ಅಧ್ಯಾತ್ಮ ಡೈರಿ : ಹಕ್ಕು ಸಾಧಿಸುವ ಮುನ್ನ ಕರ್ತವ್ಯಗಳ ಕಡೆ ಗಮನವಿರಲಿ…

ನಾವು ಮನುಷ್ಯರು, ನಮ್ಮ ಸಹಜೀವಿಗಳ ಬದುಕಿನ ಹಕ್ಕನ್ನು, ಆಹಾರದ ಹಕ್ಕನ್ನು, ಪರಿಸರದ ಹಕ್ಕನ್ನು ಕಿತ್ತುಕೊಂಡಿರುವ ಒಟ್ಟು ಮನುಷ್ಯ ಸಮುದಾಯಕ್ಕೆ `ಮಾನವೀಯ ಹಕ್ಕು’ಗಳ ಬಗ್ಗೆ ಮಾತನಾಡಲು ಎಷ್ಟು ಅಧಿಕಾರವಿದೆ ಎಂದು ಯೋಚಿಸಬೇಕಾಗುತ್ತದೆ. ~ ಅಲಾವಿಕಾ 

ನಾವೆಲ್ಲರೂ ನಮ್ಮ ಬದುಕಿನಲ್ಲಿ ಬಹಳ ಅಚ್ಚುಕಟ್ಟಾಗಿ ಮಾಡುವ ಕೆಲಸವೆಂದರೆ, `ಹಕ್ಕು ಸಾಧಿಸುವುದು’. ಅದು ಸಂಪತ್ತೇ ಆಗಿರಲಿ, ಸಂಬಂಧಗಳಿರಲಿ, ಪರಿಸರವಿರಲಿ ಅಥವಾ ಹೆಸರು – ಅದರ ಮೇಲೆ ತನಗೆ ಹಕ್ಕಿದೆ ಎಂದು ಪಟ್ಟು ಹಿಡಿಯುತ್ತೇವೆ. ಡಿವಿಜಿ ಹೇಳಿದಂತೆ `ಅಕ್ಕಿಯೊಳಗನ್ನವನು ಮೊದಲಾರು ಕಂಡವರು’ ಎಂದು ಗೊತ್ತಿಲ್ಲ ನಮಗೆ. ಏಕೆಂದರೆ, ಮೊದಲ ಸಲ ಭತ್ತ ಕುಟ್ಟಿ ಅಕ್ಕಿ ಮಾಡಿ, ಅನ್ನ ಬೇಯಿಸಿದವನು ಅದರ ಮೇಲೆ ಹಕ್ಕು ಸ್ವಾಮ್ಯ ಸ್ಥಾಪಿಸಿ ಹೋಗಲಿಲ್ಲ. ಆದರೆ ಇಂದಿನ ನಾವು ಎಲ್ಲರಿಗೂ ಕಾಣುವ ನಕ್ಷತ್ರವೇ ನಮಗೆ ಕಂಡಿದ್ದರೂ ಅದನ್ನು ನಾವೇ ಮೊದಲು ಕಂಡವರೆಂದು ಹಕ್ಕು ಸಾಧಿಸಲು ಮುಂದಾಗುತ್ತೇವೆ. ಒಟ್ಟಾರೆ ನಮಗೆ ಭೂಮಿಯ ಮೇಲಿನ ಎಲ್ಲದರ ಮೇಲೂ ಹಕ್ಕಿದೆಯೆಂಬ ಭಾವನೆ.

