ವಿಶ್ವಮಾನ್ಯ ಮಹಾಚೇತನ ಬ್ರಹ್ಮಶ್ರೀ ನಾರಾಯಣ ಗುರು

13 ಸೆಪ್ಟಂಬರ್ 2019 ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ವರ್ಷದ ಜಯಂತಿಯ ನಿಮಿತ್ತ ಈ ಲೇಖನ. ~ ಪುರುಷೋತ್ತಮ್.ಎಸ್; ಲೇಖಕ/ಯೋಗಪಟು; ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ, ಮೈಸೂರು

ಭಾರತ ವೇದಧರ್ಮದ ತವರೂರು. ಉತ್ತಮ ಸಂಸ್ಕೃತಿಯ ನೆಲೆಬೀಡು. ಜಗತ್ತಿಗೆ ಧರ್ಮವನ್ನು ಸಾರಿ ಜನ ಜಾಗೃತಿಗೊಳಿಸಿದ ಆದರ್ಶನಾಡು. ಆದರೂ ಕಾಲಗತಿಯನ್ನು ಮೀರುವುದು ಅಸಾಧ್ಯ ನೋಡಿ. ಬೆಳಕಿನ ಹಿಂದೆ ಕತ್ತಲು ಬರುವಂತೆ ಧರ್ಮದ ಹಿಂದೆ ಅಧರ್ಮವು ಆವರಿಸಿಬಂತು. 18ನೇ ಶತಮಾನದ ಕೇರಳದಲ್ಲಿ ಸಮಸ್ತ ಕೆಳವರ್ಗದಜನರ ಸುಖ-ಶಾಂತಿಗಳನ್ನು ಕಿತ್ತು ಹಿಂಸಿಸುತ್ತಿದ್ದ ಒಂದು ಅನಿಷ್ಟ ಆಚರಣೆ ಇತ್ತು ಅದೇ ಜಾತಿ ಪದ್ಧತಿ. ಮೇಲ್ವರ್ಗದವರ ದೇವಾಲಯಗಳಲ್ಲಿ ಕೆಳವರ್ಗದ ಜನರಿಗೆ ಪ್ರವೇಶವಿರಲಿಲ.್ಲ ಮಾರಿ ಮಸಣಿಗಳನ್ನು ಮಾತ್ರ ಪೂಜಿಸಬೇಕಿತ್ತು, ಅವರು ನಡೆದಾಡುವ ದಾರಿಗಳಲ್ಲಿ ಹಾದುಹೋಗುವಂತಿರಲಿಲ್ಲ, ಕಾಯಿಲೆ ಬಿದ್ದವರನ್ನು ಕಾಡಿಗೆ ಬಿಸಾಡಿಬರುತ್ತಿದ್ದರು, ಮಧ್ಯಾಹ್ನದ ಉರಿಬಿಸಿಲಲ್ಲಿ ಮಾತ್ರ ಕೃಷಿ ಕೆಲಸ ಮಾಡಬೇಕಿತ್ತು, ವಿದ್ಯೆ-ಉದ್ಯೋಗ ಅವರುಗಳ ಕನಸಷ್ಟೇಯಾಗಿತ್ತು, ಹೆಂಗಸರು ಕುಪ್ಪಸ ಧರಿಸುವಂತಿರಲಿಲ್ಲ, ಅಲ್ಲದೇ ಬಾಲ್ಯ ವಿವಾಹ, ಅಮಾನುಷ ಅತ್ಯಾಚಾರ, ಪ್ರಾಣಿಬಲಿ, ಮೌಢ್ಯಾಚರಣೆ ಇನ್ನೂ ಮುಂತಾದ ಕ್ರೂರ ಸನ್ನಿವೇಶಗಳಿದ್ದಂತಹ ಕಾಲ. ಈ ಉಚ್ಚ-ನೀಚತೆಗಳಿಂದ ತಪ್ಪಿಸಿಕೊಳ್ಳಲು ಹರಿಜನರೆಲ್ಲರೂ ಸ್ವಾಭಿಮಾನ ತೊರೆದು ಮತಾಂತರ ಹೊಂದಿದರು. ಇದನ್ನು ಕಂಡ ಸ್ವಾಮಿ ವಿವೇಕಾನಂದರು “ಇದೊಂದು ಹುಚ್ಚಾಸ್ಪತ್ರೆ” ಎಂದು ಬಗೆದಿದ್ದರು.

