್ಣು ಪೂರ್ಣ ಹೆಣ್ಣಲ್ಲ,
ಇದ್ದಾನೆ ಅವಳಲ್ಲೂ ಒಬ್ಬ ಗಂಡು.
ಹಾಗೆಯೇ ಗಂಡಿನಲ್ಲೂ ಒಂದು ಹೆಣ್ಣು.
ಹೆಣ್ಣಿನ ಗಂಡಸುತನ ಎಷ್ಟು ಶುದ್ಧವೆಂದರೆ
ಅದು ಗಂಡಿನ ಗಂಡಸುತನಕ್ಕಿಂತ ಶಕ್ತಿಶಾಲಿ.
ಗಂಡಿನ ಹೆಣ್ಣುತನ ಎಷ್ಟು ಶುದ್ಧವೆಂದರೆ
ಅವನ ಶರಣಾಗತಿಯ ಎದುರು
ಯಾವ ಹೆಣ್ಣೂ ಗೆದ್ದ ಉದಾಹರಣೆಗಳಿಲ್ಲ.
ಗಂಡು, ಹೆಣ್ಣು ಜೀವನ ಚಕ್ರದ ವೈರುಧ್ಯಗಳು
ಒಂದನ್ನೊಂದು ಪೊರೆಯುವ ಜೀವತಂತುಗಳು
ಒಂದು ಇನ್ನೊಂದನ್ನು ಸರಿತೂಗಿಸಿದಾಗಲೇ
ಮುಂದೆ ಉರುಳಿದ ಬದುಕಿನ ಬಂಡಿ.
ಈ ಸತ್ಯ ಅರ್ಥವಾದಾಗಲೇ
ನೀವು ಯಾವುದರ ಪರವೂ ಅಲ್ಲ
ವಿರೋಧಿಯೂ ಅಲ್ಲ.
ಆಗಲೇ ಮೌನ ಸಾಧ್ಯ, ಸಮಾಧಾನ ಸಾಧ್ಯ.
****
ಸೊಸಾನ್ ತರ್ಕದ ಮನುಷ್ಯ ಅಲ್ಲ
ಬದುಕಿಗೆ ತೆರೆದುಕೊಂಡವನು.
ಅವನ ಈ ಶಬ್ದಗಳ ಮಹತ್ವ ಗಮನಿಸಿ.
ತಾವೋ ಅಂಥ ಕಷ್ಟದ ಹಾದಿಯೇನಲ್ಲ
ಆಯ್ಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದವರಿಗೆ.
ಪ್ರೀತಿ ಮತ್ತು ದ್ವೇಷ ಎರಡೂ ಇಲ್ಲವಾದಾಗಲೇ
ಕಳಚಿ ಬಿದ್ದಿವೆ ಎಲ್ಲ ಮುಖವಾಡಗಳು,
ಸ್ಪಷ್ಟವಾಗಿದೆ ಬದುಕಿನ ದಾರಿ.
ಒಂದು ಇನ್ನೊಂದಕ್ಕಿಂತ ಗುಲಗಂಜಿಯಷ್ಟು ಬೇರೆ
ಎಂದು ತೀರ್ಮಾನ ಮಾಡಿದಾಗಲೇ
ದ್ಯಾವಾ ಪೃಥ್ವಿ ಎಣಿಸಲಾಗದಷ್ಟು ದೂರ ಸರಿದಿವೆ.
ನಿಜವನ್ನು ನೋಡ ಬಯಸುವಿರಾದರೆ
ಪರ ವಿರೋಧಗಳ ಜಂಜಾಟಕ್ಕೆ ಬೀಳಬೇಡಿ.
ಇಷ್ಟವಾಗುವ ಮತ್ತು ಇಷ್ಟ ಆಗದೇ ಇರುವ ಸಂಘರ್ಷ,
ಮನಸಿನ ಕಾಯಿಲೆ.
****
ತಾವೋ ಅಂಥ ಕಷ್ಟದ ಹಾದಿಯೇನಲ್ಲ.
ದಾರಿ ಕಠಿಣವೇನಲ್ಲ।
ನೀವು ಮಾಡಿಕೊಳ್ಳುತ್ತಿದ್ದೀರಿ ಅಷ್ಟೇ.
ಗಿಡ ಮರಗಳಿಗೆ ಗೊತ್ತು, ನದಿಗೆ ಗೊತ್ತು
ಬಂಡೆಗಳಿಗೆ ಗೊತ್ತು.
