ಕಪ್ಪೆಗೆ ಚೇಳು ಕಚ್ಚಿದ್ಯಾಕೆ? : ಝೆನ್ ಕಥೆ

ಕಪ್ಪೆ ಚೇಳನ್ನು ಬೆನ್ನ ಮೇಲೆ ಹತ್ತಿಸಿಕೊಂಡು ನದಿ ದಾಟಿಸಿತು. ಆದರೂ ಅದು ಕಚ್ಚಿದ್ಯಾಕೆ!? | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

scorpioಒಂದು ಚೇಳು ನದಿಯ ದಂಡೆಯ ಮೇಲೆ ನಿಂತು, ಅತ್ತಿತ್ತ ನೋಡುತ್ತಿತ್ತು. ಆ ಚೇಳಿಗೆ ನದಿ ದಾಟಿ ಆಚೆಯ ದಂಡೆಗೆ ಹೋಗಬೇಕಿತ್ತು. ಚೇಳಿನ ಅದೃಷ್ಟ, ಕಪ್ಪೆಯೊಂದು ನೀರಿನಲ್ಲಿ ಈಜುತ್ತ ದಂಡೆಗೆ ಬಂತು.

“ ನನಗೊಂದು ಸಹಾಯ ಮಾಡುತ್ತೀಯ?” ಕೇಳಿತು ಚೇಳು. “ ನಾನು ನಿನ್ನ ಬೆನ್ನ ಮೇಲೆ ಕೂತುಕೊಳ್ಳುತ್ತೇನೆ. ನೀನು ನನ್ನನ್ನು ಆಚೆ ದಂಡೆಗೆ ಮುಟ್ಟಿಸು” ಚೇಳು, ಕಪ್ಪೆಯನ್ನು ಕೇಳಿಕೊಂಡಿತು.

“ ನನ್ನ ಹುಚ್ಚ ಅಂದ್ಕೊಡ್ಡಿದ್ದೀಯಾ, ನೀನು ದಾರಿಯಲ್ಲಿ ನನ್ನ ಕಚ್ಚಿದರೆ ನಾನು ಸತ್ತು ಹೋಗುತ್ತೇನೆ “ ಉತ್ತರಿಸಿತು ಕಪ್ಪೆ.

“ ಸ್ವಲ್ಪ ತರ್ಕ ಬದ್ಧವಾಗಿ ವಿಚಾರ ಮಾಡು, ದಾರಿಯಲ್ಲಿ ನೀನು ಸತ್ತರೆ ನಾನೂ ಕೂಡ ನದಿಯಲ್ಲಿ ಮುಳುಗಿ ಸತ್ತು ಹೋಗುತ್ತೇನಲ್ಲವೆ? “ ಚೇಳು, ತನ್ನ ವಿನಂತಿಯನ್ನು ಸಮರ್ಥಿಸಿಕೊಂಡಿತು.

“ ಹೌದಲ್ವಾ, ಬಾ ನನ್ನ ಬೆನ್ನ ಮೇಲೆ ಕೂಡು. ನಿನ್ನನ್ನು ಆಚೆ ದಡಕ್ಕೆ ಮುಟ್ಟಿಸುತ್ತೇನೆ “ ಕಪ್ಪೆ, ಚೇಳನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನದಿಯಲ್ಲಿ ಈಜತೊಡಗಿತು.

ನದಿಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಕಪ್ಪೆಗೆ ಯಾರೋ ತನ್ನ ಕುತ್ತಿಗೆಯನ್ನು ತೀಕ್ಷ್ಣವಾಗಿ ಕಚ್ಚಿದಂತೆ ಭಾಸವಾಯಿತು, ಕಪ್ಪೆಯ ಕಣ್ಣು ಮಂಜಾಗ ತೊಡಗಿತು. ಆಗ ಕಪ್ಪೆ, ತನ್ನ ಬೆನ್ನ ಮೇಲೆ ಕೂತಿದ್ದ ಚೇಳನ್ನು ಪ್ರಶ್ನೆ ಮಾಡಿತು.

“ ನೀನು ಹೇಳಿದ್ದೆ, ನಾನು ನಿನ್ನನ್ನು ನದಿ ದಾಟಿಸುತ್ತಿರುವಾಗ ನೀನು ಯಾವ ಕಾರಣಕ್ಕೂ ನನ್ನ ಕಚ್ಚಲಾರೆ ಅಂತ. ಹಾಗೇನಾದರೂ ಕಚ್ಚಿದರೆ ಅದು ನಿನ್ನ ಪ್ರಾಣಕ್ಕೇ ಸಂಚುಕಾರ ಅಂತ. ಮತ್ತು ಆ ಕ್ಷಣದಲ್ಲಿ ನನ್ನ ಕಚ್ಚುವುದು ತರ್ಕ ಬದ್ಧ ಕೂಡ ಅಲ್ಲ ಅಂತ. ಮತ್ತೆ ಯಾಕೆ ಕಚ್ಚಿದೆ?”

“ ನನಗೆ ಕಚ್ಚುವುದು ತರ್ಕದ ವಿಷಯ ಅಲ್ಲ , ಅದು ನನ್ನ ಸ್ವಭಾವ “ ಚೇಳು ಉತ್ತರಿಸಿತು.

Leave a Reply