ರಾಮಾಯಣದ ಬಗ್ಗೆ ನಿಮಗೆಷ್ಟು ಗೊತ್ತು? : ಪ್ರಾಥಮಿಕ ಮಾಹಿತಿ ಇಲ್ಲಿದೆ

ರಾಮಾಯಣವು ಸನಾತನ ಸಾಹಿತ್ಯದ ಪ್ರಮುಖ ಕೃತಿಗಳಲ್ಲೊಂದು. ಇದು ತ್ರೇತಾಯುಗದಲ್ಲಿ ಸೂರ್ಯವಂಶದಲ್ಲಿ ಜನಿಸಿದ ಶ್ರೀ ರಾಮನ ಕಥನವಾದ್ದರಿಂದ, ಇದಕ್ಕೆ ‘ರಾಮಾಯಣ’ವೆಂದು ಹೆಸರು. ಆದಿಕವಿ ಎಂಬ ಖ್ಯಾತಿ ಪಡೆದ ವಾಲ್ಮೀಕಿಯು ರಚಿಸಿದ ಮೂಲ ರಾಮಾಯಣವು 24,000 ಶ್ಲೋಕಗಳಿಂದ ಕೂಡಿದ್ದು, 7 ಕಾಂಡಗಳಲ್ಲಿ ನಿರೂಪಿಸಲ್ಪಟ್ಟಿದೆ.

ರಾಮಾಯಣದ ಕಥೆ ವಾಲ್ಮೀಕಿಯು ಕಾವ್ಯ ರೂಪದಲ್ಲಿ ರಚಿಸುವ ಮೊದಲೇ ಜನಜನಿತವಾಗಿತ್ತೆಂದು ತೋರುತ್ತದೆ. ಇದು ಕೇವಲ ಕಲ್ಪಿತ ಕಾವ್ಯವಾಗಿರದೆ, ಐತಿಹಾಸಿಕ ಸತ್ಯ ಎಂದೂ ಹೇಳಲಾಗುತ್ತದೆ. ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಅಯೋಧ್ಯೆ, ಮಿಥಿಲೆ, ಚಿತ್ರಕೂಟ, ಗೋಮತಿ, ತಮಸಾನದಿ, ದಂಡಕಾರಣ್ಯ, ಕಿಷ್ಕಿಂಧೆ ಮುಂತಾದ ಸ್ಥಳಗಳು, ಕಾಡು ಕಣಿವೆ ಮತ್ತು ನದಿಗಳು ಇಂದಿಗೂ ಪ್ರಸಿದ್ಧವಾಗಿದೆ. ನಾವು ಇಂದು ಓದುತ್ತಿರುವ ಮೂಲ ರಾಮಾಯಣವು ನೈಜ ಕಥನವನ್ನು ಆಧರಿಸಿ ಹಲವು ಹಂತಗಳಲ್ಲಿ, ಹಲವು ಕವಿಗಳಿಂದ ರಚಿಸಲ್ಪಟ್ಟ ಕೃತಿ ಎಂದು ಹೇಳಲಾಗುತ್ತದೆ. ಈ ಕೃತಿಯಲ್ಲಿ ಅಧ್ಯಾಯಗಳಲ್ಲಿ ಬಳಕೆಯಾಗಿರುವ ಸಂಸ್ಕೃತ ಪ್ರಯೋಗದಲ್ಲಿನ ವ್ಯತ್ಯಾಸ, ನಿರೂಪಣೆಯಲ್ಲಿನ ವಿಭಿನ್ನತೆಗಳು ಈ ತೀರ್ಮಾನಕ್ಕೆ ಕಾರಣವಾಗಿವೆ.

ರಾಮಾಯಣದ ಪಾತ್ರಗಳು, ಪ್ರದೇಶಗಳು, ಸನ್ನಿವೇಶಗಳು…. ಪ್ರತಿಯೊಂದೂ, ಕೃತಿ ರಚನೆಯ ಸಾವಿರಾರು ವರ್ಷಗಳ ನಂತರವೂ ಭಾರತದ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇತ್ತೀಚಿನವರೆಗೆ ರಾಮಾಯಣವು ಜಾತಿಭೇದಗಳಿಲ್ಲದೆ ಪ್ರತಿಯೊಬ್ಬರ ಮಾತು – ಚಿಂತನೆಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈಗ ಪರಿಸ್ಥಿತಿ ಸ್ವಲ್ಪ ವಿಚಲಿತಗೊಂಡಿದೆಯಾದರೂ, ಜನಸಾಮಾನ್ಯರ ಅಂತರಂಗದಲ್ಲಿ ‘ರಾಮ’ ಕೊನೆಯಪಕ್ಷ ಒಂದು ಉದ್ಗಾರವಾಗಿಯಾದರೂ ನೆಲೆಸಿದ್ದಾನೆ.

