The Way is Perfect : ಓಶೋ ಉಪನ್ಯಾಸ

oshoಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! ಝೆನ್ ಪರಂಪರೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಓಶೋ, ಚೀನೀ ಝೆನ್ ಕವಿ, ಸಾಧಕ Sosan ರಚಿಸಿದ್ದೆಂದು ಹೇಳಲಾಗುವ Hsin hsin ming ಕಾವ್ಯದ ಬಗ್ಗೆ ನೀಡಿದ ಉಪನ್ಯಾಸದ ಭಾವಾನುವಾದ ಇಲ್ಲಿದೆ. ಅರಳಿಬಳಗದ ಚಿದಂಬರ ನರೇಂದ್ರ ಇದನ್ನು ಕನ್ನಡಕ್ಕೆ ತಂದಿದ್ದಾರೆ. 

 

ರಾತ್ರಿ ಸರಿ ಹೊತ್ತಾಯ್ತು
ಚಂದ್ರ ನೆತ್ತಿಯ ಮೇಲೆ ಬಂದರೂ
ನಿಮಗೆ ಇನ್ನೂ ನಿದ್ದೆ ಬರುತ್ತಿಲ್ಲ.
ಪುಸ್ತಕ ಓದುವ ಪ್ರಯತ್ನ ಮಾಡುತ್ತೀರಿ
ಹಾಡು ಕೇಳುತ್ತೀರಿ, ಟೀವಿ ನೋಡುತ್ತೀರಿ
ಹಾಸಿಗೆಯಲ್ಲಿ ಬಿದ್ದು ಒದ್ದಾಡುತ್ತೀರಿ
ಏನೇನೂ ಪ್ರಯತ್ನ ಮಾಡುತ್ತಿದ್ದೀರಿ
ಊಹೂಂ, ನಿದ್ರೆಯ ಸುಳಿವಿಲ್ಲ.
ಯಾವದೋ ಕ್ಷಣದಲ್ಲಿ ನಿಮಗೆ ದಣಿವಾಗುತ್ತದೆ
ನಿದ್ದೆಗಾಗಿ ಪ್ರಯತ್ನ ಮಾಡುವುದನ್ನ ನಿಲ್ಲಿಸುತ್ತೀರಿ
ಹೀಗೆ ಪ್ರಯತ್ನ ನಿಲ್ಲಿಸಿದ ಕ್ಷಣದಲ್ಲಿಯೇ
ನಿದ್ದೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

ನಿದ್ದೆ ವಿಶ್ರಾಂತಿಯ ವಿಷಯ.
ಪ್ರಜ್ಞೆಯ ಪರಿಸರದಿಂದ ಸುಪ್ತ ಮನಸ್ಸಿನ ಜಗತ್ತಿಗೆ
ನೀವು ಬಯಸುತ್ತಿರುವ ಪಯಣ.
ಆದರೆ ಪ್ರಯತ್ನಕ್ಕೆ, ಪ್ರಜ್ಞೆಯ ಜಗತ್ತಿನಲ್ಲಿ ಮಾತ್ರ ಬೆಲೆ
ಸುಪ್ತ ಮನಸ್ಸಿನ ಲೋಕದಲ್ಲಿ
ಪ್ರಯತ್ನದ ಮಾತನ್ನು ಕೇಳುವವರಿಲ್ಲ.
ಈ ಲೋಕ ಮುಟ್ಟಲು ನೀವು ಎಷ್ಟು ಪ್ರಯತ್ನ ಮಾಡುತ್ತೀರೋ
ಅಷ್ಟು ಆ ಲೋಕದಿಂದ ಅಪರಿಚಿತರಾಗಿ ಉಳಿಯುತ್ತೀರಿ
ಯಾವಾಗ ಈ ಪ್ರಯತ್ನಕ್ಕೆ, ಈ ಬಯಕೆಗೆ
ಇತಿಶ್ರೀ ಹಾಡುತ್ತೀರೋ
ಆ ಕ್ಷಣದಲ್ಲಿಯೇ ನಿದ್ರಾ ಲೋಕಕ್ಕೆ ಕಾಲಿಡುತ್ತೀರಿ.

