ಬದುಕನ್ನು ಉನ್ನತಸ್ತರಕ್ಕೆ ಕೊಂಡೊಯ್ಯುವ ಲಲಿತಾ ಸಹಸ್ರ ನಾಮವೆಂಬ ಶಕ್ತಿ ಸಂಪುಟ

ಶ್ರೀ ಲಲಿತಾ ಸಹಸ್ರನಾಮವು ‘ಸ್ತುತಿ’ ವರ್ಗಕ್ಕೆ ಸೇರಿದ ಸಾಹಿತ್ಯ. ಜಗನ್ಮಾತೆ ಶ್ರಿ ಲಲಿತೆಯನ್ನು ಅದು ಸೊಗಸಾಗಿ ಪ್ರೀತಿ ತುಂಬಿ ಕೊಂಡಾಡುತ್ತದೆ. ಅತಿ ಪ್ರಭಾವಶಾಲಿಯಾದ ಈ ನಾಮ ಪಾರಾಯಣವೇ ಲೌಕಿಕವಾದ ಎಲ್ಲವನ್ನು ಕೊಡುವುದರ ಜೊತೆ ಪರಬ್ರಹ್ಮ ಸಖ್ಯವನ್ನು ನೀಡುತ್ತದೆ. ಬಾಹ್ಯ ಪೂಜೆ ಮತ್ತು ಅಂತರ್ಪೂಜೆಗಳಿಗೆ ಹೊಂದಿ ಕೊಳ್ಳುವಂತೆ ಈ ಸಹಸ್ರನಾಮವನ್ನು ರಚಿಸಲಾಗಿದೆ. ಶ್ರೀ ಚಕ್ರ ಮತ್ತು ದೀಪ ಪೂಜೆಗೆ ಈ ಸಹಸ್ರನಾಮವನ್ನು ಬಳಸಿ ಕೊಳ್ಳಬಹುದು. ಅಂತರಂಗದ ಧ್ಯಾನಕ್ಕೂ ಈ ಸಹಸ್ರನಾಮವನ್ನು ಬಳಸ ಬಹುದಾಗಿದೆ ~ ಡಾ.ಗೋಪಾಲ ಕೃಷ್ಣ ಕೊಳ್ತಾಯ.ಎ.ಜಿ.

ಲಲಿತಾ ಸಹಸ್ರ ನಾಮವು ಶ್ರೀ ಮಾತೆಯ ಅತ್ಯಂತ ಪವಿತ್ರ ಸ್ತೋತ್ರಗಳಲ್ಲಿ ಒಂದು. ರಾಜ ರಾಜೇಶ್ವರೀ, ತ್ರಿಪುರಸುಂದರೀ, ಲಲಿತಾ ಭಟ್ಟಾರಿಕೆ ಎಂಬಿತ್ಯಾದಿ ಹೆಸರುಗಳಲ್ಲಿ ಕರೆಯಲ್ಪಡುತ್ತಿರುವ ಆ ಜಗನ್ಮಾತೆಯ ನಾಮ ಸಾಹಸ್ರ ಆಕೆಯ ಭಕ್ತರಿಗೆ ಪರಮ ಪ್ರಿಯವಾದದ್ದು. ವiಹಾಮಾತೆಯನ್ನು ಮಿಕ್ಕಂತೆ ಉಳಿದ ದೇವತೆಗಳು ಭೋಗ ಅಥವಾ ಮೋಕ್ಷ ಇವುಗಳಲ್ಲಿ ಯಾವುದಾದರೂ ಒಂದನ್ನು ಭಕ್ತರಿಗೆ ನೀಡಿದರೆ ಆ ಮಹಾತಾಯಿ ಭೋಗ ಮತ್ತು ಮೋಕ್ಷ ಎರಡನ್ನೂ ಭಕ್ತರಿಗೆ ನೀಡುತ್ತಾಳೆ ಎಂಬುದು ನಂಬಿಕೆ. “ಶ್ರೀ ಸುಂದರೀ ಸೇವನ ತತ್ಪರಾಣಾಂ ಭೋಗಶ್ಚ ಮೋಕ್ಷಶ್ಚ ಕರಸ್ಥ ಏವ…..” ಎನ್ನುವುದು ಉಪಾಸಕರ ದೃಢ ವಿಶ್ವಾಸ. ಶ್ರೀ ವಿದ್ಯೆಯ ಸಾಂಪ್ರದಾಯಿಕ ಉಪದೇಶವಿಲ್ಲದವರೂ ಈ ಸ್ತೋತ್ರವನ್ನು ಪಾರಾಯಣ ಮಾಡುವುದರಿಂದ ಪಾವನರಾಗುತ್ತಾರೆ ಎನ್ನುವುದು ನಿಸ್ಸಂಶಯ. “ಜಪ್ತ್ವಾ ಪಂಚದಶಾಕ್ಷರೀಂ…” ಪಂಚದಶಾಕ್ಷರಿಯನ್ನು ಜಪ ಮಾಡಿದ ಮೇಲೆ ಈ ಸಹಸ್ರ ನಾಮಗಳನ್ನು ಪಾರಾಯಣ ಮಾಡ ಬೇಕೆಂಬ ಆದೇಶವಿದ್ದರೂ ನಾಮಗಳ ಅರ್ಥಗಳನ್ನು ತಿಳಿಯದೇ, ಯಾವುದೇ ಸಾಂಪ್ರದಾಯಿಕ ದೀಕ್ಷೆ ಇಲ್ಲದೇ, ಭಕ್ತಿ ಪೂರ್ವಕವಾಗಿ ಈ ಸ್ತೋತ್ರ ಪಠಿಸಿದವರು ಬಯಸಿದ್ದನ್ನು ಪಡೆದಿದ್ದಕ್ಕೆ ಮತ್ತು ಅಪಾರವಾದ ಮನಶ್ಶಾಂತಿ ಗಳಿಸಿದ್ದಕ್ಕೆ ಅನೇಕಾನೇಕ ಉದಾಹರಣೆಗಳಿವೆ.

