ಆಶೆಯನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ; ಅದರ ಅಗತ್ಯವೂ ಇಲ್ಲ! : ರಾಮತೀರ್ಥ ವಿಚಾರಧಾರೆ

Swamy Ramateertha
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಗ್ಂ ಸಮಾಃ | …… ಮಾ ಗೃಧಃ ಸ್ವಿದ್ಧನಮ್ || (ಈಶಾವಾಸ್ಯ ಉಪನಿಷತ್)

“ಕರ್ಮವನ್ನು ಮಾಡುತ್ತಲೇ ನೂರು ವರ್ಷಗಳು ಇಲ್ಲಿ ಬದುಕುವುದಕ್ಕೆ ಬಯಸಬೇಕು. (ಅದರ ಹೊರತಾಗಿ) ಯಾರ ಧನವನ್ನೂ ಬಯಸಬೇಡ” ಎಂದು ವೇದಾಂತವು ಹೇಳಿದೆ. ಈ ಮೂಲಕ ಅದು, ಯಾವಾಗಲೂ ಕ್ರಿಯಾಶೀಲರಾಗಿರಿ ಎಂದು ಸೂಚಿಸುತ್ತಿದೆ.

ವೇದಾಂತದ ಪ್ರಕಾರ ಆಶೆಯನ್ನು ಒಮ್ಮೆಗೇ ನಿರ್ಮೂಲನ ಮಾಡಲು ಸಾಧ್ಯವಿಲ್ಲ; ಅದರ ಅಗತ್ಯವೂ ಇಲ್ಲ. ಆಶೆಯಲ್ಲಿ ತಪ್ಪಿಲ್ಲ. ಆದರೆ ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು. ಇಷ್ಟಕ್ಕೂ ಆಶೆ ಎಂದರೆ ಏನು? ಆಶೆಯು ಪ್ರೀತಿಯ ಹೊರತು ಬೇರೇನೂ ಅಲ್ಲ. ಸಾಮಾನ್ಯವಾಗಿ ಪ್ರೀತಿ ಎಂದರೆ, ಯಾವುದಾದರೂ ವಿಷಯದ ಮೇಲಿನ ಉತ್ಕಟ ರಾಗ – ಅನುರಾಗವೇ ಆಗಿದೆ. ಒಂದು ವಿಷಯವನ್ನು ನಾವು ಉತ್ಕಟವಾಗಿ ಬಯಸುವುದೇ ಪ್ರೀತಿಯಾದರೆ, ಎಲ್ಲಾ ಆಶೆಯೂ ಪ್ರೀತಿಯಲ್ಲದೆ ಮತ್ತೇನೂ ಅಲ್ಲ.

ದೇವರು ಪ್ರೇಮಸ್ವರೂಪ ಎಂದು ಹೇಳಲಾಗುತ್ತದೆ; ಆದ್ದರಿಂದ ಎಲ್ಲ ಆಶೆಗಳೂ ದೇವರೇ! ಆಶೆ, ಅಂದರೆ ಪ್ರೇಮವು ದೇವರು. ಆದ್ದರಿಂದ ಆಶೆಯೂ ದೇವರೇ…. ಸತ್ಯವು ಹೀಗಿರುವಾಗ, ಸಮಸ್ತ ಕಾಮಗಳೊಡನೆ ತನ್ನ ಜೀವನವನ್ನು ಒಂದಾಗಿ ಕಂಡು, ಕಾಮರೂಪದಿಂದ ತಾನೇ – ತನ್ನ ನಿಜಾತ್ಮನೇ ಇಡಿ ಜಗತ್ತನ್ನೆಲ್ಲ ವ್ಯಾಪಿಸಿ, ಎಲ್ಲವನ್ನೂ ಆಳುತ್ತಿರುವನೆಂದು ಭಾವಿಸುವವರು ಎಷ್ಟು ಸುಖಿಗಳು!!

“ಎಲ್ಲ ಕಾಮಗಳ ಮೂಲವೇ ನಾನು; ಎಲ್ಲಾ ಕಾಮಗಳಿಗೂ ಕಾರಣನೇ ನಾನು. ಈ ಪ್ರಪಂಚದಲ್ಲಿರುವ ಎಲ್ಲ ಆಶೆಗಳ ಸತ್ವವೂ ನಾನೇ! ಎಲ್ಲ ಆಶೆಗಳ ಜನಕನೂ ಮೂಲವೂ ಉಗಮವೂ ನಾನೇ. ಆದ್ದರಿಂದ ಆಶೆಯ ಲಗಾಮಿನಿಂದ ಇಡೀ ಜಗತ್ತನ್ನೇ ನಾನು ಆಳುತ್ತಿದ್ದೇನೆ. ಲಗಾಮು ನನ್ನ ಕೈಯಲ್ಲಿದೆ” – ಹೀಗೆ ಭಾವಿಸಿದೊಡನೆ ಎಲ್ಲಾ ದ್ವೇಷಾಸೂಯೆಗಳೂ ನಿಂತು ಹೋಗುತ್ತವೆ. ಮಿತ್ರರ ಆಶೆಗಳೇ ಆಗಲಿ, ಶತ್ರುಗಳ ಆಶೆಗಳೇ ಆಗಲಿ, ಅವು ನನ್ನ ಆಶೆಗಳೇ. ಆ ಆಶೆಗಳನ್ನೆಲ್ಲ ಆಳುವ ಅನಂತ ಶಕ್ತಿಯೇ ನಾನು. ಅವರಿವರ ಹಂಬಲಗಳೆಲ್ಲಾ ನಾನೇ. ಸಮಸ್ತ ವಿಶ್ವದ ಪ್ರಭುವಾದ ನಾನೇ ಅತ್ಯಂತ ಸುಖಿ! ಹೀಗೆ ಭಾವಿಸುವುದೆಷ್ಟು ಚೆನ್ನ!