ಹಕ್ಕಿಗಳು ಹಾರೋದು ಅಲ್ಲೇ
ಮೀನುಗಳು ಈಜೋದು ಅಲ್ಲೇ
ಹಾಗಿರುವಾಗ, ದಾರಿ ಕಠಿಣವಾಗೋದು ಹೇಗೆ?
ಹೌದು. ಮನುಷ್ಯರು ಮಾತ್ರ
ಎಲ್ಲವನ್ನೂ ಕಠಿಣ ಮಾಡಿಕೊಳ್ಳುತ್ತಾರೆ.
ಅವರೇ ಅಲ್ಲವೇ ಆಯ್ಕೆಗಳ ಗೊಂದಲದಲ್ಲಿ ಬಿದ್ದವರು,
ಒಂದನ್ನು ಇನ್ನೊಂದರ ವಿರುದ್ಧ ಎತ್ತಿ ಕಟ್ಟುವವರು.
ಹೀಗಾದಾಗ ಮಾತ್ರ ದಾರಿ ಕಠಿಣ, ಬದುಕು ಕಠಿಣ.
ಪ್ರೀತಿಸುವುದು ಸುಲಭ, ದ್ವೇಷಿಸುವುದು ಸುಲಭ.
ಆದರೆ ನೀವು ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೀರಿ,
ಆಗಲೇ ಎಲ್ಲ ಸಮಸ್ಯೆಗಳು ಹುಟ್ಟಿಕೊಳ್ಳೋದು.
ಉಚ್ವಾಸ ಸರಳ, ನಿಶ್ವಾಸ ಸರಳ
ಒಂದನ್ನೇ ಆಯ್ಕೆ ಮಾಡಿಕೊಂಡು ನೋಡಿ
ಹೇಗೆ ಉಸಿರುಗಟ್ಟಿಸುತ್ತದೆ.
ದಾರಿ ಕಠಿಣವೇನಲ್ಲ
ನೀವು ಮಾಡಿಕೊಳ್ಳುತ್ತಿದ್ದೀರಿ ಅಷ್ಟೇ.
****
ಆಯ್ಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದವರಿಗೆ.
ನಿಮ್ಮ ಕರ್ತವ್ಯ
ನೀವು ಮಾಡುತ್ತ ಹೋಗಿ
ಬದುಕು ನಿಮ್ಮನ್ನ ಕೈಹಿಡಿದು ನಡೆಸುತ್ತದೆ.
ಬದುಕಿನ ದಾರಿಯನ್ನು ನಿರ್ದೇಶಿಸಲಿಕ್ಕಾಗುವುದಿಲ್ಲ
ಸುಮ್ಮನೇ ಬದುಕನ್ನು ಹಿಂಬಾಲಿಸಿ
ಆಗ ದಾರಿ ಸುಲಭ, ಸರಳ.
***
ಪ್ರೀತಿ ಮತ್ತು ದ್ವೇಷ ಎರಡೂ ಇಲ್ಲವಾದಾಗಲೇ
ಕಳಚಿ ಬಿದ್ದಿವೆ ಎಲ್ಲ ಮುಖವಾಡಗಳು,
ಸ್ಪಷ್ಟವಾಗಿದೆ ಬದುಕಿನ ದಾರಿ.
ಒಂದು ಇನ್ನೊಂದಕ್ಕಿಂತ ಗುಲಗಂಜಿಯಷ್ಟು ಬೇರೆ
ಎಂದು ತೀರ್ಮಾನ ಮಾಡಿದಾಗಲೇ
ದ್ಯಾವಾ ಪೃಥ್ವಿ ಎಣಿಸಲಾಗದಷ್ಟು ದೂರ ಸರಿದಿವೆ.
ಪರ – ವಿರೋಧ ಯಾವುದೂ ಇಲ್ಲದಾಗ
ಅಹಂ ಕುಸಿದು ಬೀಳುತ್ತದೆ
ಆಗ ಬದುಕು, ಎಲ್ಲವನ್ನೂ ಒಳಗೊಳ್ಳುತ್ತ ಹೋಗುತ್ತದೆ.
ಆಯ್ಕೆಯ ಶಕ್ತಿ ಇರೋದು
ಮನುಷ್ಯರಿಗೆ ಮಾತ್ರ, ಮರಗಳಿಗಲ್ಲ.
