ಬಿ ಸ್ಕೂಲ್‍ಗಳಲ್ಲಿ ಭಗವದ್ಗೀತೆ : ದ ಬೆಸ್ಟ್ ಮ್ಯಾನೇಜ್‍ಮೆಂಟ್ ಬುಕ್

ಐಐಎಮ್ – ಕೋಯಿಕೋಡ್‍ನಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುತ್ತದೆ. ಈಗಾಗಲೇ ಜಪಾನಿನ ಇಪ್ಪತ್ತು ಹಾಗೂ ಸ್ಪೇನಿನ ಇಬ್ಬರು ಸಿಇಓಗಳು ಐಐಎಮ್ – ಕೆ ಗೆ ಭೇಟಿ ಕೊಟ್ಟಿ ಭಗವದ್ಗೀತೆ ಬೋಧನಾ ಕ್ರಮವನ್ನು ಅಭ್ಯಸಿಸಿದ್ದಾರೆ. ಹಾಗೂ ತಮ್ಮ ಸಂಸ್ಥೆಯಲ್ಲಿ ಅದನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಿದ್ದಾರೆ….

‘ದ ಬೆಸ್ಟ್ ಮ್ಯಾನೇಜ್‍ಮೆಂಟ್ ಬುಕ್’ ಎಂದು ಜಾಗತಿಕ ಮನ್ನಣೆ ಪಡೆದಿರುವ ಭಗವದ್ಗೀತೆ ಅನೇಕ ಮ್ಯಾನೇಜ್‍ಮೆಂಟ್ ಕಾಲೇಜುಗಳಲ್ಲಿ ಮುಖ್ಯ ಪಠ್ಯ ವಸ್ಯುಗಳಲ್ಲಿ ಒಂದಾಗಿದೆ. ಬಿ ಸ್ಕೂಲ್‍ಗಳು ವ್ಯವಹಾರ ನಿರ್ವಹಣಾ ಕಲೆಯನ್ನು ವಿದ್ಯಾರ್ಥಿಗಳಿಗೆ ಆಕರ್ಷಕವಾಗಿ ಹಾಗೂ ಸಮರ್ಪಕವಾಗಿ ಮನದಟ್ಟು ಮಾಡಲು ಕೃಷ್ಣ ಬೋಧನಾಶೈಲಿಯ ಮೊರೆ ಹೋಗುತ್ತಾರೆ. ಜಪಾನಿನಲ್ಲಿ ಈ ಪದ್ಧತಿ ಬಹಳ ಜನಪ್ರಿಯವಾಗಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಸೆಟಾನ್ ಹಾಲ್ ಯೂನಿವರ್ಸಿಟಿಯು ತನ್ನೆಲ್ಲ ವಿದ್ಯಾರ್ಥಿಗಳಿಗೂ ಭಗವದ್ಗೀತೆ ಅಧ್ಯಯನವನ್ನು ಕಡ್ಡಾಯ ಮಾಡಿದೆ. ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕಲೆಯನ್ನು ರೂಢಿಸಿಕೊಂಡು, ಉನ್ನತ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಮಾಡುವಲ್ಲಿ ಭಗವದ್ಗೀತೆ ಸಹಕಾರಿಯಾಗುತ್ತದೆ ಎಂಬುದು ಯೂನಿವರ್ಸಿಟಿಯ ಆಡಳಿತ ಮಂದಿಯ ಸ್ಪಷ್ಟ ಅಭಿಪ್ರಾಯ.

ಭಾರತದಲ್ಲಿ ಸಾಧ್ಯವಿರುವ ಎಲ್ಲ ಕ್ಷೇತ್ರಗಳಲ್ಲೂ ನಾಗಾಲೋಟದ ಪ್ರಗತಿ ಕಾಣುತ್ತಿರುವುದು ಭ್ರಷ್ಟಾಚಾರ. ಈ ಕುರಿತು ಆತಂಕಿತರಾದ ಬಿಸ್ನೆಸ್ ಸ್ಕೂಲ್ ಆಡಳಿತ ಮಂಡಳಿಗಳು ತಮ್ಮ ಪ್ರಾಂಶುಪಾಲರಿಗೆಂದೇ ಒಂದು ಕಾರ್ಯಾಗಾರ ಏರ್ಪಡಿಸಿದ್ದವು. ಈ ಕಾರ್ಯಾಗಾರದಲ್ಲಿ ಮಾತನಾಡಿದ ಐಐಎಮ್ – ಕೋಯಿಕೋಡ್‍ನ ನಿರ್ದೇಶಕ ದೇಬಶಿಶ್ ಚಟರ್ಜಿ. ಸದ್ಯಕ್ಕೆ ಈ ನಿಟ್ಟಿನಲ್ಲಿ ಭಗವದ್ಗೀತೆ ಅತ್ಯುತ್ತಮ ಪರಿಹಾರವಾಗಬಲ್ಲದು ಎಂದು ಹೇಳಿದ್ದರು.

