ಮೂಲ : ಸೂಫಿ ಜಲಾಲ್ ಉದ್ದಿನ್ ರೂಮಿ | ಕನ್ನಡಕ್ಕೆ : ಸುನೈಫ್ ವಿಟ್ಲ
ನಿನ್ನೊಳು ಎದೆಬೆಸೆಯಲು
ಈ ಹೃದಯಕ್ಕೇನು ತಕರಾರು?
ಸರ್ವನಾಶವಾಗಲು ಈ ದೇಹ
ಒಪ್ಪದಿರಲು ಕಾರಣವೇನು?
ಬಾನ್ಬಯಲ ಚಂದ್ರ ತಾರೆಗಳಿಗೆ
ನಾನೇ ಅಧಿಪತತಿ ಎಂದಿಟ್ಟುಕೊಳ್ಳಿ,
ಬೆಳಕ ಬಿಟ್ಟು ಕೊಡದಿದ್ದರೆ
ಅವುಗಳೇತಕೆ ನನಗೆ?
ಅನುಗ್ರಹಗಳ ಸುರಿಮಳೆಯಲ್ಲಿ
ಸ್ವರ್ಗ ಸೇರಿದೆನೆಂದೇ ಇರಲಿ,
ಇನಿಯನ ಕಾಣದ ಒದ್ದಾಟದಲ್ಲಿ
ಸ್ವರ್ಗವೇತಕೆ ನನಗೆ?
ಅನುಗ್ರಹಗಳೇತಕೆ ನನಗೆ?
ಪುಟ್ಟ ಮಕ್ಕಳ ತಪ್ಪು ಹೆಜ್ಜೆಗಳಿಗೆ
ಗದರುತ್ತೀಯಾದರೆ ಕೇಳು,
ಹೃದಯ ಮತ್ತು ಆತ್ಮ ಕಿಡಿಗೇಡಿತನದಿಂದ
ದೂರವಿರುವುದಾದರೂ ಹೇಗೆ?
ಮುಂಜಾನೆಯ ತಂಗಾಳಿಯಿಲ್ಲದೆ
ಹೂವು ನಗುವುದಿಲ್ಲ,
ಕೊಂಬೆಗಳು ಕುಣಿಯುವುದಿಲ್ಲ,
ಗಿಡ ಬೆಳೆದು ಗಂಧ ಹರಡುವುದಿಲ್ಲ.
ವಿಚಿತ್ರ ಅನ್ನಿಸುವುದು ಏನು ಗೊತ್ತಾ?
ಆಲಸಿ ತನ್ನ ಎದೆದನಿಯನ್ನೂ ಕೇಳುವುದಿಲ್ಲವಲ್ಲ!
ಆದರೆ,
ಎಲ್ಲರೂ ದಾರಿ ತೋರುವ ಗುರುವಾಗಬೇಕೆಂದರೆ
ಸಾಧ್ಯವಾದರೂ ಹೇಗೆ?
ಠಕ್ಕರಿಗೆಲ್ಲ ಸಮನ್ಸ್ ಕೊಟ್ಟು ಕರೆಸುತ್ತಾನೆ
ಹೋಗಿ ಬಾಗಿಲ ಬಳಿ ನಿಂತು ನೋಡಿ
ಕರುಣಾಳು ತಾನು ಮನ್ನಿಸಿ ಕಳಿಸುವನು.
ಓ ಆತ್ಮವೇ,
ಪ್ರೇಮದ ಜಂಜಡಗಳಿಂದ ದೂರ ಓಡದಿರು
ಪ್ರೇಮಸಂಕಟಗಳು ಇರದಿರೆ ನೀನು ಬರಿಯ ಟೊಳ್ಳು.
ಭಗವಂತನ ಮೇಲಾಣೆ ಕೇಳು
ಭಗವಂತನಂತೆ ಇನ್ನೊಂದಿಲ್ಲ ನೋಡು
ಚಂದಿರ ವದನ ಸುಂದರ
ಮುಖವೊಂದೇ ಅವನಿಗಿರುವ ಅಂಗ.
ಗುಲಾಮನಂತೆ ಸೇವೆಗಿಳಿಯುವ
ಸುಲ್ತಾನ ಅವನು
ಇನಿಯನಿಗೆ ಹೆಗಲಾಗಿರುವ
ಪ್ರಿಯತಮನು ಅವನು
ದೇಹವೇ ಮಾತು ನಿಲ್ಲಿಸು
ಎದೆ ದನಿಯ ಕೇಳು,
ಹೃದಯದ ಭಾಷೆಯಲ್ಲಿ
ನಾನೆಂಬುದಿಲ್ಲ, ನಾವೆಂಬುದಿಲ್ಲ.
~ರೂಮಿ | ಕನ್ನಡಕ್ಕೆ: ಸುನೈಫ್