ಜನಪದ ಹೆಣ್ಣಿನ ಪಂಚಮಿ ಹಾಡು : ನಾಗರ ಪಂಚಮಿ ವಿಶೇಷ

ಶಿವಪುತ್ರಿ, ನಾಗದೇವತೆ ಮಾನಸಾ ದೇವಿಯ ಪೂಜೆ ಎಂದು ಕೆಲವು ಕಡೆ; ಮಹಾಸರ್ಪ ಸಂಕರ್ಷಣನ ಗೌರವಕ್ಕೆ ಎಂದು ಕೆಲವು ಕಡೆ; ವಾಸುಕಿಯ ನೆನಪಿಗೆ ಎಂದು ಕೆಲವರು. ತಕ್ಷನ ನೆನಪಿಗೆ ಎಂದು ಕೆಲವರು… ಹೀಗೆ ಭಿನ್ನ ಕಥನಗಳು ಸಿಗುವುದುಂಟು.

ತ್ಯಂತಿಕವಾಗಿ ಧರ್ಮ, ಆಧ್ಯಾತ್ಮ, ಜಾನಪದಗಳೆಲ್ಲ ಒಂದನ್ನೇ ಹೇಳುತ್ತಿದ್ದರೂ ಹೇಳುವ ಬಗೆ ಭಾವಗಳು ಬೇರೆ ಬೇರೆ. ಹಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅಧ್ಯಾತ್ಮದಲ್ಲಿ ಅದು ಕುಂಡಲಿನಿ. ಅದು ಪ್ರಜ್ಞೆ. ಧರ್ಮದಲ್ಲಿ ಅದು ದೇವತೆ. ಜನಪದರ ಪಾಲಿಗೆ ಹಾವು ದೈನಂದಿನ ಬದುಕಿನ ಸಮತೋಲನ ಕೊಂಡಿ. ಮುಖ್ಯವಾಗಿ ನಾಗರ ಪಂಚಮಿ ಆಚರಣೆಗೆ ಈ ಮೂರನೇ ಅಭಿವ್ಯಕ್ತಿಯೇ ಮುಖ್ಯ ಕಾರಣ.

ನಾಗರ ಪಂಚಮಿ ಹಬ್ಬದ ಪೌರಾಣಿಕ ಹಿನ್ನೆಲೆಯನ್ನು ಉತ್ಖನನ ಮಾಡಿಯೇ ತೆಗೆಯಬೇಕು. ಹಾಗಿದ್ದರೂ ತೃಪ್ತಿಕರವಾದ ಉತ್ತರ ಸಿಗುವುದಿಲ್ಲ. ಶಿವಪುತ್ರಿ, ನಾಗದೇವತೆ ಮಾನಸಾ ದೇವಿಯ ಪೂಜೆ ಎಂದು ಕೆಲವು ಕಡೆ; ಮಹಾಸರ್ಪ ಸಂಕರ್ಷಣನ ಗೌರವಕ್ಕೆ ಎಂದು ಕೆಲವು ಕಡೆ; ವಾಸುಕಿಯ ನೆನಪಿಗೆ ಎಂದು ಕೆಲವರು. ತಕ್ಷನ ನೆನಪಿಗೆ ಎಂದು ಕೆಲವರು… ಹೀಗೆ ಭಿನ್ನ ಕಥನಗಳು ಸಿಗುವುದುಂಟು.

ಆದರೆ “ನಾಡಿಗೆ ದೊಡ್ಡದು” ಎಂದು ಕೊಂಡಾಡಲ್ಪಡುವ ನಾಗರಪಂಚಮಿಯು ಮಳೆ, ಬೆಳೆ, ಭೂಮಿಗಳ ಸುತ್ತಮುತ್ತ ಸುತ್ತುವುದೇ ಹೆಚ್ಚು. ಆಷಾಡದ ಭೋರ್ಗರೆತ ಮುಗಿದು, ಜಿಟಿಪಿಟಿ ಮಳೆಯಲ್ಲಿ ವಿಹಾರ ಹೊರಡುವ ಕಪ್ಪೆಗಳೂ, ಅವುಗಳ ಬೇಟೆಗೆ ಬಿಲ ತೊರೆಯುವ ಹಾವುಗಳೂ; ಅವುಗಳು ತೊಂದರೆ ಮಾಡದಿರಲಿ ಎಂಬ ತಾಯಂದಿರ ಅಂತಃಕರಣವೂ… ಹುತ್ತಕ್ಕೆ ಹಾಲೆರೆಯುವ ಮುಗ್ಧತೆಯೂ (ಈಗಿನ ಕಾಲಮಾನಕ್ಕೆ ಇದು ಮೌಢ್ಯತೆಯೇ ಸರಿ)… ಇವೆಲ್ಲವೂ ಸೇರಿ ಉಂಟಾಗಿದೆ ನಾಗರಪಂಚಮಿ.