ಹಾಗೆಂದ ಮೇಲೆ ಮರಗಳಿಗೂ, ಮನುಷ್ಯರಿಗೂ
ಏನು ವ್ಯತ್ಯಾಸ?
ವ್ಯತ್ಯಾಸ ಇದೆ.
ಮರಗಳದು ಅಪ್ರಜ್ಞಾಪೂರಕ ನಿರಾಕರಣೆ
ಆದರೆ ಮನುಷ್ಯ, ಪ್ರಜ್ಞಾಪೂರಕವಾಗಿ
ಆಯ್ಕೆಯನ್ನು ನಿರಾಕರಿಸಬಲ್ಲ.
ಮನುಷ್ಯನ ಈ ಸಾಧ್ಯತೆ
ಅವನಲ್ಲಿ ಪರಮ ಸಮಾಧಾನ ಸಾಧ್ಯ ಮಾಡುತ್ತದೆ.
ಆಗ ಮನುಷ್ಯ ಬುದ್ಧನಾಗುತ್ತಾನೆ
ಜುವಾಂಗ್ ತ್ಸೇ ಆಗುತ್ತಾನೆ
ಸೊಸಾನ್ ಆಗುತ್ತಾನೆ.
‘ಬಣ್ಣ ಕಾರಣ ಕಣ್ಣ ಕುರುಡಿಗೆ’
ಎನ್ನುತ್ತಾನೆ ಲಾವೋತ್ಸೇ.
ಪ್ರೀತಿ ಮತ್ತು ದ್ವೇಷ ಎರಡೂ
ಕಣ್ಣಿಗೆ ಬಣ್ಣ ತುಂಬುತ್ತವೆ.
ಇವೆರಡೂ ಇಲ್ಲದ ಸ್ಥಿತಿಯಲ್ಲಿ ಮನುಷ್ಯನಿಗೆ
ಎಲ್ಲವೂ ಪಾರದರ್ಶಕ.
ಪ್ರೀತಿಯ ಸ್ಥಿತಿಯಲ್ಲಿ ಎಲ್ಲವೂ ಸುಂದರ.
ನಿಮ್ಮ ಗಂಡು, ನಿಮ್ಮ ಹೆಣ್ಣು
ನಿಮ್ಮ ಕಣ್ಣಿಗೆ ಇನ್ನಿಲ್ಲದಂತೆ ಸುಖ ಕೊಡುತ್ತಾರೆ.
ಇದು ನಿಜ ಅಲ್ಲ,
ಇದು ನಿಮ್ಮ ಮನಸ್ಸಿನ ತೋರುಗಾಣುವಿಕೆ.
ದುಖಃದ ಕಥೆಯೂ ಬೇರೆ ಏನಲ್ಲ.
ನೀವು ಪ್ರೀತಿಸುತ್ತಿದ್ದೀರಿ ಎಂದರೆ
ನೀವು ಏನನ್ನೋ ಬಯಸುತ್ತಿದ್ದೀರಿ.
ಆ ಇನ್ನೂಬ್ಬರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ.
ಪ್ರತೀ ಗಂಡನೂ ಹೀಗೆ ಮಾಡುತ್ತಾನೆ
ಪ್ರತೀ ಹೆಂಡತಿಯೂ ಹೀಗೆ ಮಾಡುತ್ತಾಳೆ
ಪ್ರತೀ ಗೆಳೆಯ/ಗೆಳತಿ ಈ ಪ್ರಯತ್ನಕ್ಕೆ ಹಾತೊರೆಯುತ್ತಾರೆ.
ಆ ಇನ್ನೂಬ್ಬರನ್ನು ಬದಲಾಯಿಸಲು ಪ್ರಯತ್ನ ಮಾಡುತ್ತಾರೆ.
ಆದರೆ ನಿಮಗೆ
ಅವರ ನಿಜವನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ,
ಆಗಲೇ ಹತಾಶೆ ಮನೆ ಮಾಡುತ್ತದೆ.
ಆಗಲೇ ನೀವು
ಅವರು ನೋವು ಕೊಟ್ಟರು ಎಂದು
ಆಪಾದನೆ ಮಾಡುತ್ತೀರಿ.
ನಿಮ್ಮ ಕನಸನ್ನು ನನಸು ಮಾಡಲು
ಯಾರೂ ಇಲ್ಲಿ ಕಾದು ಕುಳಿತಿಲ್ಲ,
ಎಲ್ಲರೂ ತಮ್ಮ ತಮ್ಮ
ನಿಯತಿಗೆ ಬದ್ಧರಾಗಿದ್ದಾರೆ,
ತಮ್ಮ ತಮ್ಮ ನಿಜವನ್ನು ಕಂಡುಕೊಳ್ಳಲು
ಹೋರಾಡುತ್ತಿದ್ದಾರೆ.
