ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಸೂಫೀಯಾಗುವ ಆಕಾಂಕ್ಷೆಯುಳ್ಳ ಇಬ್ಬರು ವಿದ್ಯಾರ್ಥಿಗಳು ತಮ್ಮೊಳಗೇ ವಾದದಲ್ಲಿ ನಿರತರಾಗಿದ್ದರು.
ಒಬ್ಬ ಶಿಷ್ಯನ ಪ್ರಕಾರ, ಸೂಫಿಯಾಗಲು ವೈಯಕ್ತಿಕ ಸಾಧನೆ ಮುಖ್ಯ ಆಗ ಮಾತ್ರ ಅವ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಬಲ್ಲ.
ಇನ್ನೊಬ್ಬ ಶಿಷ್ಯ, ಸೂಫಿಯಾಗಲಿಕ್ಕೆ ಗುರುವಿನ ಸಹಾಯ, ಕರುಣೆ ಬೇಕೇ ಬೇಕು ಎಂದು ವಾದಿಸುತ್ತಿದ್ದ.
ಈ ಜಗಳ ತಾರಕಕ್ಕೇರಿತು, ಕೈ ಕೈ ಮಿಲಾಯಿಸುವವರೆಗೆ ಹೋಯಿತು.
ಅಷ್ಟರಲ್ಲಿ ಅದೇ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದ ಸೂಫೀಯೊಬ್ಬ ಅವರಿಗೆ ಎದುರಾದ.
ಇಬ್ಬರೂ ಶಿಷ್ಯರು, ಸೂಫೀಯ ಎದುರು ತಮ್ಮ ಸಮಸ್ಯೆಯನ್ನು ನಿವೇದಿಸಿಕೊಂಡರು. ತಮ್ಮ ಸಮಸ್ಯೆಗೆ ಪರಿಹಾರವನ್ನು ಕೋರಿದರು.
“ನಿಮ್ಮ ಜಗಳವನ್ನು ನಾನು ಬಗೆಹರಿಸಬೇಕೆಂದು ಬಯಸುತ್ತೀರಾ?” ಸೂಫೀ ಕೇಳಿದ.
“ ಹೌದು ಹೌದು” ಎಂದು ಇಬ್ಬರು ಶಿಷ್ಯರು ಒತ್ತಾಯ ಮಾಡಿದರು.
“ನೀವು ಯಾವಾಗಲಾದರೂ ಎರಡು ನಾಯಿಗಳು ಒಂದು ಮೂಳೆಗಾಗಿ ಕಿತ್ತಾಡುವುದನ್ನು ನೋಡಿದ್ದೀರಾ?” ಸೂಫೀ ಪ್ರಶ್ನೆ ಮಾಡಿದ.
“ ಬೇಕಾದಷ್ಟು ಸಲ ನೋಡಿದ್ದೇವೆ” ಇಬ್ಬರೂ ಶಿಷ್ಯರು ಉತ್ತರಿಸಿದರು.
“ಆ ನಾಯಿಗಳ ಕಿತ್ತಾಟದಲ್ಲಿ ಮೂಳೆಯೂ ಸಹ ಭಾಗವಹಿಸಿದ್ದನ್ನು ನೋಡಿದ್ದೀರಾ? ಸ್ವಲ್ಪ ವಿಚಾರ ಮಾಡಿ” ಸೂಫೀ ತಣ್ಣಗೆ ಉತ್ತರಿಸಿದ.