ದೇವರ ಕಲ್ಪನೆ ಲಿಂಗಾತೀತವಾದದ್ದು. ದೇವರನ್ನು ಶಿಸ್ತುಬದ್ಧನಾದ ತಂದೆಯಂತೆ ಭಾವಿಸುವುದಕ್ಕಿಂತ ಮಮತಾಮಯಿಯಾದ ತಾಯಿಯಾಗಿ ಭಾವಿಸುವುದು ಸುಲಭ. ಆದುದರಿಂದಲೇ ದೇವರನ್ನು ತ್ರಿಪುರ ಸುಂದರಿಯಾದ ಕರುಣಾಮಯಿಯಾದ ತಾಯಿಯಾಗಿ ಭಾವಿಸುವುದು. ಶ್ರೀಮಾತಾ ಎಂದೇ ಪ್ರಾರಂಭಿಸುವ ಸಹಸ್ರ ನಾಮ ಲಲಿತಾಂಬಿಕಾ ಎಂದು ಕೊನೆಗೊಳ್ಳುತ್ತದೆ. ಈ ಸಹಸ್ರ ನಾಮದಲ್ಲಿ ತಾಯಿಯ ಪಾರವಿಲ್ಲದ ಕರುಣೆ ಸುಂದರವಾಗಿ ಬಣ್ಣಿಸಲ್ಪಟ್ಟಿದೆ. ತಾಯಿ ಮಗು ‘ಅಮ್ಮಾ’ ಎಂದು ಕರೆಯುವುದರ ಒಳಗೇ ಅದರ ಅಗತ್ಯಗಳನ್ನು ಮನಗಂಡು ಪೂರೈಸುತ್ತಾಳೆ. ಅವಳ ಕೃಪೆ ನವiಗೆ ಬೇಕಾಗಿದ್ದಕ್ಕಿಂತ ಹೆಚ್ಚನ್ನು ನೀಡುತ್ತದೆ. ( ಫಲಮಪಿ ಚ ವಾಂಛಾಸಮಧಿಕಂ) ಆದಿ ಶಂಕರರು ತಮ್ಮ ಸೌಂದರ್ಯ ಲಹರಿಯಲ್ಲಿ ಹೇಳುವಂತೆ “ಭವಾನಿ ತ್ವಂ ದಾಸೇ ಮಯಿ ವಿತರ ದೃಷ್ಟಿಂ ಸಕರುಣಾಂ…… ನಾನು ನಿನ್ನ ಆಳು ಕರುಣೆಯಿಂದ ನನ್ನನ್ನು ನೋಡು ಎನ್ನಲುದ್ಯುಕ್ತವಾಗಿ “ಭವಾನಿ ತ್ವಂ’ ಎನ್ನುವ ಎರಡು ಪದ ಹೇಳುವುದರೊಳಗೆ, “ವಿಶಿಷ್ಠ ಅರ್ಥನೀಡುವ “ಭವಾನಿತ್ವಂ” ಎಂದೆ ಪರಿಭಾವಿಸಿ ಅಪಾರವಾದದ್ದನ್ನು ನೀಡುತ್ತಾಳೆ.