ಈ ಜಾತಿವ್ಯತ್ಯಾಸಗಳಿಂದ ಜನರನ್ನು ಹೊಡೆದು ತಿನ್ನುತ್ತಿದ್ದ ಆ ವ್ಯವಸ್ಥೆಗೆ ಸವಾಲು ಹಾಕಿ, “ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮನುಕುಲಕ್ಕೆ” ಎಂಬ ಪ್ರಾಯೋಗಿಕ ಸಂದೇಶದೊಂದಿಗೆ ಅಜ್ಞಾನದಲ್ಲಿ ಬಿದ್ದ ಅವಕಾಶ ವಂಚಿತ ಕೆಳವರ್ಗದ ಜನರಿಗೆ ನವಚೈತನ್ಯ ಮತ್ತು ಆತ್ಮವಿಶ್ವಾಸ ಮೂಡಿಸಿ ಜಾಗೃತಿಗೊಳಿಸಿದವರಲ್ಲಿ ಶ್ರೀನಾರಾಯಣ ಗುರುಗಳು ಅಗ್ರಗಣ್ಯರು.

ಪೂರ್ವದ ಬಂಗಾಳದಲ್ಲಿ ಶ್ರೀರಾಮಕೃಷ್ಣರು ಅವತರಿಸಿದಂತೆ 1854 ಸೆಪ್ಟೆಂಬರ್ 18ರಂದು ಕೇರಳದ ಈಳವ(ಬಿಲ್ಲವ) ಸಮಾಜದ ಮಾದನ್ ಆಶಾನ್ ಹಾಗೂ ಕುಟ್ಟೀ ಅಮ್ಮಾಳ್ ಎಂಬ ಆಚಾರ್ಯ ದಂಪತಿಗಳ ಕುಟುಂಬದಲ್ಲಿ ಶ್ರೀಮನ್ನಾರಾಯಣನೇ ಜನಿಸಿಬಂದರು. ಪ್ರೀತಿಯಿಂದ ಮಗುವನ್ನು ‘ನಾಣು’ ಎಂದು ಕರೆಯುತ್ತಿದ್ದರು. ಬಾಲಕ ನಾಣು ಬಾಲಕೃಷ್ಣನಂತೆ ಬಹಳ ತುಂಟ ಬಾಲಕರಾಗಿದ್ದರು. ಆದರೆ ಆ ತುಂಟತನದಲ್ಲಿಯೂ ಧಾರ್ಮಿಕ ಕ್ರಾಂತಿಯ ಹೆಜ್ಜೆ ಗುರುತುಗಳಿದ್ದವು. ನಾಣು ಅಸ್ಪøಶ್ಯರನ್ನು ಮುಟ್ಟಬೇಕೆಂಬ ಉದ್ದೇಶದಿಂದ ಮುಟ್ಟಿಬಂದು ಮನೆಯವರನ್ನೆಲ್ಲ ಇತರರನ್ನು ಮುಟ್ಟಿ ಮೈಲಿಗೆ ಮಾಡುತ್ತಿದ್ದನು “ಈಗ ಎಲ್ಲಿ ಹೋಯ್ತು ನಿಮ್ಮ ಜಾತಿ?”