ಪ್ರತಿಯೊಬ್ಬರ ಎದೆಯೂ ಸೌಹಾರ್ದ ಬಿತ್ತನೆಗೆ ಭೂಮಿಯಾಗಲಿ…

ಯಾವಾಗ ಬೇಲಿ ಕಟ್ಟಲ್ಪಡುತ್ತದೆಯೋ ಆಗ ಅದರ ಒಳಗಿನವರು ಅದು ಉಳಿದರೆ ಮಾತ್ರ ನಮಗೆ ರಕ್ಷೆ ಎಂಬ ತಪ್ಪು ಕಲ್ಪನೆಗೆ ಬೀಳುತ್ತಾರೆ ಮತ್ತು ಯಥಾಯಗತಾಯ ಅದನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಾರೆ. ಮತ್ತೂ ಮುಂದುವರೆದು, ಸ್ವಯಂ ರಕ್ಷಣೆಯ ನೆಪದಲ್ಲಿ, ತಮ್ಮ ಬಣದ ಮೇಲ್ಮೆಯ ಹಪಾಹಪಿಯಲ್ಲಿ ಆಕ್ರಮಣಗಳಿಗೆ ಮುಂದಾಗುತ್ತಾರೆ. ಇದು ದ್ವೇಷದ ಕಿಡಿ ಹೊತ್ತಿಸುತ್ತದೆ ~ ಆನಂದಪೂರ್ಣ

ಗತ್ತು ರಾಗದ್ವೇಷಗಳಿಂದ ಮುಕ್ತವಾಗಬೇಕು ಎಂದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರವನ್ನು ಪೂರ್ವಕಾಲದಿಂದಲೂ ಋಷಿ ಮುನಿಗಳು ಹೇಳುತ್ತಲೇ ಬಂದಿದ್ದಾರೆ. ಎಲ್ಲವೂ ಒಂದೇ ಪರಮ ಆತ್ಮದ ತುಣುಕುಗಳು. ಜಡ – ಚೇತನಗಳೆಲ್ಲವೂ ಅದರದೇ ಹೊಮ್ಮುವಿಕೆಗಳು ಎಂದು ಭಾರತೀಯ ಚಿಂತನೆಗಳು ಸಾರಿದರೆ, ಸೆಮೆಟಿಕ್ ಮತಗಳು ಎಲ್ಲವೂ ಭಗವಂತನ ಸೃಷ್ಟಿ, ನಾವೆಲ್ಲರೂ ಅವನ ಮಕ್ಕಳು ಎಂದು ಸಾರುತ್ತವೆ. ಜಾನಪದ ನಂಬುಗೆಗಳು, ಬುಡಕಟ್ಟು ಜನರ ಸೃಷ್ಟಿಗಾಥೆಗಳು – ಎಲ್ಲಿ ನೋಡಿದರೂ ಪ್ರತಿಯೊಂದು ಜೀವದ ಸೃಷ್ಟಿ ಒಂದೇ ಮೂಲಸ್ರೋತದಿಂದ ಆಗಿದೆ ಎಂಬ ಚಿಂತನೆಯೇ ಹಬ್ಬಿಕೊಂಡಿದೆ.