“ಯುದ್ಧ ಸದೃಶ ಸಂದರ್ಭಗಳಲ್ಲಿ ಮನಸ್ಸಿನ ಗೊಂದಲವನ್ನು ನಿವಾರಿಸಿಕೊಂಡು ಕರ್ತವ್ಯ ನಡೆಸಲು ಹೇಗೆ ಸನ್ನದ್ಧರಾಗಬೇಕು ಅನ್ನುವುದನ್ನು ಕೃಷ್ಣ ಬಹಳ ಪರಿಣಾಮಕಾರಿಯಾಗಿ ಹೇಳಿದ್ದಾನೆ. ತನ್ನವರೆನ್ನಿಸಿಕೊಂಡ ಜನರೊಂದಿಗೇ ಹೋರಾಡಬೇಕಾದ ಸಂದರ್ಭ ಇಂದಿಗೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದಕ್ಕೆ ಪ್ರಾಮುಖ್ಯ ನೋಡಬೇಕು ಮತ್ತು ಯಾಕಾಗಿ ನೀಡಬೇಕು ಅನ್ನುವುದನ್ನು ಮನದಟ್ಟಾಗುವಂತೆ ವಿವರಿಸಿದ್ದಾನೆ. ಸದ್ಯಕ್ಕೆ ನಮಗೆ ಬೇಕಿರುವುದು ಇಂತಹ ಜಾಣತನದ – ಪ್ರೇರಣಾದಾಯಿ ಚಿಂತನೆಗಳೇ” ಎಂದಿದ್ದರು ಚಟರ್ಜಿ.

ಇದೇ ಸಂದರ್ಭದಲ್ಲಿ ಅವರು ಪ್ರಮುಖ ಚರ್ಚೆಯೊಂದಕ್ಕೆ ಮುನ್ನುಡಿ ಬರೆದರು. ಸುನ್ ಝು ರೂಪಿಸಿದ ಚೀನಾದ ಯುದ್ಧಕಲೆಯನ್ನು ಪೂರ್ವ – ಪಶ್ಚಿಮಗಳೆರಡೂ ಭಾಗಗಳಲ್ಲಿ ವಿವಿಧ ರಾಷ್ಟ್ರಗಳು ಸೇನಾ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಿವೆ. ಹೀಗಿರುವಾಗ ಗೀತೆಯನ್ನೂ ಏಕೆ ಅದೇ ಬಗೆಯಲ್ಲಿ ಅಳವಡಿಸಿಕೊಂಡು ಪ್ರಯೋಜನ ಪಡೆಯಬಾರದು? ಎನ್ನುವ ಪ್ರಶ್ನೆಯನ್ನು ಅವರು ಎತ್ತಿದರು. “ಅಹಮಿಕೆಯನ್ನು ಬಿಟ್ಟುಕೊಡುವುದು, ಸ್ಥಿರವಾಗಿರುವುದು, ಋಣ ಸಂದಾಯ, ಕರ್ತವ್ಯ ಪ್ರಜ್ಞೆ, ಮುಂದಾಳುತ್ವ ಇವೇ ಮೊದಲಾದ ಮೌಲ್ಯಗಳನ್ನು ಭಗವದ್ಗೀತೆಯಿಂದ ಕಲಿಯಬಹುದು. ಇದು ವಿರೋಧಿಗಳೊಂದಿಗೆ ಎಷ್ಟು ಪ್ರಜ್ಞಾವಂತಿಕೆಯಿಂದ ಕಾದಾಡಬೇಕು ಅನ್ನುವುದನ್ನು ಮಾತ್ರವಲ್ಲ, ನಮ್ಮನ್ನು ನಾವು ಎಷ್ಟು ನ್ಯಾಯಯುತವಾಗಿ ದುಡಿಸಿಕೊಳ್ಳಬೇಕೆಂದೂ ಹೇಳಿಕೊಡುತ್ತದೆ. ಇದರ ಬೋಧನೆಗಳನ್ನು ಅಳವಡಿಸಿಕೊಂಡರು ಜೀವನದಲ್ಲಿ ಸೋಲಲು ಸಾಧ್ಯವೇ ಇಲ್ಲ.” ಎಂದೂ ಚಟರ್ಜಿ ಆತ್ಮವಿಶ್ವಾಸದಿಂದ ನುಡಿದಿದ್ದರು.

