ವಿದ್ಯಾಧಿದೇವತೆಯನ್ನು ಸ್ತುತಿಸುವ ಶಾರದಾ ಭುಜಂಗ ಪ್ರಯಾತ ಸ್ತೋತ್ರ

ಶೃಂಗೇರಿಯಲ್ಲಿ ಶ್ರೀ ಶಾರದಾ ಪೀಠವನ್ನು ಸ್ಥಾಪಿಸಿದ ಶ್ರೀ ಶಂಕರರು ಶಾರದಾಷ್ಟಕವನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ಜ್ಞಾನದಾಯಿನಿ ಶಾರದೆಯ ಈ ಸ್ತೋತ್ರವು ಶಾರದಾಭುಜಂಗಪ್ರಯಾತ ಸ್ತೋತ್ರವೆಂದೂ ಕರೆಯಲ್ಪಡುತ್ತದೆ. ಈ ಸ್ತೋತ್ರದ ಮೂಲ ಮತ್ತು ಕನ್ನಡ ಭಾವಾರ್ಥ ಇಲ್ಲಿದೆ.

ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್ |
ಸದಾಸ್ಯೇಂದುಬಿಂಬಾಂ ಸದಾನೋಷ್ಠಬಿಂಬಾಂ
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ || 1 ||
ಭಾವಾರ್ಥ : ಅಮೃತದಿಂದ ತುಂಬಿರುವ ವಕ್ಷವುಳ್ಳ, ತನ್ನ ಅನುಗ್ರಹವನ್ನು ಭಕ್ತರ ಮೇಲೆ ಹರಿಸಲು ಸದಾ ಸಿದ್ಧವಾಗಿರುವ; ಸತ್ಕಾರ್ಯ ನಡೆಸುವ ಸದ್ಭಕ್ತರ ಯೋಗಕ್ಷೇಮ ನೋಡಿಕೊಳ್ಳುವ; ಕೆಂದುಟಿಯಿಂದ ಶೋಭಿಸುವ, ಸದಾ ಚಂದ್ರನಂತೆ ಹೊಳೆಯುವ ಮಾತೆ ಸರಸ್ವತಿಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.

ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನಮುದ್ರಾಂ
ಕಲಾಭಿರ್ವಿನಿದ್ರಾಂ ಕಲಾಪೈಃ ಸುಭದ್ರಾಮ್ |
ಪುರಸ್ತ್ರೀಂ ವಿನಿದ್ರಾಂ ಪುರಸ್ತುಂಗಭದ್ರಾಂ
ಭಜೇ ಶಾರದಾಂಬಾಮಜಸ್ರo ಮದಂಬಾಮ್ || 2 ||
ಭಾವಾರ್ಥ : ಕರುಣಾಪೂರ್ಣ ನೊಟವನ್ನು ಹರಿಸುತ್ತಿರುವ, ಕೈಗಳಲ್ಲಿ ಜ್ಞಾನದ ಸಂಕೇತವನ್ನು ತೋರುತ್ತಾ, ಸದಾ ಜಾಗೃತವಾಗಿರುವ, ತುಂಗಭದ್ರೆಯರು ಹರಿವ ನಗರದಲ್ಲಿ ನೆಲೆಸಿರುವ ಮಾತೆ ಸರಸ್ವತಿಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.