ಎಂದು ಪ್ರಶ್ನಿಸುತ್ತಿದ್ದನು. ಮನೆಯಲ್ಲಿ ದೇವರಿಗೆ ನೈವೇದ್ಯಕ್ಕೆಂದು ತಯಾರಿಸಿದ ಪ್ರಸಾದವನ್ನು ಮೊದಲು ತಾನೆ ತಿಂದುಬಿಡುತ್ತಿದ್ದ ಗದರಿದರೆ “ಸರ್ವಶಕ್ತನಾದ ಭಗವಂತ ತಾನು ಸೃಷ್ಟಿಸಿದ ಆಹಾರವನ್ನೆಲ್ಲ ತಿಂದುಬಿಟ್ಟರೆ ಉಳಿದ ಜೀವಿಗಳ ಗತಿಯೇನು? ಅಲ್ಲದೆ ಆತನಿಗೆ ಮಕ್ಕಳ ಮೂಲಕ ತಿನ್ನುವುದು ಬಹಳ ಇಷ್ಟ.” ಎಂದು ವಿನೋದವಾಡುತ್ತಿದ್ದನು. ಸಮಾಜದಲ್ಲಿ ಕುರುಡಾಗಿ ಜನರು ಅನುಸರಿಸುತ್ತಿದ್ದ ಮಡಿವಂತಿಕೆಯ ಅರ್ಥಹೀನತೆಗಳ ಅರಿವು ನಾಣುವಿಗೆ ಎಳವಯಸ್ಸಿನಲ್ಲೇ ಇತ್ತು.

ಶ್ರೀ ಗುರುಗಳು ಬಾಲ್ಯದಲ್ಲಿ ಅದ್ಭುತ ಸದ್ಗುಣಸಂಪನ್ನ-ಪ್ರತಿಭಾನ್ವಿತ-ಶಿಸ್ತುಬದ್ಧ ವಿದ್ಯಾರ್ಥಿಯಾಗಿದ್ದರು. ತನ್ನ ಮಾವ ಕೃಷ್ಣನ್ ವೈದ್ಯರ್‍ರಿಂದ ಆಯುರ್ವೇದ ವೈದ್ಯಶಾಸ್ತ್ರ ಕಲಿತರು ಕಾಯಿಲೆ ಬಿದ್ದವರಿಗೆ ಔಷಧ ಮಾಡುತ್ತಿದ್ದರು. ವಾರಣಪಳ್ಳಿಯ ರಾಮನ್ ಆಶಾನ್‍ರ ಬಳಿ ವ್ಯಾಕರಣ, ತರ್ಕ, ವೇದಾಂತ, ಕಾವ್ಯ, ಕಾಳಿದಾಸನ ರಘುವಂಶ, ಅಮರಕೋಶಂ, ಎಂಬ ಉನ್ನತ ವ್ಯಾಸಂಗಕ್ಕೆ ಸೇರಿ ಗುರುಗಳ ಪಾಠವನ್ನು ಶೀಘ್ರದಲ್ಲಿ ಗ್ರಹಿಸುತ್ತ, ತನ್ನ ಚುರುಕುತನ, ಜ್ಞಾಪಕಶಕ್ತಿ, ಸರಳ ನಡೆನುಡಿಗಳಿಂದ ಗುರುಕುಲದಲ್ಲಿ ಮುಂದಾಳುವಾಗಿ ಎಲ್ಲರ ಕಣ್ಮಣಿಯಾಗಿದ್ದರು.