ಇನ್ನೊಂದು ಉದಾಹರಣೆ.
ಯಾವುದೋ ಹಾಡಿನ ಒಂದು ಸಾಲು
ನಿಮ್ಮ ನಾಲಿಗೆಯ ಮೇಲಿದೆ
ಆದರೆ ಈ ಕ್ಷಣಕ್ಕೆ ನೆನಪಿಗೆ ಬರುತ್ತಿಲ್ಲ.
ತುಂಬಾ ತಿಣುಕಾಡುತ್ತೀರಿ, ತಲೆ ಕೆಡೆಸಿಕೊಳ್ಳುತ್ತೀರಿ
ಉಹೂಂ ಸಾಧ್ಯವಾಗುತ್ತಿಲ್ಲ.
ಕೈ ಚೆಲ್ಲುತ್ತೀರಿ
ಬೇರೆ ಕೆಲಸದಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುತ್ತೀರಿ
ವಾಕ್ ಮಾಡುತ್ತೀರಿ, ತೋಟಕ್ಕೆ ಹೋಗಿ ಹೂವು ಕೀಳುತ್ತೀರಿ,
ಅಡುಗೆ ಮನೆಗೆ ನುಗ್ಗಿ, ತರಕಾರಿ ಹೆಚ್ಚಲು ಶುರು ಮಾಡುತ್ತೀರಿ
ಹೀಗೆ ನೀವು ಹಾಡಿನ ಸಾಲು ನೆನಪಿಸಿಕೊಳ್ಳುವ
ಪ್ರಯತ್ನ ಕೈಬಿಟ್ಟ ಘಳಿಗೆಯಲ್ಲಿಯೇ
ಥಟ್ಚನೇ ಆ ಹಾಡಿನ ಸಾಲು ನಿಮಗೆ ನೆನಪಾಗುತ್ತದೆ.

ಯಾಕೆ ಹೀಗೆ? ಕಾರಣ ಅದೇ
ಹಾಡಿನ ನೆನಪು ಸಂಗ್ರಹವಾಗಿರೋದು
ಮನಸ್ಸಿನ ಸುಪ್ತ ಲೋಕದಲ್ಲಿ
ಅಲ್ಲಿ ಪ್ರಯತ್ನದ ಆಟ ನಡೆಯೋದಿಲ್ಲ.
ಪ್ರಯತ್ನ ಮಾಡಿದಷ್ಟೂ ನೀವು ನಿಮ್ಮ ಗುರಿಯಿಂದ ದೂರ ಸಾಗುತ್ತೀರಿ.
ಪ್ರಯತ್ನ ಕೈಬಿಟ್ಟ ಕ್ಷಣದಲ್ಲಿಯೇ ಗುರಿ ಸಾಧಿಸುತ್ತೀರಿ.

ಈ ಪದ್ಯದಲ್ಲಿ ಸೊಸಾನ್ ಹೇಳುತ್ತಿರುವುದು ಇದನ್ನೇ
ಇದು ತಾವೋ ಕಂಡುಕೊಂಡ ಸತ್ಯ
ಝೆನ್ ಬಿಚ್ಚಿ ನೋಡಿದ ತಿರುಳು.

‘ ಸುಪ್ತ ಮನಸ್ಸಿನ ವ್ಯವಹಾರದಲ್ಲಿ
ಪ್ರಯತ್ನಕ್ಕೆ ಜಾಗವಿಲ್ಲ
ಪ್ರಯತ್ನ ಬಿಟ್ಟ ಕ್ಷಣದಲ್ಲಿಯೇ
ಸುಪ್ತ ಮನಸ್ಸಿನೊಂದಿಗೆ ಸಂಪರ್ಕ ಸಾಧಿಸುತ್ತೀರಿ’

ಇಪ್ಪತ್ತೊಂದನೇ ಶತಮಾನದ
ಫ್ರೆಂಚ್ ಹಿಪ್ನಾಟಿಸ್ಟ್ ಎಮಿಲೆ ಕೋವ್
ಮತ್ತೆ ಇದೇ ಮಾತನ್ನು ಹೇಳಿದ
‘ Law of reverse effects ‘
ಅಂತ ಹೆಸರಿಟ್ಟ.

ಲಾವೋತ್ಸೇ, ಜುವಾಂಗ್ ತ್ಸೇ
ಬೋಧಿಧರ್ಮ, ಸೊಸಾನ್ ಎಲ್ಲ
ಈ ‘ಲಾ ಆಫ್ ರಿವರ್ಸ್ ಇಫೆಕ್ಟ್ಸ್ ‘ ನ ಮಾಸ್ಟರ್ ಗಳು.

