ಕುಣಿದು ಕರೆದರೆ ಬಾರದಿರುವನೇ ಭಗವಂತ!?

ಭಗವಂತ ಬಯಲಿನಲ್ಲಿರುತ್ತಾನೆ. ಸ್ವಾತಂತ್ರ್ಯದಲ್ಲಿರುತ್ತಾನೆ. ನಗುವಿನಲ್ಲಿ, ಸಂಭ್ರಮದಲ್ಲಿ, ಪ್ರೇಮದಲ್ಲಿ ನೆಲೆಗೊಂಡಿರುತ್ತಾನೆ. ಇಂಥಾ ಅವ್ಯಕ್ತ ಭಗವಂತನ ಇರುವಿಕೆಯ ಅನುಭೂತಿ ಪಡೆಯುವ ಬಗೆಗಳಲ್ಲಿ ನರ್ತನವೂ ಒಂದು ~ ಆನಂದಪೂರ್ಣ

ಕೌನ್ ಕಹ್‍ತೇ ಹೈ ಭಗವಾನ್ ಆತೇ ನಹೀ |
ತುಮ್ ಮೀರಾ ಕೆ ಜೈಸೆ ಬುಲಾತೇ ನಹೀ ||
ಎಂದು ಶುರುವಾಗುವ ಭಜನೆಯೊಂದು –
ಕೌನ್ ಕಹ್‍ತೇ ಹೈ ಭಗವಾನ್ ನಾಚ್ತೇ ನಹೀ |
ಗೋಪಿಯೋಂ ಕಿ ತರಹ್ ತುಮ್ ನಚಾತೇ ನಹೀ ||
ಎಂಬ ಸಾಲುಗಳೊಂದಿಗೆ ಮುಕ್ತಾಯವಾಗುತ್ತದೆ.
`ಮೀರಾಳ ತರಹ ಕರೆದರೆ ಭಗವಂತ ಬರದೆ ಇರುತ್ತಾನೆಯೇ? ಗೋಪಿಯರ ತರಹ ಕುಣಿಸಿದರೆ ಆತ ಕುಣಿಯದೆ ಇರುತ್ತಾನೆಯೆ?’ ಎಂಬುದು ಈ ಗೀತೆಯ ತಾತ್ಪರ್ಯ.

ನಾವು ಕರೆಯುವ ರೀತಿಯಲ್ಲಿ ಕರೆದರೆ ಭಗವಂತ ಓಗೊಡುವುದು ಖಚಿತ. `ಬರಿದೇ ಕರೆದರೆ ನೀ ಬಾರದೆ ಇರುವೆ. ಪರಮ ಪ್ರೇಮದಿಂ ಕರೆದರೆ ಬರುವೆ’ ಎಂಬ ಮತ್ತೊಂದು ಭಕ್ತಿ ಗೀತೆ ಹೇಳುವುದೂ ಇದನ್ನೇ. ಆದರೆ ಈ ಸತ್ಯ ಅರಿಯದ ನಾವು ಮಾತ್ರ `ಭಗವಂತನಿಗೆ ಕುರುಡು. ಭಗವಂತನಿಗೆ ಕಿವುಡು. ನಮ್ಮ ಕಷ್ಟಕಾಲದಲ್ಲಿ ಕರೆದರೆ ಸಹಾಯ ನೀಡುವುದಿಲ್ಲ’ ಎಂದೆಲ್ಲ ಗೊಣಗಾಡುತ್ತೇವೆ. ಈ ಗೊಣಗಾಟದಲ್ಲಿ ನಾವು ಮೂರು ಬಗೆಯ ತಪ್ಪು ಮಾಡುತ್ತೇವೆ. ಮೊದಲನೆಯದಾಗಿ, ನಾವು ಕರೆಯುವ ರೀತಿ ಸರಿಯಾಗಿದೆಯೇ ಎಂದು ನೋಡಿಕೊಳ್ಳದೆ ಇರುವುದು. ಎರಡನೆಯ ತಪ್ಪು, ನಮ್ಮ ಕಷ್ಟ ನಷ್ಟಗಳು ನಮ್ಮ ಸೃಷ್ಟಿಯೇ ಆಗಿದ್ದರೂ ಅದರ ಹೊಣೆಯನ್ನು ಭಗವಂತನ ಹೆಗಲಿಗೆ ಏರಿಸುವುದು. ಮೂರನೆಯ ತಪ್ಪು – ಭಗವಂತ ಬರುವುದು ಎಂದರೆ ಸಾಕ್ಷಾತ್ತಾಗಿ ಚಿತ್ರವತ್ತಾಗಿ ಕಣ್ಣೆದುರು ಮೂಡಿ ಕಷ್ಟ ಪರಿಹಾರ ಮಾಡಬೇಕು ಎಂದು ಭ್ರಮಿಸುವುದು…