ಶ್ರೀ ಲಲಿತಾ ಸಹಸ್ರನಾಮವು ‘ಸ್ತುತಿ’ ವರ್ಗಕ್ಕೆ ಸೇರಿದ ಸಾಹಿತ್ಯ. ಜಗನ್ಮಾತೆ ಶ್ರಿ ಲಲಿತೆಯನ್ನು ಅದು ಸೊಗಸಾಗಿ ಪ್ರೀತಿ ತುಂಬಿ ಕೊಂಡಾಡುತ್ತದೆ. ಅತಿ ಪ್ರಭಾವಶಾಲಿಯಾದ ಈ ನಾಮ ಪಾರಾಯಣವೇ ಲೌಕಿಕವಾದ ಎಲ್ಲವನ್ನು ಕೊಡುವುದರ ಜೊತೆ ಪರಬ್ರಹ್ಮ ಸಖ್ಯವನ್ನು ನೀಡುತ್ತದೆ. ಬಾಹ್ಯ ಪೂಜೆ ಮತ್ತು ಅಂತರ್ಪೂಜೆಗಳಿಗೆ ಹೊಂದಿ ಕೊಳ್ಳುವಂತೆ ಈ ಸಹಸ್ರನಾಮವನ್ನು ರಚಿಸಲಾಗಿದೆ. ಶ್ರೀ ಚಕ್ರ ಮತ್ತು ದೀಪ ಪೂಜೆಗೆ ಈ ಸಹಸ್ರನಾಮವನ್ನು ಬಳಸಿ ಕೊಳ್ಳಬಹುದು. ಅಂತರಂಗದ ಧ್ಯಾನಕ್ಕೂ ಈ ಸಹಸ್ರನಾಮವನ್ನು ಬಳಸ ಬಹುದಾಗಿದೆ. ಬಯಸುವವನ ಬಯಕೆಗನುಗುಣವಾಗಿ ಸಕಾರ ಅಥವಾ ನಿರಾಕಾರ ಪೂಜೆಯನ್ನು ಆರಿಸಿ ಕೊಳ್ಳಬಹುದು.
ವ್ಯಾಸ ಪ್ರಣೀತವಾದ ಹದಿನೆಂಟು ಪುರಾಣಗಳಲ್ಲಿ ಒಂದಾದ ಬ್ರಹ್ಮಪುರಾಣದ ಉಪಸಂಹಾರ ಪಾದದಲ್ಲಿ ಕಾಣುವ ಲಲಿತೋಪಾಖ್ಯಾನದ ಒಂದು ಭಾಗ ಈ ಸಹಸ್ರನಾಮ. ಒಮ್ಮೆ ದೇವಿ ಲಲಿತಾಂಬಿಕೆ ವಾಸಿನಿ ಕಾಮೇಶ್ವರಿ ಮುಂತಾದ ರಹಸ್ಯ ಯೋಗಿನಿಯರ ನೇತೃತ್ವದಲ್ಲಿ, ಎಂಟು ವಾಗ್ದೇವಿಯರಲ್ಲಿ ಶ್ರೀ ಚಕ್ರ ಪೂಜೆಗೆ ಅನುಕೂಲವಾಗುವಂತೆ ತನ್ನನ್ನು ಒಂದು ಸಾವಿರ ಅರ್ಥಪೂರ್ಣ ನಾಮಗಳಿಂದ ಕೀರ್ತಿಸುವಂತೆ ತಿಳಿಸುತ್ತಾಳೆ. ಶ್ರೀ ಮಾತೆಯನ್ನು ಬಿಟ್ಟರೆ ಇನ್ನಾರು ಅವಳ ಅನಾದ್ಯನಂತ ಮಹಿಮೆಯನ್ನು ಬಲ್ಲವರು ಆದ್ದರಿಂದ ಅವಳ ಪ್ರೇರಣೆಯಿಂದಲೇ ಈ ನಾಮಾವಳಿ ರಚಿತವಾಗಿ ದೇವಸಭೆಯಲ್ಲಿ ತ್ರಿಮೂರ್ತಿಗಳು ಮತ್ತು ಅವರ ಶಕ್ತಿ ಭಾಗಗಳೆದುರು ಹಾಡಲ್ಪಡುತ್ತದೆ.

ಶ್ರೀ ದೇವಿಗೆ ಸ್ಥೂಲ, ಸೂಕ್ಷ್ಮ, ಮತ್ತು ಪರಾ ಎನ್ನುವ ಮೂರು ರೂಪಗಳನ್ನು ಕಲ್ಪಿಸುತ್ತೇವೆ. ಪ್ರತಿಮೆ ಪ್ರತೀಕಗಳಲ್ಲಿ ಸ್ಥೂಲವನ್ನು ಕಲ್ಪಿಸಿದರೆ, ಯಂತ್ರ ಮಂತ್ರಗಳಲ್ಲಿ ಸೂಕ್ಷ್ಮವನ್ನು ಮತ್ತು ಇಂದ್ರಿಯಾತೀತವಾದ ‘ಚಿತ್’ ಅಥವಾ ‘ಸಂವಿತ್’ ಉಪಾಸಕ ಹೊಂದುವ ಶ್ರೇಷ್ಠ ಭಾವವನ್ನು “ಪರಾ” ಎಂದು ಗುರುತಿಸುತ್ತೇವೆ. ಲಲಿತಾ ಸಹಸ್ರನಾಮ ಈ ಎಲ್ಲ ಹಂತದ ಅನುಭವಗಳನ್ನು ,ಅದನ್ನು ಮೀರಿದ ತುರೀಯವಾದ ಪರಮಾನಂದವನ್ನು ಕೊಡಲು ಸಮರ್ಥವಾಗಿದೆ.

