ಸೈತಾನ ಕಂಡರೆ, ದೇವರೂ ಕಾಣುವನು : ಶಮ್ಸ್

“ಸೈತಾನ ನಮ್ಮೊಳಗೇ ಇದ್ದಾನೆ. ಅವನನ್ನು ಹುಡುಕಿಕೊಳ್ಳಲು ನಮಗೆ ಸಾಧ್ಯವಾದರೆ, ನಾವು ನಮ್ಮೊಳಗಿನ ದೇವರನ್ನೂ ಹುಡುಕಿಕೊಳ್ಳಬಲ್ಲೆವು” ಅನ್ನುತ್ತಾನೆ ಸೂಫಿ ಶಮ್ಸ್ ತಬ್ರೀಜಿ .

shams t

ನಾವು ನಮ್ಮೆಲ್ಲ ಕೆಡುಕುಗಳಿಗೆ ಇನ್ಯಾರನ್ನೋ ಹೊಣೆಯಾಗಿಸಲು ಹೆಣಗುತ್ತೇವೆ. ವಾಸ್ತವವಾಗಿ ನಮ್ಮ ನಮ್ಮ ಕೆಡುಕಿಗೆ, ನಮ್ಮ ದುಷ್ಟತನಕ್ಕೆ ನಾವೇ ಕಾರಣ. ನಮ್ಮ ದಾರಿ ತಪ್ಪಿಸುವ ಸೈತಾನ  ಹೊರಗೆಲ್ಲೋ ಇಲ್ಲ. ಅವನನ್ನು ಮತ್ತೊಬ್ಬರೊಳಗೆ ಹುಡುಕುತ್ತಿದ್ದರೆ ಯಾವತ್ತೂ ಸಿಗಲಾರ. ಸೈತಾನ ಇರುವುದು ನಮ್ಮೊಳಗೇನೇ. ನಮ್ಮೊಳಗಿನ ಕೆಟ್ಟ ಆಲೋಚನೆಗಳಲ್ಲಿ ಆತ ನೆಲೆಸಿರೋದು. ನಮ್ಮನ್ನು ಪಾಪ ಮಾಡುವಂತೆ ಪ್ರೇರೇಪಿಸೋದು ಈ ಸೈತಾನನೇ ಹೊರತು ಮತ್ತಿನ್ಯಾರೋ ಅಲ್ಲ.

ತಬ್ರೀಜ್’ನಲ್ಲಿ ನೆಲೆಸಿದ್ದ ಸೂಫಿ ಸಂತ ಶಮ್ಸ್ ಹೇಳುತ್ತಾನೆ, “ನಿಮ್ಮೊಳಗೆಯೇ ಇದ್ದುಕೊಂಡು ಪಾಪಕಾರ್ಯಗಳಿಗೆ ಪ್ರಚೋದನೆ ನೀಡುವ ದನಿಯೇ ಸೈತಾನ. ಈ ಸೈತಾನನನ್ನು ನೀವು ಕಂಡುಕೊಳ್ಳಲು ಸಾಧ್ಯವಾದರೆ, ನಿಮ್ಮೊಳಗಿನ ದೇವರನ್ನೂ ನೀವು ಕಂಡುಕೊಳ್ಳಬಲ್ಲಿರಿ” ಎಂದು. 

ನಮ್ಮ ಕೆಡುಕಿಗೆಲ್ಲಾ ನಾವೇ ಕಾರಣ ಎಂಬ ಅರಿವು ಮೂಡುತ್ತಲೇ, ನಮ್ಮ ಒಳಿತಿಗೂ ನಾವೇ ಕಾರಣ ಅನ್ನುವ ಜ್ಞಾನೋದಯವೂ ಉಂಟಾಗುತ್ತದೆ. ಪ್ರಯತ್ನವೇ ಪರಮಾತ್ಮನಾಗಿರುವುದರಿಂದ, ನಮ್ಮೊಳಗಿನ ಒಳಿತನ್ನು ಪ್ರಯತ್ನದ ಮೂಲಕ ವ್ಯಕ್ತಿತ್ವದಲ್ಲಿ ಪ್ರಕಟಗೊಳಿಸಿಕೊಳ್ಳುವಾಗ ಪರಮಾತ್ಮನೂ ಪ್ರಕಟವಾಗುತ್ತಾನೆ. 

ನಮ್ಮ ನಮ್ಮ ಸೈತಾನರನ್ನೂ ಪರಮಾತ್ಮರನ್ನೂ ಕಂಡುಕೊಳ್ಳುವ ಮನಸ್ಸು ನಾವು ಮಾಡಿಕೊಳ್ಳಬೇಕಷ್ಟೆ. 

Leave a Reply