ಲಲಾಮಾಂಕಫಾಲಾಂ ಲಸದ್ಗಾನಲೋಲಾo
ಸ್ವಭಕ್ತೈಕಪಾಲಾಂ ಯಶಃಶ್ರೀಕಪೋಲಾಮ್ |
ಕರೇತ್ವಕ್ಷಮಾಲಾಂ ಕನತ್ಪ್ರತ್ನಲೋಲಾಂ
ಭಜೇ ಶಾರದಾಂಬಾಮಜಸ್ರo ಮದಂಬಾಮ್ || 3 ||
ಭಾವಾರ್ಥ : ತನ್ನ ಲಲಾಟದಲ್ಲಿ ಸುಂದರವಾದ ಒಡವೆಗಳನ್ನು ಧರಿಸಿರುವ, ಸುಮಧುರ ಗೀತೆಯಿಂದಾಗಿ ಭಾವಪರವಶಳಾದ, ತನ್ನ ಭಕ್ತರ ಯೋಗಕ್ಷೇಮವನ್ನು ನೋಡಿಕೊಳ್ಳುವ, ಸೌಂದರ್ಯಕ್ಕೆ ಖ್ಯಾತವಾದ ಸುಂದರ ಕಪೋಲಗಳಿಂದ ಶೋಭಿಸುವ, ಹಾಗೂ ಕರದಲ್ಲಿ ಅಕ್ಷಮಾಲೆಯನ್ನು ಹಿಡಿದಿರುವ ಮಾತೆ ಸರಸ್ವತಿಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.

ಸುಸೀಮಂತವೇಣೀo ದೃಶಾ ನಿರ್ಜಿತೈಣೀo
ರಮತ್ಕೀರವಾಣೀo ನಮದ್ವಜ್ರಪಾಣಿಮ್ |
ಸುಧಾಮಂಥರಾಸ್ಯಾo ಮುದಾ ಚಿಂತ್ಯವೇಣೀo
ಭಜೇ ಶಾರದಾಂಬಾಮಜಸ್ರo ಮದಂಬಾಮ್ || 4 ||
ಭಾವಾರ್ಥ : ಸುಂದರವಾಗಿ ಕೂದಲನ್ನು ಹೆಣೆದಿರುವ ಹಾಗೂ ಬೈತಲೆಯಲ್ಲಿ ಸುಂದರ ಆಭರಣವನ್ನು ಧರಿಸಿರುವ, ಜಿಗಿದಾಡುವ ಜಿಂಕೆಯ ನೋಟದಂಥ ನೋಟವುಳ್ಳ; ದೇವೆಂದ್ರನಿಂದ ಪೂಜಿಸಲ್ಪಡುವ, ಜೇನಿನಂತೆ ಮುಗುಳ್ನಗುವನ್ನು ಸೂಸುತ್ತಿರುವ,ಮನಮೋಹಕ ಕೇಶರಾಶಿಯಿಂದ ಕಂಗೊಳಿಸುತ್ತಿರುವ ಮಾತೆ ಸರಸ್ವತಿಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.

ಸುಶಾಂತಾಂ ಸುದೇಹಾಂ ದೃಗಂತೇ ಕಚಾಂತಾo
ಲಸತ್ಸಲ್ಲತಾಂಗೀಮನಂತಾಮಚಿಂತ್ಯಾಮ್ |
ಸ್ಮೃತಾಂ ತಾಪಸೈಃ ಸರ್ಗಪೂರ್ವಸ್ಥಿತಾಂ ತಾಂ
ಭಜೇ ಶಾರದಾಂಬಾಮಜಸ್ರo ಮದಂಬಾಮ್ || 5 ||
ಭಾವಾರ್ಥ : ಅಪೂರ್ವವಾದ ಶಾಂತಭಾವ, ಮುದ್ದಾದ ಮುಖಭಾವ, ಕಡುಗಪ್ಪು ಕೂದಲು, ಜಿಂಕೆಯ ಕಣ್ಣು, ನವಿರಾದ ಆರೋಹಿಯಂತೆ ಹೊಳೆಯುವ ಶರೀರ, ಊಹಾತೀತಳೂ ಋಷಿಮುನಿಗಳ ವ್ಯಾಖ್ಯಾನಕ್ಕೂ ನಿಲುಕದ, ಮಾತೆ ಸರಸ್ವತಿಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.

