ಗುರು ಎಂಬ ಪರಿಕಲ್ಪನೆ ಶಿಷ್ಯನೆಂಬ ಪರಿಕಲ್ಪನೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ….

ಇದು ಮಾಹಿತಿಯ ಕಾಲ. ಗುರುವಿಗೆ ಕಂಪ್ಯೂಟರುಗಳನ್ನು ಪರ್ಯಾಯವೆಂದು ಭಾವಿಸುತ್ತಿರುವ ಕಾಲವಿದು. ಮಾಹಿತಿಯನ್ನು ತಾಂತ್ರಿಕ ಉಪಕರಣಗಳ ಮೂಲಕ ಪರಿಷ್ಕರಿಸುವ ಕ್ರಿಯೆಯಲ್ಲೇ ಜ್ಞಾನವನ್ನು ಕಾಣುತ್ತಿರುವ ಈ ಕಾಲದಲ್ಲಿ ಗುರು ಎಂಬ ಪರಿಕಲ್ಪನೆಯನ್ನು ಮರು ಶೋಧಿಸಬೇಕಿರುವುದು ಹಿಂದೆಂದಿಗಿಂತಂಲೂ ಹೆಚ್ಚು ಅಗತ್ಯ
~ ಅಚಿಂತ್ಯ ಚೈತನ್ಯ | ಇಂದು ಗುರುಪೂರ್ಣಿಮೆ (ಜುಲೈ 16)

ಗುರುವನ್ನು ನೆನಪಿಸಿಕೊಳ್ಳುವ ಕ್ರಿಯೆಯೊಂದು ನಾಗರಿಕತೆಯಷ್ಟೇ ಹಳೆಯದಾದುದು. ‘ವಂಶಋಷಿಭ್ಯೋ ಗುರುಭ್ಯೋ’ ಎಂದು ಪ್ರತೀ ಮುಂಜಾನೆಯೂ ವಂಶಾವಳಿಯಲ್ಲಿರುವ ಗುರುಗಳನ್ನೆಲ್ಲಾ ಸ್ತುತಿಸಲಾಗುತ್ತದೆ. ಬೃಹದಾರಣ್ಯಕೋಪನಿಷತ್ತಿನ ಐದನೇ ಅಧ್ಯಾಯದ ಆರನೇ ಬ್ರಾಹ್ಮಣದಲ್ಲಿ ಪೌತಿಮಾಷಿಯ ಪುತ್ರನಿಂದ ಆರಂಭಗೊಂಡು ಆತ್ರೇಯನವರೆಗೂ ಆತ್ರೇಯನಿಂದ ಆಸುರಿಯವರೆಗೂ ವಿಲೋಮವಾಗಿ ಸಾಗುವ ವಂಶಾವಳಿಯ ವಿವರಗಳಿವೆ.

ಅಂತೆಯೇ ನಾರಾಯಣ, ಪದ್ಮಭವ, ವಸಿಷ್ಠ, ಶಕ್ತಿ, ಪರಾಶರ, ವ್ಯಾಸ, ಗೌಡಪಾದ, ಗೋವಿಂದ, ಶಂಕರ ಮೊದಲಾದ ಆಚಾರ್ಯರಿಂದ ಆರಂಭಿಸಿ ಪ್ರತೀ ಶಿಷ್ಯನ ಗುರುವಿನವರೆಗಿನ ಗುರು ಪರಂಪರೆ ಮುಂದುವರೆಯುತ್ತದೆ.

ಸೆಮಿಟಿಕ್ ಧಾರ್ಮಿಕ ನಂಬಿಕೆಗಳಲ್ಲಿಯೂ ಇದನ್ನು ಕಾಣಬಹುದು. ಯಹೂದ್ಯರು ಮೋಸೇಸ್‌ನಲ್ಲಿ ಆದಿಗುರುವನ್ನು ಕಂಡರೆ ಕ್ರೈಸ್ತರು ಯೇಸು ಕ್ರಿಸ್ತನಲ್ಲಿ ಆದಿ ಗುರುವನ್ನೂ ಇಸ್ಲಾಮಿನ ಅನುಯಾಯಿಗಳು ಪ್ರವಾದಿ ಮುಹಮ್ಮದರಲ್ಲಿಯೂ ಆದಿ ಗುರುವನ್ನು ಕಾಣುತ್ತಾರೆ.
ಇವೆಲ್ಲವೂ ಆಧ್ಯಾತ್ಮಿಕತೆಯ ಸಂದರ್ಭದ ಗುರುಪರಂಪರೆಯ ಉದಾಹರಣೆಗಳು. ಲೌಕಿಕವನ್ನು ಮುಖ್ಯವಾಗಿಟ್ಟುಕೊಂಡ ಚಿಂತನಾ ಕ್ರಮಗಳಲ್ಲಿಯೂ ಗುರುವಿನ ಮಹತ್ವವನ್ನು ಕಾಣಬಹುದು. ಇದಕ್ಕೆ ಅತ್ಯುತ್ತಮವಾದ ಉದಾಹರಣೆ ಬುದ್ಧ. ತನ್ನ ಅರಿವನ್ನು ಹಂಚುವುದಕ್ಕಾಗಿ ಗುರುಧರ್ಮವನ್ನು ಸ್ವೀಕರಿಸಿದ ಮಹಾನ್ ಚೇತನ ಬುದ್ಧ.

