ದೇಹಬುದ್ಧಿಯ ತ್ಯಾಗವೇ ಜೀವನ್ಮುಕ್ತರ ಲಕ್ಷಣ…

ದೇಹಬುದ್ಧಿಯ ತ್ಯಾಗ ಜೀವನ್ಮುಕ್ತರ ಪ್ರಮುಖ ಲಕ್ಷಣಗಳಲ್ಲಿ ಒಂದು. ದೇಹಬುದ್ಧಿಯ ತ್ಯಾಗವೆಂದ ಮೇಲೆ ದೇಹಕ್ಕೆ ಸಂಬಂಧಿಸಿದ ಊಟ, ಬಟ್ಟೆ, ವಸತಿ – ಇವುಗಳಲ್ಲಿ ಅನಾಸಕ್ತಿ ಇರುವುದು ಸಹಜವಾಗಿದೆ. ಆಗ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕೆಂಬ ಆಸೆ ಮೂಡುವ ಪ್ರಮೇಯವೇ ಇರುವುದಿಲ್ಲ. ಅವುಗಳನ್ನು ಗಳಿಸಲಿಕ್ಕಾಗಿಯೇ ಕರ್ಮ ನಡೆಸಬೇಕೆಂಬ ಬಯಕೆಯೂ ಉಂಟಾಗುವುದಿಲ್ಲ….

ನಾವೆಲ್ಲರೂ ಶಾಂತಿಯನ್ನು ಅರಸುತ್ತೇವೆ. ಈ ನಿಟ್ಟಿನಲ್ಲಿ ಶಾಂತಿಯು ಯಾರಲ್ಲಿ ಸಹಜವಾಗಿಯೇ ಇದೆಯೋ, ಶಾಂತಿ ಯಾರ ಸಹಜ ಪ್ರವೃತ್ತಿಯಾಗಿದೆಯೋ, ಅಂತಹ ಜೀವನ್ಮುಕ್ತರ ಲಕ್ಷಣಗಳನ್ನು ತಿಳಿಯುವುದು ಅವಶ್ಯಕ. ಆಗ ಆ ಧ್ಯೇಯದ ಪರಿಚಯ ಸ್ಪಷ್ಟವಾಗಿ ಮನದಟ್ಟಾಗುತ್ತದೆ, ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸುವಂತೆ ನಮ್ಮನ್ನು ಅದು ಪ್ರೇರೇಪಿಸುತ್ತದೆ.

ಹಾಗಾದರೆ ಈ ಜೀವನ್ಮುಕ್ತರು ಎಂದರೆ ಯಾರು? ಅವರ ಲಕ್ಷಣಗಳೇನು?

ಇದರ ವಿವರಣೆಯನ್ನು ಉಪನಿಷತ್ತು ಮತ್ತು ಭಗವದ್ಗೀತೆಯಲ್ಲಿ ನೋಡಬಹುದು. ಶಂಕರಾಚಾರ್ಯರ ವಿವೇಕ ಚೂಡಾಮಣಿ ಮತ್ತು ಕೌಪೀನ ಪಂಚಕಗಳಲ್ಲೂ ‘ಜೀವನ್ಮುಕ್ತ’ರ ವಿವರಣೆಯಿದೆ.

ಭಗವದ್ಗೀತೆಯಲ್ಲಿ ಜೀವನ್ಮುಕ್ತರ ಲಕ್ಷಣಗಳನ್ನು ಹಲವು ವಿಧಗಳಲ್ಲಿ ಬಣ್ಣಿಸಲಾಗಿದೆ. ಎರಡನೆ ಅಧ್ಯಾಯದಲ್ಲಿ ಅವರನ್ನು ಸ್ಥಿತಪ್ರಜ್ಞರೆಂದೂ ಹದಿಮೂರನೆ ಅಧ್ಯಾಯದಲ್ಲಿ ಜ್ಞಾನಿಗಳೆಂದೂ, ಹದಿನಾಲ್ಕನೆ ಅಧ್ಯಾಯದಲ್ಲಿ ತ್ರಿಗುಣಾತೀತರೆಂದೂ ಅವರನ್ನು ಕರೆಯಲಾಗಿದೆ.