ಕುರಂಗೇ ತುರಂಗೇ ಮೃಗೇಂದ್ರೇ ಖಗೇಂದ್ರೇ
ಮರಾಲೇ ಮದೇಭೇ ಮಹೋಕ್ಷೇsಧಿರೂಢಾಮ್ |
ಮಹತ್ಯಾಂ ನವಮ್ಯಾಂ ಸದಾ ಸಾಮರೂಪಾo
ಭಜೇ ಶಾರದಾಂಬಾಮಜಸ್ರo ಮದಂಬಾಮ್ || 6 ||
ಭಾವಾರ್ಥ : ಜಿಂಕೆ, ಅಶ್ವ, ಸಿಂಹ, ಹದ್ದುಗಳ ಮೇಲೆ ಸಂಚರಿಸುವವಳು, ಹಾಗೂ ಹಂಸ, ವೃಷಭ ಮತ್ತು ಆನೆಗಳ ಮೇಲೆ ಕೂಡಾ ಸವಾರಿ ಮಾಡುವಳು (ಇವೆಲ್ಲವನ್ನು ವಾಹನವಾಗಿ ಹೊಂದಿದವಳು) ನವರಾತ್ರಿಯಂದು ಶಾಂತ ಸ್ವರೂಪದಿಂದ ಕಂಗೊಳಿಸುವ ಮಾತೆ ಸರಸ್ವತಿಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.

ಜ್ವಲತ್ಕಾಂತಿವಹ್ನಿಂ ಜಗನ್ಮೋಹನಾoಗೀo
ಭಜನ್ಮಾನಸಾಂಭೋಜಸುಭ್ರಾಂತಭೃoಗೀಮ್ |
ನಿಜಸ್ತೋತ್ರಸಂಗೀತನೃತ್ಯಪ್ರಭಾಂಗೀo
ಭಜೇ ಶಾರದಾಂಬಾಮಜಸ್ರಂ ಮದಂಬಾಮ್ || 7 ||
ಭಾವಾರ್ಥ : ಉರಿವ ಜ್ವಾಲೆಯಂತೆ ಕಾಂತಿಮತ್ತಾದ, ಜಗತ್ತನ್ನೆ ಮೋಹಗೊಳಿಸುವ ರೂಪವುಳ್ಳ, ದುಂಬಿಯು ಕಮಲವನ್ನು ಸುತ್ತುವರಿಯುತ್ತಲೇ ಇರುವಂತೆ ಸದಾ ತನ್ನ ಭಕ್ತರಿಂದ ಸುತ್ತುವರಿದಿರುವ, ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸುತ್ತಾ ಹಾಡುತ್ತಾ ನರ್ತಿಸುತ್ತಾ ಇರುವ ಭಕ್ತರ ಪ್ರಭಾವಳಿಯಿಂದ ಆವೃತವಾಗಿರುವ ಮಾತೆ ಶಾರದೆಯನ್ನು ಸದಾ ನನ್ನ ತಾಯಿಯಂತೆ ಭಾವಿಸಿ ಭಕ್ತಿಯಿಂದ ಪೂಜಿಸುತ್ತೇನೆ.

ಭವಾಂಭೋಜನೇತ್ರಾಜಸಂಪೂಜ್ಯಮಾನಾo
ಲಸನ್ಮoದಹಾಸಪ್ರಭಾವಕ್ತ್ರಚಿಹ್ನಾಮ್ |
ಚಲಚ್ಚಂಚಲಾಚಾರುತಾಟಂಕಕರ್ಣಾಂ
ಭಜೇ ಶಾರದಾಂಬಾಮಜಸ್ರo ಮದಂಬಾಮ್ || 8 ||
ಭಾವಾರ್ಥ : ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಪೂಜಿಸಲ್ಪಡುವ, ಹೊಳೆಯುವ ಮುಗುಳ್ನಗೆಯಿಂದ ಬೆಳಗುವ ಮುಖವುಳ್ಳ, ಉಯ್ಯಾಲೆಯಾಡುವ ಓಲೆಗಳಿಂದ ಹೆಚ್ಚಿದ ಸೌಂದರ್ಯರಾಶಿ ಹೊಂದಿರುವ ಮಾತೆ ಸರಸ್ವತಿಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.

Leave a Reply