ಐಐಎಮ್ – ಕೋಯಿಕೋಡ್‍ನಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುತ್ತದೆ. ಈಗಾಗಲೇ ಜಪಾನಿನ ಇಪ್ಪತ್ತು ಹಾಗೂ ಸ್ಪೇನಿನ ಇಬ್ಬರು ಸಿಇಓಗಳು ಐಐಎಮ್ – ಕೆ ಗೆ ಭೇಟಿ ಕೊಟ್ಟಿ ಭಗವದ್ಗೀತೆ ಬೋಧನಾ ಕ್ರಮವನ್ನು ಅಭ್ಯಸಿಸಿದ್ದಾರೆ. ಹಾಗೂ ತಮ್ಮ ಸಂಸ್ಥೆಯಲ್ಲಿ ಅದನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಿದ್ದಾರೆ.
ಕೋಯಿಕೋಡ್ ಐಐಎಮ್‍ನ ಭಗವದ್ಗೀತಾ ಕಮ್ಮಟದಲ್ಲಿ ತಮ್ಮ ಸಚಿವ ಸಹೋದ್ಯೋಗಿಗಳೊಂದಿಗೆ ಪಾಲ್ಗೊಂಡಿದ್ದ ಕಾರ್ಮಿಕ ಸಚಿವ ಶಿಬು ಬೇಬಿ ಜಾನ್, “ಭಗವದ್ಗೀತೆ ಮಾತ್ರವಲ್ಲ, ಇಂದಿನ ಮೌಲ್ಯರಹಿತ ಬದುಕಿಗೆ ಜೀವಂತಿಕೆ ಹಾಗೂ ನೈತಿಕತೆ ತುಂಬಬಲ್ಲ ಇತರ ಶಾಸ್ತ್ರಗ್ರಂಥಗಳ ಬೋಧನೆ – ಅಧ್ಯಯನಗಳೂ ನಡೆಯಲಿ” ಎಂದು ಆಶಿಸಿದ್ದರು. ಕೊನೆಯಲ್ಲಿ, “ಇಂದಿನ ರಾಜಕಾರಣಿಗಳು ಮುಂದಿನ ಚುನಾವಣೆ ಬಗೆಗಷ್ಟೆ ಚಿಂತಿಸುತ್ತಾರೆ, ಮುಂದಿನ ಪೀಳಿಗೆಯ ಬಗೆಗಲ್ಲ ಎಂದು ಐಐಎಮ್‍ನಲ್ಲಿ ಹೇಳಿರುವುದು ನನ್ನ ಮನಸ್ಸಿನಲ್ಲಿ ಉಳಿದುಹೋಗಿದೆ” ಎಂದೂ ಅವರು ಪ್ರಾಮಾಣಿಕವಾಗಿ ಹೇಳಿದ್ದರು.

ಅಧ್ಯಾತ್ಮ, ವ್ಯಕ್ತಿತ್ವ ವಿಕಸನಕ್ಕೆ ಮಾತ್ರವಲ್ಲದೆ, ಭಗವದ್ಗೀತೆ ಲೌಕಿಕ ಶಿಕ್ಷಣಕ್ಕೂ ಬಳಕೆಯಾಗುತ್ತಿರುವುದು ಸೋಜಿಗವಾದರೂ ಸಂತಸದ ವಿಚಾರವೇ ಅಲ್ಲವೆ?

Leave a Reply