ಸಂತರು ಧರಿಸುವ ಕಾವಿಯ ಬಣ್ಣವು ಉದಯಿಸುವ ಸೂರ್ಯನ ಬಣ್ಣವನ್ನು ಹೋಲಿಸುತ್ತದೆ. ಇದರ ಅರ್ಥ ಆ ಸಂತರು ತಮ್ಮ ಮನಸ್ಸು ಹಾಗು ದೇಹಗಳ ಆಸೆಯನ್ನು ತ್ಯಾಗ ಮಾಡಿ ತಮ್ಮ ಆತ್ಮದಲ್ಲಿ ಕುದಿಯುತ್ತಿರುಯ ಶಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು ~ ಸ್ವಾ.ರಾಮತೀರ್ಥ |ಕನ್ನಡ ಸಾರಾಂಶ : ಪ್ರಣವ ಚೈತನ್ಯ, ಕಲಿಕೆಯ ಟಿಪ್ಪಣಿಗಳು
ಸೂರ್ಯನೆಂದರೆ ಶಕ್ತಿ. ಈ ಪ್ರಪಂಚದಲ್ಲಿ ಎಲ್ಲಾ ಜೀವಿಗಳೂ ಬದುಕುತ್ತಿರುವುದೇ ಸೂರ್ಯನಿಂದ. ಸೂರ್ಯುನಿಲ್ಲದಿದ್ದರೆ ನಾವು ಬದುಕಲು ಸಾಧ್ಯವೇ ಇಲ್ಲ. ಹೊರಗೆ ಹೇಗೋ ಹಾಗೆಯೇ ನಮ್ಮೊಳಗೂ ಒಂದು ಸೂರ್ಯನಂತಹದೆ ಶಕ್ತಿ ಇರುತ್ತದೆ. ಆ ಶಕ್ತಿಯಿಲ್ಲದೆ ನಾವು ಬದುಕುವುದಕ್ಕೆ ಆಗುವುದಿಲ್ಲ ಎಂದು ಸಂತ ರಾಮತೀರ್ಥರು ತಮ್ಮ ಪ್ರವಚನಗಳಲ್ಲಿ ಹೇಳುತ್ತಾರೆ.
ಈ ವಿಶ್ವಕ್ಕೆ ಸೂರ್ಯನು ಏನೇನು ಮಾಡುತ್ತಾನೆ? ಸೂರ್ಯನು ಇಡೀ ಸೌರಮಂಡಲಕ್ಕೆ ಬೆಳಕನ್ನು ನೀಡುತ್ತಾನೆ. ಅದಲ್ಲದೆ ನಾವು ಉಸಿರಾಡುವ ಗಾಳಿಯು ಮರ, ಗಿಡಗಳಿಂದ ನಮಗೆ ದೊರೆಯುವುದು. ಗಿಡಮರಗಳಿಗೆ ಸೂರ್ಯನಿಲ್ಲದೆ ಉಸಿರಾಡುವ ಗಾಳಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಸೂರ್ಯನೆಂದರೆ ಒಂದು ಜ್ವಾಲಾಮುಖಿಯ ವೃತ್ತ. ನಮ್ಮೊಳಗೂ ಸೂರ್ಯನಂತಹದೆ ಒಂದು ದೈತ್ಯ ಶಕ್ತಿ ಇರುತ್ತದೆ. ಅದೇ ಆ ಪರಮಾತ್ಮನು ನೆಲೆಸಿರುವ ಆತ್ಮ. ಈ ಶಕ್ತಿಯು ಅತ್ಯಂತ ಶ್ರೇಷ್ಟ ಹಾಗು ಅತ್ಯಂತ ಶುದ್ದವಾಗಿರುತ್ತದೆ.