ಈ ಎಲ್ಲ ಚಿಂತನೆಗಳನ್ನು, ಕತೆಗಳನ್ನು ನಾವು ಕಾಲಗಟ್ಟಲೆಯಿಂದ ಕೇಳುತ್ತ ಬಂದಿದ್ದರೂ ಜಾತಿ, ಪಂಥ, ಮಾರ್ಗ, ವರ್ಣ, ಭಾಷೆ ಮೊದಲಾದ ಚೌಕಟ್ಟುಗಳೊಳಗೆ ಪರಸ್ಪರ ಬಂಧಿಸಿಕೊಳ್ಳುತ್ತ ಭೇದದ ಬೇಲಿ ಕಟ್ಟುತ್ತಿದ್ದೇವೆ. ಯಾವಾಗ ಬೇಲಿ ಕಟ್ಟಲ್ಪಡುತ್ತದೆಯೋ ಆಗ ಅದರ ಒಳಗಿನವರು ಅದು ಉಳಿದರೆ ಮಾತ್ರ ನಮಗೆ ರಕ್ಷೆ ಎಂಬ ತಪ್ಪು ಕಲ್ಪನೆಗೆ ಬೀಳುತ್ತಾರೆ ಮತ್ತು ಯಥಾಯಗತಾಯ ಅದನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಾರೆ. ಮತ್ತೂ ಮುಂದುವರೆದು, ಸ್ವಯಂ ರಕ್ಷಣೆಯ ನೆಪದಲ್ಲಿ, ತಮ್ಮ ಬಣದ ಮೇಲ್ಮೆಯ ಹಪಾಹಪಿಯಲ್ಲಿ ಆಕ್ರಮಣಗಳಿಗೆ ಮುಂದಾಗುತ್ತಾರೆ. ಇದು ದ್ವೇಷದ ಕಿಡಿ ಹೊತ್ತಿಸುತ್ತದೆ. ಪ್ರತಿಯೊಬ್ಬರೂ ಸ್ವಯಂ ರಕ್ಷಣೆಯ ನೆಪವಿಟ್ಟುಕೊಂಡೇ ಕತ್ತಿ ಮಸೆಯತೊಡಗುತ್ತಾರೆ. ಮತ್ತೊಂದು ಬಣದ ಕತ್ತಿ ಮಸೆತವು ಇನ್ನೊಂದು ಬಣಕ್ಕೆ ಯುದ್ಧ ಸನ್ನಾಹದಂತೆ ಕಾಣುತ್ತದೆ. ಪ್ರತಿಯಾಗಿ ಅವರು ತಮ್ಮದೇ ರೀತಿಯಲ್ಲಿ ಹಿಂಸೆಗೆ ಇಳಿಯುತ್ತಾರೆ.

ಪ್ರಾಚೀನ ಕಾಲದಿಂದಲೂ ಇದು ನಡೆಯುತ್ತಲೇ ಬಂದಿದೆ. ಆದರೂ ಇತಿಹಾಸದಿಂದ ನಾವು ಪಾಠ ಕಲಿಯುವ ಗೋಜಿಗೆ ಹೋಗಿಲ್ಲ. ವಿಂಗಡಣೆಯು ಉಂಟು ಮಾಡುವ ಸಂಕುಚಿತತೆಯನ್ನು ಹೋಗಲಾಡಿಸಲೆಂದೇ ನಮ್ಮ ಸಂತ ಪರಂಪರೆ ಮೇಲಿಂದ ಮೇಲೆ, ಮತ್ತೆಮತ್ತೆ `ನಾವೆಲ್ಲರೂ ಒಂದೇ’ ಎನ್ನುವ ಘೋಷಣೆ ಹೊತ್ತು ಬಂದಿದ್ದು. ಆಯಾ ಕಾಲಘಟ್ಟಗಳಲ್ಲಿ ಕೊಂಚ ಸುಧಾರಣೆ ಕಂಡಿದ್ದು ನಿಜವಾದರೂ ಮತ್ತೆ ಈ ದಿನ ನಾವು ಅದೇ ದ್ವೇಷದ, ಅಸಹಿಷ್ಣುತೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿರುವ ಮೂಲಭೂತವಾದ ಮತ್ತು ಭಯೋತ್ಪಾದನೆ ಇದಕ್ಕೆ ದುರಂತ ಸಾಕ್ಷಿಯಾಗಿವೆ.

ಹಾಗಾದರೆ ಇದಕ್ಕೆ ಅಂತ್ಯವೇ ಇಲ್ಲವೆ? ಕನಿಷ್ಠ ಅವಘಡಗಳು ನಡೆದ ಸಂದರ್ಭದಲ್ಲಾದರೂ ಈ ಯೋಚನೆ ಹುಟ್ಟಿಕೊಳ್ಳಬಹುದು. ನಮ್ಮ ಮಕ್ಕಳ ಕಾಲಕ್ಕೆ ಈ ಭೂಮಿ ಬದುಕಲು ಯೋಗ್ಯ ಸ್ಥಳವಾಗಿ ಉಳಿದಿರುತ್ತದೆಯೋ ಇಲ್ಲವೋ ಎನ್ನುವ ಚಿಂತೆಯೂ ಆವರಿಸಬಹುದು. ಆದರೆ ಈ ಯೋಚನೆ ಸ್ಮಶಾನ ವೈರಾಗ್ಯದಂತೆ ಆಗಬಾರದಷ್ಟೆ. ಈ ಭೂಮಿಯನ್ನು ಮುಂದಿನ ಪೀಳಿಗೆಯ ಪಾಲಿಗೆ ಸೌಹಾರ್ದದ ನೆಲೆಯನ್ನಾಗಿ ಉಳಿಸಿಹೋಗಬೇಕೆಂದರೆ, ಅದರ ಮೊದಲ ಪ್ರಯತ್ನ ಮನೆಯಿಂದಲೇ ಆರಂಭವಾಗಬೇಕು.