“ದಿವ್’ ಎನ್ನುವ ಧಾತು ಬೆಳಕನ್ನೂ ,ಆಟವನ್ನೂ ಸೂಚಿಸುತ್ತದೆ. ಲಲಿತೆಯ ದಿವ್ಯ ಸಹಸ್ರ ನಾಮದ ಒಂದೊಂದು ನಾಮಗಳು ಶಕ್ತಿ ಸಂಪುಟಗಳು. ಮಾತೆಯ ಒಂದೊಂದು ಹೆಸರೂ ಅಪಾರ ಶಕ್ತಿಯನ್ನು ಹೊರಸೂಸುತ್ತವೆ. ಅವು ನಮ್ಮಲ್ಲಿರುವ ಅಜ್ಞಾನವನ್ನು ಕಳೆದು, ವಾಸನೆಗಳನ್ನು ಕಳೆದು, ಮೇಲೆತ್ತಲು ಸಹಾಯ ಮಾಡುತ್ತವೆ. ಈಡೀ ವಿಶ್ವವೇ ಅವಳ ಲೀಲೆಗೆ ಮೈದಾನ. ಅವಳ ಲೀಲೆಗಳನ್ನು ಅರಿಯಲು ಸಹಸ್ರ ನಾಮ ಪಠಣ ಒಂದು ದಾರಿ.

ನಾಮರಹಸ್ಯಗಳನ್ನು ತಿಳಿಸುವ ಒಂದು ವ್ಯಾಖ್ಯಾನ ಮಾತ್ರ ಉಪಲಬ್ದವಿದೆ. ಅದು ಭಾಸುರಾನಂದನಾಥ ಎನ್ನುವ
ದೀಕ್ಷಾ ನಾಮವುಳ್ಳ ಭಾಸ್ಕರಮಖಿಗಳ ಸೌಭಾಗ್ಯ ಭಾಸ್ಕರ. ಮಹಾವಿಷ್ಣುವಿನ ಅವತಾರವಾದ ಹಯಗ್ರೀವನಿಂದ ನ್ಯಾಸ, ಜಪ,ಹೋಮ, ಶ್ರೀ ಚಕ್ರ ಮತ್ತು ಶ್ರೀಮಾತೆಗಿರುವ ಸಂಬಂಧ ಇವುಗಳನ್ನು ತಿಳಿದು ಕೊಂಡ ಬ್ರಹ್ಮರ್ಷಿ ಅಗಸ್ತ್ಯರ ವಿನಯ ಪೂರ್ವಕ ಪ್ರಾರ್ಥನೆಗೆ ಒಲಿದು ಹಯಗ್ರೀವ ಪ್ರಸನ್ನತೆಯಿಂದ ಬೋಧಿಸಿದ ಮಹಾಮಂತ್ರವಿದು. ಇಲ್ಲಿರುವ ನಾಮಗಳು ಒಂದು ಸಾವಿರ ಮಾತ್ರವೇ ಆದರೂ ಒಂದೊಂದು ನಾಮವೂ ಅವಳ ಸಾವಿರ ಸಾವಿರ ಗುಣಗಳನ್ನು ಕೀರ್ತಿಸಲು ಶಕ್ತವಾಗಿವೆ. ಒಂದೊಂದು ನಾಮವನ್ನು ಆಳವಾಗಿ ಧ್ಯಾನಿಸಿದಾಗಲೂ ತಾಯಿಯ ಇಂದ್ರಿಯಾತೀತ ಶಕ್ತಿಯ ಆಳವಾದ ಅರಿವು ನಮಗಾಗುತ್ತದೆ.

