ಫ್ರಾನ್ಸ್ ನ ಸಂತ ಗುರ್ಜೀಫ್ ಹೇಳಿದ ದೃಷ್ಟಾಂತ ಕಥೆ : Tea time story

ಒಂದು ಊರಿನಲ್ಲಿ ಒಬ್ಬ ಮಾಂತ್ರಿಕನಿದ್ದ. ವೃತ್ತಿಯಿಂದ ಅವನೊಬ್ಬ ಕುರಿ ಕಾಯುವವ. ಅವನ ಹಟ್ಟಿಯಲ್ಲಿ ನೂರಾರು ಕುರಿಗಳಿದ್ದವು. ಆ ಮಾಂತ್ರಿಕ ದೊಡ್ಡ ಜುಗ್ಗ. ಅವನಿಗೆ ಕೆಲಸದವರಿಗೆ ಸಂಬಳ ಕೊಡಲು ಇಷ್ಟವಿರಲಿಲ್ಲ. ಅದಕ್ಕೇ ಅವನು ಯಾವ ಕಾವಲುಗಾರರನ್ನೂ ಕೆಲಸಕ್ಕೆ ಇಟ್ಟು ಕೊಂಡಿರಲಿಲ್ಲ. ಆದರೆ ಅವನಿಗೆ ಕುರಿಗಳನ್ನು ತೋಳಗಳು ತಿಂದು ಬಿಟ್ಟರೆ ಏನು ಮಾಡೋದು ಎನ್ನುವ ಚಿಂತೆ ಶುರುವಾಯಿತು.

ಮಾಂತ್ರಿಕ ಒಂದು ಉಪಾಯ ಮಾಡಿದ. ಒಂದೊಂದೇ ಕುರಿಯನ್ನು ಕರೆಸಿ ಅವುಗಳ ಮೇಲೆ ಸಮ್ಮೋಹಿನಿ ವಿದ್ಯೆ ಪ್ರಯೋಗ ಮಾಡಿದ. ಪ್ರತಿಯೊಂದು ಕುರಿಗೂ ನೀನು ಹುಲಿ, ನೀನು ಸಿಂಹ, ನೀನು ತೋಳ, ನೀನು ಚಿರತೆ ಎಂದು ಹಿಪ್ನಾಟೈಸ್ ಮಾಡಿದ. ನಿಮ್ಮನ್ನು ಯಾರೂ ಕೊಲ್ಲಲಾರರು, ನೀವು ಯಾರಿಗೂ ಹೆದರಬಾರದು, ಮಂದೆಯಿಂದ ತಪ್ಪಿಸಿಕೊಂಡು ಹೋಗಬಾರದು ಎಂದು ನಂಬಿಸಿದ.

ಮಾಂತ್ರಿಕ ಸಮ್ಮೋಹಿನಿ ವಿದ್ಯೆ ಪ್ರಯೋಗ ಮಾಡಿದ್ದರಿಂದ ಆ ಕುರಿಗಳೆಲ್ಲ ತಮ್ಮನ್ನು ಅವ ಹೇಳಿದಂತೇ ನಂಬಿಕೊಂಡು ವ್ಯವಹರಿಸತೊಡಗಿದವು.

ಪ್ರತಿ ದಿನ ಮಾಂತ್ರಿಕ ಕೆಲವು ಕುರಿಗಳನ್ನು ಕತ್ತರಿಸುತ್ತಿದ್ದ. ಆದರೆ ಉಳಿದ ಕುರಿಗಳು ತಾವು ಹುಲಿ, ಸಿಂಹ, ತೋಳ, ಚಿರತೆಯೆಂದೂ; ತಾವು ಕುರಿಯಲ್ಲವಾದ್ದರಿಂದ ಮಾಂತ್ರಿಕ ತಮ್ಮನ್ನು ಕೊಲ್ಲಲಾರ ಎಂದೂ ನಂಬಿಕೊಂಡಿದ್ದವು.

ಪ್ರತೀಬಾರಿ ಮಾಂತ್ರಿಕ ಕುರಿಗಳನ್ನು ಕೊಂದಾಗ ಉಳಿದ ಕುರಿಗಳು ತಮಗೆ ಆ ಪರಿಸ್ಥಿತಿ ಬರುವುದೇ ಇಲ್ಲ ಎಂದು ಯಾವುದೇ ಹೆದರಿಕೆ ಇಲ್ಲದೇ ನಿರಾಳವಾಗಿದ್ದವು.

ಒಂದೊಂದೇ ಕುರಿಗಳನ್ನು ಕೊಲ್ಲುತ್ತಾ, ಕೊನೆಗೊಂದು ದಿನ ಮಾಂತ್ರಿಕ ಎಲ್ಲ ಕುರಿಗಳನ್ನೂ ಕೊಂದುಹಾಕಿ ಬಿಟ್ಟ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ) 

Leave a Reply