“ಇದು ನಿನ್ನ ದಾರಿ, ಇದು ನಿನ್ನ ಯಾನ. ನಿನ್ನ ಬಾಳಿನ ನಡಿಗೆ ನಿನಗಷ್ಟೇ ಅಧೀನ ” ಅನ್ನುತ್ತಾನೆ ಜಲಾಲುದ್ದೀನ್ ರೂಮಿ ~ ಚೇತನಾ
ಇದು ನಿನ್ನ ದಾರಿ. ಇದು ನಿನ್ನ ಯಾನ. ಮತ್ತೊಬ್ಬರು ನಿನ್ನ ಜೊತೆ ಹೆಜ್ಜೆ ಹಾಕಬಲ್ಲರಷ್ಟೆ. ಹೆಚ್ಚೆಂದರೆ ನಿನ್ನ ದಾರಿಯಲ್ಲಿ ಜೊತೆಯಾಗಿ ನಡೆಯಬಲ್ಲರು. ಆದರೆ ಯಾರೂ ನಿನ್ನ ನಡಿಗೆ ನಡೆಯಲಾರರು. ನಿನ್ನ ಚಲನೆ ನಿನ್ನ ಅಧೀನದಲ್ಲಷ್ಟೆ ಇರುವುದು” ಅನ್ನುತ್ತಾನೆ ಸೂಫಿ ಕವಿ ಜಲಾಲುದ್ದೀನ್ ರೂಮಿ.
ನಮ್ಮ ನಮ್ಮ ಜೀವನದ ಪ್ರಯಾಣವನ್ನು ನಾವಷ್ಟೆ ಮಾಡಲು ಸಾಧ್ಯ. ನಮಗೆ ಕೃತಕ ಆಕ್ಸಿಜನ್ ಸಿಲಿಂಡರ್ ಅಳವಡಿಸಿದರೂ ನಮ್ಮ ದೇಹ ಉಸಿರನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಟ್ಟರಷ್ಟೆ ನಾವು ಉಸಿರಾಟ ನಡೆಸಲು ಸಾಧ್ಯ ಅಲ್ಲವೆ? ಜೀವನ ಕೂಡಾ ಹಾಗೆಯೇ. ಯಾರು ಎಷ್ಟೇ ಸಹಾಯ ಮಾಡಿದರೂ, ಜೊತೆಯಲ್ಲಿ ನಿಂತರೂ, ನಡೆದರೂ ಅಂತಿಮವಾಗಿ ನಮ್ಮ ಜೀವನವನ್ನು ನಾವೇ ಮುನ್ನಡೆಸಬೇಕು. ನಮ್ಮ ಬದುಕಿನ ಆಗುಹೋಗುಗಳ ಹೊಣೆಯನ್ನು ನಾವೇ ಹೊರಬೇಕು ಮತ್ತು ನಮ್ಮನಮ್ಮ ತೀರ್ಮಾನಗಳನ್ನು ನಾವೇ ಕೈಗೊಳ್ಳಬೇಕು. ಆದ್ದರಿಂದ ನಮ್ಮ ಬದುಕಿಗಾಗಿ ಮತ್ತೊಬ್ಬರನ್ನು ಅವಲಂಬಿಸಬಾರದು. ನಮ್ಮ ಪ್ರೇಮ, ವಿಶ್ವಾಸ, ಸಂಬಂಧಗಳು ನಮ್ಮ ಜೀವನದ ನಡಿಗೆಗೆ ಪೂರಕವಾಗಿರಬಲ್ಲವೇ ಹೊರತು ಅವು ಸ್ವಯಂ ನಡಿಗೆಯಾಗಲಾರವು, ನಮ್ಮನಮ್ಮ ಹೆಜ್ಜೆಗಳನ್ನು ನಾವೇ ಎತ್ತಿ ಮುಂದಕ್ಕಿಡಬೇಕು – ಇದು ರೂಮಿಯ ಮಾತಿನ ವಿಸ್ತೃತಾರ್ಥ.