ಒಬ್ಬ ವ್ಯಕ್ತಿಯಾಗಿ ಮನುಷ್ಯನ ಈ ಮನಸ್ಥಿತಿಯು ಸಾಮುದಾಯಿಕವಾಗಿ ಒಟ್ಟು ಮನುಷ್ಯ ಗುಣದ ಪರಿಣಾಮವೇ ಆಗಿದೆ. ಮನುಷ್ಯ ತನ್ನ ಬುದ್ಧಿವಂತಿಕೆಯನ್ನೆ ಮುಂದೆ ಮಾಡಿಕೊಂಡು ಸೃಷ್ಟಿಯ ಇತರ ಜೀವಿಗಳ ಬದುಕಿನ ಹಕ್ಕನ್ನು ಕಿತ್ತುಕೊಂಡಿದ್ದಾನೆ ಮತ್ತು ಎಲ್ಲ ಜೀವಿಗಳಿಗೂ ಸಮಾನವಾಗಿ ಸಲ್ಲಬೇಕಿದ್ದ ನೆಲ, ಜಲ, ಗಾಳಿಯ ಮೇಲೆ ತನ್ನ ಅಧಿಕಾರ ಸ್ಥಾಪಿಸಿದ್ದಾನೆ. ಮನುಷ್ಯನ ಈ ನಡೆಯನ್ನು `ಬಲಶಾಲಿಗಳಿಗಷ್ಟೆ ಬದುಕುವ ಹಕ್ಕು’ ಅನ್ನುವ ವಾದ ಸರಣಿಯ ಮೂಲಕ ಸಮರ್ಥಿಸಿಕೊಳ್ಳಲಾಗದು. ಹಾಗೊಮ್ಮೆ ಈ ವಾದ ಸರಣಿಯನ್ನು ಬಲವಾಗಿ ಪ್ರತಿಪಾದಿಸುವಿರೇ ಆದಲ್ಲಿ, ಮನುಷ್ಯ ಸಮುದಾಯದ ನಡುವೆ ಏಕಿದು ಅನ್ವಯವಾಗಕೂಡದು? ಹಾಗೆ ಆಗಬೇಕೆಂದಲ್ಲ, ಇತರ ಸಹಜೀವಿಗಳ ವಿಷಯ ಬಂದಾಗ ಇಂಥದೊಂದು ತತ್ತ್ವ ಮುಂದಿಡುವ ನಾವೇಕೆ ನಮ್ಮ ವಿಷಯದಲ್ಲಿ ಬಲಶಾಲಿಗಷ್ಟೆ ಬದುಕುವ ಹಕ್ಕು ಅನ್ನುವ ತರ್ಕವನ್ನು ವಿರೋಧಿಸುತ್ತೇವೆ? ನಾವೇಕೆ `ಮಾನವ ಹಕ್ಕು’ಗಳ ಬಗ್ಗೆ, ಅವುಗಳ ರಕ್ಷಣೆಯ ಬಗ್ಗೆ, ಅನ್ವಯದ ಬಗ್ಗೆ ಅಷ್ಟೊಂದು ಕಾಳಜಿ ತೋರುತ್ತೇವೆ? ಅದಕ್ಕೆ ಚ್ಯುತಿ ಉಂಟಾಗುತ್ತದೆನ್ನುವ ಸಂದರ್ಭದಲ್ಲಿ ಪ್ರತಿರೋಧ ತೋರುತ್ತೇವೆ? ಜೊತೆಗೆ ನಾವು ಇಂಥದೊಂದು ಹಕ್ಕಿನ ಬಗ್ಗೆ ಅರಿಯದವರು, ಅದನ್ನು ಬಳಸಿಕೊಳ್ಳದವರು ಅಥವಾ ದಮನಿತರ ಬಳಿ ಸಾರಿ, ಮಾನವ ಹಕ್ಕುಗಳ ಬಗ್ಗೆ ತಿಳಿ ಹೇಳಿ, ಅವರಿಗೆ ಅದನ್ನು ದೊರಕಿಸಿಕೊಡುವ ಕೆಲಸವನ್ನೂ ಮಾಡುತ್ತೇವೆ. ಆದರೆ, ಇಡೀ ಸೃಷ್ಟಿಯನ್ನು ಒಂದು ಕುಟುಂಬವಾಗಿ ಕಂಡು, ನಮ್ಮ ಸಹಜೀವಿಗಳೂ ಈ ಪರಿಸರದಲ್ಲಿ ಸಮಾನ ಪಾಲುದಾರರು, ಫಲಾಫಲಗಳಲ್ಲಿ ಸಮಾನ ಹಕ್ಕುಳ್ಳವರು ಎಂದೇಕೆ ನಾವು ಯೋಚಿಸುವುದಿಲ್ಲ?