ನಾವು ಸೌಹಾರ್ದ, ಸಹಿಷ್ಣುತೆಗಳನ್ನೂ ಸರ್ಕಾರದ ಅಥವಾ ಆಡಳಿತಗಾರರ ಹೊಣೆಯಾಗಿಸಿ ಎಂದಿನ ಮಹತ್ವಾಕಾಂಕ್ಷೆಯ ಸ್ವಾರ್ಥದಲ್ಲಿ ಮುಳುಗಿಬಿಡುತ್ತೇವೆ. ನಮ್ಮ ಅಸ್ತಿತ್ವದ ಪ್ರಶ್ನೆಯು ನಮ್ಮ ಆತ್ಮಗತ ನಡವಳಿಕೆಗಿಂತ ಹೆಚ್ಚಾಗಿ ವರ್ಗ ವರ್ಣಾಧಾರಿತ ವಿಂಗಡಣೆಯ ಮೆಲೆ ಅವಲಂಬಿಸುವಂತೆ ನೋಡಿಕೊಳ್ಳುತ್ತೇವೆ. ಒಂದು ಹಂತದಲ್ಲಿ, ಸಾಮಾಜಿಕ ಕಾರಣಗಳಿಂದಾಗಿ ಈ ವಿಂಗಡಣೆ ಅನಿವಾರ್ಯವೆಂಬಂತೆ ತೋರುತ್ತದೆ. ಆದರೆ ಕೇವಲ ಕಾರ್ಯ ಸಾಧನೆಯ ಸಂಗತಿಯಾದ ಇದನ್ನು ನಾವು ಆತ್ಮಸಾಧನೆಯ ಮಾರ್ಗವೆಂದು ಆರೋಪಿಸಿಕೊಳ್ಳುವುದು ಪ್ರಮಾದಕ್ಕೆ ಕಾರಣವಾಗುತ್ತದೆ.