ಇದು ಮಾಹಿತಿಯ ಕಾಲ. ಗುರುವಿಗೆ ಕಂಪ್ಯೂಟರುಗಳನ್ನು ಪರ್ಯಾಯವೆಂದು ಭಾವಿಸುತ್ತಿರುವ ಕಾಲವಿದು. ಮಾಹಿತಿಯನ್ನು ತಾಂತ್ರಿಕ ಉಪಕರಣಗಳ ಮೂಲಕ ಪರಿಷ್ಕರಿಸುವ ಕ್ರಿಯೆಯಲ್ಲೇ ಜ್ಞಾನವನ್ನು ಕಾಣುತ್ತಿರುವ ಈ ಕಾಲದಲ್ಲಿ ಗುರು ಎಂಬ ಪರಿಕಲ್ಪನೆಯನ್ನು ಮರು ಶೋಧಿಸಬೇಕಿರುವುದು ಹಿಂದೆಂದಿಗಿಂತಂಲೂ ಹೆಚ್ಚು ಅಗತ್ಯ. ಮಾಹಿತಿ ಎಂಬುದು ನಿರ್ಗುಣಿಯಾದ ವಿವರ ಮಾತ್ರ. ಇದಕ್ಕೆ ಅರ್ಥಬರುವುದು ಈ ಮಾಹಿತಿಯನ್ನು ನಿರ್ದಿಷ್ಟ ಸಂದರ್ಭದಲ್ಲಿ ಇಟ್ಟಾಗ ಮಾತ್ರ. ಆಗಲೂ ಇದಕ್ಕೆ ಪ್ರಾಪ್ತವಾಗುವುದು ಒಂದು ಸಾಂದರ್ಭಿಕ ಅರ್ಥವೇ ಹೊರತು ಅದರ ಆತ್ಯಂತಿಕವಾದ ಪರಿಣಾಮದ ಕುರಿತ ಅರಿವಲ್ಲ. ಈ ಅರಿವಿಗೆ ಗುರುವಿನ ಮಾರ್ಗದರ್ಶನ ಬೇಕು.

ಮಾಹಿತಿಯ ಮಹಾಪೂರದಲ್ಲಿ ತೇಲುತ್ತಿರುವ ನಮಗೆ ಎಲ್ಲದರ ಕುರಿತ ಮಾಹಿತಿಯೂ ನಮಗೆ ಬೇಕಿರುವುದಕ್ಕಿಂತ ಹೆಚ್ಚೇ ಸಿಗುತ್ತಿದೆ. ಆದರೆ ಈ ಮಾಹಿತಿಗಳು ನಮ್ಮನ್ನು ನಿರ್ದಿಷ್ಟ ಗುರಿಯತ್ತ ಕೊಂಡೊಯ್ಯುತ್ತಿಲ್ಲ. ನಮ್ಮ ಕಾಲದ ಸಾಮಾಜಿಕ ವಾಸ್ತವಗಳ ಸಂದರ್ಭಕ್ಕೆ ಅಗತ್ಯವಿರುವ ಯಾವ ಮೌಲ್ಯಗಳನ್ನೂ ಇದು ನಮ್ಮಲ್ಲಿ ಬಿತ್ತುತ್ತಿಲ್ಲ.