ಇಂಥ ಯೋಚನೆಗಳು ನಮ್ಮ ಹೃದಯದ ಕದ ತಟ್ಟುವುದೇ ಇಲ್ಲ. ನಾವು ಪರಿಸರ ಹಾಳುಗೆಡವಿ, ಅದರಿಂದುಂಟಾಗುವ ವಿಪತ್ತುಗಳಲ್ಲಿ ಸಹಜೀವಿಗಳಿಗೆ ಪಾಲು ಕೊಡುತ್ತೇವೆ. ಆದರೆ ಫಲಗಳ ಹಕ್ಕಿನಿಂದ ಅವನ್ನು ವಂಚಿಸುತ್ತೇವೆ. ಕಾಡನ್ನು ನಾಶ ಮಾಡಿದ್ದೇವೆ. ತಮ್ಮ ನೈಜ ನೆಲೆ ಕಳೆದುಕೊಂಡ ಹುಲಿ ನಾಡಿಗೆ ಬಂದರೆ ಅದನ್ನು `ನರ ಹಂತಕ’ ಎಂದು ಕರೆದು ಭೀಭತ್ಸವಾಗಿ ಬಿಂಬಿಸುತ್ತೇವೆ. ಹಾದಿ ತಪ್ಪಿದ ಆನೆಗಳನ್ನು ಕಾಡುತ್ತೇವೆ. ಕರಡಿಗಳನ್ನು ಕೂಡಿ ಹಾಕುತ್ತೇವೆ, ಕೊಲ್ಲುತ್ತೇವೆ. ನಾವು `ನಮ್ಮ ನೆಲ’ದ ಮೇಲೆ ಸಹಜೀವಿಗಳು ಕಾಲಿಡುವುದನ್ನು ಎಷ್ಟೂ ಸಹಿಸುವುದಿಲ್ಲ. ಈ ಎಲ್ಲ ಜೀವಿಗಳ ಬದುಕಿನ ಹಕ್ಕನ್ನು, ಆಹಾರದ ಹಕ್ಕನ್ನು, ಪರಿಸರದ ಹಕ್ಕನ್ನು ಕಿತ್ತುಕೊಂಡಿರುವ ಒಟ್ಟು ಮನುಷ್ಯ ಸಮುದಾಯಕ್ಕೆ `ಮಾನವೀಯ ಹಕ್ಕು’ಗಳ ಬಗ್ಗೆ ಮಾತನಾಡಲು ಎಷ್ಟು ಅಧಿಕಾರವಿದೆ ಎಂದು ಯೋಚಿಸಬೇಕಾಗುತ್ತದೆ.
ಪ್ರತಿಯೊಂದು ಧರ್ಮವೂ ಸಹಾನುಭೂತಿಯನ್ನು ಬೋಧಿಸುತ್ತದೆ. ಹಂಚಿಕೊಂಡು ಬಾಳಲು ಸೂಚಿಸುತ್ತದೆ. ಈ ಸೃಷ್ಟಿಯ ಮೇಲೆ ಮನುಷ್ಯನಿಗೆ ಇರುವಷ್ಟೇ ಅಧಿಕಾರ ಒಂದು ಇರುವೆಗೂ ಇದೆ ಅನ್ನುತ್ತದೆ ಭಾಗವತ. ನಾವು ನಮ್ಮ ಹಕ್ಕುಗಳ ಬಗ್ಗೆ ಮಾತನಾಡುವಷ್ಟೇ ಸಹಜೀವಿಗಳ ಹಕ್ಕನ್ನೂ ಎತ್ತಿಹಿಡಿಯಬೇಕಾಗುತ್ತದೆ. 