ಶ್ರೀ ಚಕ್ರವನ್ನು ಪೂಜಿಸಿ, ಪಂಚದಶಾಕ್ಷರಿ ಮಂತ್ರವನ್ನು ಜಪಿಸಿ ನಂತರ ಸಹಸ್ರನಾಮ ಪಾರಾಯಣ ಮಾಡುವುದು ಸಾಂಪ್ರದಾಯಿಕ ಕ್ರಮ. ಪ್ರತಿ ನಾಮಕ್ಕೂ ಹೂವೊಂದನ್ನು ಅರ್ಪಿಸುವ ಪರಿಪಾಠವಿದೆ. ಪ್ರತಿ ನಾಮದ ಪೂರ್ವದಲ್ಲೂ ಓಂಕಾರ ಸೇರಿಸಿ ನಾಮಕ್ಕೆ ಚತುರ್ಥಿ ವಿಭಕ್ತಿಯ ಪ್ರತ್ಯಯ ಸೇರಿಸಿ ನಂತರದಲ್ಲಿ ನಮಃ ಎಂದು ನಮಸ್ಕಾರಗಳನ್ನು ಸೇರಿಸುವ ರೂಢಿ ಬೆಳೆದು ಬಂದಿದೆ. ಕೆಲವರು ಪ್ರತಿ ನಾಲ್ಕನೆ ಹೆಸರಿನ ನಂತರ ನಮಸ್ಕಾರವನ್ನು ಸೇರಿಸುತ್ತಾರೆ. ಶ್ರೀ ಚಕ್ರದ ಬದಲಿಗೆ ದೀಪವನ್ನು ಇಟ್ಟು ಅರ್ಚಿಸುವ ಪದ್ಧತಿಯೂ ಇದೆ. ಪೂಜೆ ಜಪಗಳನ್ನು ಮಾಡದೇ ಇದ್ದರೂ, ಈ ಸಹಸ್ರ ನಾಮಗಳ ವಾಚನವೇ ತಾಯಿಗೆ ಅತ್ಯಂತ ಪ್ರಿಯವಾದದ್ದು ಎನ್ನುವ ಮತವೂ ಇದೆ.
“ಮಾಮರ್ಚಯತು ವಾ ಮಾ ವಿದ್ಯಾಂ ಜಪತು ವಾ ನ ವಾ /ಕೀರ್ತಯೇನ್ನಾಮ ಸಾಹಸ್ರಮಿದಂ ಮತ್ಪ್ರೀತಯೇ ಸದಾ
ಮತ್ಪ್ರೀತ್ಯಾತ್ ಸಕಲಾನ್ ಕಾಮಾನ್ ಲಭ್ಯತೇ ನಾತ್ರ ಸಂಶಯಃ//
ಸಾಂಪ್ರದಾಯಿಕವಾಗಿ ಈ ಸ್ತೋತ್ರವನ್ನು ವಾಚಿಸುವ ಅರ್ಹತೆ ಪಡೆಯಲು ಅತ್ಯಂತ ಕಟ್ಟುನಿಟ್ಟಾದ ನಿಯಮಗಳು ಹೇಳಲ್ಪಟ್ಟಿವೆ. ಈ ಇಡೀ ಸ್ತೋತ್ರಮಾಲೆಯನ್ನೇ ಒಂದು ಮಾಲಾ ಮಂತ್ರವಾಗಿ ಪರಿಗಣಿಸುತ್ತಾರೆ. ಇಡೀ ಮಾಲಾ ಮಂತ್ರಕ್ಕೆ ಋಷಿ, ಛಂದಸ್ಸು,ಧ್ಯಾನ, ನ್ಯಾಸಗಳು ಹೇಳಲ್ಪಟ್ಟಿದೆ. ತ್ರ್ಯಕ್ಷರಿ, ನವಾಕ್ಷರಿ, ಪಂಚದಶಾಕ್ಷರಿ, ಷೋಡಶಾಕ್ಷರಿ, ಮುಂತಾದ ಶ್ರೀ ವಿದ್ಯಾ ಮಂತ್ರಗಳನ್ನು ದೀಕ್ಷಾ ಬದ್ಧವಾಗಿ ಪಡೆದವರು ಮಾತ್ರ ಈ ದಿವ್ಯ ನಾಮ ಸಾಹಸ್ರವನ್ನು ವಾಚಿಸಲು ಅರ್ಹರು ಎನ್ನುವ ಮತವೊಂದಿದೆಯಾದರೂ ತಾಯಿಯ ಬಗೆಗಿನ ಅನನ್ಯ ಭಕ್ತಿಯೇ ಬೇಕಾದ ನಿಜವಾದ ಅರ್ಹತೆ ಅದೇ ಉಳಿದ ಎಲ್ಲ ಅರ್ಹತೆಗಳನ್ನು ತಂದು ಕೊಡುತ್ತದೆ ಎನ್ನುವುದು ಶಾಕ್ತ ಪಂಥದ ಸಶಕ್ತ ವಿಶ್ವಾಸ. ಶ್ರೀ ವಿದ್ಯೆ ಅಥವಾ ಶ್ರೀ ಚಕ್ರದಲ್ಲಿ ಪ್ರವೇಶವಿಲ್ಲದವರೂ ಅನನ್ಯ ಭಕ್ತಿಯಿಂದ ಈ ಸಹಸ್ರನಾಮ ಪಠನೆ ಮಾಡುವುದರಿಂದ ವಾಂಛಿತ ಫಲಗಳನ್ನು ಮನಶ್ಶಾಂತಿಯನ್ನು ಪಡೆದಿದ್ದಾರೆ ಎನ್ನುವುದು ರೂಢಿಯಿಂದ ಸಿದ್ಧವಾಗಿದೆ.