ಜೊತೆಗೆ, ಹಬ್ಬಗಳ ಹೆಬ್ಬಾಗಿಲಿನಂಥ ಶ್ರಾವಣದಲ್ಲಿ ತಂಗಿಯನ್ನು ಕರೆದೊಯ್ಯಲು ಅಣ್ಣ ಬರುತ್ತಾನೆ. ತಂಗಿಯು ಪಂಚಮಿ ಹಬ್ಬದ ದಿನ ಅವನ ಬೆನ್ನಿಗೆ ತನಿ ಎರೆದು ‘ತವರ ಬಳ್ಳಿ ಸುಖವಾಗಿರಲಿ’ ಎಂದು ಹರಸುತ್ತಾಳೆ. ಅಣ್ಣ ಅತ್ತಿಗೆಯರು ಮನೆ ಮಗಳಿಗೆ ಗೌರಿ ಹಬ್ಬದ ಬಾಗಿಣ ಮುಂಗಡ ನೀಡಿ ಬೀಳ್ಕೊಡುತ್ತಾರೆ. ಹಾಗೇನಾದರೂ ಅಣ್ಣ ಕರೆದೊಯ್ಯಲು ಬರಲಿಲ್ಲವೆಂದರೆ ತಂಗಿಯ ತಳಮಳ ಹೇಳತೀರದು! ಆ ಸಂದರ್ಭದಲ್ಲಿ ಅವಳ ಚಡಪಡಿಕೆ ಯಾರಿಂದಲೂ ಅನುಭವಿಸಲು ಸಾಧ್ಯವಿಲ್ಲದಂಥದ್ದು! – ಇದು ಹಳೆಯ ಕಾಲದ ಒಂದು ರೂಢಿ. ಹೆಣ್ಣುಮಕ್ಕಳು ಮನೆವಾಳ್ತೆಗೆ ಸೀಮಿತವಾಗಿದ್ದ ದಿನಗಳ ಚಿತ್ರಣ.

ಈಗ ಇಂಥಾ ಸಂದರ್ಭವಾಗಲೀ ಸನ್ನಿವೇಶವಾಗಲೀ ಇಲ್ಲದಿದ್ದರೂ, ಅಣ್ಣ – ತಂಗಿಯರ ಬಾಂಧವ್ಯಕ್ಕೆ ರಂಗು ತುಂಬುವ ಪಂಚಮಿ ಹಬ್ಬವೆಂದರೆ ನಮ್ಮ ಹೆಣ್ಣುಮಕ್ಕಳಿಗೆ ತುಸು ಹೆಚ್ಚೇ ಪ್ರೀತಿ.

ಪಂಚಮಿ ಸಂದರ್ಭದ ಜನಪ್ರಿಯ ಗೀತೆಯೊಂದು ಹೀಗಿದೆ:
ಪಂಚಮಿ ಹಬ್ಬ ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ ಯಾಕ ಕರಿಲಾಕ
ನನ್ನ ತವರೂರು ಗೋಕುಲ ನಗರ
ನನ್ನ ಅಣ್ಣಯ್ಯ ದೊಡ್ಡ ಸಾಹುಕಾರ
ಮನಿ ಎಂಥದ್ದು ರಾಜಮಂದಿರ
ಹ್ಯಾಂಗ ಆದೀತ ಬಿಟ್ಟು ಇರಲಾಕ
ಮುತ್ತಿನಂತಾಕಿ ಆಕಿ ನನ್ನ ಅತ್ತೀಗಿ
ಪ್ರೀತಿ ಭಾಳ ನನ್ನ ಮ್ಯಾಲ ಅವಳೀಗಿ
ಬಿಟ್ಟಳೇನಮ್ಮ ಬಿಟ್ಟು ಇರಲಾಕ
ಅಣ್ಣ ಬರಲಿಲ್ಲ ಯಾಕ ಕರಿಲಾಕ
ನನ್ನ ತವರಲ್ಲಿ ಪಂಚಮಿ ಭಾರಿ
ಮಣ ತೂಕಾದ ಬೆಲ್ಲ ಕೊಬ್ಬಾರಿ
ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ
ನಾನು ತಿನುವಾಕಿ ಅಲ್ಲೆ ಮನ ಸಾರಿ

Leave a Reply