ಯೋಗ ಮತ್ತು ಝೆನ್ ನಡುವಿನ
ವ್ಯತ್ಯಾಸ ಇದೇ.
ಯೋಗ ಕ್ಕೆ ಪ್ರಯತ್ನದಲ್ಲಿ ನಂಬಿಕೆ
ಝೆನ್ ಗೆ ಪ್ರಯತ್ನ ಮಾಡದಿರುವಿಕೆಯಲ್ಲಿ.
“ಈ ಕೆಲಸ ಮಾಡು” ಎಂದರೆ ಎಷ್ಟು ಸುಲಭ?
ಅದೇ ನೋಡಿ
“ಈ ಕೆಲಸ ಮಾಡಬೇಡ” ಎಂದರೆ ತಬ್ಬಿಬ್ಬಾಗುತ್ತೀರಿ
“ಹಾಗಾದರೆ ಏನು ಮಾಡಲಿ”
ತಿರುಗಿ ಪ್ರಶ್ನೆ ಮಾಡುತ್ತೀರಿ.
ಹೌದು, ಝೆನ್ ನ ಈ ಸಾಚಾತನ
ಎಲ್ಲ ತಂತ್ರ – ವಿಜ್ಞಾನಗಳಿಗೆ ಗಾಬರಿಯ ವಿಷಯ.

ಕೆಲಸ ಮಾಡುವುದಕ್ಕೆ ಅರ್ಹತೆ ಬೇಕು,
ತರಬೇತಿ ಬೇಕು.
ಮಾಡದಿರುವಿಕೆಗೆ
ಯಾವುದರ ಅವಶ್ಯಕತೆಯೂ ಇಲ್ಲ.
ಆದ್ದರಿಂದಲೇ ಝೆನ್ ಪ್ರಕಾರ
‘ಅರಿವು’ ಕ್ಷಣ ಮಾತ್ರದಲ್ಲಿ ಸಾಧ್ಯ
ಏಕೆಂದರೆ ಇಲ್ಲಿ ಅರಿವು,
ಎಳೆದು ತಂದು ಕಟ್ಟಿ ಹಾಕುವ ಸಂಗತಿಯಲ್ಲ,
ಕೇವಲ ‘ ತೆರೆದುಕೊಳ್ಳುವ’ ವಿಷಯ.

ಕೆಲಸ ಎಷ್ಟೇ ಕಷ್ಟವಾದರೂ
ಮಾಡುವ ವಿಧಾನಗಳನ್ನು ಕಲಿತುಕೊಳ್ಳುತ್ತೀರಿ
ವಿಷಯ ತಜ್ಞರಿದ್ದಾರೆ, ನಿಮಗೆ ತರಬೇತಿ ನೀಡುತ್ತಾರೆ.
ಆದರೆ ಝೆನ್ ಲ್ಲಿ ತರಬೇತಿ ಹಾಸ್ಯಾಸ್ಪದ
ಇಲ್ಲಿ ಪರಿಣಿತರಿಲ್ಲ, ತಜ್ಞರಿಲ್ಲ
ಏಕೆಂದರೆ ಝೆನ್, ಕಲಿಯುವ ವಿಷಯವಲ್ಲ
ನಿಮ್ಮೊಳಗೆ ನೀವು ಸಮಾಧಾನದಿಂದ ವಿಶ್ರಾಂತಿ ಪಡೆಯುವ ಸಂಗತಿ
ಏನನ್ನೂ ಮಾಡದೇ ಇರುವ ಕೆಲಸ.

ಅದ್ಭುತ ಸಂಗತಿಗಳು ಸಂಭವಿಸುವುದೇ
ನೀವು ನಿಮ್ಮೊಳಗೆ ಇರದಿರುವ ಘಳಿಗೆಯಲ್ಲಿ.

ನೀವು ಏನನ್ನಾದರೂ ಮಾಡುತ್ತಿದ್ದಿರಾದರೆ
ಅಲ್ಲಿ ನೀವು ಇರಬೇಕಾಗುತ್ತದೆ
ನಿಮ್ಮ ಪ್ರಯತ್ನ, ನಿಮ್ಮ ಅಹಂ ನ್ನು ಆರೈಕೆ ಮಾಡಬೇಕಾಗುತ್ತದೆ.
ನೀವು ಸುಮ್ಮನಿರುವಾಗ
ನಿಮ್ಮ ಅಹಂ ಗೆ ಉಪವಾಸ,
ಹಸಿವೆ ಸಹಿಸದ ಅಹಂ ಸತ್ತು ಹೋಗುತ್ತದೆ.
ಅಹಂ ಇಲ್ಲದ ಮೊದಲ ಕ್ಷಣದಲ್ಲಿಯೇ
ಬೆಳಕು ಒಳಗೆ ಇಳಿಯುತ್ತದೆ.

