~ ಯಾದಿರಾ
ವಾ-ಐನ್-ಸಾಇಲ್‌ಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಅತಾರ್ಕಿಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ರಾ-ಉಮ್‌ಳಿಂದ ಉತ್ತರ ಬಯಸುವುದು. ಇದಕ್ಕೆ ಅವನು ಆರಿಸಿಕೊಳ್ಳುತ್ತಿದ್ದ ಸಮಯ ಕೂಡಾ ವಿಶಿಷ್ಟವಾಗಿರುತ್ತಿತ್ತು. ಸಂಜೆಯ ಪಾನೀಯ ಧ್ಯಾನದ ಹೊತ್ತು ಇಲ್ಲವೇ ಬೆಳಗ್ಗಿನ ಕಲಿಕೆಯ ಸಮಯ ಅಥವಾ ಎಲ್ಲಾ ಶಿಷ್ಯರೂ ಒಟ್ಟಾಗಿರುವ ಹೊತ್ತಿನಲ್ಲಿ ಇಂಥ ಪ್ರಶ್ನೆಗಳು ಅವನ ಬಾಯಿಂದ ಹೊರಬರುತ್ತಿದ್ದವು.
ಈ ಪ್ರಶ್ನೆಗಳಿಗೆ ರಾ-ಉತ್ತರಿಸುತ್ತಾಳೆ ಎಂಬ ಖಾತರಿಯೇನೂ ಇರಲಿಲ್ಲ. ಆದರೆ ಆಗಾಗ ಇಂಥ ಪ್ರಶ್ನೆಗಳನ್ನು ಅವನಂತೂ ಕೇಳುತ್ತಿರುತ್ತಿದ್ದ.
ಇಂಥದ್ದೇ ಒಂದು ಸಂದರ್ಭದಲ್ಲಿ ಅವನು ಕೇಳಿದ ಪ್ರಶ್ನೆ ಹೀಗಿತ್ತು: ‘ಗುರು ಮತ್ತು ಶಿಷ್ಯರ ನಡುವಣ ವ್ಯತ್ಯಾಸವೇನು?’
ಶಿಷ್ಯರೆಲ್ಲರ ಕಿವಿ ನಿಮಿರಿತು. ಇಂದು ವಾ-ಐನ್‌ಗೆ ರಾ-ಉಮ್‌ಳಿಂದ ಸರಿಯಾದ ಪೂಜೆಯೇ ನಡೆಯಲಿದೆ ಎಂದು ಎಲ್ಲರೂ ಕುತೂಹಲದಿಂದ ನಿರೀಕ್ಷಿಸತೊಡಗಿದರು.
ರಾ-ಉಮ್ ಹೇಳಿದಳು ‘ತಪ್ಪು ಮಾಡುವವರು ಶಿಷ್ಯರಾಗುತ್ತಾರೆ!’
ಈ ಉತ್ತರದಿಂದ ಉತ್ತೇಜಿತನಾದ ಶಿಷ್ಯನೊಬ್ಬ ಹೇಳಿದ ‘ಆ ತಪ್ಪನ್ನು ತಿದ್ದುವವರು ಗುರುವಾಗುತ್ತಾರೆ!’
ರಾ-ಉಮ್ ಆ ಶಿಷ್ಯನನ್ನು ಹತ್ತಿರ ಕರೆದು, ‘ತಪ್ಪನ್ನು ಒಪ್ಪಿಕೊಂಡವನು ಗುರು!’ ಎಂದು ಹೇಳಿ ಅವನ ತಲೆಗೆ ತನ್ನ ಪಾನ ಪಾತ್ರೆಯಿಂದ ಮೊಟಕಿ ಎದ್ದು ಹೊರಟು ಹೋದಳು!