ರಾಮಾಯಣದ ಕುರಿತು ಹೆಚ್ಚಿನ ವಿವರಕ್ಕೆ ಹೋಗುವ ಮುನ್ನ, ಇದೊಂದು ಏಕಶ್ಲೋಕಿ ರಾಮಾಯಣವನ್ನು ನೋಡೋಣ. ಇದನ್ನು ಮಜ್ಜಿಗೆ ರಾಮಾಯಣ ಎಂದೂ ಕರೆಯುತ್ತಾರೆ. ಹೀಗೆ ಕರೆಯಲು ಕಾರಣವೂ ಇದೆ.

ಒಮ್ಮೆ ಪಂಡಿತನೊಬ್ಬ ಮತ್ತೊಂದು ಹಳ್ಳಿಗೆ ನಡೆದುಹೋಗುತ್ತಾ ಇರುತ್ತಾನೆ. ದಾರಿಯಲ್ಲಿ ವಿಪರೀತ ಬಾಯಾರಿಕೆಯಾಗುತ್ತದೆ. ಮೊದಲು ಸಿಕ್ಕ ಮನೆಯ ಕದ ಬಡಿಯುತ್ತಾನೆ. ಪುಟ್ಟ ಹುಡುಗಿಯೊಬ್ಬಳು ಬಾಗಿಲು ತೆಗೆಯುತ್ತಾಳೆ.

‘ಆಸರೆಗೆ ಏನಾದರೂ ಕೊಡು” ಅನ್ನುತ್ತಾನೆ ಪಂಡಿತ.

ಹುಡುಗಿ ಅಡುಗೆಮನೆ ತಡಕಾಡಿ, ಒಂದು ಲೋಟ ಮಜ್ಜಿಗೆ ಹಿಡಿದು ಬರುತ್ತಾಳೆ… “ಮಜ್ಜಿಗೆ ಹೊರತಾಗಿ ನಿಮಗೆ ಕೊಡಲು ಬೇರೇನೂ ಇಲ್ಲ…. ಇದನ್ನು ಕುಡಿದು ನೀವು ನನಗೆ ರಾಮಾಯಣ ಅಥವಾ ಮಹಾಭಾರತದ ಕಥೆ ಹೇಳಬೇಕು” ಅನ್ನುತ್ತಾಳೆ.

ಪಂಡಿತ ಆಗಲೆನ್ನುತ್ತಾನೆ. ಮಜ್ಜಿಗೆ ಕುಡಿದು ಈ ಕೆಳಗಿನ ಶ್ಲೋಕ ಹೇಳುತ್ತಾನೆ :

ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||

ಕನ್ನಡದಲ್ಲಿ:

ಕಾಡಿಗೆ ಹೋದ ರಾಮ, ಚಿನ್ನದ ಜಿಂಕೆಯನ್ನು ಕೊಂದ. ವೈದೇಹಿಯ ಅಪಹರಣವಾಯಿತು, ತಡೆಯಲು ಹೋದ ಜಟಾಯುವಿನ ಮರಣವಾಯಿತು. ರಾಮನಿಗೆ ಸುಗ್ರೀವ ಸಿಕ್ಕು ಮಾತುಕತೆ ನಡೆಸಲಾಯಿತು. ವಾಲಿಯ ವಧೆಯಾಯಿತು. ಸಮುದ್ರವನ್ನು ಜಿಗಿದು, ಲಂಕೆಯನ್ನು ಸುಡಲಾಯಿತು. ಆಮೇಲೆ ರಾವಣ ಕುಂಭಕರ್ಣರ ಸಂಹಾರ ನಡೆಯಿತು. – ಇದು ರಾಮಾಯಣದ ಕಥೆ.

ಒಂದು ಲೋಟ ಮಜ್ಜಿಗೆಯ ಮೌಲ್ಯಕ್ಕೆ ಸರಿದೂಗುವಂತೆ ಇಡಿಯ ರಾಮಾಯಣವನ್ನು ಒಂದೇ ಶ್ಲೋಕದಲ್ಲಿ ಹೇಳುತ್ತಾನೆ ಪಂಡಿತ. ಈ ಕಥನವನ್ನು ಆಧರಿಸಿ ಏಕಶ್ಲೋಕಿ ರಾಮಾಯಣವನ್ನು ಮಜ್ಜಿಗೆ ರಾಮಾಯಣವೆಂದು ಕರೆಯುವ ರೂಢಿ ಮೊದಲಾಯಿತು!

ಮೂಲ ರಾಮಾಯಣದ ಅನಂತರ ನೂರಾರು ರಾಮಾಯಣಗಳು ಬರೆಯಲ್ಪಟ್ಟಿದ್ದು, ಭಾರತ ಮಾತ್ರವಲ್ಲ, ದಕ್ಷಿಣ – ಪೂರ್ವ ಏಷ್ಯಾದ ಹಲವು ದೇಶಗಳು ತಮ್ಮದೇ ಆದ ರಾಮಾಯಣ ಕಥನವನ್ನು ಹೇಳುತ್ತವೆ.

