ಜಲಧಿದ್ವಯಗಳು ಅವನ ಒಡಲೊಳಗೆ ಅಡಗಿಹವು, ಆದರೂ ಅವನಿಹನು ಹನಿ ನೀರಿನೊಳಗೆ…! ಮೂಲ : ಅಥರ್ವಣ ವೇದ, 416 : 15 | ಕನ್ನಡಕ್ಕೆ : ಡಾ.ಎಚ್.ರಾಮಚಂದ್ರ ಸ್ವಾಮಿ
ಇಬ್ಬರೊಟ್ಟಿಗೆ ಸೇರಿ ಬೇರಾರೂ ಇಲ್ಲೆಂದು
ಷಡ್ಯಂತ್ರ ರೂಪಿಸಿರೆ ಅಲ್ಲಿಹನು ವರುಣ –
ಮೂರನೆಯವನೆಲ್ಲ ಅರಿವ ಜಾಣ;
ಈ ಭೂಮಿ ಆಕಾಶ ಎಲ್ಲದಕು ಅವ ರಾಜ
ಮಿತಿಯರಿಯದವನ ಸಿರಿ ನಮ್ಮ ವರುಣ.
ಜಲಧಿದ್ವಯಗಳು ಅವನ ಒಡಲೊಳಗೆ ಅಡಗಿಹವು,
ಆದರೂ ಅವನಿಹನು ಹನಿ ನೀರಿನೊಳಗೆ.
ಅಂತರಿಕ್ಷವ ಮೀರಿ ಹಾರಿ ಹೊರಟವನರಿಯ,
ರಾಜ ವರುಣನ ಹಿಡಿತ ಅಲ್ಲಿಯೂ ಬಿಡದೆಂದು –
ಈ ಭೂಮಿ ಆಕಾಶ ಮೂಲೆಮೂಲೆಗಳಲ್ಲಿ
ವರುಣಭಟರಡಗಿಹರು ಎಲ್ಲ ಅರಿವವರು.
ಸಹಸ್ರ ಕಣ್ಣುಗಳಿಂದ ಪರಿಕಿಸುತ ನೋಡುವರು
ಲೋಕವ್ಯಾಪಾರಗಳ ಸಾಕ್ಷಿಯವರು.
ನರನಿಮೇಷವನರಿವ ನಿರ್ನಿಮೇಷದ ವರುಣ,
ಎಲ್ಲವನು ಅರಿವನು ರಾಜ ವರುಣ –
ವಿಶ್ವಜಾಲದಿ ಪಗಡೆಯಾಡುವನು ವರುಣ…
ಕೃಪೆ : ವಿವೇಕಪ್ರಭ (ಹಳೆ ಸಂಚಿಕೆ)