ನಾಲ್ಕು ನಗರಗಳು ಅಕ್ಕಪಕ್ಕದಲ್ಲಿದ್ದವು. ಈ ನಾಲ್ಕೂ ನಗರಗಳ ಜನ ಕ್ಷಾಮಡಾಮರಕ್ಕೆ ತುತ್ತಾಗಿ, ತಿನ್ನಲು ಏನೂ ಇಲ್ಲದೆ ಒದ್ದಾಡುತ್ತಿದ್ದರು. ಈ ನಾಲ್ಕೂ ನಗರಗಳಲ್ಲಿ ತಲಾ ಒಂದು ಮೂಟೆ ಬೀಜವಿತ್ತು.ಮೊದಲನೆಯ ನಗರದಲ್ಲಿ ಬೀಜದ ಮೂಟೆಯನ್ನು ತೆಗೆದುಕೊಂಡು ಏನು ಮಾಡಬೇಕೆಂದೇ ಯಾರಿಗೂ ತಿಳಿದಿರಲಿಲ್ಲ. ಅವರೆಲ್ಲ ಕಣ್ಣೆದುರೇ ಮೂಟೆಯಿದ್ದರೂ ಹೊಟ್ಟೆಗಿಲ್ಲದೆ ಸತ್ತರು.
ಎರಡನೆಯ ನಗರದಲ್ಲಿ ಒಬ್ಬನಿಗೆ ಮಾತ್ರ ಬೀಜದ ಮೂಟೆಯನ್ನು ಹೇಗೆ ಬಳಸಬೇಕೆಂದು ಗೊತ್ತಿತ್ತು. ಆದರೆ ನಾನೇ ಯಾಕೆ ಅದನ್ನು ಮಾಡಬೇಕು? ಎಂದು ಭಾವಿಸಿ ಸುಮ್ಮನಾದ. ಪರಿಣಾಮವಾಗಿ, ಅವನೂ ಸೇರಿದಂತೆ ಇಡಿಯ ನಗರ ಹೊಟ್ಟೆಗಿಲ್ಲದೆ ಕೊನೆಯಾಯಿತು.
ಮೂರನೆಯ ನಗರದಲ್ಲೂ ಒಬ್ಬನಿಗೆ ಮಾತ್ರ ಬೀಜದ ಮೂಟೆ ಉಪಯೋಗದ ಬಗ್ಗೆ ಗೊತ್ತಿತ್ತು. ಅವನು ಜನರನ್ನು ಕರೆದು, “ನಾನು ಈ ಬೀಜಗಳಿಂದ ನಿಮ್ಮೆಲ್ಲರ ಹಸಿವು ನೀಗುವಂತೆ ಮಾಡುತ್ತೇನೆ. ಬದಲಿಗೆ ನೀವು ನನ್ನನ್ನು ರಾಜನೆಂದು ಒಪ್ಪಿಕೊಳ್ಳಬೇಕು” ಎಂದು ಘೋಷಿಸಿದ. ಅದರಂತೆ ಬೀಜಗಳನ್ನು ಬಿತ್ತಿ, ಬೆಳೆ ತೆಗೆದ. ಜನರ ಹಸಿವೇನೋ ನೀಗಿತು. ಆದರೆ ಅವರು ಚಿರಕಾಲ ರಾಜನ ಮರ್ಜಿಯಲ್ಲಿ, ಆತನ ಅಡಿಯಾಳಾಗಿ ಇರಬೇಕಾಯ್ತು.
ನಾಲ್ಕನೆಯ ನಗರದಲ್ಲಿ ಕೂಡಾ ಒಬ್ಬನಿಗೆ ಬೀಜದ ಮೂಟೆಯನ್ನು ಉಪಯೋಗಿಸುವ ವಿಧಾನ ತಿಳಿದಿತ್ತು. ಅವನು ಊರವರನ್ನೆಲ್ಲ ಕರೆದು, ಬಿತ್ತನೆ ಮಾಡುವ ಬಗೆಯನ್ನೂ ಬೆಳೆ ತೆಗೆಯುವುದನ್ನೂ ಹೇಳಿಕೊಟ್ಟ. ಎಲ್ಲರೂ ಕೆಲಸಕ್ಕೆ ಮುಂದಾದರು. ನಗರದಲ್ಲಿ ಆಹಾರ ಬೆಳೆ ಸಮೃದ್ಧವಾಯಿತು. ಆ ನಗರದ ಎಲ್ಲ ಜನರೂ ಸಮ ಬಾಳು – ಸಮ ಪಾಲು ತತ್ತ್ವದಡಿ ಸುಖಸಂತೋಷದಿಂದ ಬಾಳಿದರು.
(ಸಂಗ್ರಹ ಮತ್ತು ಅನುವಾದ: ಅಲಾವಿಕಾ)