ಹಾಗಾದರೆ ಸೊಸಾನ್ ಪ್ರೀತಿ ಮಾಡುವುದಿಲ್ಲವೆ?
ಖಂಡಿತ ಪ್ರೀತಿಸುತ್ತಾನೆ,
ಆದರೆ ಅವನ ಪ್ರೀತಿ, ಆಯ್ಕೆ ಮಾಡಿಕೊಂಡಿದ್ದಲ್ಲ,
ಅಲ್ಲಿ ಶೋಷಣೆಗೆ ಜಾಗವಿಲ್ಲ.
ಅವನು ಪ್ರೀತಿಸುತ್ತಾನೆ ಏಕೆಂದರೆ
ಅವನಿಗೆ ಬೇರೇನೂ ಗೊತ್ತಿಲ್ಲ,
ಅವನೊಳಗಿಂದ ಪ್ರೀತಿ, ಉಕ್ಕಿ ಹರಿಯುತ್ತಿದೆ
ಅವನಿಗೆ ಇನ್ನೊಂದು ಆಯ್ಕೆಯೇ ಇಲ್ಲ.
ಗುಲಗಂಜಿಯಷ್ಟು ತಾರತಮ್ಯವೂ
ಆಕಾಶ ಮತ್ತು ಭೂಮಿಗಳ ನಡುವಿನ
ಅಂತರವನ್ನು ಅನಂತವಾಗಿಸುತ್ತದೆ.
ಈ ಅಂತರದ ನಡುವೆ
ನೀವೂ ನುಚ್ಚು ನೂರಾಗುತ್ತೀರಿ
ಇದು ಸೊಸಾನ್ ಗೆ ಪೂರ್ಣವಾಗಿ ಅರ್ಥವಾಗಿದೆ.
***
ನಿಜವನ್ನು ನೋಡ ಬಯಸುವಿರಾದರೆ
ಪರ ವಿರೋಧಗಳ ಜಂಜಾಟಕ್ಕೆ ಬೀಳಬೇಡಿ.
ಇಷ್ಟವಾಗುವ ಮತ್ತು ಇಷ್ಟ ಆಗದೇ ಇರುವ ಸಂಘರ್ಷ,
ಮನಸಿನ ಕಾಯಿಲೆ.
ನಿಜದ ಬಗೆಗಿನ
ಎಲ್ಲ ಅಭಿಪ್ರಾಯಗಳನ್ನು ಬದಿಗಿಟ್ಟು ಬೆತ್ತಲೆಯಾಗಿ ಮುನ್ನಡೆಯಿರಿ.
ಏಕೆಂದರೆ ನಿಜಕ್ಕೆ,
ಅಭಿಪ್ರಾಯ ಎಂದರೆ ಅಸಹ್ಯ.
ತತ್ವಜ್ಞಾನ, ಸಿದ್ಧಾಂತ, ಶಾಸ್ತ್ರ, ಪುರಾಣ
ಎಲ್ಲವನ್ನೂ ಕಿತ್ತೆಸೆದು
ಸುಮ್ಮನೇ ಹೊರಟು ಬಿಡಿ.
ನರಕದ ದಾರಿಯಲ್ಲಿ
ಬಯಕೆಗಳು, ಭರವಸೆಗಳು, ಕನಸುಗಳು, ಆದರ್ಶಗಳು,
ಆದರೆ ಸ್ವರ್ಗದ ಹಾದಿ ಪೂರ್ಣ ಖಾಲಿ.
ಇಷ್ಟವಾಗುವ ಮತ್ತು ಇಷ್ಟ ಆಗದೇ ಇರುವ ಸಂಘರ್ಷ,
ಮನಸಿನ ಕಾಯಿಲೆ.
ಈ ಕಾಯಿಲೆಗೆ ಔಷಧಿ ಇದೆಯೆ?
ಖಂಡಿತ ಇಲ್ಲ.
ಈ ಉತ್ತರವನ್ನು ಗಟ್ಟಿ ಮಾಡಿಕೊಳ್ಳಿ.