ಧರ್ಮಾಧಾರಿತ ವಿಂಗಡಣೆಯಂತೂ ಮೂಲಭೂತವಾದಕ್ಕೂ ಮೇಲ್ಮೆಯ ಪೈಪೋಟಿಗೂ ಕಾರಣವಾಗಿ, ತಾವು ನೆಚ್ಚಿಕೊಂಡಿರುವ ಸಿದ್ಧಾಂತಗಳೇ ಲೋಕವ್ಯಾಪಿಯಾಗಬೇಕೆಂಬ ವಿಕೃತ ಬಯಕೆಗೆ ದಾರಿ ಮಾಡಿಕೊಡುತ್ತದೆ. ಇದರ ಪರಿಣಾಮವೇ ಪರಮತ ಅಸಹಿಷ್ಣುತೆ.
ಇದು ಎರಡು ಧರ್ಮಗಳ ನಡುವಿನ ಸಂಗತಿಯಾದರೆ, ಧರ್ಮದೊಳಗಿನ ವಿಂಗಡಣೆಗಳು ಇನ್ನೂ ದೊಡ್ಡ ಮುಳ್ಳು ಹಾಸು. ಇದು ಅಸ್ಪೃಶ್ಯತೆಯನ್ನೂ ಮೇಲು ಕೀಳೆಂಬ ವಿಕೃತಿಯನ್ನೂ ಹುಟ್ಟಿಸುತ್ತದೆ.
ಆರ್ಥಿಕತೆ ಆಧಾರಿತ ವಿಂಗಡಣೆಯು ಧರ್ಮದಂತೆ ಅಧಿಕೃತ ವಿಂಗಡಣೆಯಲ್ಲ . ಇದು ವೈಯಕ್ತಿಕ. ಮನುಷ್ಯ ಹೆಚ್ಚು ಲೌಕಿಕನಾದಷ್ಟೂ ಈ ವಿಂಗಡಣೆಗೆ ಹೆಚ್ಚು ಮಹತ್ವ ಕೊಡುತ್ತಾನೆ. ಆಧ್ಯಾತ್ಮಿಕ ಪ್ರವೃತ್ತಿಯವರಿಗೆ, ಸಾತ್ವಿಕರಿಗೆ ಈ ವಿಂಗಡಣೆ ಅನ್ವಯವಾಗುವುದಿಲ್ಲ. ಅವರು ತಮ್ಮನ್ನು ಬಡವ ಅಥವಾ ಶ್ರೀಮಂತ ಎಂದು ಗುರುತಿಸಿಕೊಳ್ಳುವುದಿಲ್ಲ. ತಮ್ಮದು ಯಾವತ್ತೂ ಬತ್ತದ ಆತ್ಮಶ್ರೀಮಂತಿಕೆ ಎಂದೇ ಅವರು ಭಾವಿಸುತ್ತಾರೆ. ಅವರ ನಡವಳಿಕೆ ಹಾಗೂ ಆನಂದಾನುಭೂತಿಯ ಅಸ್ತಿತ್ವದ ಆಧಾರದ ಮೇಲೆ ಸಮಾಜ ಇದನ್ನು ಮನ್ನಿಸುತ್ತದೆ.

ಇಲ್ಲೊಂದು ವಿಪರ್ಯಾಸವಿದೆ. ಈ ಆಧ್ಯಾತ್ಮಿಕ ಜೀವಿಗಳು ತಮ್ಮನ್ನು ತಾವು ಧರ್ಮದ ವಿಂಗಡಣೆಯಿಂದಲೂ ಹೊರಗಿದ್ದೇವೆ ಎಂದು ಹೇಳಿಕೊಂಡರೆ ಮಾತ್ರ ಸಮಾಜ ಅದನ್ನು ಸುಲಭವಾಗಿ ಒಪ್ಪುವುದಿಲ್ಲ. ಅವರ ನಿರಾಕರಣೆಯನ್ನೂ ಅವಗಣಿಸಿ ಅವರಿಗೊಂದು ಧರ್ಮವನ್ನು ಕಟ್ಟುತ್ತದೆ. ಅಷ್ಟು ಬಿಗಿಯಾಗಿದೆ ಅದರ ಹಿಡಿತ. ಈ ಹಿಡಿತದಿಂದ ಹೊರಬರುವ ಚಿಂತನೆಗಳನ್ನು ಮನೆಯೇ ಮೊದಲಾಗಿ ರೂಪಿಸಬೇಕಿರುವುದು ಇಂದಿನ ತುರ್ತು.  

ಆದ್ದರಿಂದ, ಪ್ರತಿಯೊಬ್ಬರ ಎದೆಯೂ ಸೌಹಾರ್ದದ ಬೀಜ ಬಿತ್ತಲು ಭೂಮಿಯಾಗಿ ಒದಗಬೇಕು. ಹಾಗಾದರೆ ಮಾತ್ರ ಮುಂದಿನ ಪೀಳಿಗೆಗಳು ಶಾಂತಿ ಸಹಬಾಳ್ವೆಯ ಫಲ ಉಣ್ಣಲು ಸಾಧ್ಯವಾಗುವುದು. ಧರ್ಮ, ದುಡ್ಡು ಎಂದೆಲ್ಲ ಪ್ರತ್ಯೇಕತೆಯ ಬೀಜ ಬಿತ್ತುತ್ತ ಹೋದರೆ ಮುಂದೆ ಬೆಳೆ ಕಂಟಕ ಕಳೆಗಳೇ ಹಬ್ಬಿ ಭೂಮಿಯೂ ಬರಡಾಗಿಹೋಗುವುದು. ಮನುಷ್ಯತ್ವ ಜೊಳ್ಳಾಗಿಹೋಗುವುದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.