ವಾಸ್ತವವಾಗಿ ಭಗವಂತ ಆನಂದಸ್ವರೂಪಿ. ಎಲ್ಲಿ ಆನಂದ ನೆಲೆಸಿರುತ್ತದೆಯೋ ಅಲ್ಲಿ ಭಗವಂತ ಇರುತ್ತಾನೆ. ಅಥವಾ ಎಲ್ಲಿ ಭಗವಂತನೋ ಅಲ್ಲಿ ಆನಂದ. ಪೂಜೆ ಪುನಸ್ಕಾರಗಳು ಇರುವೆಡೆಯಲ್ಲಿ ಮಾತ್ರವೇ ಆತನಿರುತ್ತಾನೆ ಎಂದುಕೊಳ್ಳುವುದರಿಂದ ನಾವು ಭಗವಂತನ ವ್ಯಾಪ್ತಿಯನ್ನು ಮಿತಗೊಳಿಸಿದಂತಾಗುತ್ತದೆ. ಆತ ಬಯಲಿನಲ್ಲಿರುತ್ತಾನೆ. ಸ್ವಾತಂತ್ರ್ಯದಲ್ಲಿರುತ್ತಾನೆ. ನಗುವಿನಲ್ಲಿ, ಸಂಭ್ರಮದಲ್ಲಿ, ಪ್ರೇಮದಲ್ಲಿ ನೆಲೆಗೊಂಡಿರುತ್ತಾನೆ. ಇಂಥಾ ಅವ್ಯಕ್ತ ಭಗವಂತನ ಇರುವಿಕೆಯ ಅನುಭೂತಿ ಪಡೆಯುವ ಬಗೆಗಳಲ್ಲಿ ನರ್ತನವೂ ಒಂದು.

ನೃತ್ಯಾರಾಧನೆ
ಭಗವಂತ ಹೇಗಿರುತ್ತಾನೆ? ಅವನ ಸನ್ನಿಧಾನದಲ್ಲಿ ನಾವು ಹೇಗಿರಬೇಕು? ಗಂಭೀರವಾಗಿ ಉಸಿರು ಬಿಗಿದು, ಕೈಕಟ್ಟಿ ಕೂರಲಿಕ್ಕೆ ಅವನೇನು ಶಾಲೆಯ ಶಿಕ್ಷಕನೇ!? ಭಗವಂತ ತಂದೆಯ ಹಾಗೆ. ತಂದೆಯ ತೊಡೆಯ ಮೇಲೆ ಮಗು ಕುಣಿದಾಡುವಂತೆ, ಯಾವ ಆತಂಕವೂ ಇಲ್ಲದೆ ನಿರುಮ್ಮಳವಾಗಿ ನಲಿಯಬೇಕು. ಭಗವಂತ ಪ್ರೇಮಿಯ ಹಾಗೆ. ಪ್ರೇಮಿಯನ್ನು ಸಂತೋಷಪಡಿಸಲು ಹಾಡುವಂತೆ, ನರ್ತಿಸುವಂತೆ, ಸಂಪೂರ್ಣ ಶರಣಾಗುವಂತೆ ಅವನೆದುರು ದಣಿಯಬೇಕು. ನಮ್ಮ ಹರಿದಾಸರು ಪರಮ ಶರಣಾಗತಿಯಿಂದ ತಂಬೂರಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯಲಿಲ್ಲವೆ? ಸಂತ ಮೀರಾಳ ಧ್ಯಾನ – ಪೂಜೆಗಳೆಂದರೆ ಅವು ಹಾಡು – ನರ್ತನಗಳೇ ಆಗಿರಲಿಲ್ಲವೆ?