ಸಂಸ್ಕೃತ, ತಮಿಳು ಭಾಷೆಗಳಲ್ಲಿ, ಭಗವದ್ಗೀತೆ, ರಾಮಾಯಣ-ಮಹಾಭಾರತ ಹಾಗೂ ಪಾಣಿನಿ ಯೋಗ ಸೂತ್ರದಲ್ಲಿ ಪ್ರಕರ ಪಾಂಡಿತ್ಯವಿತ್ತು. ಕೃಷ್ಣನ ಭಕ್ತರಾಗಿದ್ದ ಗುರುಗಳು “ಶ್ರೀವಾಸುದೇವಾಷ್ಟಕಂ” ಎಂಬ ಸ್ತೋತ್ರವನ್ನು ರಚಿಸಿ ಅದನ್ನು ರಾಮನ್ ಆಶಾನ್ ಗುರುಕುಲದ ನಿತ್ಯ ಪ್ರಾರ್ಥನೆಯಾಗಿಸಿದರು. ಅಲ್ಲಿಂದ ಕಲಿತ ವಿದ್ಯೆಯಿಂದ ಆಚಾರ್ಯರಾಗಿ ಹೊರಬಂದು ಪಾಠಶಾಲೆಯನ್ನು ತೆರೆದರು. ಕೆಲವೇ ಕೆಲವು ವಿದ್ಯಾರ್ಥಿಗಳು ಬರುತ್ತಿದ್ದುದ್ದರಿಂದ ಹೊಲೆಯರ ಕೇರಿಗೆ ತಾನೇ ಹೋಗಿ ಮಕ್ಕಳಿಗೆ ಅಕ್ಷರ ಹೇಳಿಕೊಟ್ಟು, ಸ್ವಚ್ಷತೆಯ ಪಾಠವನ್ನೂ ಕಲಿಸಿದರು. ಇದರಿಂದ ಬೇಸತ್ತಿದ್ದ ಮನೆಯವರು ನಾಣುವನ್ನು ಮದುವೆ ಮಾಡಿ ಗೃಹಬಂಧನದಲ್ಲಿರಸಲು ಮುಂದಾದರು. ಆದರೆ ಅಷ್ಟೊತ್ತಿಗಾಗಲೆ ಆಧ್ಯಾತ್ಮಿಕತೆ – ವೈರಾಗ್ಯ ಮನೆಮಾಡಿತ್ತು. ಆದರು ನಾಣುವಿನ ಅನುಪಸ್ಥಿತಿಯಲ್ಲಿ ಮದುವೆ ಮಾಡಿದರು. ಈ ಮದುವೆ ಗುರುಗಳಿಗೆ ಅಷ್ಟು ಸಮಸ್ಯೆಯಾಗಲಿಲ್ಲ. ಅವರ ಮನೆಯವರಿಗೆ ಮತ್ತು ಸುತ್ತಲ ಜನರಿಗೆ “ಪ್ರತಿಯೊಬ್ಬರು ಒಂದು ಉದ್ದೇಶಕ್ಕಾಗಿ ಜನಿಸಿರುತ್ತಾರೆ. ನನ್ನ ಉದ್ದೇಶ ಈಡೇರಿಸಲು ನಾನು ಹೊರಡುತ್ತೇನೆ. ನಿಮ್ಮ ದಾರಿ ನೀವು ನೋಡಿಕೊಳ್ಳಿ.” ಎಂದು ಹೇಳಿ ಅವರ ಕುಟುಂಬ ಮತ್ತು ಹಳ್ಳಿಯಿಂದ ದೂರಸಾಗುತ್ತಾರೆ. ಇದು ನಾರಾಯಣ ಗುರುಗಳ ಜೀವನದಲ್ಲಿ ಮಹತ್ವಪೂರ್ಣ ತಿರುವಾಗಿತ್ತು.