ಯಾರಾದರೂ ಔಷಧಿ ಕೊಟ್ಟರೆ
ನೀವು ಕಾಯಿಲೆಯನ್ನು ಬಿಟ್ಟು
ಔಷಧಿಯನ್ನು ಪ್ರೀತಿಸಲು ಶುರು ಮಾಡುತ್ತೀರಿ.
ಆಗ ಆ ಔಷಧಿಯೇ ಕಾಯಿಲೆಯಾಗುತ್ತದೆ.
ಸೊಸಾನ್, ಯಾವ ಔಷಧಿಯ ಸಲಹೆಯನ್ನೂ ಕೊಡುವುದಿಲ್ಲ.
ಅವನು ಹೇಳೋದು ಒಂದೇ,
ಅದನ್ನೇ ಸಾವಿರ ಬಾರಿ ಮತ್ತೆ ಮತ್ತೆ ಹೇಳುತ್ತಾನೆ,
ನೀವು ನಿಮ್ಮ ಸುತ್ತ ಕಟ್ಟಿಕೊಂಡಿರುವ
ಗೊಂದಲಗಳನ್ನು ಗಮನಿಸಿ,
ಇದನ್ನು ಬೇರೆ ಯಾರೂ ನಿರ್ಮಿಸಿಲ್ಲ
ನೀವೇ ಕಟ್ಟಿಕೊಂಡಿರುವ ಮಹಲು ಇದು.
ಇದರ ಅಡಿಪಾಯದಲ್ಲಿವೆ
ನಿಮ್ಮ ಆಯ್ಕೆಗಳು, ನಿಮ್ಮ ಆದ್ಯತೆಗಳು.
ಆಯ್ಕೆ ಮಾಡುವುದನ್ನು ನಿಲ್ಲಿಸಿ
ಬದುಕನ್ನು ಅದರ ಪೂರ್ಣ ಸ್ಥಿತಿಯಲ್ಲಿ ಅಪ್ಪಿಕೊಳ್ಳಿ.
ಸಾವು – ಬದುಕು
ಪ್ರೀತಿ – ದ್ವೇಷ
ಸಂತೋಷ – ದುಃಖ
ಬೇರೆ ಬೇರೆ ಅಲ್ಲ ಎಂದು ನಿಮಗೆ ಗೊತ್ತಾದಾಗ
ಆಯ್ಕೆಯ ಪ್ರಶ್ನೆ ಎಲ್ಲಿ?
ಆಗ ತಂತಾನೆ ಆಯ್ಕೆ ಕಳಚಿ ಬಿಳುತ್ತದೆ.
ನೆನಪಿಡಿ
ನೀವು ಆಯ್ಕೆಯನ್ನು ನಿರಾಕರಿಸುತ್ತಿಲ್ಲ
ಹಾಗೇನಾದರೂ ಇದ್ದರೆ ಅದು ಕೂಡ ಆಯ್ಕೆಯೇ.
ಇದು ದ್ವಂದ್ವ.
ನೀವು ಪೂರ್ಣತೆಯ ಪರ ಇದ್ದೀರಿ ಎಂದರೆ,
ವಿಭಜನೆಯ ವಿರುದ್ಧ ಇದ್ದೀರಿ.
ಕಾಯಿಲೆ ವಾಸಿಯಾಗಿಲ್ಲ
ಸೂಕ್ಷ್ಮವಾಗಿ ಮನೆ ಮಾಡಿದೆ.
ಮತ್ತೆ ಹೇಳುತ್ತಿದ್ದೇನೆ
ಸೊಸಾನ್ ಹೇಳಿದ್ದನ್ನ ಸುಮ್ಮನೇ ಅರಿತುಕೊಳ್ಳಿ
ಕೇವಲ ಈ ಅರಿವೇ ನಿಮ್ಮ ನಿರಾಕರಣೆಯಾಗುತ್ತದೆ.
ಆಗ ನೀವು ನಿರಾಕರಿಸುವ ಹುಚ್ಚಿಗೆ ಬಲಿಯಾಗುವುದಿಲ್ಲ
ಬದಲಾಗಿ ಸುಮ್ಮನೇ ನಕ್ಕು ಬಿಡುತ್ತೀರಿ
ಒಂದು ಕಪ್ ಚಹಾ ಆರ್ಡರ್ ಮಾಡುತ್ತೀರಿ.
ಮುಂದುವರೆಯುತ್ತದೆ…….
ಅನುವಾದಕರ ಕುರಿತು: ಚಿದಂಬರ ನರೇಂದ್ರಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.
1 Comment