ನೃತ್ಯಾರಾಧನೆಯ ಅತ್ಯುನ್ನತ ನಿದರ್ಶನವೆಂದರೆ ರಾಸಗರ್ಭಾ. ನೃತ್ಯ ಮಂಡಲದಲ್ಲಿ ಎಷ್ಟು ಗೋಪಿಕೆಯರೋ ಅಷ್ಟು ಕೃಷ್ಣಂದಿರು. ತಾತ್ತ್ವಿಕವಾಗಿ ಆ ಎಲ್ಲ ಕೃಷ್ಣರೂ ಒಳಗಿನ ಅಸೀಮಾನಂದದ ವ್ಯಕ್ತರೂಪ. ನಮ್ಮೊಳಗಿನ ನಲಿವೇ ಕೃಷ್ಣ! ಅದೇ ಚಿಚ್ಛಕ್ತಿ. ಗೋಪಿಯರ ಒಳಗೆ ಹುದುಗಿರುವ ಕೃಷ್ಣಪ್ರೇಮ ನರ್ತನದ ಲಯಕ್ಕೆ ಮೂರ್ತಗೊಳ್ಳುತ್ತಾ ವ್ಯಕ್ತರೂಪ ತಾಳುತ್ತದೆಯಲ್ಲ, ಅದೇ ರಾಸ. ದೇಹವನ್ನು ಭಾವಾಭಿವ್ಯಕ್ತಿಗೆ ಬಿಟ್ಟುಕೊಟ್ಟು, ಅದರ ಹೊರನಿಂತು ಸಾಕ್ಷೀ ಭಾವದಿಂದ ನೋಡಲು ಸಾಧ್ಯವಾಗಬೇಕು. ನೃತ್ಯ ಇದನ್ನು ಸಾಧ್ಯವಾಗಿಸುತ್ತದೆ. ಇದರಿಂದಾಗಿಯೇ ನರ್ತಿಸುತ್ತಿರುವಷ್ಟು ಹೊತ್ತೂ ನರ್ತಕರು ವಿಶಿಷ್ಟ ಕಳೆಯಿಂದ ಕಂಗೊಳಿಸುವುದು. ಅವರು ನಮ್ಮಂತೆ ಸಾಮಾನ್ಯರಲ್ಲದ ಮತ್ತೇನೋ ದಿವ್ಯತೆಯಿಂದ ಕೂಡಿದವರ ಹಾಗೆ ತೋರುವುದು.

ನರ್ತನ ಭಾವೋದ್ದೀಪನ ಕ್ರಿಯೆ. ಸಂಗಾತಿಯನ್ನು ಆಕರ್ಷಿಸುವ ಮೊದಲು, ಸಂಯೋಗಕ್ಕೆ ಮೊದಲು ಪ್ರಾಣಿ ಪಕ್ಷಿಗಳು ಕೂಡ ಬಿನ್ನಾಣ ತೋರುತ್ತವೆ, ನರ್ತಿಸುತ್ತವೆ, ಹೆಜ್ಜೆ ಹಾಕುತ್ತವೆ. ಆದಿಮಾನವರ ಪಾಲಿಗೆ ಕುಣಿತ ಜೀವನದ ಒಂದು ಭಾಗವೇ ಆಗಿಹೋಗಿತ್ತು ಎನ್ನುವುದು ಈ ವರೆಗಿನ ಪುರಾವೆಗಳಿಂದ ಸಾಬೀತಾಗಿದೆ. ಅಲೆಮಾರಿಗಳಾಗಿದ್ದ ನಮ್ಮ ಸಂಸ್ಕೃತಿಯ ಪೂರ್ವಜರು ಮಿಲನ ಕೂಟಗಳಿಗೆ ಮುನ್ನ ಭಾರೀ ನರ್ತನ ಕೂಟ ಏರ್ಪಡಿಸುತ್ತಿದ್ದರಂತೆ. ಅಂದಿನವರಿಗೆ ಕೂಡ ನರ್ತನವು ಮೈಮನಸ್ಸುಗಳನ್ನು ಉಲ್ಲಾಸಗೊಳಿಸುವ ಸಾಧನವಾಗಿತ್ತೆಂದು ತೋರುತ್ತದೆ.