ಬೇರೆ ಬೇರೆ ದೇವತೆಗಳನ್ನು ಕುರಿತ ಅನೇಕ ಸಹಸ್ರನಾಮಗಳು ಉಪಲಬ್ದವಿದೆ. ಲಿಂಗ ಪುರಾಣವೊಂದರಲ್ಲೇ ಶಿವನನ್ನು ಕುರಿತ ಮೂರು ಸಹಸ್ರನಾಮಗಳಿವೆ. ವಿಷ್ಣುವನ್ನು ಕುರಿತು ಎರಡು ಮತ್ತುಳಿದ ದೇವತೆಗಳನ್ನು ಕುರಿತು ಕೊನೆಯ ಪಕ್ಷ ಒಂದೊಂದು ಸಹಸ್ರನಾಮಗಳು ಲಭ್ಯವಾಗುತ್ತವೆ. ಈ ಎಲ್ಲ ಸ್ತೋತ್ರಾವಳಿಗಳಲ್ಲಿ ಕೊನೆಯ ಪಕ್ಷ ಒಂದೊಂದು ನಾಮ ಪುನರಾವರ್ತನೆಯಾಗುವುದನ್ನು ನಾವು ಕಾಣುತ್ತೇವೆ. ಅದಕ್ಕೆ ಬೇರೆ ಅರ್ಥ ಕೊಟ್ಟು ಅದು ಬೇರೆಯೇ ಎನ್ನುವ ಪ್ರಯತ್ನವನ್ನು ಮಾಡುತ್ತೇವೆ. ಆದರೆ ಲಲಿತಾ ಸಹಸ್ರನಾಮದಲ್ಲಿ ಯಾವ ಹೆಸರುಗಳು ಪುನರಾವರ್ತನೆ ಆಗುವುದಿಲ್ಲ ಎನ್ನುವುದು ಗಮನಾರ್ಹ. ತು, ಹಿ, ಏವ, ಚ, ವೈ, ಎನ್ನುವ ಅಕ್ಷರಗಳನ್ನು ಅನುಷ್ಟುಪ್ಪಿನ ಪ್ರಮಾಣ ಕಾಪಾಡಲು ಬಳಸಿ ಕೊಳ್ಳುವುದು ಸಾಮಾನ್ಯ. ಲಲಿತಾ ಸಹಸ್ರನಾಮ ಈ ಪ್ರಯೋಗದಿಂದ ಮುಕ್ತ.

ಸಮಾಸಪದಗಳ ಸುಂದರ ಸ್ರೋತ ಇಲ್ಲಿ ಜಲಧಾರೆಯಂತೆ ಹರಿಯುವುದನ್ನು ಕಾಣುತ್ತೇವೆ. ಇಲ್ಲಿನ ಭಾಷೆಯ ಹರಿವು ಒಂದು ದಿವ್ಯಾನುಭವ ನೀಡುತ್ತದೆ. ಈ ನಾಮಾವಳಿ ಶ್ರೀ ಲಲಿತೆಯ ಸ್ಥೂಲ, ಸೂಕ್ಷ್ಮ, ಪರಾ ರೂಪಗಳ ವಿವರಣೆಯನ್ನು, ಪೌರಾಣಿಕ ಹಿನ್ನೆಲೆಯನ್ನು, ತಾಯಿಯ ವಿವಿಧ ಅವತಾರಗಳು ಮತ್ತು ಲೀಲೆಗಳ ವರ್ಣನೆಯನ್ನು, ಶ್ರೀ ಚಕ್ರ ಮತ್ತು ಶ್ರೀ ವಿದ್ಯಾ ರಹಸ್ಯಗಳನ್ನು, ಶ್ರೀ ಯಂತ್ರ, ಶ್ರೀ ಮಂತ್ರ, ಶ್ರೀ ತಂತ್ರಗಳ ವಿವರಗಳನ್ನೂ, ಒಳಗೊಂಡಿದೆ. ಭಾಸ್ಕರ ರಾಯರ ವ್ಯಾಖ್ಯಾನ ಇವುಗಳನ್ನು ವಿವರಿಸುತ್ತದೆ. ಶಾಕ್ತರಲ್ಲಿ ಅನೇಕ ಪಂಥಗಳು ಅನೇಕ ಆಚಾರಗಳು. ಕುಲಾಚಾರ ಸಮಯಾಚಾರ ಮುಂತಾದ ಎಲ್ಲಾ ಮಾರ್ಗಿಗಳಿಗೂ ಈ ಸಹಸ್ರನಾಮ ಸಹಜವಾಗಿಯೇ ಪೂಜ್ಯವಾಗಿದೆ.