ಧ್ಯಾನದ ವಿಷಯವೂ ಹೀಗೆಯೇ
ಬಯಸದಿರಿ
ಒತ್ತಾಯ ಮಾಡದಿರಿ
ಸುಮ್ಮನೇ ತೆರೆದುಕೊಳ್ಳಿ
ಧ್ಯಾನ ತಾನೇ ತಾನಾಗಿ ಸಂಭವಿಸಲಿ.
ಒಂದಾಗಿ, ಬುದ್ಧಿಪೂರ್ವಕವಾಗಿ ಅಲ್ಲ.
ಸಂಗತಿಗಳನ್ನು ಅನುಕೂಲಕ್ಕೆ ತಕ್ಕಂತೆ
ಬದಲಾಯಿಸುವ ಪ್ರಯತ್ನಕ್ಕೆ ಮುಂದಾಗಬೇಡಿ,
ಹೀಗೇನಾದರೂ ಮಾಡಿದ್ದೇ ಆದರೆ
ನೀವು ಒಬ್ಬರಲ್ಲ, ಇಬ್ಬರಲ್ಲ, ನೂರು, ಸಾವಿರವಾಗುತ್ತೀರಿ.
ಆಗಲೇ ಸ್ವರ್ಗ, ನರಕ ಸೃಷ್ಟಿಯಾಗುತ್ತವೆ.
ನೀವು ನಿಜದಿಂದ ದೂರಾಗುತ್ತ ಹೋಗುತ್ತೀರಿ.
ಭಾಗವಾಗ ಬೇಡಿ, ಪೂರ್ಣವಾಗಿರಿ
ಸುಮ್ಮನೇ ತೆರೆದುಕೊಳ್ಳಿ
ಧ್ಯಾನ ತಾನೇ ತಾನಾಗಿ ಸಂಭವಿಸಲಿ.

ಇನ್ನು ಪ್ರೇಮ. ಇದೂ ಹಾಗೆಯೇ.
ಎಲ್ಲ ಕಲಿಕೆ, ಪ್ರೇಮದ ಬಗೆಗಿನ ನಿಮ್ಮ ಎಲ್ಲ ಕಲ್ಪನೆಗಳನ್ನೂ
ಎತ್ತಿ ಆಚೆ ಎಸೆಯಿರಿ, ಸುಮ್ಮನೇ ಧುಮುಕಿ.
ಮೂದ ಮೊದಲು ಸ್ವಲ್ಪ ಉಸಿರುಗಟ್ಟಬಹುದು
ಸ್ವಲ್ಪ ಸಮಯ ಕೊಡಿ
ಒಮ್ಮೆ ಒಳಗಿನ ಶಕ್ತಿ ಚಲಿಸಲಾರಂಭಿಸಿತೆಂದರೆ
ಸುಮ್ಮನೇ ಹಿಂಬಾಲಿಸಿ.
ಒಮ್ಮೆ ಪ್ರೇಮ ಹುಟ್ಟಿಕೊಂಡಿತೆಂದರೆ
ನೀವು ಮಾಯವಾಗುತ್ತೀರಿ
ಪ್ರೇಮಿಯ ಅನುಪಸ್ಥಿತಿಯಲ್ಲಿ ಪ್ರೇಮ
ಮೈದುಂಬಿಕೊಂಡು ವಿಜೃಂಭಿಸುತ್ತದೆ

ಧ್ಯಾನ, ದೈವತ್ವ, ಅರಿವು, ನಿರ್ವಾಣ
ಎಲ್ಲದರ ಹುಟ್ಟಿಗೂ ಪ್ರೇಮವೇ ಕಾರಣ.
ಪ್ರೇಮದ ಮೂಲಕವೇ
ನಿಮಗೆ ಮೊದಲ ಮಿಂಚಿನ ದರ್ಶನ.
ಧೈರ್ಯಶಾಲಿಗಳು ಈ ಮಿಂಚಿನ ಮೂಲ ಹುಡುಕಿಕೊಂಡು ಹೋಗಿ
ಧ್ಯಾನವನ್ನು ಸಾಧ್ಯ ಮಾಡಿಕೊಂಡರು
ದೈವತ್ವಕ್ಕೇರಿದರು
ಅರಿವು ಹೊಂದಿದರು
ನಿರ್ವಾಣ ಸಾಧಿಸಿದರು.