ಪ್ರಕೃತಿ – ಪುರುಷರನ್ನು ಸಂಕೇತಿಸುವ ಪಾರ್ವತೀ ಪರಮೇಶ್ವರರು ಕೂಡ ಸೃಷ್ಟಿಕ್ರಿಯೆಗೆ ಮುನ್ನ ಶೃಂಗಾರ ನೃತ್ಯದಲ್ಲಿ ತಲ್ಲೀನರಾಗಿರುತ್ತಾರೆ ಎನ್ನುತ್ತವೆ ಪುರಾಣಗಳು. ಸೃಷ್ಟಿ ಮಾತ್ರವಲ್ಲ, ಪ್ರಳಯ ಕಾಲದಲ್ಲಿ ಶಿವನು ರುದ್ರ ತಾಂಡವವನ್ನು ಆಡುತ್ತಾನೆ. ಶಿವೆಯು ತನ್ನ ವಿಧ್ವಂಸಕ ನೃತ್ಯದಿಂದಲೇ ಸೃಷ್ಟಿಯನ್ನು ಲಯಗೊಳಿಸುತ್ತಾಳೆ.

ಇನ್ನು ಸೂಫೀ ನರ್ತನ, ಚಾಮ್  ನರ್ತನ ಇತ್ಯಾದಿ ಧ್ಯಾನ ನರ್ತನಗಳ ಪರಂಪರೆಯೇ ಇದೆ. ಅವನ್ನು ಪ್ರತ್ಯೇಕ ಲೇಖನಗಳಲ್ಲಿ ನೋಡೋಣ. 

ಧ್ಯಾನ ನರ್ತನದ ಕುರಿತು ಓಶೋ ಮಾತು
ಓಶೋ ರಜನೀಶ್ ತಂತ್ರ ಸಾಧಕ ಸರಹನ ಕತೆ ಹೇಳುತ್ತಾರೆ. ಮೂಲದಲ್ಲಿ ಆತ ವೇದಶಾಸ್ತ್ರ ಪಾರಂಗತ. ಬಾಣ ತಯಾರಿಸುವ ಹೆಣ್ಣೊಬ್ಬಳ ಪ್ರೇಮಕ್ಕೆ ಒಳಗಾಗುವ ಸರಹ, ಆಕೆಯಿಂದಲೇ ತಂತ್ರ ವಿದ್ಯೆಯನ್ನು ಕಲಿಯುತ್ತಾರೆ. ಅದಕ್ಕೆ ಮುನ್ನ ಅವರು ತಾವು ಆ ವರೆಗೆ ಪಡೆದ ಎಲ್ಲ ಜ್ಞಾನವನ್ನೂ ಅಳಿಸಿಕೊಳ್ಳಬೇಕಾಗುತ್ತದೆ. ತಾವು ಕಲಿತ ವಿದ್ಯೆಯನ್ನು ಸಂಪೂರ್ಣ ಮರೆತು ಖಾಲಿಯಾಗುತ್ತಾರೆ. ಆ ಖಾಲಿಯಲ್ಲಿ ಆಕೆಯ ಪ್ರೇಮವೊಂದೆ ತುಂಬಿಕೊಳ್ಳುತ್ತದೆ. ಅವರು ಧ್ಯಾನ ಮಾಡುವುದನ್ನೂ ಬಿಟ್ಟುಬಿಡುತ್ತಾರೆ. ಹಾಡುವುದೇ ಅವರಿಗೀಗ ಧ್ಯಾನ. ನರ್ತಿಸುವುದೇ ಅವರ ಪಾಲಿಗೆ ಶಾಸ್ತ್ರಾಭ್ಯಾಸವಾಗುತ್ತದೆ. ಸಂಭ್ರಮಾಚರಣೆಯೇ ಜೀವನ ಶೈಲಿಯಾಗುತ್ತದೆ. ತಮ್ಮ ಜೀವನದ ಉಳಿಕೆಯಷ್ಟನ್ನೂ ಅವರು ಗಾನ ನರ್ತನಗಳಲ್ಲೆ ತೊಡಗಿ ಆನಂದದ ಅತ್ಯುನ್ನತ ಸ್ಥಿತಿಯನ್ನು ಹೊಂದುತ್ತಾರೆ, ಸಾಧಕ ಎನ್ನಿಸಿಕೊಳ್ಳುತ್ತಾರೆ. ನಮ್ಮನ್ನು ಚಿಪ್ಪೆಳೆದುಕೊಂಡು ಹುದುಗುವಂತೆ ಮಾಡುವ ತಿಳಿವಳಿಕೆಯ ಭಾರಕ್ಕಿಂತ, ಚಿಪ್ಪು ಕಳಚಿಹಾಕುವ ನರ್ತನವು ಮನಸ್ಸನ್ನು ಹಗುರಾಗಿಸಿ, ಆತ್ಯಂತಿಕ ಆನಂದವನನು ಪಡೆಯುವ ಹಂತಕ್ಕೆ ಏರಿಸುತ್ತದೆ ಎಂಬುದನ್ನು ಸರಹನ ಜೀವನ ವೃತ್ತಾಂತವು ತಿಳಿಸಿಕೊಡುತ್ತದೆ.

