ಜ್ಞಾನ – ಭಕ್ತಿ – ಕರ್ಮಗಳ ತ್ರಿವೇಣೀ ಸಂಗಮ : ಸಾನೆ ಗುರೂಜಿ

Pandurang_Sadashiv_Saneಗಂಗಾ, ಯಮುನಾ, ಸರಸ್ವತೀ ನದಿಗಳ ಸಂಗಮವು ಅತ್ಯಂತ ಪವಿತ್ರವಾದುದೆಂದು ಮನ್ನಣೆ ಪಡೆದಿದೆ. ಈ ತ್ರಿವೇಣೀ ಸಂಗಮವು ಜ್ಞಾನ – ಭಕ್ತಿ – ಕರ್ಮಗಳನ್ನು ಸಂಕೇತಿಸುತ್ತವೆ ಎಂದು ಸಾನೆ ಗುರೂಜಿ ಹೀಗೆ ವಿವರಿಸುತ್ತಾರೆ….

ದಿಗಳ ಸಂಗಮವು ಶ್ರೇಷ್ಠವಾದದ್ದು, ಪವಿತ್ರವಾದದ್ದು. ಅದ್ವೈತದ ಅನುಭಾವವನ್ನು ಪಡೆದ ಇಬ್ಬರು ಸಂತರ ಭೇಟಿ ಅದೆಷ್ಟು ಅದ್ಭುತವಾಗಿರುತ್ತದೆ ಊಹಿಸಿ! ವಸಿಷ್ಠ – ವಾಮದೇವರ ಭೇಟಿಯಂತೆ, ಗಾಂಧೀಜಿ – ರವೀಂದ್ರರ ಭೇಟಿಯಂತೆ… ಅದೊಂದು ಮಹಾಕಾವ್ಯವೇ ಸರಿ. ಹಾಗೆಯೇ ನದಿಗಳ ಸಂಗಮ ಕೂಡಾ. ಅಥವಾ ನದಿಗಳ ಸಂಗಮದಂತೆಯೇ ಮಹಾತ್ಮರ ಸಂಗಮವೂ!

“ಸತಾಂ ಸದ್ಬುದ್ಧಿಃ ಸಂಗಃ ಕಥಮಪಿ ಹಿ ಪುಣ್ಯೇನ ಭವತಿ” ಸಾವಿರಾರು ಪ್ರವಾಹಗಳನ್ನು ಕೂಡಿಕೊಂಡು ಒಂದು ಹೊಳೆಯು, ಇನ್ನೊಂದು ಅಂಥದ್ದೇ ಹೊಳೆಯನ್ನು ಸಾದರ ಪ್ರೇಮದಿಂದ ಅಪ್ಪಿಕೊಳ್ಳುತ್ತದೆ.

ಗಂಗಾ, ಯಮುನಾ, ಸರಸ್ವತೀ ನದಿಗಳ ಸಂಗಮವು ಅತ್ಯಂತ ಪವಿತ್ರವಾದುದೆಂದು ಮನ್ನಣೆ ಪಡೆದಿದೆ. ಈ ತ್ರಿವೇಣೀ ಸಂಗಮದ ಸ್ವಾರಸ್ಯ ಭಾವ ಹೀಗಿದೆ ನೋಡಿ:

ಹಿಮಾಲಯದ ಉನ್ನತ ಶಿಖರದಿಂದ ಗಂಗೆ – ಯಮುನೆಯರಿಬ್ಬರೂ ಹೊರಟರು. ಶುಭ್ರ – ಸ್ಫಟಿಕ ಬಣ್ಣದ ಗಂಗೆಗೆ ತುಸು ಅಹಂಕಾರ. ಅವಳು ಧುಮ್ಮಿಕ್ಕುತ್ತಾ ತನ್ನ ಪಾಡಿಗೆ ಹರಿಯತೊಡಗಿದಳು. ಕಪ್ಪು ಬಣ್ಣದ ಯಮುನೆಯು ತನ್ನ ಪಾಡಿಗೆ ತಾನು ಗಂಗೆಯಿಂದ ಒಂದು ಅಂತರದಲ್ಲಿ ಹರಿಯುತ್ತಾ ಹೋದಳು.

ಆದರೆ ಎಷ್ಟು ದೂರ? ತಾನೊಬ್ಬಳೇ ಹರಿದರೆ ಶತಮುಖಿಯಾಗಿ ಸಾಗರ ರಾಜನನ್ನು ಸೇರಲು ತನಗೆ ಸಾಧ್ಯವಿಲ್ಲವೆಂದು ಗಂಗೆಗೆ ಗೊತ್ತಾಯಿತು. ಅವಳು ಯಮುನೆಯತ್ತ ಕೈಚಾಚಿ, “ಬಾ ತಂಗಿ! ನೀನು ಕಪ್ಪು ಬಣ್ಣದವಳೆಂದು ಹಿಂದೊಮ್ಮೆ ನಾನು ಹೀಯಾಳಿಸಿದ್ದೆ. ನನ್ನನ್ನು ಕ್ಷಮಿಸಿ, ಬಂದು ನನ್ನನ್ನು ಅಪ್ಪಿಕೋ. ನಿನ್ನ ದಂಡೆಯ ಮೇಲೆ ಗೋಪಬಾಲನಾದ ಶ್ರೀಕೃಷ್ಣನು ಪ್ರೇಮದ ಮಳೆಗರೆದನು. ಶ್ರೀಮಂತ – ಬಡವರೆಲ್ಲರನ್ನು ಒಗ್ಗೂಡಿಸಿದನು. ‘ಸಹನೌ ಭುನಕ್ತು’ ಎಂಬ ವೇದವಾಕ್ಯವನ್ನು ಮನದಟ್ಟು ಮಾಡಿಸಿದನು. ನಿನ್ನ ಒಡಲ ಬಂಡೆಯ ಮೇಲೆ ಕುಳಿತು ಏಕತೆಯ ಕೊಳಲಗಾನ ಮಾಡಿದನು. ಅವನ ಕಾರಣದಿಂದ ದೇವತೆಗಳು ನಿನ್ನೊಡಲಲ್ಲಿ ಮೀನಾಗಿ ಈಜಿದರು. ನಿನ್ನ ಮಹಿಮೆಯೇ ಮಹಿಮೆ!! ಯಮುನೆ! ನಿರ್ಮಲ ಅಂತರಂಗವುಳ್ಳ ನೀನು ಬಂದು ನನ್ನನ್ನು ಅಪ್ಪಿಕೋ” ಎಂದಳು.