ಕರ್ತವ್ಯ ಮಾಡಿದರಷ್ಟೇ ಹಕ್ಕಿನ ಮಾತು
ಭಗವದ್ಗೀತೆಯು ಕರ್ಮದ ಬಗ್ಗೆ ಮಾತಾಡುತ್ತದೆ. ಕರ್ಮ ಮಾಡಿದವನು ಫಲವುಣ್ಣುತ್ತಾನೆ. ಆದರೆ ಅದನ್ನು ಮಾಡುವಾಗ ಫಲಾಫಲಗಳ ಚಿಂತೆ ಮಾಡಬಾರದು ಎನ್ನುತ್ತದೆ ಭಗವದ್ಗೀತೆ. ನಾವಾದರೋ, ಕರ್ಮವನ್ನೇ ಮಾಡದೆ ಫಲದ ಕಾಳಜಿ ವಹಿಸುತ್ತೇವೆ. ಅಂತೆಯೇ, ಕರ್ತವ್ಯ ನಡೆಸದೆ ಹಕ್ಕಿನ ಮಾತಾಡುತ್ತೇವೆ.

ಇಂದಿನ ಕಾಲಕ್ಕೆ ಇದು ಹೆಚ್ಚು ಅನ್ವಯವಾಗುತ್ತದೆ. ತಾಯ್ತಂದೆಯರ ಸೇವೆಯನ್ನೇ ಮಾಡದೆ ಅವರ ಆಸ್ತಿಯ ಮೇಲಿನ ಹಕ್ಕು ಸಾಧಿಸುವವರು ನಮ್ಮ ನಡುವೆ ಇದ್ದಾರೆ. ಸಂಸಾರದ ಮೂಲಭೂತ ಜವಾಬ್ದಾರಿಯನ್ನೂ ನಿಭಾಯಿಸದೆ ಅದರ ಸುರಕ್ಷೆಯನ್ನೂ ಸುಖವನ್ನೂ ಉಣ್ಣಬೇಕೆಂದು ಬಯಸುವವರು ಇದ್ದಾರೆ. ಸಾಮಾಜಿಕ ಕರ್ತವ್ಯಗಳಿಂದ ವಿಮುಖರಾಗಿ, ಅದರ ಎಲ್ಲ ಸವಲ್ತುಗಳ ಮೇಲೆ ನಮ್ಮ ಹಕ್ಕಿದೆ ಅನ್ನುವವರು ಇದ್ದಾರೆ. ದೇಶದ ಪ್ರತಿಯಾಗಿ ಕರ್ತವ್ಯ ನಿಭಾಯಿಸದೆ ದೇಶದ ಪ್ರಜೆಯಾಗಿ ನಮ್ಮ ಹಕ್ಕುಗಳು ಇಂಥವು ಎಂದು ಪಟ್ಟಿ ನೀಡುವವರೂ ನಮ್ಮ ನಡುವೆ ಇದ್ದಾರೆ. ಜವಾಬ್ದಾರಿಯುತವಾಗಿ, ಸೌಹಾರ್ದಯುತವಾಗಿ ಮಾತನಾಡುವ ನಾಗರಿಕ ಕರ್ತವ್ಯ ನೆರವೇರಿಸದೆ ಇರುವವರು ಮಾತಿನ ಹಕ್ಕನ್ನು ಪ್ರತಿಪಾದಿಸುವುದು ವ್ಯಂಗ್ಯದಂತೆ ಕಾಣುತ್ತದೆ. ಹಾಗೆಯೇ ಸ್ವಚ್ಛತೆಯ ಕರ್ತವ್ಯ, ಪರಿಸರ ಕಾಳಜಿಯ ಕರ್ತವ್ಯಗಳನ್ನು ನಿಭಾಯಿಸದೆ ನೈರ್ಮಲ್ಯದ ಹಕ್ಕು, ನೀರಿನ ಹಕ್ಕು ಇತ್ಯಾದಿ ಮಾತನಾಡುವುದೂ ತಪ್ಪಾಗುತ್ತದೆ.

