ಹುಳುಗಳು ಕೂಡಾ ತಮ್ಮ ರೆಕ್ಕೆ ಸುಟ್ಟರೂ ದೀಪವನ್ನರಸಿ ಬರುತ್ತವೆ. ಹೀಗಿರುವಾಗ, ನಾವು ಮನುಷ್ಯರೇಕೆ ಕತ್ತಲಲ್ಲಿ ಕೊಳೆಯಬೇಕು?
ಅಸತೋಮಾ ಸದ್ ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
ಅನ್ನುತ್ತದೆ ಬೃಹದಾರಣ್ಯಕ ಉಪನಿಷತ್ತು.
ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನಮ್ಮನ್ನು ನಡೆಸು ಎನ್ನುವ ಪ್ರಾರ್ಥನೆ ಇದು.
ನಮ್ಮ ದೈನಂದಿನ ಬದುಕಿಗೂ ಈ ಪ್ರಾರ್ಥನೆ ಮಾರ್ಗಸೂಚಿಯಾಗಿದೆ. ನಮ್ಮ ನಡಿಗೆ ಎಲ್ಲಿಂದ ಎಲ್ಲಿಗೆ ಇರಬೇಕು ಎನ್ನುವುದನ್ನು ಇದು ಸೂಚಿಸುತ್ತದೆ.
ನಾವು ನಮ್ಮ ಹೆಸರು, ಹುದ್ದೆ, ಸಂಪತ್ತು ಮೊದಲಾದವುಗಳಿಂದ ನಮ್ಮನ್ನು ಗುರುತಿಸಿಕೊಳ್ಳುತ್ತಾ ನಮ್ಮ ನಿಜ ಸತ್ವವನ್ನೇ ಮರೆಯುತ್ತೇವೆ. ಈ ಹೆಸರಾಗಲೀ ಹುದ್ದೆಯಾಗಲೀ ಸಂಪತ್ತಾಗಲೀ ಅಶಾಶ್ವತವಾದ ಸಂಗತಿಗಳು. ಸತ್ಯವು ಶಾಶ್ವತವಾದುದರಿಂದ ಅಶಾಶ್ವತವಾದ ಎಲ್ಲವೂ ಅಸತ್ಯವೇ. ಇಂಥಾ ಅಸತ್ಯದಿಂದ ನಮ್ಮನ್ನು ಸತ್ಯದೆಡೆಗೆ – ನಮ್ಮ ನಿಜ ಸತ್ವವನ್ನು ಕಂಡುಕೊಳ್ಳುವ ದಾರಿಯಲ್ಲಿ ಮುನ್ನಡೆಯುವ ಬಯಕೆ ನಮ್ಮಲ್ಲಿ ಮೂಡಬೇಕು.
ಹಾಗೆಯೇ ಕತ್ತಲಿನಿಂದ ಬೆಳಕಿನೆಡೆಗೆ…. ಕತ್ತಲು ಎನ್ನುವುದು ಇಲ್ಲಿ ಅಜ್ಞಾನದ ಸಂಕೇತ. ಬೆಳಕೆಂದರೆ ಜ್ಞಾನ. ಅಧ್ಯಯನ – ಅಭ್ಯಾಸಗಳಿಂದ, ಹಿರಿಯರ ಮಾರ್ಗದರ್ಶನದಿಂದ, ಅನುಭವದಿಂದ ಜ್ಞಾನ ಸಂಪಾದನೆ ಮಾಡಿ ಅಜ್ಞಾನದಿಂದ ಮುಕ್ತರಾಗೋಣ ಎಂಬುದನ್ನಿದು ಸೂಚಿಸುತ್ತದೆ. ಸಂಕೇತಾರ್ಥಗಳಾಚೆ ಯೋಚಿಸಿದರೂ ಕತ್ತಲಲ್ಲಿ ಇದ್ದು ನಾವು ಸಾಧಿಸುವುದೇನು? ಬೆಳಕು ದೇಹದ ಬೆಳವಣಿಗೆಯಿಂದ ಹಿಡಿದು ಪ್ರತಿಯೊಂದಕ್ಕೂ ಅಗತ್ಯವಿದೆ. ಇಷ್ಟಕ್ಕೂ ಹುಳು – ಕೀಟಗಳು ಕೂಡಾ ಬೆಳಕನ್ನರಸಿ ಬರುತ್ತವೆ. ರೆಕ್ಕೆ ಸುಟ್ಟರೂ ಚಿಟ್ಟೆ ದೀಪದ ಸುತ್ತಲೇ ಸುತ್ತುತ್ತದೆ ಅಲ್ಲವೆ? ಹೀಗಿರುವಾಗ, ನಾವು ಬೌದ್ಧಿಕವಾಗಿ ವಿಕಸನಗೊಂಡ ಮನುಷ್ಯರು ಬೆಳಕನ್ನರಸಿ ನಡೆಯಬಾರದೆ?