ಇದನ್ನು ಕೇಳಿ ಯಮುನೆಗೆ ಖುಷಿಯಿಂದ ಕೊರಳುಬ್ಬಿ ಬಂತು. “ಅಕ್ಕಾ! ನೀನು ನನ್ನನ್ನು ಹೆಚ್ಚಾಘಿಯೇ ಹೊಗಳುತ್ತಿದ್ದೀಯ. ನಿನ್ನ ಮಹಿಮೆಯ ಎದುರು ನಾನೆಷ್ಟರವಳು? ನನ್ನ ದಂಡೆಯ ಮೇಲೆ ಭಕ್ತಿ ಬೆಳೆದರೆ, ನಿನ್ನ ದಂಡೆಯ ಮೇಲೆ ಜ್ಞಾನವು ಮೊಳೆತು ದಶದಿಕ್ಕುಗಳಿಗೂ ಕಂಪು ಸೂಸುವ ವೃಕ್ಷವಾಗಿ ಬೆಳೆದಿದೆ. ಯೋಗರಾಜನಾದ ಭಗವಾನ್ ಪಶುಪತಿಯು ನಿನ್ನ ದಡದ ಮೇಲೆ ಜ್ಞಾನ ಧ್ಯಾನದಲ್ಲಿ ತಲ್ಲೀನನಾಗಿದ್ದಾನೆ. ನೂರಾರು ಋಷಿಗಳು ನಿನ್ನ ಹರಿವಿನಲ್ಲಿ ತಪಸ್ಸು ನಡೆಸಿದ್ದಾರೆ. ರಾಜಮಹಾರಾಜರುಗಳು ವೈರಾಗ್ಯ ತಾಳಿ, ನಿನ್ನ ದಡದ ಪರ್ಣಕುಟಿಗಳಲ್ಲಿ ನೆಲೆಸಿ ಜ್ಞಾನಾರ್ಜನೆಯಲ್ಲಿ ತೊಡಗಿದ್ದಾರೆ. ಜ್ಞನಮೂರ್ತಿಯಾದ ನೀನು ನನ್ನನ್ನು ನಿನ್ನ ಪಾದಗಳಡಿ ಕರೆದುಕೋ” ಎಂದು ವಿನಂತಿ ಮಾಡಿದಳು.

ಇವರಿಬ್ಬರ ಮಾತು ಕೇಳುತ್ತಿದ್ದ ಗುಪ್ತಗಾಮಿನಿ ಸರಸ್ವತಿಯು ಗಂಭೀರವಾಗಿ, “ಜ್ಞಾನವಿಲ್ಲದ ಭಕ್ತಿಯು ಕುರುಡು. ಭಕ್ತಿಯಿಲ್ಲದ ಜ್ಞಾನವು ಶುಷ್ಕ. ಕರ್ಮದಲ್ಲಿ ಜ್ಞಾನ – ಭಕ್ತಿಗಳನ್ನು ಸುರಿಸದೆ ಹೋದರೆ ಅವೆರಡಕ್ಕೂ ಅರ್ಥ ಇರುವುದಿಲ್ಲ. ಜ್ಞಾನಮಯಳಾದ ಗಂಗೆಯನ್ನು ಭಕ್ತಿಮಯಳಾದ ಯಮುನೆಯು ಕೂಡಲಿ. ಮತ್ತು ಕರ್ಮಮಯಳಾದ ನನಗೆ ಜ್ಞಾನ – ಭಕ್ತಿಗಳ ಸ್ಪರ್ಶವಾಗಲಿ” ಎಂದಳು.

ಹೀಗೆ ಜ್ಞಾನ – ಭಕ್ತಿ – ಕರ್ಮಗಳ ಸಂಕೇತವಾದ ಮೂರು ನದಿಗಳು ಕೂಡಿದವು. ಆದ್ದರಿಂದಲೇ ಸಂಗಮಗಳಲ್ಲಿ ತ್ರಿವೇಣೀ ಸಂಗಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇರುವುದು.

ಪಾಂಡುರಂಗ ಸದಾಶಿವ ಸಾನೆ, ಮಹಾರಾಷ್ಟ್ರದಲ್ಲಿ ಆಗಿಹೋದ (1899 – 1950) ಚಿಂತಕ, ಲೇಖಕ, ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ. ಇವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.  ಮರಾಠಿ ಭಾಷೆಯಲ್ಲಿ ಇವರು ಹಲವು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಶ್ಯಾಮಾ ಚಿ ಆಯಿ ಮತ್ತು ಭಾರತೀಯ ಸಂಸ್ಕೃತಿ ಮುಖ್ಯವಾದವು. ಈ ಲೇಖನವನ್ನು ‘ಭಾರತೀಯ ಸಂಸ್ಕೃತಿ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. 

1 Comment

Leave a Reply