ಮನಸ್ಸು ಮತ್ತು ಬುದ್ಧಿ ; ನಮ್ಮೊಳಗಿನ ಅಂತರ್ಯುದ್ಧ…

ಮನಸ್ಸಿನ ಮಾತು ಎಂಬುದು ಎಂದಿಗೂ ಇರುವುದಿಲ್ಲ. ನಮ್ಮ ಮೆದುಳೇ ನಮ್ಮ ಮನಸ್ಸು. ಇದನ್ನು ನಾವು ಮೊದಲು ಅರಿಯಬೇಕು ~ ಪ್ರಣವ ಚೈತನ್ಯ  | ಕಲಿಕೆಯ ಟಿಪ್ಪಣಿಗಳು

ಪ್ರತಿಯೊಬ್ಬರಿಗೂ ಯಾವುದಾದರೂ ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಎರಡು ರೀತಿಯ ಆಲೋಚನೆಗಳು ಬಂದೇ ಬರುತ್ತವೆ. ಒಂದು ಒಳ್ಳೆಯ ಯೋಚನೆ, ಇನ್ನೊಂದು ಕೆಟ್ಟ ಯೋಚನೆ. ನಮ್ಮೊಳಗೆ ಒಮ್ಮೊಮ್ಮೆ ನಮ್ಮದೇ ಇನ್ನೊಂದು ದ್ವನಿ ಮೂಡುತ್ತದೆ. ಎಲ್ಲರಿಗೂ ಈ ಅನುಭವವಾಗಿರುತ್ತದೆ. ಅದು ಇಂತಹದನ್ನು ಮಾಡಬೇಡ, ಈ ಕೆಲಸ ಮಾಡಲು ಬಹಳ ಕಷ್ಟ ಎಂದು ನಮಗೆ ಹೇಳುತ್ತದೆ. ಅದನ್ನು ನಾವು ಮನಸ್ಸಿನ ಮಾತು, ಮನಸ್ಸು ಹೇಳುವುದನ್ನು ಕೇಳಬೇಕು, ಮನಸ್ಸಿಗೆ ಬಂದಂತೆ ಮಾಡಬೇಕು ಎಂದು ಅಂದುಕೊಳ್ಳುತ್ತೇವೆ.

ಆದರೆ ಅದು ಮನಸ್ಸಿನ ಮಾತು ಅಲ್ಲ, ಮನಸ್ಸಿನ ಮಾತು ಎಂಬುದು ಎಂದಿಗೂ ಇರುವುದಿಲ್ಲ. ನಮ್ಮ ಮೆದುಳೇ ನಮ್ಮ ಮನಸ್ಸು. ಇದನ್ನು ನಾವು ಮೊದಲು ಅರಿಯಬೇಕು.

ಒಬ್ಬ ಮನುಷ್ಯ ಯಶಸ್ಸಿನ  ಒಂದು ದೊಡ್ಡ ಪರ್ವತವನ್ನು ಏರಬೇಕು ಎಂದುಕೊಂಡರೆ ಬಹಳ ಕಷ್ಟಗಳನ್ನು ಅನುಭವಿಸುತ್ತಾನೆ. ಅಂತಹ ಕಷ್ಟಗಳಲ್ಲಿ ಈ ಮನಸ್ಸು ಹಾಗು ಬುದ್ಧಿ ಎನ್ನುವ ಎರಡು ತರಹದ ಯೋಚನೆಗಳನ್ನು ಮೀರುವುದೂ ಸೇರಿದೆ. ಬುದ್ಧಿ ನಮ್ಮ ತಲೆಗೆ ಕೊಡುವ ಉಪಾಯದ ತದ್ವಿರುದ್ದವಾಗಿ ಮನಸ್ಸು ಇನ್ನೊಂದು ಉಪಾಯವನ್ನು ಕೊಡುತ್ತದೆ. ಇದು ಮನುಷ್ಯನಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡುತ್ತದೆ.

ನಾವು ಒಳ್ಳೆಯದೇನಾದರೂ ಮಾಡಬೇಕೆಂದುಕೊಂಡರೆ ನಮ್ಮ ಬುದ್ಧಿ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡುತ್ತದೆ. ಆದರೆ ನಾವು ಮನಸ್ಸಿನದೆಂದು ಭಾವಿಸುವ ಆ ಇನ್ನೊಂದು ಮಾತು ನಮ್ಮೊಳಗೆ ಶುರುವಾದರೆ; ಇದನ್ನು ಏಕೆ ಮಾಡಬೇಕು, ಏಕೆ ಕಲಿಯಬೇಕು, ಇದು ಬಹಳ ಕಷ್ಟ, ಇದರಿಂದ ಬಹಳ ಸುಸ್ತಾಗುತ್ತದೆ, ಏಕೆ ಮನೆಯಲ್ಲೆ ಹಾಯಾಗಿ ಮಲಗಬಾರದು, ಏಕೆ ಸ್ನೇಹಿತರ ಜೊತೆ ಆಟವಾಡಬಾರದು, ಈ ಕೆಲಸವನ್ನು ಮುಂದೆ ಯಾವಾಗಾದರೂ ಮಾಡಬಹುದು, ಈ ವಿಷಯವನ್ನು ಎಂದಾದರೂ ಕಲಿಯಬಹುದು ಅನ್ನಿಸಲು ಶುರುವಾಗುತ್ತದೆ. ಆದರೆ ಅದು ಮನಸ್ಸಿನ ಮಾತಲ್ಲ. ನಮ್ಮದೇ ಬುದ್ಧಿಯ ಇನ್ನೊಂದು ಆಲೋಚನೆಯಷ್ಟೇ.