ಶಂಕರಾಚಾರ್ಯರು ತಮ್ಮ ವಿವೇಕ ಚೂಡಾಮಣಿಯಲ್ಲಿ (ಶ್ಲೋಕ 426) “ಜೀವನ್ಮುಕ್ತರು ಎಲ್ಲ ಭೋಗಗಳನ್ನು ಅನುಭವಿಸಿಯೂ ನಿದ್ರೆಯಲ್ಲಿರುವವನ ಹಾಗೆ ಯಾವುದಕ್ಕೂ ಅಂಟಿಕೊಳ್ಳದೆ, ಪುಟ್ಟ ಬಾಲಕರಂತೆ ಜಗತ್ತೆಂಬ ಭ್ರಮೆಯನ್ನು ಕನಸಿನಂತೆ ಕಾಣುತ್ತಾ ಇರುತ್ತಾರೆ” ಎಂದಿದ್ದಾರೆ.

“ಯಾರ ಅಜ್ಞಾನವು ಗುರೂಪದೇಶದಿಂದ ನಷ್ಟವಾಗಿರುತ್ತದೆಯೋ, ಯಾರು ವಿಷಯ ವಸ್ತುಗಳ ನಡುವೆ ಇದ್ದೂ ಮೋಹಕ್ಕೆ ಒಳಗಾಗುವುದಿಲ್ಲವೋ ಅವರೇ ಜೀವನ್ಮುಕ್ತರು” ಅನ್ನುತ್ತದೆ ‘ಜೀವನ್ಮುಕ್ತಾನಂದ ಲಹರೀ”.

ಮುಂಡಕೋಪನಿಷತ್ತಿನಲ್ಲಿ:
ಸಂಪ್ರಾಪ್ಯೈನಮ್ ಋಷಯೋ ಜ್ಞಾನತೃಪ್ತಾಃ
ಕೃತಾತ್ಮಾನೋ ವೀತರಾಗಾಃ ಪ್ರಶಾಂತಾಃ |
ತೇ ಸರ್ವಗಂ ಸರ್ವತಃ ಪ್ರಾಪ್ಯ ಧೀರಾಃ
ಯುಕ್ತಾತ್ಮಾನಃ ಸರ್ವಮೇವಾವಿಶಂತಿ ||  3.2.5 || – ಎಂದು ಹೇಳಲಾಗಿದೆ. 

ಅರ್ಥ: ಆತ್ಮವನ್ನು ಚೆನ್ನಾಗಿ ತಿಳಿದುಕೊಂಡು, ಆ ಜ್ಞಾನದಿಂದಲೇ ತೃಪ್ತಿ ಹೊಂದಿ, ಪರಮಾತ್ಮಸ್ವರೂಪವೇ ತಮ್ಮ ಆತ್ಮ ಎಂಬ ಅನುಭವವನ್ನು ಪಡೆದುಕೊಂಡವರು ಜೀವನ್ಮುಕ್ತರು. ರಾಗಾದಿದೋಷರಹಿತರೂ ಪ್ರಶಾಂತರೂ ಆದ ಈ ವಿವೇಕಿಗಳು ಸದಾ ಸಮಾಧಾನಚಿತ್ತರಾಗಿರುತ್ತಾರೆ. ಸರ್ವವ್ಯಾಪಿಯಾದ ಬ್ರಹ್ಮನನ್ನು ಸರ್ವತ್ರ ಅನುಭವಿಸುತ್ತ ಘಟಾಕಾಶವು ಮಹಾಕಾಶವನ್ನು ಸೇರುವಂತೆ ಸರ್ವಸ್ವವಾದ ಪರಬ್ರಹ್ಮವನ್ನು ಪ್ರವೇಶಿಸುತ್ತಾರೆ.

ಇಂಥವರಿಗೆ ಕರ್ಮದಲ್ಲಿ ರುಚಿಯಿಲ್ಲ. ಆದ್ದರಿಂದ ಎಲ್ಲವನ್ನೂ ತ್ಯಜಿಸಿ ಸರ್ವಕರ್ಮಸಂನ್ಯಾಸಿ ಎನಿಸಿಕೊಳ್ಳುತ್ತಾರೆ. (ಕರ್ಮಣಃ ಅಭಾವ ದರ್ಶನಾತ್ ಸರ್ವಕರ್ಮ ಸಂನ್ಯಾಸ ಏವ ತಸ್ಯ ಅಧಿಕಾರಃ) ಅಂತಹ ವ್ಯಕ್ತಿಗೆ ಇನ್ಯಾವ ಕರ್ಮಗಳೂ ಇರುವುದಿಲ್ಲ (ತಸ್ಯ ಕಾರ್ಯಂ ನ ವಿದ್ಯತೇ).