`ನೃತ್ಯಕ್ಕಿಂತ ಸುಗಮವಾದ ಧ್ಯಾನ ವಿಧಾನ ಮತ್ತೊಂದಿಲ್ಲ’ ಎನ್ನುತ್ತಾರೆ ಓಶೋ. ಅವರು ಹೇಳುತ್ತಾರೆ, `ನೃತ್ಯದಷ್ಟು ಸಹಜವಾದ ಸಮಾಧಿ ಬೇರಿಲ್ಲ. ನೃತ್ಯ ಸುಗಮವೂ ಸರಳವೂ ಆಗಿರುವುದು. ನಿಮ್ಮ ಅಹಂಕಾರವನ್ನು ನೃತ್ಯದಲ್ಲಿ ಕರಗಿಸುವಷ್ಟು ಸುಲಭವಾಗಿ ಮತ್ಯಾವುದರಲ್ಲೂ ಮಾಡಲಾರಿರಿ’ ಎಂದು. ತುಂಬಿದ ಹೃದಯದಿಂದ ನರ್ತಿಸಬಲ್ಲಿರಾದರೆ ನೀವು ಅಳಿದುಹೋಗುವಿರಿ. ವಿಸ್ಮರಣೆಯ ಅತ್ಯದ್ಭುತ ಮಾರ್ಗ ನೃತ್ಯ. ಅದು ಅತ್ಯದ್ಭುತ ಪ್ರಕ್ರಿಯೆ ಎನ್ನುತ್ತಾರೆ.