ಕೌಲ, ಕ್ಷಪಣ, ಕಾಪಾಲಿಕರು ಬಾಹ್ಯ ಪೂಜೆಯನ್ನು ನಂಬಿದವರಾಗಿದ್ದರೆ ಸಮಯಾಚಾರಿಗಳು ಅಂತಃ ಪೂಜೆಗಳನ್ನು ನಂಬಿದವರು. ಕೌಲರು ಪಂಚ “ಮ”ಕಾರ ಪೂಜೆಯಲ್ಲಿ ನಂಬಿಕೆಯಿಟ್ಟಿದ್ದು ಮಧ್ಯ, ಮಾಂಸ, ಮುದ್ರಾ, ಮಿಥುನ, ಮತ್ಸ್ಯ…. ಇವುಗಳನ್ನು ಪೂಜಾ ಪರಿಕರವಾಗಿ ಬಳಸುತ್ತಾರೆ. ಇದು ಪೂಜೆಯನ್ನು ವಾಮಾಚಾರದ ಪೂಜೆಯನ್ನಾಗಿ ಮಾಡುತ್ತದೆ. ಆಧುನಿಕ ವ್ಯಾಖ್ಯಾನಕಾರರು ಈ ಪದಗಳಿಗೆ ಬೇರೆಯೇ ಸಾತ್ವಿಕ ಅರ್ಥ ಕೊಡಲು ಯತ್ನಿಸಿದ್ದರೂ, ಯಾವ ಯಾವ ಸಂಕಲ್ಪಕ್ಕೆ ಯಾವ ಯಾವ ಪ್ರಾಣಿಯ ಮಾಂಸ ಎನ್ನುವುದೂ ಶಾಸ್ತ್ರದಲ್ಲಿ ಉಕ್ತವಾದುದನ್ನು ವಿವರಿಸಲು ಸೋಲುತ್ತಾರೆ. ತಾಮಸ ಗುಣವುಳ್ಳ ಜನರಿರುವಂತೆ ತಾಮಸೀ ಪೂಜಾಕಲ್ಪಗಳೂ ಇದ್ದವು ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಸಾತ್ವಿಕ, ರಾಜಸಿಕ, ತಾಮಸಿಕ ಮನೋಭಾವದವರಿಗೂ ಈ ಸಹಸ್ರನಾಮ ಸಮಾನವಾಗಿ ಪೂಜ್ಯವಾದದ್ದು ಎನ್ನುವುದು ಈ ಸಹಸ್ರನಾಮದ ಹೆಗ್ಗಳಿಕೆ. ಸ್ವಭಾವದಲ್ಲಿ ಭಿನ್ನರಾದ ಮಕ್ಕಳಿದ್ದರೂ ಎಲ್ಲ ಮಕ್ಕಳಿಗೂ ತಾಯಿಯ ಬಗೆಗಿನ ಅಕ್ಕರೆ ಒಂದೇ. ಸಮಯಾಚಾರದಲ್ಲಿ ಅಂತಃಪೂಜೆ. ಇದು ಅತ್ಯಂತ ಸಾತ್ವಿಕ. ಅಂತರಂಗದಲ್ಲೇ ತಾಯಿಯನ್ನು ಕಲ್ಪಿಸಿ ಪೂಜಿಸಲು ಈ ಸಹಸ್ರನಾಮ ಸಶಕ್ತ ಸಾಧನ.

“ಅಣಿಮಾದಿಭಿರಾವೃತಾಂ ಮಯೂಖೈರಹವಿತ್ಯೇವ ವಿಭಾವಯೇ ಭವಾನೀಂ “ ಆರಾಧಕ ತನ್ನಲ್ಲೇ ಆ ತಾಯಿಯನ್ನು ಕಲ್ಪಿಸಿ ಕೊಂಡು ಅಘ್ರ್ಯ ಪಾದ್ಯ ಧೂಪ ದೀಪಾದಿಗಳನ್ನು ಅಂತರಂಗದಲ್ಲೇ ಕಲ್ಪಿಸಿ ಅವಳನ್ನು ಪೂಜಿಸುತ್ತಾನೆ. ಈ ರೀತಿಯ ಭಾವ ಪೂಜೆ ಅತಿ ಎತ್ತರದ್ದಾಗಿದ್ದು ಪ್ರತಿಮೆ ಮತ್ತು ಪ್ರತೀಕ ಪೂಜೆಗಳು ಭಾವಪೂಜೆಯೆಡೆಗೆ ನಮ್ಮನ್ನು ಕೊಂಡೊಯ್ಯುವ ಸಾಧನ.