ಈ ಶುದ್ದತೆಯ ಶಕ್ತಿಯನ್ನು ನಾವು ಪರ್ವತಗಳಿಂದ ಇನ್ನೇನು ಹುಟ್ಟಿ ಹರಿಯುತ್ತಿರುವ ಗಂಗೆಗೆ ಹೋಲಿಸಬಹುದು. ಆ ನೀರಿನಷ್ಟು ಶುಧ್ದವಾಗಿ ನಮ್ಮ ಆತ್ಮವಿರುತ್ತದೆ. ಆದರೆ ಆ ನೀರಿನ ತರಹ ನಮ್ಮ ಆತ್ಮ ಚಂಚಲವಾಗುವುದಿಲ್ಲ, ಅದು ಸೂರ್ಯನ ಹಾಗೆ ನಮ್ಮ ದೇಹದಾಳದಲ್ಲಿ ಇರುತ್ತದೆ. ಇದನ್ನು ಎಷ್ಟೊ ಜನರಿಗೆ ಕಂಡುಕೊಳ್ಳಲು ಸಾಧ್ಯವೆ ಆಗುವುದಿಲ್ಲ. ಕೆಲವರು ಕಂಡುಕೊಂಡರೂ ಅವರಿಗೆ ಅದು ಅರ್ಥವಾಗುವುದಿಲ್ಲ. ಕೆಲವರು ಮಾತ್ರ ತಮ್ಮ ಆತ್ಮಶಕ್ತಿಯನ್ನು ಕಂಡುಕೊಂಡು ಅದು ಎಷ್ಟು ಪವಿತ್ರವಾದದು ಎಂದು ತಿಳಿದುಕೊಳ್ಳುತ್ತಾರೆ. ನಮ್ಮ ಸಂತರು ಕೇಸರಿ – ಕಾವಿಗಳನ್ನು ದರಿಸುತ್ತಾರೆ. ಬೇರೆ ಧರ್ಮದವರು ಬೇರೆ ಬಣ್ಣವನ್ನು ದರಿಸುತ್ತಾರೆ. ಕೇಸರಿ ಬಣ್ಣದಲ್ಲಿ ಒಂದು ವಿಷೇಷತೆ ತುಂಬಿಕೊಂಡಿದೆ. ಸಂತರು ಧರಿಸುವ ಕಾವಿಯ ಬಣ್ಣವು ಉದಯಿಸುವ ಸೂರ್ಯನ ಬಣ್ಣವನ್ನು ಹೋಲಿಸುತ್ತದೆ. ಇದರ ಅರ್ಥ ಆ ಸಂತರು ತಮ್ಮ ಮನಸ್ಸು ಹಾಗು ದೇಹಗಳ ಆಸೆಯನ್ನು ತ್ಯಾಗ ಮಾಡಿ ತಮ್ಮ ಆತ್ಮದಲ್ಲಿ ಕುದಿಯುತ್ತಿರುಯ ಶಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು.
ಬೆಂಕಿ ಎಂದರೆ ಶಕ್ತಿ, ಸೂರ್ಯನೆಂದರೆ ಬೆಂಕಿ. ನಮ್ಮೊಳಗೆ ಸೂರ್ಯನಷ್ಟೆ ಶಕ್ತಿಯುಳ್ಳ ಆ ಪರಮಾತ್ಮನೇ ನೆಲೆಸಿದ್ದಾನೆ. ಹಾಗಾದರೆ ನಮ್ಮಲ್ಲೂ ಸೂರ್ಯನಷ್ಟೆ ಶಕ್ತಿ ಇದೆಯೆ? ಹೌದು, ನಮ್ಮಲ್ಲಿಯು ಆ ಸೂರ್ಯನಷ್ಟು ಶಕ್ತಿ ಇದೆ. ನಮ್ಮೊಳಗೆ ಆ ಸೂರ್ಯನೇ ನೆಲೆಸಿರುತ್ತಾನೆ ಎಂದೇ ಹೇಳಬಹುದು. ಸೂರ್ಯನು ಹೇಗೆ ಸೌರಮಂಡಲಕ್ಕೆ ಬೆಳಕನ್ನು ನೀಡುತ್ತಾನೋ, ಹಾಗೆ ನಾವು ನಮ್ಮೊಳಗಿನ ಸೂರ್ಯನನ್ನು ಕಂಡುಕೊಂಡು ಬೇರೆಯವರಿಗೂ ಅರಿವು ಮಾಡಿಸಬಲ್ಲ ಶಕ್ತಿ ನಮ್ಮೊಳಗೆ ಬಂದರೆ, ನಾವು ಅತ್ಯಂತ ಶ್ರೇಷ್ಟರಾಗುತ್ತೇವೆ. ಏಕೆಂದರೆ ಸೂರ್ಯನಷ್ಟು ಶ್ರೇಷ್ಟ ಮತ್ತೊಂದಿಲ್ಲ. ನಮ್ಮ ಆತ್ಮಕ್ಕಿಂತ ಶ್ರೇಷ್ಟ ಬೇರೊಂದಿಲ್ಲ. ಏಕೆಂದರೆ ಎರಡರಲ್ಲೂ ಆ ಪರಮಾತ್ಮನೇ ನೆಲೆಸಿರುತ್ತಾನೆ.
ಹೀಗಾಗಿ ಎಂದು ನಾವು ನಮ್ಮೊಳಗಿನ ಸೂರ್ಯನನ್ನು ಕಂಡುಕೊಂಡು ಎಚ್ಚೆತ್ತಿಸಿಕೊಳ್ಳುತ್ತೇವೋ, ಎಂದು ನಮ್ಮೊಳಗಿನ ಸೂರ್ಯನು ಕುದಿಯಲು ಶುರು ಮಾಡುತ್ತಾನೋ, ಆಗ ನಾವು ಬುದ್ಧಿವಂತರಾಗುತ್ತೇವೆ, ಶಾಂತಿಪ್ರಿಯರಾಗುತ್ತೇವೆ ಮತ್ತು ಮಹಾನ್ ಜ್ಞಾನಿಗಳಾಗುತ್ತೇವೆ ಎಂದು ರಾಮತೀರ್ಥರು ಹೇಳುತ್ತಾರೆ.