ರಾಮಾಯಣದ 7 ಕಾಂಡಗಳು ಹೀಗಿವೆ:

  1. ಬಾಲಕಾಂಡ– ರಾಮನ ಜನನ, ಬಾಲ್ಯ, ವಿಶ್ವಾಮಿತ್ರನ ಕೋರಿಕೆಯಂತೆ ರಾಕ್ಷಸರನ್ನು ಸಂಹರಿಸಲು ಅವನೊಡನೆ ಅರಣ್ಯಕ್ಕೆ ತೆರಳುವುದು, ಸೀತಾ ಸ್ವಯಂವರ, ವನವಾಸಕ್ಕೆ ಹೋಗುವ ಮುನ್ನ ಅಯೋಧ್ಯೆಯಲ್ಲಿ ರಾಮ – ಸೀತೆಯರು ಕಳೆದ ದಿನಗಳು – ಈ ಕಥನಗಳನ್ನು ಇದು ಹೇಳುತ್ತದೆ.
  2. ಅಯೋಧ್ಯಾ ಕಾಂಡ– ಈ ಭಾಗದಲ್ಲಿ ಕೈಕೇಯಿಯು ದಶರಥನಲ್ಲಿ ಕೇಳಿಕೊಂಡಿದ್ದ ಮೂರು ವರಗಳಿಂದ ರಾಮನಿಗೆ ವನವಾಸವಾಗುತ್ತದೆ. ದಶರಥನು ಪುತ್ರಶೋಕವನ್ನು ತಾಳಲಾರದೆ ಮರಣ ಹೊಂದುತ್ತಾನೆ.
  3. ಅರಣ್ಯ ಕಾಂಡ– ವನವಾಸದಲ್ಲಿ ರಾಮನ ಜೀವನ, ಸೀತೆಯ ಅಪಹರಣ ಈ ಭಾಗದಲ್ಲಿ ಚಿತ್ರಿತವಾಗಿದೆ.
  4. ಕಿಷ್ಕಿಂಧಾ ಕಾಂಡ– ಸೀತೆಯನ್ನು ಅರಸುತ್ತಾ ರಾಮ ಕಿಷ್ಕಿಂಧೆ ಎಂಬ ವಾನರ ಸಾಮ್ರಾಜ್ಯಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಸುಗ್ರೀವ, ಹನುಮಂತ ಮುಂತಾದ ವಾನರರ ಗೆಳೆತನವಾಗುತ್ತದೆ. ವಾನರಸೈನ್ಯವು ಸೀತೆಯನ್ನು ಹುಡುಕಲು ಪ್ರಾರಂಭಿಸುತ್ತದೆ.
  5. ಸುಂದರ ಕಾಂಡ– ಹನುಮಂತನ ಬಗೆಗಿನ ವಿವರಗಳಿವೆ. ಹನುಮಂತನ ಇನ್ನೊಂದು ಹೆಸರು ಸುಂದರ ಎಂದಿರುವುದರಿಂದ ಈ ಭಾಗಕ್ಕೆ ಸುಂದರ ಕಾಂಡ ಎಂಬ ಹೆಸರು ಬಂದಿದೆ. ಹನುಮಂತ ಸಮುದ್ರ ಲಂಘನ ಮಾಡಿ ಲಂಕೆ ಯನ್ನು ಪ್ರವೇಶಿಸುತ್ತಾನೆ. ಸೀತೆಯು ರಾವಣನ ರಾಜ್ಯದಲ್ಲಿರುವ ಅಶೋಕವನದಲ್ಲಿ ಇರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ.
  6. ಯುದ್ಧ ಕಾಂಡ- ಈ ಭಾಗದಲ್ಲಿ ರಾಮ – ರಾವಣರ ಯುದ್ಧದಲ್ಲಿ, ರಾವಣ ಸಂಹಾರದ ನಂತರ ರಾಮ ತನ್ನ ಪರಿವಾರದೊಡನೆ ಅಯೋಧ್ಯೆಗೆ ಹಿಂತಿರುಗುತ್ತಾನೆ. ಅಲ್ಲಿ ಶ್ರೀರಾಮ ಪಟ್ಟಾಭಿಷೇಕ ನಡೆಯುವುದರ ಕುರಿತಾದ ವರ್ಣನೆಗಳಿವೆ.
  7. ಉತ್ತರ ಕಾಂಡ– ರಾಮ, ಸೀತೆ ವನವಾಸದ ನಂತರ ಅಯೋಧ್ಯೆಯಲ್ಲಿ ಕಳೆದ ದಿನಗಳು; ಅಗಸನ ಮಾತಿನ ಕಾರಣದಿಂದಾಗಿ ಸೀತೆಯನ್ನು ವನವಾಸಕ್ಕೆ ಕಳುಹಿಸುವುದು, ಕಾಲಾಂತರದಲ್ಲಿ ರಾಮಾವತಾರ ಸಮಾಪ್ತಿಗೊಂಡ ವಿವರಗಳಿವೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.