ನರ್ತನದ ಗುಣಗಳನ್ನು ಹೇಳುತ್ತಾ ಓಶೋ, `ನಾಟ್ಯದ ಮತ್ತೊಂದು ವೈಶಿಷ್ಟ್ಯವೆಂದರೆ ನೀವು ನರ್ತಿಸುತ್ತಾ ಹೋದಂತೆಲ್ಲ ನಿಮ್ಮ ಜೀವಚ್ಛಕ್ತಿ ಪ್ರವಹಿಸಲಾರಂಭಿಸುತ್ತದೆ. ನೀವೀಗ ಜಡವಾಗಿಬಿಟ್ಟಿದ್ದೀರಿ. ನೀವು ಹುಟ್ಟಿಕೊಂಡಿರುವುದು ನಿಂತ ನೀರಾಗಲಿಕ್ಕಲ್ಲ, ಹರಿಯುವ ನದಿಯಾಗಲಿಕ್ಕೆ. ಪ್ರವಾಹ ನಿಮ್ಮ ಸಹಜ ಗುಣ. ಅದನ್ನು ಕಂಡುಕೊಳ್ಳಿ. ನಿಮ್ಮಲ್ಲಿ ಪುನಃ ಹರಿವು ಸಾಧ್ಯವಾಗಬೇಕು. ತರಂಗಗಳೇಳಬೇಕು. ಹರಿಯುವ ನದಿ ಮಾತ್ರವೇ ಒಂದಲ್ಲ ಒಂದು ದಿನ ಸಾಗರ ಸೇರುವುದು ಹೊರತು ಕೊಳವಲ್ಲ. ಗಾಢವಾಗಿದ್ದರೂ ನಿಂತಲ್ಲಿಯೇ ಇರುವ ಸರೋವರವೂ ಅಲ್ಲ. ಸರೋವರ ತನ್ನಲ್ಲಿ ತಾನು ಬಂಧಿಯಾಗಿದ್ದುಬಿಡುವುದು. ಆದ್ದರಿಂದಲೇ ಬಿಡುಬೀಸಾಗಿ ನರ್ತಿಸಿ. ನಿಮ್ಮೊಳಗಿನ ಶಕ್ತಿಯನ್ನು ಪ್ರವಹಿಸಲು ಬಿಡಿ. ಹರಿಯುವ ನದಿಯಾಗಿ….’ ಎಂದು ಹುರಿದುಂಬಿಸುತ್ತಾರೆ.
ಭಗವಂತನನ್ನು ನಟರಾಜನ ರೂಪದಲ್ಲಿ ಚಿತ್ರಿಸಿರುವುದು, ಕೃಷ್ಣನನ್ನು ರಾಸವಿಹಾರಿಯಾಗಿ, ಕೊಳಲ ಕಲೆಗಾರನಾಗಿ ಬಿಂಬಿಸಿರುವುದರ ಹಿನ್ನೆಲೆ- ಆತ ಅದೆಷ್ಟು ಆನಂದಮಯಿಯೆಂದು ತೊರಲಿಕ್ಕಾಗಿಯೇ ಆಗಿದೆ. ಭಗವಂತನೇ ಸ್ವತಃ ಹಾಡಿ – ಕುಣಿದು ಆನಂದ ಮಾರ್ಗ ಹಾಕಿಕೊಟ್ಟಿರುವಾಗ ನಮಗೇಕೆ ಹಿಂಜರಿಕೆ ಎನ್ನುವುದು ಓಶೋ ಪ್ರಶ್ನೆ.

ಆದ್ದರಿಂದ, ನರ್ತಿಸಿರಿ!  ಹೃದಯ ತೆರೆದು ನರ್ತಿಸಿರಿ!! ಎಲ್ಲ ಬಿಗುಮಾನವನ್ನು ತೊರೆದು ಕುಣಿಯಿರಿ. ನರ್ತನದಲ್ಲಿ ಲೀನವಾದಾಗ ಅಲ್ಲಿ ನೀವು ಉಳಿದಿರುವುದಿಲ್ಲ. ಆದರೂ ನಾಟ್ಯ ನಡೆದಿರುತ್ತದೆ. ನೀವು ನರ್ತಿಸುತ್ತಿರುವುದಿಲ್ಲ. ಆದರೂ ನರ್ತನ ಸಾಗಿರುತ್ತದೆ. ಯಾವಾಗ ನೀವು ಈ ಅನುಭವ ಪಡೆಯುವಿರೋ, ನೀವಿಲ್ಲದೆಯೂ ನಿಮ್ಮೊಳಗಿನ ನರ್ತನಕ್ಕೆ ಸಾಕ್ಷಿಯಾಗುವಿರೋ – ಅಂದು ನೀವು ಯಾವುದು ಪಡೆಯಲು ಯೋಗ್ಯವೋ ಅದನ್ನು ಪಡೆಯುವಿರಿ. ಯಾವುದನ್ನು ಪಡೆಯದೆ ಮಿಕ್ಕೆಲ್ಲ ಗಳಿಕೆಯೂ ವ್ಯರ್ಥವೆನ್ನಿಸುವುದೋ ಅದನ್ನು – ಆ ದಿವ್ಯ ಆನಂದಾನುಭೂತಿಯನ್ನು ಹೊಂದುವಿರಿ. ಒಮ್ಮೆಯಾದರೂ ಇದನ್ನು ಪ್ರಯತ್ನಿಸಿ ನೋಡಿ!

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.