ಯಾರು ತಮ್ಮ ಕರ್ತವ್ಯಗಳನ್ನು ನೆರವೇರಿಸುತ್ತಾರೆ ಅವರು ಮಾತ್ರವೆ ಹಕ್ಕು ಸಾಧಿಸುವ ಅರ್ಹತೆ ಪಡೆದಿರುತ್ತಾರೆ. ಮಾನವ ಹಕ್ಕುಗಳ ಬಗ್ಗೆ ಮಾತನಾಡುವಾಗಲೂ ಅಷ್ಟೇ. ಮನುಷ್ಯ ಒಂದು ಸಮುದಾಯವಾಗಿ ಮೊದಲು ಸೃಷ್ಟಿಯಲ್ಲಿ ತನ್ನ ಕರ್ತವ್ಯಗಳೇನಿವೆ ಅನ್ನುವುದನ್ನು ಗಮನಿಸಿ, ಅದರಂತೆ ನಡೆದುಕೊಳ್ಳಬೇಕು. ಆಗ ವೈಯಕ್ತಿಕವಾಗಿಯೂ ಅದರ ಪ್ರತಿಫಲನವು ಮನುಷ್ಯನ ಮೇಲಾಗುವುದು.

ಸಾಧಿಸಲೇಬೇಕಾದ ಹಕ್ಕೊಂದಿದೆ…
ನಮ್ಮ ಮಿಥ್ಯಾಹಂಕಾರದಿಂದ ಪ್ರಭಾವಿತರಾಗಿ, ನಮ್ಮ ದೈಹಿಕ ಗುರುತಿಗೆ ಅನುಗುಣವಾಗಿ ಸಂಬಂಧ, ಕುಟುಂಬ, ಸಮಾಜ, ದೇಶ – ಹೀಗೆ ಹಲವಾರು ಸ್ತರಗಳಲ್ಲಿ ಹಕ್ಕಿನ ಮಾತನಾಡುವ ನಾವು ನಮ್ಮ ಹುಟ್ಟಿನ ಮೂಲಭೂತ ಕಾರಣವೇನಿದೆಯೋ, ಯಾವ ಆತ್ಯಂತಿಕ ಹಕ್ಕನ್ನು ಪಡೆಯುವ ಸಲುವಾಗಿ ಇದೆಯೋ ಅದನ್ನೆ ಮರೆಯುತ್ತೇವೆ.
ಶಾಸ್ತ್ರಗಳ ಪ್ರಕಾರ ಎಂಭತ್ತನಾಲ್ಕು ಲಕ್ಷ ಜನ್ಮಗಳ ನಂತರ ಮಾನವ ಜನ್ಮ ಲಭಿಸುತ್ತದೆ. ಪುರಂದರ ದಾಸರು `ಮಾನವ ಜನ್ಮ ದೊಡ್ಡದು’ ಎಂದಿರುವುದು ಅದು ದುರ್ಲಭ ಎನ್ನುವ ಕಾರಣಕ್ಕಾಗಿಯೇ. ಜೀವಿಯು ಮೋಕ್ಷ ಪ್ರಾಪ್ತಿಯೆಡೆಗೆ ಸಾಗಲಿ ಎಂಬ ಉದ್ದೇಶದಿಂದ, ಜನನ – ಮರಣ ಚಕ್ರದಲ್ಲೊಮ್ಮೆ ಮಾನವ ಜನ್ಮ ಸಂದಾಯವಾಗುತ್ತದೆ. ಈ ಜನ್ಮದಲ್ಲಿ ಆತ್ಮದ ಸರ್ವೋಚ್ಚ ಹಕ್ಕೆಂದು ಹೇಳಲಾಗಿರುವ ಮೋಕ್ಷ ಪ್ರಾಪ್ತಿಯೆಡೆಗೆ ಸಾಗುವ ಸಾಧನೆಯ ಕರ್ತವ್ಯವನ್ನು ಜೀವಿಯು ಮಾಡಬೇಕಾಗುತ್ತದೆ. ಹಾಗೊಮ್ಮೆ ಈ ಪಥದಲ್ಲಿ ಸಂಪೂರ್ಣ ವಿಫಲರಾದವರು ಮತ್ತೊಮ್ಮೆ ವಿವಿಧ ಜೀವಪ್ರಕಾರಗಳಲ್ಲಿ ಜನ್ಮ ತಳೆಯಬೇಕಾಗುತ್ತದೆ.