ನಾರಾಯಣ ಗುರುಗಳು ಪರಮಸತ್ಯದ ಪರಮಾತ್ಮನ ಶೋಧನೆಗಾಗಿ ವಿರಕ್ತತತೆಯಿಂದ ಪರಿವ್ರಾಜಕರಾಗಿ ನಡೆಯುತ್ತ ಹೋಗಿ ಮರುತ್ವಾಮಲೈ ಎಂಬ ಪರ್ವತಾರಣ್ಯಕ್ಕೆ ತೆರಳಿದರು. ಅದು ಪ್ರಾಚೀನ ಋಷಿಮುನಿಗಳ ತಪೋಭೂಮಿಯು ಆಗಿತ್ತು. ಈ ಪರ್ವತ ಸ್ವಾಮಿ ವಿವೇಕಾನಂದರಿಗೆ ಅಲೌಕಿಕ ಅನುಭವಗಳನ್ನು ನೀಡಿತ್ತು. ಇದು ಕನ್ಯಾಕುಮಾರಿಗೆ ಅತಿ ಸಮೀಪದಲ್ಲೇ ಇದೆ. ತಾಯಿ ಭಾರತೀಯ ಹೆಬ್ಬರಳಿನಂತಿರುವ ಆ ಪರ್ವತದಲ್ಲಿ ಅನೇಕ ಗುಹೆಗಳಿದ್ದವು ತಮಗೆ ಹಿತವೆನಿಸಿದ ಒಂದು ಗಾಢಾಂಧಕಾರದ ಗುಹೆಯಲ್ಲಿ ಸ್ವಲಪವೂ ಭಯ ಪಡದೆ ಪದ್ಮಾಸನ ಹಾಕಿ ಧ್ಯಾನಸ್ಥರಾದರು. ಅವರ ಮುಖದ ತೇಜಸ್ಸು ದಿನೇ ದಿನೇ ವರ್ಧಿಸುತ್ತ ಹೋಯಿತು. ಗುರುಗಳು ಗೆಡ್ಡೆ ಗೆಣಸುಗಳನ್ನು ಹಣ್ಣು ಹಂಪಲುಗಳನ್ನು ವಿಶಿಷ್ಟ ಸಸ್ಯಗಳ ಎಲೆಗಳನ್ನು ತಿನ್ನುತ್ತಾ ವರ್ಷಗಟ್ಟಲೇ ತಪಸ್ಸಿನಲ್ಲಿ ನಿರತರಾದರು.

ಒಂದು ದಿನ ಅವರಿಗೆ ಹಸಿವು ಹಾಗೂ ಬಾಯಾರಿರುವುದರಿಂದ ಧ್ಯಾನದಿಂದ ಮೇಲೆದ್ದು ಗವಿಯ ಹೊರಗೆ ತುಸು ದೂರದಲ್ಲಿ ಕೊಳದಲ್ಲಿ ಗುರುಗಳು ನೀರನ್ನು ಕುಡಿದು ಬಾಯಾರಿಕೆಯನ್ನು ನೀಗಿಸಿದರು. ಅಂದು ಮಧ್ಯರಾತ್ರಿ ಸಮಯ ಗವಿಯ ಬಳಿ ಒಬ್ಬ ಕುಷ್ಠರೋಗಿಯನ್ನು ಗುರುಗಳು ಕಂಡರು. ಈ ಗಹನ ಏಕಾಂತದ ತಾಣಕ್ಕೆ ಆರೋಗ್ಯಕರ ವ್ಯಕ್ತಿಯೂ ಏರಲಾಗದ ಈ ಬೆಟ್ಟಕ್ಕೆ ಅವನು ಹೇಗೆ ಬಂದ ಎಂದು ಗುರುಗಳು ಆಶ್ಚರ್ಯಪಟ್ಟರು. ಹಸಿವಿನಿಂದ ಬಳಲಿದ ಗುರುವರ್ಯರಿಗೆ ಆ ರೋಗಿಯು ತಾನು ತಂದಿದ್ದ ಅನ್ನವನ್ನು ಕೊಟ್ಟನು. ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡಿದರು. ಊಟವಾದ ಮರುಕ್ಷಣದಲ್ಲಿಯೇ ಆ ರೋಗಿಯು ಮಾಯವಾಗಿಬಿಟ್ಟನು. ಭಗವಂತನೇ ಈ ರೂಪದಲ್ಲಿ ದರ್ಶನ ನೀಡಿರುವನೆಂದು ತಿಳಿದು ಮುಂದೆ ಸಾಗಿದರು. ಊರೂರು ಅಲೆದರು ಜನರು ಅವರನ್ನು ಗೌರವ ತೋರಿ ಪ್ರೀತಿಯಿಂದ ಕೊಟ್ಟ ಹಣ್ಣು ಹಂಪಲುಗಳನ್ನು ಅವರು ತಿನ್ನುತ್ತಿದ್ದರು. ಜಾತಿ ಭೇದವಿಲ್ಲದೆ ಎಲ್ಲ ಬಡಜನರ ಗುಡಿಸಲುಗಳಿಗೆ ಹೋದರು ಅವರುಗಳ ಸ್ಥಿತಿಗತಿಗಳನ್ನು ಹತ್ತಿರದಿಂದ ತಿಳಿದುಕೊಂಡರು. ಈ ಅರಿವು ಮುಂದೆ ದಲಿತರನ್ನು ಮೇಲೆತ್ತುವ ಪ್ರಯತ್ನದಲ್ಲಿ ಸಹಕಾರಿಯಾಯಿತು.