ಗುರು ಎಂಬ ಪರಿಕಲ್ಪನೆ ಶಿಷ್ಯನೆಂಬ ಪರಿಕಲ್ಪನೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಒಬ್ಬಾತ ಗುರುವಾಗುವುದು ಮೊದಲ ಶಿಷ್ಯ ಆತನನ್ನು ಗುರುವೆಂಬ ಸ್ವೀಕರಿಸಿದಾಗ ಎಂಬುದನ್ನು ನಾವು ಮರೆಯುವಂತಿಲ್ಲ. ಝೆನ್  ಮತ್ತು ಸೂಫಿ ತಾತ್ವಿಕತೆಗಳಲ್ಲಿ ಗುರು ಶಿಷ್ಯನಿಗಾಗಿಯೂ ಶಿಷ್ಯಗುರುವಿಗಾಗಿ ಹುಡುಕಾಡುವ ಪ್ರಕ್ರಿಯೆಯ ಬಗ್ಗೆ ಹೇಳಲಾಗಿದೆ. ಪರಸ್ಪರ ಹುಡುಕುತ್ತಿರುವ ಇವರು ಸಂಧಿಸಿದಾಗ ಜ್ಞಾನಾರ್ಜನೆಯ ಪ್ರಕ್ರಿಯೆ ಆರಂಭವಾಗುತ್ತದೆ. ಶಿಷ್ಯನ ಗೊಂದಲಗಳು ಪರಿಹಾರವಾಗಿ ಅರಿವು ಸ್ಪಷ್ಟವಾಗುತ್ತಾ ಜ್ಞಾನ ಜನ್ಮ ಪಡೆಯುತ್ತದೆ. ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಗೀತೆಯನ್ನು ಬೋಧಿಸುವ ಕ್ರಿಯೆಯಲ್ಲಿ ಸಂಭವಿಸಿದ್ದು ಇದುವೇ. ಯುದ್ಧದ ಸಂದರ್ಭವನ್ನು ಕೃಷ್ಣ ಅರ್ಜುನನ ಮುಂದಿಟ್ಟು ಅವನನ್ನು ಆಲೋಚಿಸಲು ಪ್ರೇರೇಪಿಸುತ್ತಾನೆ. ಯಥೇಚ್ಛಸಿ  ತಥಾ ಕುರು…

20ನೇ ಶತಮಾನದಲ್ಲಿ ಗುರುವಿನ ಹೊಣೆಗಾರಿಕೆಯನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿದವರಲ್ಲಿ ಶ್ರೀ ನಾರಾಯಣ ಗುರುಗಳು ಬಹಳ ಮುಖ್ಯರು. ಅವರ ದೃಷ್ಟಿಯಲ್ಲಿ ಗುರುವಿನ ಅತಿದೊಡ್ಡ ಜವಾಬ್ದಾರಿಯೆಂದರೆ ಅರಿವನ್ನು ಮರುಶೋಧಿಸಿ ಲೋಕದ ಮುಂದಿಡುವುದು. ಶಿಷ್ಯರು ಆ ಪರಂಪರೆಯನ್ನು ಮುಂದುವರಿಸುವುದು. ಅಂದರೆ ಅರಿವಿನನ್ನು ಮರುಶೋಧಿಸತ್ತಾ ಅದನ್ನು ಕಾಲದ ದೇಶಗಳ ಸಂದರ್ಭದಲ್ಲಿ ಜ್ಞಾನವನ್ನಾಗಿ ಪರಿವರ್ತಿಸುವ ಕ್ರಿಯೆಗೆ ಗುರುವಿನ ಅಗತ್ಯವಿದೆ. ಮಾಹಿತಿ ಕಾಲಬದ್ಧವಾದುದು. ಆದರೆ ಅದನ್ನು ಆಧಾರವಾಗಿಟ್ಟುಕೊಂಡು ಗುರುನೀಡುವ ಒಳನೋಟಗಳಿಗೆ ಕಾಲ ದೇಶಗಳನ್ನು ಮೀರಿದ ಶಾಶ್ವತತೆ ಇರುತ್ತದೆ. ಹೀಗಾಗಿಯೇ ಜಾತಿಯ ಕುರಿತ ಮನುಷ್ಯ ಜಾತಿಯ ಏಕತೆಯ ಕುರಿತ ನಾರಾಯಣ ಗುರುಗಳ ಬೋಧನೆಗಳು ಸಾರ್ವಕಾಲಿಕವಾಗಿ ಅನ್ವಯಿಸಬಲ್ಲ ತತ್ವವಾಗಿದೆ.

ಮಾಹಿತಿಯ ಯುಗದಲ್ಲಿ ವಿಸ್ಮೃತಿಯ ಅಂಚಿಗೆ ಸಾಗುತ್ತಿರುವ ಗುರು ಪರಂಪರೆಯ ಮಹತ್ವವನ್ನು ಈ ದಿನ ನಮಗೆ ಮತ್ತೆ ನೆನಪು ಮಾಡಿಕೊಡುತ್ತಿದೆ. ನಾವೀಗ ನಮ್ಮೊಳಗಿನ ಶಿಷ್ಯನಿಗೂ ಗುರುವಿಗೂ ಮರುಜನ್ಮ ನೀಡಬೇಕಿದೆ.

Leave a Reply