ಒಬ್ಬ ಯುವ ಸನ್ಯಾಸಿಗೆ ಧ್ಯಾನಕ್ಕೆ ಕೂತಾಗಲೆಲ್ಲ ಒಂದು ಜೇಡ ತನ್ನ ಎದುರು ಇಳಿದು ಬಂದಂತೆ ಭಾಸವಾಗತೊಡಗಿತು. ದಿನ ಕಳೆದಂತೆಲ್ಲ ಜೇಡ ದೊಡ್ಡದಾಗುತ್ತ ಹೋಯಿತು. ತೀವ್ರ ಆತಂಕಕ್ಕೊಳಗಾದ ಸನ್ಯಾಸಿ ತನ್ನ ಗುರುವಿನ ಮುಂದೆ ತನ್ನ ಸಂದಿಗ್ಧತೆಯನ್ನು ತೋಡಿಕೊಂಡ
“ಮಾಸ್ಟರ್, ಧ್ಯಾನಕ್ಕೆ ಕೂರುವಾಗ ಒಂದು ಚೂರಿ ಇಟ್ಟುಕೊಳ್ಳುತ್ತೇನೆ, ಈ ಸಲ ಬರಲಿ ಆ ಜೇಡ, ಮುಗಿಸಿಬಿಡುತ್ತೇನೆ” ಎಂದ.
ಒಂದು ನಿಮಿಷ ಧ್ಯಾನಿಸಿ, ಗುರುಗಳು ಉತ್ತರಿಸಿದರು,
“ಬೇಡ, ಚೂರಿ ಬೇಡ, ಬದಲಾಗಿ ಒಂದು ಸುಣ್ಣದ ಕಡ್ಡಿ ಇಟ್ಟುಕೊ, ಜೇಡ ಬಂದಾಗ ಅದರ ಹೊಟ್ಚೆಯ ಮೇಲೆ X ಗರುತು ಮಾಡು”
ಮರುದಿನ ಸನ್ಯಾಸಿ ಧ್ಯಾನಕ್ಕೆ ಕುಳಿತ. ಜೇಡ ಮತ್ತೆ ಕಾಣಿಸಿಕೊಂಡಾಗ, ಗುರುಗಳು ಹೇಳಿದಂತೆ ಸುಣ್ಣದ ಕಡ್ಡಿಯಿಂದ ಅದರ ಹೊಟ್ಟೆಯ ಮೇಲೆ X ಗುರುತು ಮಾಡಿದ.
ಧ್ಯಾನದ ನಂತರ ಗುರುಗಳ ಬಳಿ ಹೋಗಿ ನಡೆದ ಸಂಗತಿಯನ್ನು ಹೇಳಿಕೊಂಡ.
ಗುರುಗಳು ಅವನಿಗೆ ಅಂಗಿ ಬಿಚ್ಚಲು ಹೇಳಿದರು.
ಅವನ ಹೊಟ್ಟೆಯ ಮೇಲೆ X ಗುರುತಿತ್ತು.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)