ಶ್ರೀಗುರುಗಳು ಹೀಗೆ ಸನ್ಯಾಸಿಯಾಗಿ ಅಲೆಯುತ್ತ ಚಟ್ಟಾಂಬಿ ಸ್ವಾಮಿಗಳನ್ನು ಭೇಟಿಯಾದರು ಅವರು ನಾರಾಯಣ ಗುರುಗಳು ಸಾಧಿಸಿದ್ದ ಇಂದ್ರಿಯ ನಿಗ್ರಹವನ್ನು ನೋಡಿ ಬೆರಗಾದರು. ಚಟ್ಟಾಂಬಿ ಸ್ವಾಮಿಗಳೊಟ್ಟಿಗೆ ಸ್ವಲ್ಪ ಕಾಲ ದೇಶ ಸಂಚಾರ ಮಾಡಿ ಅನಂತರ ತಮಿಳುನಾಡಿಗೆ ಹೋದರು ಅಲ್ಲಿ ಥೈಕಾಡ್ ಅಯ್ಯಾವು ಎಂಬ ಮಹಾಯೋಗಿಯೊಬ್ಬರಿಂದ ಯೋಗಾಸ£,À ಪ್ರಾಣಾಯಾಮವನ್ನು ಸಿದ್ಧಮಾರ್ಗ, ಜ್ಞಾನಮಾರ್ಗ,ಮೋಕ್ಷ ಮಾರ್ಗ ಕೂಡ ಕಲಿತರು. ರಾಜಯೋಗ, ಹಠಯೋಗಗಳ ಅಭ್ಯಾಸದಿಂದ ಗುರುಗಳಲ್ಲಿ ಹೊಸ ಸ್ಪೂರ್ತಿ ತುಂಬಿತು. ಅಯ್ಯಾವು “ನೀನೊಬ್ಬ ಸಿದ್ದನಾಗುವೆ. ನೀನೊಬ್ಬ ತಯಾರಾಗು.” ಎಂದು ಆಶೀರ್ವದಿಸಿ ತಮ್ಮ ರಹಸ್ಯ ವಿದ್ಯೆಗಳ ಧಾರೆಯೆರೆದು ಕಳುಹಿಸಿಕೊಟ್ಟರು.