ಶಂಕರರು ತಮ್ಮ ‘ಕೌಪೀನ ಪಂಚಕ’ದಲ್ಲಿ (ಶ್ಲೋಕ 3) ‘ದೇಹಾದಿಭಾವಂ ಪರಿವರ್ತಯಂತಃ ಆತ್ಮಾನಮ್ ಆತ್ಮನಿ ಅವಲೋಕಯಂತಃ’ – “ಜೀವನ್ಮುಕ್ತರು ತಾವು ದೇಹ ಎಂಬ ಭಾವವನ್ನು ಹೋಗಲಾಡಿಸಿಕೊಂಡಿರುವರು. ಅವರು ತಮ್ಮಲ್ಲಿ ಆತ್ಮವನ್ನು ಬಿಟ್ಟು ಬೇರೇನೂ ಕಾಣುವುದಿಲ್ಲ” ಎಂದು ಹೇಳಿದ್ದಾರೆ.

ದೇಹಬುದ್ಧಿಯ ತ್ಯಾಗ ಜೀವನ್ಮುಕ್ತರ ಪ್ರಮುಖ ಲಕ್ಷಣಗಳಲ್ಲಿ ಒಂದು. ದೇಹಬುದ್ಧಿಯ ತ್ಯಾಗವೆಂದ ಮೇಲೆ ದೇಹಕ್ಕೆ ಸಂಬಂಧಿಸಿದ ಊಟ, ಬಟ್ಟೆ, ವಸತಿ – ಇವುಗಳಲ್ಲಿ ಅನಾಸಕ್ತಿ ಇರುವುದು ಸಹಜವಾಗಿದೆ. ಆಗ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕೆಂಬ ಆಸೆ ಮೂಡುವ ಪ್ರಮೇಯವೇ ಇರುವುದಿಲ್ಲ. ಅವುಗಳನ್ನು ಗಳಿಸಲಿಕ್ಕಾಗಿಯೇ ಕರ್ಮ ನಡೆಸಬೇಕೆಂಬ ಬಯಕೆಯೂ ಉಂಟಾಗುವುದಿಲ್ಲ. ಇದನ್ನೇ ‘ವಾಸನಾಕ್ಷಯ’ ಎಂದು ಹೇಳಿರುವುದು. ಇಂಥವರು ಮರದ ಬುಡದಲ್ಲಿ ವಾಸಿಸುತ್ತಿದ್ದರೂ ಅರಮನೆಯ ಸುಪ್ಪತ್ತಿಗೆಯಲ್ಲೇ ಇದ್ದರೂ ಯಾವ ವ್ಯತ್ಯಾಸವನ್ನೂ ಕಾಣುವುದಿಲ್ಲ. ಇವರೇ ‘ಜೀವನ್ಮುಕ್ತ’ರು ಎಂದು ಶಂಕರರು ‘ಜೀವನ್ಮುಕ್ತಾನಂದ ಲಹರಿ’ಯಲ್ಲಿ ವಿವರಿಸಿದ್ದಾರೆ.

ಜೀವನ್ಮುಕ್ತರು ಎಲ್ಲೆಲ್ಲೂ ಆತ್ಮವನ್ನೇ ಕಾಣುತ್ತಾರೆ. ತಾವು ಆತ್ಮಸ್ವರೂಪರೆಂಬ ಪ್ರಜ್ಞೆ ಅವರಲ್ಲಿ ಇರುತ್ತದೆ. ಈ ಪ್ರಜ್ಞೆ ಕೊನೆಪಕ್ಷ ಲೌಕಿಕದಲ್ಲಾದರೂ ನಮ್ಮದಾಗಿಸಿಕೊಂಡರೆ; ಅತ್ಯಂತ ಕಿರಿದಾಗಿಯೇ ಇದ್ದರೂ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಲು ನಮ್ಮ ಪಾಲಿನ ಸಾರ್ಥಕ ಕೊಡುಗೆ ನೀಡಿದಂತಾಗುತ್ತದೆ.

 

Leave a Reply