ಏಕಂ ಸತ್ ವಿಪ್ರಾಃ ಬಹುಧಾ ವದನ್ತಿ : ಇರುವುದೊಂದೇ ಸತ್ ತತ್ತ್ವ. ಪ್ರಾಜ್ಞರು ಅದನ್ನು ನಾನಾ ರೀತಿಯಾಗಿ ಬಣ್ಣಿಸುತ್ತಾರೆ….
ಇರುವುದೊಂದೇ ಸತ್ ತತ್ತ್ವ. ಸರಳವಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಇದನ್ನು ಸತ್ಯ ಎಂದು ಕರೆಯೋಣ. ಸತ್ಯ ಯಾವಾಗಲೂ ಒಂದೇ ಆಗಿರುತ್ತದೆ. ಹಲವು ಸತ್ಯಗಳು ಇರಲು ಸಾಧ್ಯವಿಲ್ಲ. ಇರುವುದೇನಿದ್ದರೂ ಸತ್ಯ. ಸತ್ಯ ಅಲ್ಲದೆ ಹೋಗಿರುವ ಯಾವುದೇ ಸಂಗತಿ ಸುಳ್ಳು. ಸತ್ಯವನ್ನು ಕಂಡುಕೊಂಡವರು ಅದನ್ನು ಹಲವು ವಿಧದಲ್ಲಿ ವರ್ಣಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ಹೆಸರಿನಿಂದ ಅದನ್ನು ಕರೆದಿದ್ದಾರೆ. “ಇರುವುದೊಂದೇ ಭಗವಂತ ಅಥವಾ ಸತ್ ವಸ್ತು. ಈ ಸತ್ ವಸ್ತುವನ್ನು ಪ್ರಾಜ್ಞರು ಹಲವು ಹೆಸರುಗಳಿಂದ ಕರೆದು ಹಲವು ದೇವತೆಗಳು ಇರುವಂತೆ ತೋರುತ್ತದೆ” ಎನ್ನುತ್ತದೆ ಋಗ್ವೇದ. “ಏಕಂ ಸತ್, ವಿಪ್ರಾಃ ಬಹುಧಾ ವದನ್ತಿ” ಎಂಬ ಶ್ಲೋಕ ಹೇಳುವುದು ಇದನ್ನೇ.
ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್|
ಏಕಂ ಸದ್ ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ|| (ಋಕ್. 1.164.46) – ಇದು ಈ ಶ್ಲೋಕದ ಪೂರ್ಣ ಪಾಠ. ಇರುವುದೊಂದೇ ಸತ್ ವಸ್ತುವಿಗೆ ಇಂದ್ರ, ಮಿತ್ರ, ವರುಣ, ಅಗ್ನಿ, ಸುಪರ್ಣ, ಅಗ್ನಿ, ಯಮ, ಮಾತರಿಶ್ವ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ ಎನ್ನುತ್ತದೆ ಈ ಋಚೆ. ಹಾಗೆಂದು ಒಬ್ಬ ದ್ರಷ್ಟಾರ ಕಂಡ, ಕೊಟ್ಟ ಹೆಸರಿನ ದೇವತೆಗೆ ಮಾತ್ರ ಅಸ್ತಿತ್ವ, ಮತ್ತೊಂದಕ್ಕೆ ಇಲ್ಲ ಎನ್ನಲಾದೀತೇ? ಅದು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಸತ್ ವಸ್ತುವನ್ನು ಕಂಡುಕೊಂಡಿದ್ದಾರೆ, ತಮ್ಮದೇ ಬಗೆಯಲ್ಲಿ ಕಂಡು, ಹೆಸರಿಟ್ಟು ಕರೆದಿದ್ದಾರೆ. ಅಷ್ಟೇ.
ಆಧುನಿಕ ಕಾಲಮಾನದಲ್ಲಿ ಹತ್ತು ಹಲವು ಮತ ಪಂಥಗಳು; ಮತ್ತಷ್ಟು ಕವಲುಗಳು. ಆಯಾ ಪಂಥಗಳ ಪ್ರವರ್ತಕರ ಕಾಣ್ಕೆ ಏನಿದೆಯೋ ಅದರಂತೆ ಅನುಯಾಯಿಗಳ ನಂಬಿಕೆ. ಆದ್ದರಿಂದ ಪ್ರತಿಯೊಬ್ಬರು ಆರಾಧಿಸುವ ಪರಮ ಸತ್ಯವೂ ಭಗವಂತನೇ. ಪಂಥಗಳ ಹೆಸರು ಬೇರೆ ಇರಬಹುದು, ಅವೆಲ್ಲದರ ಗುರಿ ಒಂದೇ; ಭಗವಂತನನ್ನು ತಲುಪುವುದು. ಮತ್ತು ಆ ಭಗವಂತನ ಹೆಸರು ಏನು ಬೇಕಾದರೂ ಆಗಿರಬಹುದು.
ಹೀಗಿರುವಾಗ ನನ್ನ ದಾರಿ ಶ್ರೇಷ್ಠ, ನನ್ನ ಭಗವಂತ ಶ್ರೇಷ್ಠ, ನಿನ್ನ ದಾರಿ ದಾರಿಯೇ ಅಲ್ಲ – ಇತ್ಯಾದಿ ಪೈಪೋಟಿ ಏಕೆ? ಅಕಸ್ಮಾತ್ ಮತ್ತೊಬ್ಬರ ದಾರಿ ದೇವರನ್ನು ತಲುಪಿಸುವುದಿಲ್ಲವಾದರೆ ಆ ದಾರಿ ಕ್ರಮೇಣ ನಶಿಸಿಹೋಗುತ್ತದೆ. ಅದರ ಕಾಳಜಿ ಬಿಟ್ಟು, ಬಸವಣ್ಣ ಹೇಳುವಂತೆ ‘ಲೋಕದ ಡೊಂಕು ತಿದ್ದುವುದನ್ನು’ ಬಿಟ್ಟು, ಪ್ರತಿಯೊಂದನ್ನೂ ಗೌರವದಿಂದ ಕಾಣಲು ಯತ್ನಿಸೋಣ; ನಮ್ಮ ನಮ್ಮ ದಾರಿಯಲ್ಲಿ ಶ್ರದ್ಧೆಯಿಂದ ಸಾಗೋಣ.