ಕೊನೆಯದಾಗಿ ‘ಮೃತ್ಯೋರ್ಮಾ ಅಮೃತಂಗಮಯ’. ಇಲ್ಲಿ ಸಾವಿನಿಂದ ಬದುಕಿನೆಡೆಗೆ ಎಂದು ಹೇಳಿಲ್ಲ. ಅಥವಾ ಹುಟ್ಟಿನೆಡೆಗೆ ಎಂದು ಕೂಡಾ ಹೇಳಿಲ್ಲ. ಉಳಿದೆರಡು ಸಾಲುಗಳಲ್ಲಿ ವಿರುದ್ಧಾರ್ಥಕ ಪದಗಳ ಬಳಕೆಯಿದೆ. ಸತ್ – ಅಸತ್, ತಮಸ್ – ಜ್ಯೋತಿ ಹೀಗೆ. ಆದರೆ ಕೊನೆಯ ಸಾಲಿನಲ್ಲಿ “ಸಾವಿನಿಂದ ಸಾವಿಲ್ಲದಿರುವುದರ ಕಡೆಗೆ” ಎಂದು ಹೇಳಲಾಗಿದೆ. ಸಾಮಾನ್ಯವಾಗಿ ನಾವು ಸಾವಿಗೆ ಹುಟ್ಟು ಅಥವಾ ಬದುಕನ್ನುವಿರುದ್ಧ ಪದವಾಗಿ ಬಳಸುತ್ತೇವೆ. ಈ ಶ್ಲೋಕದ ಸಾಲು ಅದನ್ನು ತಪ್ಪೆಂದು ಸಾರುತ್ತದೆ. ಸಾವಿನ ವಿರೋಧಾರ್ಥಕ ಪದ ಸಾವಿಲ್ಲದಿರುವುದು. ಮೃತ್ಯುವಿನ ವಿರುದ್ಧ ಪದ ಅಮೃತತ್ವ. ಏಕೆಂದರೆ ಹುಟ್ಟು ಮತ್ತು ಬದುಕುಗಳು ನಮ್ಮನ್ನು ಮತ್ತೆ ಸಾವಿನತ್ತಲೇ ಕರೆತರುತ್ತವೆ. ಆದರೆ ಅಮೃತತ್ವ ನಮ್ಮನ್ನು ಹುಟ್ಟಿನಿಂದಲೂ ಹೊರತಂದು ಮುಕ್ತಗೊಳಿಸಿಬಿಡುತ್ತದೆ. ಇಂಥಾ ಅಮೃತತ್ವವನ್ನು ಪಡೆಯುವಲ್ಲಿ ನಮ್ಮ ನಡಿಗೆ ಇರಲಿ, ಅದಕ್ಕಾಗಿ ನಮಗೆ ಮಾರ್ಗದರ್ಶನ ಮಾಡಿ – ಎಂದು ಗುರುಹಿರಿಯಲ್ಲಿ ವಿನಂತಿ ಮಾಡುತ್ತದೆ ಬೃಹದಾರಣ್ಯಕ ಉಪನಿಷತ್ತಿನ ಈ ಸಾಲು.