ಎಲ್ಲಾ ಮನುಷ್ಯರಲ್ಲೂ ಒಳ್ಳೆಯ ಬುದ್ಧಿ, ಕೆಟ್ಟ ಬುದ್ಧಿ ಇದ್ದೇ ಇರುತ್ತದೆ. ಈ ಕೆಟ್ಟ ಬುದ್ಧಿಯು ಸೋಂಬೇರಿತನದ ರೂಪದಲ್ಲಿ ಬಂದು ಅದು ಮಾಡಬೇಡ ಇದನ್ನು ಮಾಡಬೇಡ ಅನ್ನುತ್ತದೆ. ಆಗ ನಾವು ಅದರ ಕಡೆಗೆ ಹೆಚ್ಚು ಆಕರ್ಷಿಕರಾಗುತ್ತೇವೆ. ಏಕೆಂದರೆ ಅದು ಸುಲಭದ ಕೆಲಸ. ಏನನ್ನೂ ಮಾಡದೆ ಮನೆಯಲ್ಲಿ ಮಲಗುವುದು ಸುಲಭ. ಸ್ನೇಹಿತರ ಜೊತೆ ಮೋಜು ಮಾಡುವುದು ಸುಲಭ. ವಿದ್ಯೆ ಕಲಿಯದೆ ಇರುವುದು ಸುಲಭ. ಆದರೆ ಮುಂದೊಂದು ದಿನ ಇದರಿಂದ ನಮ್ಮ ಜೀವನ ಹಾಳಾಗುವುದು ಖಚಿತ.

ಇದರಿಂದ ತಪ್ಪಿಸಿಕೊಳ್ಳಲು ನಮ್ಮ ದೇಹದೊಳಗಿರುವ ಕೆಟ್ಟ ಬುದ್ಧಿಯನ್ನು ಕಟ್ಟಿಹಾಕಬೇಕು. ಅದು ನಮ್ಮ ಛಲದಿಂದ ಮಾತ್ರ ಸಾಧ್ಯ. ನಾವು ಏನಾದರೂ ಕಲಿಯಬೇಕಾದಾಗ, ಅಥವಾ ಏನಾದರೂ ಕೆಲಸ ಮಾಡಬೇಕಾದರೆ, ಎಂತಹ ಸಂದರ್ಭ ಬಂದರೂ ಅದನ್ನು ಮಾಡದೆ ಇರುವುದಾಗಲೀ ಅರ್ಧಕ್ಕೆ ನಿಲ್ಲಿಸುವುದಾಗಲೀ ಎಂದಿಗೂ ಮಾಡಬಾರದು. ಹೇಗಾದರೂ ಸರಿ, ಪೂರ್ತಿ ಮಾಡಲೇಬೇಕು. ನಮಗೆ ಆ ಕೆಲಸ ಮಾಡುತ್ತ ಎಷ್ಟೇ ಕೆಟ್ಟ ಯೋಚನೆ ಬಂದರೂ ಸೋಂಬೇರಿತನ ಬಂದರೂ ನಾವು ಅದನ್ನು ಮಣಿಸಬೇಕು.

ಇದು ಬಹಳ ಕಷ್ಟದ ವಿಷಯವೇನಲ್ಲ. ಛಲ ಮತ್ತು ಸರಿಯಾದ ವಿಷಯದ ಕಡೆ ಏಕಾಗ್ರತೆಯೊಂದ್ದಿದ್ದರೆ ಸಾಕು, ನಾವು ಏನು ಬೇಕಾದರೂ ಸಾಧಿಸಬಲ್ಲೆವು.

ಹೀಗಾಗಿ ನಮ್ಮೊಳಗಿನ ಕೆಟ್ಟ ಬುದ್ಧಿಯನ್ನು ಮನಸ್ಸಿನ ಮಾತು ಎಂದು ಅಪಾರ್ಥ ಮಾಡಿಕೊಳ್ಳದೆ ಅದರ ಜೊತೆ ಹೋರಾಡಿ ಕಟ್ಟಿಹಾಕಬೇಕು. ಇದು ನಮ್ಮೊಳಗೆ ಆಗುವ ಯುದ್ಧ; ಇದು ಬೇರೆಯವರಿಗೆ ಕಾಣುವುದಿಲ್ಲ. ನಾವು ಕೆಟ್ಟ ಬುದ್ಧಿಯನ್ನು ಕಟ್ಟಿಹಾಕಿದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ.

Leave a Reply