ಆದರೆ, ಪ್ರಕ್ರಿಯೆಯಲ್ಲಿ ಬದಲಾವಣೆ ಏನಿಲ್ಲ.
ಪ್ರೇಮವನ್ನು ಬಯಸುವ ಹಾಗಿಲ್ಲ
ಬಯಸಿದ್ದೇ ಆದರೆ
ಪ್ರೇಮದ ಸೌಂದರ್ಯವೇ ಹಾಳಾಗುತ್ತದೆ
ಎಲ್ಲವೂ ಯಾಂತ್ರಿಕವಾಗುತ್ತದೆ
ಕೇವಲ ಸಂಪ್ರದಾಯವಾಗುತ್ತದೆ
ಆಚರಣೆಯಾಗುತ್ತದೆ.
ಇದು ಆನಂದವಲ್ಲ
ಇದು ನಿಮ್ಮ ಅಂತಃಸತ್ವವನ್ನು ಮುಟ್ಟಲಾರದು
ನಿಮ್ಮ ಅಡಿಪಾಯವನ್ನು ಅಲ್ಲಾಡಿಸಲಾರದು
ಒಳಗಿನ ಕುಣಿತವಾಗಲಾರದು
ನಿಮ್ಮ ಅಸ್ತಿತ್ವದ ಉಸಿರಾಟವಾಗಲಾರದು.

ನೆನಪಿರಲಿ
ಪ್ರೇಮವನ್ನು ನೀವು ಬಯಸುವ ಹಾಗಿಲ್ಲ
ಹಾಗೆಯೇ ಧ್ಯಾನವನ್ನೂ.

ನಿಮ್ಮ ಕಲಿಕೆಯನ್ನು ಕಿತ್ತು ಆಚೆಗೆಸೆಯಿರಿ.
ಕಲಿಕೆ, ಕ್ರಿಯೆಗೆ ಸಂಬಂಧಿಸಿದ್ದು.
ಇಲ್ಲಿ ಕ್ರಿಯೆಗೆ ಕೆಲಸವಿಲ್ಲ
ಸುಮ್ಮನಿರುವುದಕ್ಕೆ ಯಾವ ಕಲಿಕೆ ಬೇಕು?
ನೀವು ಈವರೆಗೆ ಕಲಿತಿರುವುದನ್ನೆಲ್ಲ ಬಿಟ್ಟು ಬಿಡಿ
ಹೇಗೆ ಬಿಡುವುದು? ಹೇಗೆ ಸುಮ್ಮನಿರುವುದು?
‘ಹೇಗೆ’ ಎನ್ನುವುದು ತಂತ್ರವಲ್ಲ
ಮತ್ತೊಂದು ಕಲಿಕೆಯಲ್ಲ
ಇದೊಂದು ಕೌಶಲ
ಯಾರೂ ಕಲಿಸಲಾರರು
ನೀವೇ ಹುಡುಕಿ ಹುಡುಕಿ ನಿಮ್ಮದಾಗಿಸಿಕೊಳ್ಳಬೇಕು.

ಈ ಕೌಶಲ
ಕೇವಲ ನಿಮ್ಮ ಸಹಾಯಕ್ಕಾಗಿ
ನೀವು ಹಾಯಾಗಿ ಕಾಯುವ ಸಮಯವನ್ನು
ಮತ್ತಷ್ಟು ಸರಳಗೊಳಿಸಲು
ಒತ್ತಾಯ, ಪ್ರಯತ್ನಕ್ಕೆ ಇಲ್ಲಿ ಜಾಗವಿಲ್ಲ
ನೆನಪಿನಲ್ಲಿರಲಿ
ಯಾರೂ ಈ ಕೌಶಲವನ್ನು ನಿಮಗೆ ಕಲಿಸಲಾರರು
ನೀವು ಸಮಾಧಾನಕ್ಕೆ ಕಾರಣವಾಗುವ
ಸಂಗತಿಗಳನ್ನು
ಗಮನಿಸಿ ಗಮನಿಸಿ
ನೀವೇ ಹುಡುಕಿಕೊಳ್ಳಬೇಕು.

(ಮುಂದುವರೆಯುತ್ತದೆ…..)

ಹಿಂದಿನ ಕಂತು ಇಲ್ಲಿ ನೋಡಿ : https://aralimara.com/2019/05/20/sosan/

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

1 Comment

Leave a Reply