ಖುಷಿ, ಖುಷಿಯಲ್ಲ… ಮುಖವಾಡ ಕಳಚಿದ ನಿಮ್ಮ ದುಃಖ! ~ ಖಲೀಲ್ ಗಿಬ್ರಾನ್

ದುಃಖ ನಿಮ್ಮನ್ನು ಎಷ್ಟು ಆಳವಾಗಿ ಕೊರೆಯುತ್ತದೋ ಅಷ್ಟೇ ಅಗಾಧವಾಗಿ ಆನಂದ ನಿಮ್ಮನ್ನು ತುಂಬಿಕೊಳ್ಳುವುದು ~ ಪ್ರವಾದಿ, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಂತರ ಹೆಣ್ಣು ಮಗಳೊಬ್ಬಳು
ಖುಶಿಯ ಬಗ್ಗೆ, ದುಃಖದ ಬಗ್ಗೆ
ತನ್ನ ಅನುಮಾನಗಳನ್ನು ಹಂಚಿಕೊಂಡಳು.
ಖುಶಿ ಮತ್ತು ದುಃಖದ ಕುರಿತು
ಅವನು ಮಾತನಾಡತೊಡಗಿದ.

ಖುಶಿ, ಖುಶಿಯಲ್ಲ.
ಮುಖವಾಡ ಕಳಚಿದ ನಿಮ್ಮ ದುಃಖ.
ಮತ್ತು
ತನ್ನಿಂದ ತಾನೇ ತುಂಬಿಕೊಳ್ಳುವ ಬಾವಿ.
ನಿಮ್ಮ ನಗು ಚಿಮ್ಮುವ ಈ ಬಾವಿ
ಬಹುತೇಕ ತುಂಬಿಕೊಂಡಿರುವುದು ಕಣ್ಣೀರಿನಿಂದಲೇ.

ಹೀಗಲ್ಲದೆ ಬೇರೆ ಹೇಗೆ ಸಾಧ್ಯ ?

ದುಃಖ ನಿಮ್ಮನ್ನು
ಎಷ್ಟು ಆಳವಾಗಿ ಕೊರೆಯುತ್ತದೋ
ಅಷ್ಟೇ ಅಗಾಧವಾಗಿ ಆನಂದ
ನಿಮ್ಮನ್ನು ತುಂಬಿಕೊಳ್ಳುವುದು.

ನಿಮ್ಮ ವೈನ್ ತುಂಬಿಟ್ಟುಕೊಂಡಿರುವ ಬಟ್ಟಲು
ಕುಂಬಾರ ತುಳಿದ ಮಣ್ಣಲ್ಲವೇ?
ಅವನ ಕುಲುಮೆಯಲ್ಲಿ
ಸುಟ್ಟು ಗಟ್ಟಿಯಾಗಿರುವ ಜಗದ ಕಣ್ಣಲ್ಲವೆ?

ಆತ್ಮವನ್ನು ಸಂತೈಸುವ ಕೊಳಲು
ಹಾಡಲು ಶುರುಮಾಡಿದ್ದು,
ಬಿದಿರನ್ನು ಚೂರಿಯಿಂದ ಖಾಲಿ ಮಾಡಿ
ರಂಧ್ರ ಕೊರೆದ ಮೇಲೇ ಅಲ್ಲವೆ?

ಖುಶಿಯಾಗಿರುವಾಗ
ನಿಮ್ಮ ಆಳಕ್ಕೊಮ್ಮೆ ಇಳಿದು ನೋಡಿ
ಒಮ್ಮೆ ನಿಮ್ಮ ದುಃಖಕ್ಕೆ ಕಾರಣವಾಗಿದ್ದ ಕಾರಣಗಳೇ
ಇಂದು ನಿಮ್ಮ ಖುಶಿಯ ಕಾರಣಗಳು ಕೂಡ.

ಸಂಕಟದಲ್ಲಿರುವಾಗ
ಮತ್ತೊಮ್ಮೆ ನಿಮ್ಮ ಆಳಕ್ಕೆ ಇಳಿದು ನೋಡಿ.
ಇಂದು ನಿಮ್ಮ ಕಣ್ಣೀರಿಗೆ ಕಾರಣವಾಗಿರುವ ಕಾರಣಗಳೇ
ಒಮ್ಮೆ ನಿಮ್ಮನ್ನು ಏರಿಸಿದ್ದವು
ಖುಶಿಯ ಉತ್ತುಂಗಕ್ಕೆ.

ಕೆಲವರಿಗೆ
ಖುಶಿ, ದುಃಖಕ್ಕಿಂತ ಮೇಲು
ಇನ್ನೂ ಕೆಲವರಿಗೆ
ದುಃಖವೇ ಸರ್ವಶ್ರೇಷ್ಠ.

ಆದರೆ ನನ್ನ ಪ್ರಕಾರ
ಇವು ಒಂದೇ ನಾಣ್ಯದ ಎರಡು ಮುಖಗಳು.

ಯಾವಾಗಲೂ
ಜೊತೆ ಜೊತೆಯಾಗಿಯೇ ಪ್ರಯಾಣ.

ಒಂದು ನಿಮ್ಮೊಂದಿಗೆ ಅಂಗಳದಲ್ಲಿ
ಏಕಾಂಗಿಯಾಗಿ ಹರಟುತ್ತಿದ್ದರೆ
ಇನ್ನೊಂದು ನಿಮಗಾಗಿ
ಹಾಸಿಗೆಯ ಮೇಲೆ ಕಾಯುತ್ತಿರುವುದು.

ಬಹುತೇಕ ನೀವು
ಖುಶಿ ಮತ್ತು ದುಃಖದ ನಡುವೆ
ತೂಗುತ್ತಿರುವಿರಿ.

ಖಾಲಿ ಇರುವಾಗ ಮಾತ್ರ
ಸ್ಥಿರತೆ, ಸರಿದೂಗುವಿಕೆ.

ತನ್ನ ಬೆಳ್ಳಿ ಬಂಗಾರವನ್ನು ತೂಕ ಹಾಕಲು
ಸಂಪತ್ತಿನ ಮಾಲಿಕ ನಿಮ್ಮನ್ನು ಎತ್ತಿ ಹಿಡಿದಾಗ,
ನಿಮ್ಮ ಖುಶಿ ಅಥವಾ ದುಃಖದ ಪಾಲು
ಏರುವುದು ಅಥವಾ ಇಳಿಯುವುದು
ಸಹಜ.

ಮುಂದುವರೆಯುತ್ತದೆ……….

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

Leave a Reply