ವಿವೇಕ ಮತ್ತು ತಪಸ್ಸು : ಖಲೀಲ್ ಗಿಬ್ರಾನ್

ಮೂಲ : ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಮ್ಮ ಆತ್ಮವೊಂದು ರಣರಂಗ.
ಅಲ್ಲಿ ಬಹುತೇಕ 
ನಿಮ್ಮ ವಿವೇಕ ಮತ್ತು ನ್ಯಾಯ,
ನಿಮ್ಮ ತಪಸ್ಸು ಮತ್ತು ಬಯಕೆಗಳ ಮೇಲೆ
ಯುದ್ಧ ಸಾರಿರುತ್ತವೆ.

ಈ ಅಂಶಗಳ ನಡುವಿನ
ಅಪಸ್ವರ ಮತ್ತು ವೈರತ್ವಗಳನ್ನು ತೊಡೆದುಹಾಕಿ
ಏಕತೆ ಮತ್ತು ಸೌಹಾರ್ದ ಮೂಡಿಸಲು
ನಾನು ನಿಮ್ಮ ಆತ್ಮದೊಳಗೆ
ಶಾಂತಿ ದೂತನ ಕೆಲಸ ಮಾಡಬೇಕು.

ಈ ಅಂಶಗಳನ್ನು, ನೀವೇ ಪ್ರೀತಿಸದಿದ್ದರೆ
ಸೌಹಾರ್ದ ಮೂಡಿಸುವ ಕೆಲಸದಲ್ಲಿ
ನೀವೇ ಕೈಜೋಡಿಸದಿದ್ದರೆ
ನಾನು ತಾನೇ ಏನು ಮಾಡಲು ಸಾಧ್ಯ?

ವಿವೇಕ ಮತ್ತು ತಪಸ್ಸುಗಳೇ
ನಿಮ್ಮ ಆತ್ಮವನ್ನು ಮುನ್ನಡೆಸುತ್ತಿರುವ ಹಡಗಿನ
ಚುಕ್ಕಾಣಿ ಮತ್ತು ಹಾಯಿ ಪಟಗಳು.

ಅಕಸ್ಮಾತ್, 
ನಿಮ್ಮ ಚುಕ್ಕಾಣಿ ಮತ್ತು ಹಾಯಿಪಟ ಹಾನಿಗೊಳಗಾದರೆ
ನಿಮ್ಮ ನೌಕೆ ಹೊಯ್ದಾಡುವುದು, ದಿಕ್ಕು ತಪ್ಪುವುದು
ಅಥವಾ ನಿಂತಲ್ಲೇ ನಿಂತುಬಿಡುವುದು.

ವಿವೇಕದ ಕೈಯಲ್ಲಿ ಆಡಳಿತ ಕೊಡವುದೆಂದರೆ
ನಮ್ಮನ್ನು ನಾವೇ ಇಕ್ಕಟ್ಟಿಗೆ ನೂಕಿಕೊಂಡಂತೆ,
ಆಗ ನಿರ್ಲಕ್ಷ್ಯಕ್ಕೊಳಗಾಗುವ ತಪಸ್ಸು
ತನ್ನನ್ನು ತಾನೇ ಸುಟ್ಟುಕೊಳ್ಳುವ ಜ್ವಾಲೆಯಾಗುತ್ತದೆ.

ಆದ್ದರಿಂದಲೇ ಆತ್ಮ, ನಿಮ್ಮ ವಿವೇಕವನ್ನು 
ತಪಸ್ಸಿನ ಎತ್ತರಕ್ಕೆ ಏರಿಸಲಿ,
ಅದರ ದನಿಯೂ ಕೇಳಿಸುವಂತಾಗಲಿ.

ಹಾಗೆಯೇ ನಿಮ್ಮ ಆತ್ಮ 
ತಪಸ್ಸನ್ನು ವಿವೇಕದಿಂದ ಮುನ್ನಡೆಸಲಿ.
ಆಗ ತಪಸ್ಸು
ತನ್ನ ಚಿತಾಭಸ್ಮದಿಂದ ಮೇಲೇಳುವ ಫಿನಿಕ್ಸ್ ಹಕ್ಕಿಯಂತೆ
ಪ್ರತಿದಿನ ಹೊಸ ಹುಟ್ಟು ಪಡೆಯಲಿ.

ಇನ್ನು, ನ್ಯಾಯ ಮತ್ತು ಬಯಕೆ,
ಈ ಎರಡನ್ನೂ ಮನೆಯ ಇಬ್ಬರು ಗೌರವಾನ್ವಿತ ಅತಿಥಿಗಳಂತೆ ಕಾಣಿರಿ.

ಖಂಡಿತವಾಗಿ ನೀವು
ಒಬ್ಬ ಅತಿಥಿಯನ್ನು ಇನ್ನೊಬ್ಬನಿಗಿಂತ 
ಹೆಚ್ಚು ಗೌರವಿಸಲು ಬಯಸಲಾರಿರಿ,
ಹಾಗೇನಾದರೂ ಆದಲ್ಲಿ
ಇಬ್ಬರ ಪ್ರೀತಿ, ನಂಬಿಕೆಯನ್ನೂ
ನೀವು ಕಳೆದುಕೊಳ್ಳಬೇಕಾಗುವುದು.

ಬೆಟ್ಟದ ಮೇಲೆ, ಚಿನಾರ್ ಮರದ ನೆರಳಲ್ಲಿ
ಕುಳಿತು
ಕಣ್ಮುಂದೆ ಕಾಣುತ್ತಿರುವ ಹೊಲ, ಹುಲ್ಲುಗಾವಲುಗಳ
ಪ್ರಶಾಂತತೆಯನ್ನೂ, ಸಮಾಧಾನವನ್ನೂ ಅನುಭವಿಸುತ್ತಿರುವಾಗ
ನಿಮ್ಮ ಹೃದಯ, ಮನಸ್ಸಿನಲ್ಲೆ ಅಂದುಕೊಳ್ಳಲಿ

“ ಭಗವಂತ ವಿವೇಕದಲ್ಲಿ ನೆಲೆಸಿದ್ದಾನೆ “

ಭಯಂಕರ ಬಿರುಗಾಳಿ
ಇಡೀ ಅರಣ್ಯವನ್ನೆ ಅಲ್ಲಾಡಿಸುತ್ತಿರುವಾಗ,
ಮಿಂಚು, ಗುಡುಗು
ಆಕಾಶದ ಸಾರ್ವಭೌಮತ್ವವನ್ನು ಸಾರುತ್ತಿರುವಾಗ,
ನಿಮ್ಮ ಹೃದಯ, ಬೆರಗಿನಲ್ಲಿ ಹೇಳಲಿ

“ ಭಗವಂತ ತಪಸ್ಸಿನಲ್ಲಿ ಮಗ್ನನಾಗಿದ್ದಾನೆ”

ನೀವು, ಭಗವಂತನ ವಿಶಾಲ ಸಾಮ್ರಾಜ್ಯದಲ್ಲಿ
ಒಂದು ಉಸಿರಾಗಿರುವುದರಿಂದ,
ಅವನ ಮಹಾ ಅರಣ್ಯದಲ್ಲಿ
ಒಂದು ಎಲೆಯಾಗಿರುವುದರಿಂದ,
ನೀವೂ ಸಹ, ವಿವೇಕದಲ್ಲಿ ನೆಲೆಸಿರಿ ಮತ್ತು
ತಪಸ್ಸಿನಲ್ಲಿ ಒಂದಾಗಿರಿ.

Leave a Reply