ಆದರೆ ಬಹುತೇಕವಾಗಿ ಜನರು ಆಶೆಯ ದುರುಪಯೋಗ ಮಾಡುತ್ತಾರೆ. ಅವರು ಎಲ್ಲ ವಿಷಯಗಳನ್ನೂ ತಲೆಕೆಳಗು ಮಾಡುತ್ತಾರೆ. “ಕಾಮವೇ ಪ್ರೇಮವೂ, ಪ್ರೇಮವೇ ಭೂಮವೂ ಆಗಿದ್ದು; ಸಮಸ್ತ ಕಾಮವೂ ನೀವೇ ಎಂದು ತಿಳಿಯಿರಿ” ಎನ್ನುತ್ತದೆ ವೇದಾಂತ. ಇಡೀ ವಿಶ್ವವೇ ಕಾಮವೆಂದು ಕರೆಯಬಹುದಾದ ಅನಂತವಾದ ಪ್ರೇಮಸಾಗರವಾಗಿದೆ. ಎಲ್ಲ ಗ್ರಹ ತಾರೆಗಳನ್ನೂ ಗುರುತ್ವಾಕರ್ಷಣ ಶಕ್ತಿಯು ನಿರ್ದಿಷ್ಟವಾದ ಪಥಗಳಲ್ಲಿ ನಿಯಮಿತ ವೇಗದಲ್ಲಿ ಚಲಿಸುವಂತೆ ಹಿಡಿದಿಟ್ಟಿದೆ. ಆಕರ್ಷಣ ಶಕ್ತಿ ಎಂದರೆ ಪ್ರೇಮ ಶಕ್ತಿ. ಗುರುತ್ವಾಕರ್ಷಣ ಶಕ್ತಿ ಎಂದರೆ ಮಹತ್ತಾದ ಪ್ರೇಮ ಶಕ್ತಿ. ಪ್ರೇಮವಿರುವಲ್ಲಿ ಪರಸ್ಪರ ಆಕರ್ಷಣೆ ಇರುತ್ತದೆ. ಸಕಲ ರಾಸಾಯನಿಕ ಸಂಯೋಗಗಳೂ ರಾಸಾಯನಿಕ ಸ್ನೇಹ ಸಾದೃಶ್ಯದ (Affinity) ಸತ್ವದಿಂದ ಸಂಭವಿಸುತ್ತವೆ. ಪರಮಾಣುಗಳ ಪರಸ್ಪರ ಪ್ರೇಮದಿಂದಲೇ ಅವುಗಳ ಸಂಯೋಗವಾಗುವುದು. ಆ ಪ್ರೇಮವೇ ಅವುಗಳ ಸ್ವಭಾವಸಾದೃಶ್ಯದ ಸ್ನೇಹಾಕರ್ಷಣೆಯಾಗುತ್ತದೆ. ಹಾಗೆಯೇ ಗ್ರಹಗಳ ಅನ್ಯೋನ್ಯ ಪ್ರೇಮವೇ ಗುರುತ್ವಾಕರ್ಷಣೆ ಎನಿಸುತ್ತದೆ. ಈ ಅಂಟಿಕೊಳ್ಳುವ, ಸಂಯೋಜಿಕವಾದ (Cohesion) ಶಕ್ತಿಯೇ ಪ್ರೇಮ.

ಆದ್ದರಿಂದ ಪ್ರೇಮದಿಂದ ಒಡಮೂಡುವ ಆಶೆಯ ಬಲವನ್ನು ತಿಳಿಯಿರಿ. ಅದರ ಸದ್ಬಳಕೆ ಮಾಡಿಕೊಳ್ಳಿ.
(ಆಕರ : ಪರಮಾತ್ಮಾನುಭವದ ಮಹಾರಣ್ಯಗಳಲ್ಲಿ – ಸ್ವಾಮ ರಾಮತೀರ್ಥರ ಉಪನ್ಯಾಸಗಳ ಅನುವಾದಿತ ಕೃತಿ)

Leave a Reply