ಆಧ್ಯಾತ್ಮಿಕ ದೃಷ್ಟಿಕೋನದಿಂದ ಮನುಷ್ಯನ ಮೂಲಭೂತವೂ ಆತ್ಯಂತಿಕವೂ ಆದ ಹಕ್ಕೆಂದರೆ, ಅದು ಸ್ವಾತಂತ್ರ್ಯವೇ ಆಗಿದೆ. ಈ ಸ್ವಾತಂತ್ರ್ಯ ರಾಜಕೀಯ ಸ್ವಾತಂತ್ರ್ಯಕ್ಕಿಂತ, ಆರ್ಥಿಕ ಸ್ವಾತಂತ್ರ್ಯಕ್ಕಿಂತ, ಭಾವನಾತ್ಮಕ ಸ್ವಾತಂತ್ರ್ಯಕ್ಕಿಂತ ವಿಭಿನ್ನವಾದುದು. ಇದು ಜನ್ಮಾಂತರಗಳಲ್ಲಿ ವಿವಿಧ ದೇಹಗಳೊಳಗೆ ಬಂಧನಕ್ಕೊಳಗಾಗುತ್ತಲೇ ಇರುವ ಆತ್ಮದ ಸ್ವಾತಂತ್ರ್ಯ. ಈ ಸ್ವಾತಂತ್ರ್ಯವನ್ನು ಹೊಂದುವ ಹಕ್ಕು ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ. ಆದರೆ ನಾವು ಅದನ್ನು ಸಾಧಿಸಬೇಕೆನ್ನುವ ಅಪೇಕ್ಷೆಯನ್ನೆ ಹೊಂದಿರುವುದಿಲ್ಲ. ಯಾವ ಹಕ್ಕನ್ನು ಪಡೆಯುವುದರಿಂದ ನಮ್ಮ ಬದುಕು ಸುಗಮಗೊಳ್ಳುವುದೋ, ಎಲ್ಲ ದುಃಖಗಳು ಕೊನೆಗೊಳ್ಳುವವೋ ಯಾವ ಹಕ್ಕು ಪಡೆಯುವುದರಿಂದ ಜ್ಞಾನೋದಯವಾಗುವುದೋ ಆ ಹಕ್ಕಿನ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳುತ್ತೇವೆ. ಬಹುತೇಕವಾಗಿ ಇಂಥದೊಂದು ಹಕ್ಕು ನಮ್ಮ ಪಾಲಿಗೆ ಇದೆ ಅನ್ನುವ ಅರಿವೇ ನಮಗಿರುವುದಿಲ್ಲ.

ಸಂತ – ಸಾಧಕರು, ಗುರುಗಳು ನಮಗೆ ಈ ಹಕ್ಕಿನ ಪರಿಚಯ ಮಾಡಿಸುತ್ತಾರೆ. ಅದನ್ನು ಹೊಂದುವ, ಚಲಾಯಿಸುವ, ಅನ್ವಯಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡುತ್ತಾರೆ. ಅಂತಹ ಮಾರ್ಗದರ್ಶನ ಹೊಂದಬೇಕೆನ್ನುವ ಪ್ರಜ್ಞೆ ಒಟ್ಟು ಮನುಷ್ಯ ಸಮುದಾಯದಲ್ಲಿ ಉದಿಸಿದಾಗ ಸೃಷ್ಟಿಯು ಹೆಚ್ಚು ಆರೋಗ್ಯಪೂರ್ಣವೂ ಉಲ್ಲಸಿತವೂ ಆಗುತ್ತದೆಯಲ್ಲದೆ, ದೀರ್ಘಾಯುವೂ ಆಗಿ ಸಮಸ್ತ ಜೀವಿಗಳ ಸಾಮರಸ್ಯಕ್ಕೆ ನಾಂದಿಯಾಗುತ್ತದೆ.

1 Comment

  1. ಲೇಖನಗಳು ಕೊಂಚ ವಾದ ಮಂಡನೆಯ ಪ್ರಬಂಧದ ರೀತಿ ಇವೆ. ಅನೆಕ್ ಡೋಟ್ಸ್, ಅನುಭವ,ಸಾಮಿತಿಗಳ ಮಿಶ್ರಣ ಇದ್ದರೆ ಚಂದ

Leave a Reply