ನಮಸ್ಕಾರಸ್ತದಾಶೀಚ್ಚ ಸಿದ್ಧಾಂತೋಕ್ತಿ ಪರಾಕ್ರಮಃ/ ವಿಭೂತಿ ಪ್ರಾರ್ಥನಾ ಚೇತಿ ಷಡ್ವಿಧಂ ಸ್ತೋತ್ರ ಲಕ್ಷಣಂ//
ಸ್ತೋತ್ರಕ್ಕೆ , ನಮಸ್ಕಾರ, ಆಶಯನಿರೂಪಣೆ, ಸಿದ್ಧಾಂತ, ಶೌರ್ಯವರ್ಣನೆ, ಮಹಿಮೆಗಳು, ಪ್ರಾರ್ಥನೆ,ಎನ್ನುವ ಆರು ಲಕ್ಷಣಗಳನ್ನು ಹೇಳಲಾಗಿದೆ. ಲಲಿತಾ ಸಹಸ್ರನಾಮ ಈ ಆರೂ ಲಕ್ಷಣಗಳನ್ನು ಮೈಗೂಡಿ ಕೊಂಡ ಸಬಲ ಸ್ತೋತ್ರ. ಸಹಸ್ರ ನಾಮದಲ್ಲಿ ಬರುವ ನಾಮಗಳನ್ನು ಈ ಆರು ವಿಧವಾಗಿ ವಿಂಗಡಿಸಿ ತೋರಬಹುದು.

ಲಲಿತಾ ಸಹಸ್ರನಾಮ ಸಿದ್ಧಾಂತಗಳನ್ನು ನಿರೂಪಿಸುವ ಸಬಲ ಸ್ತೋತ್ರ ಎನ್ನುವುದು ಅದರ ಶ್ರೇಷ್ಠತೆಗಳಲ್ಲೊಂದು.ಈ ಸಿದ್ಧಾಂತೋಕ್ತಿಗಳ ಚಿಂತನೆ ಮತ್ತು ಮಂಥನಗಳು ನಮ್ಮ ಬದುಕನ್ನು ಉನ್ನತಸ್ತರಕ್ಕೆ ಕೊಂಡೊಯ್ಯತ್ತವೆ.
ಲಲಿತಾ ಮಾತೆ ಅನಘ್ರ್ಯ ಪದದಾಯಿನಿ, ಅವಳು ಮುಕ್ತಿದಾ…… ಮುಕ್ತಿ ನಿಲಯೆ. ನಿರ್ವಾಣ ಸುಖ ಕೊಡುವ ನಿರಾಕಾರಳಾದ ಆ ಲಲಿತಾಮಾತೆ “ತತ್” ಎನ್ನುವ ಪದದ ಲಕ್ಷ್ಯಾರ್ಥವಾದ ಪರಬ್ರಹ್ಮ ಸ್ವರೂಪಿಣಿ. ಬದುಕಿನ ಪ್ರಥಮ ಸತ್ಯವಾದ (ಸತ್ಯಂ) ಶಿವನೊಡನೆ ಒಂದಾದ್ದರಿಂದ ಶಿವೆಯಾಗಿ ( ಶಿವಂ,ಭದ್ರಂ, ಮಂಗಳಂ) ಲೋಕಾತೀತ ಸೌಂದರ್ಯದಿಂದ ಕಂಗೊಳಿಸುವುದರಿಂದ, ತ್ರಿಪುರ ಸುಂದರಿಯಾಗಿ (ಸುಂದರಂ) ಹೀಗೆ ಸತ್ಯಂ, ಶಿವಂ,ಸುಂದರಂ, ಎನ್ನುವ ಮೌಲ್ಯ ತ್ರಯಗಳಿಗೆ ಏಕೈಕ ಸಂಕೇತವಾಗಿ ಜಗನ್ಮಾತೆಯಾಗಿ ನಮ್ಮನ್ನು ಪಾಲಿಸುವ ಲಲಿತೆಯನ್ನು ಅತ್ಯಂತ ಕಾವ್ಯಮಯವಾದ ಸ್ತೋತ್ರ ವಿಶೇಷವಾದ ಸಹಸ್ರನಾಮ ಪಾರಾಯಣದಿಂದ ಸಂತಸ ಪಡಿಸಲು ಭಕ್ತ ವೃಂದ ಪ್ರಯತ್ನಿಸುತ್ತದೆ.

(ಆಧಾರ ನೀಡಿದ ಪರಂಪರೆಯಲ್ಲಿರುವ ಆಚಾರ್ಯರುಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ…)

Leave a Reply