1888ರ ಶಿವರಾತ್ರಿಯ ಮಂಗಳ ಮುಹೂರ್ತದಲ್ಲಿ ಜನರನ್ನು ಸಂಘಟಿಸಿ ಅರವೀಪುರಂ ನದಿಯ ದಂಡೆಯ ಬಂಡೆಯೊಂದರ ಮೇಲೆ ಗುರುಗಳೇ ನದಿಗೆ ಹಾರಿ ಎತ್ತಿ ತಂದು ಶಿವಲಿಂಗವನ್ನು ಪ್ರತಿಷ್ಠಾಪಿಸುವ ಈ ಸಂದರ್ಭದಲ್ಲಿ ಸಕಲ ಜಾತಿ, ಧರ್ಮಗಳ ಜನರಿಗೆ ದೇಗುಲಕ್ಕೆ ಮುಕ್ತಪ್ರವೇಶ ನೀಡುವ ಮುಖೇನ ಧಾರ್ಮಿಕ-ಸಾಮಾಜಿಕ ಆದಿಯಾಗಿ ಎಲ್ಲಾ ರಂಗವನ್ನೂ ತಲ್ಲಣಗೊಳಿಸಿಬಿಟ್ಟರು. ಎಲ್ಲರೂ ಶಿವಧ್ಯಾನದಲ್ಲಿ ನಿರತರಾಗಿ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರವನ್ನು ಜಪಿಸುವುದರೊಳಗೆ ಗುರುಗಳು ಶಿವಲಿಂಗವನ್ನು ಪ್ರತಿಷ್ಠಾಪಿಸಿದರು.
ದೇವಾಲಯ ನಿರ್ಮಾಣಗೊಂಡ ಬಳಿಕ ಅಮೃತಶಿಲೆಯಲ್ಲಿ “ಜಾತಿ ಭೇದ – ಮತ ದ್ವೇಷವಿಲ್ಲದೆ
ಸರ್ವರೂ ಸೋದರರಂತೆ ಬಾಳುವ ಮಾದರಿ ನೆಲೆಯಿದು ||”
ಗುರುಗಳ ಸಂದೇಶವನ್ನು ಕೆತ್ತಲಾಯಿತು. ಇದರಿಂದ ಉದ್ರಿಕ್ತರಾದ ಮೇಲ್ವರ್ಗದ ಜನರ ಮುಖಂಡರ ಪ್ರಶ್ನಾ ಸುರಿಮಳೆಗೆ “ನಮ್ಮ ಶಿವನನ್ನು ನಾನು ಪ್ರತಿಷ್ಟಾಪಿಸಿದ್ದೇನೆ. ಅದರಲ್ಲೇನು ನಿಮಗೇನು ಸಮಸ್ಯೆ?” ಹೀಗೆ ಉತ್ತರಿಸಿ ಬಾಯಿಮುಚ್ಚಿಸಿದರು.
ಆ ನಂತರ ಶೋಷಿತರನ್ನು ಒಗ್ಗೂಡಿಸಿ ವಿದ್ಯಾಭ್ಯಾಸ, ಸ್ವಚ್ಚತೆ ಮತ್ತು ನೈರ್ಮಲ್ಯ, ದೈವಶ್ರದ್ಧೆಯನ್ನು ಎಲ್ಲರಲ್ಲೂ ಬೆಳೆಸುವುದೇ ಗುರುಗಳ ಈ ದೇವಾಲಯ ಸ್ಥಾಪನೆಯ ಪ್ರಧಾನ ಉದ್ದೇಶವಾಗಿತ್ತು. ಸಂಘಟನಾ ಪ್ರಜ್ಞೆ ಮತ್ತು ಏಕತೆಯನ್ನು ಜನರಲ್ಲಿ ಬಿತ್ತಿ ಕೃಷಿ-ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸುವುದರ ಮೂಲಕ ಜನರು ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಗತಿ ಸಾಧಿಸಬೇಕೆಂಬುದು ಅವರ ಆಶಯವಾಗಿತ್ತು.

ತರುವಾಯ ಗುರುಗಳು ಕೇರಳ -ಶ್ರೀಲಂಕಾದ್ಯಂತ ಸಂಚರಿಸಿ 70ಕ್ಕೂ ಅಧಿಕ ದೇವಾಲಯಗಳು ಅಲ್ಲಿಯೇ ವಿದ್ಯಾಮಂದಿರಗಳು ಜೊತೆಗೆ ಸುಂದರ ಉದ್ಯಾನವನಗಳನ್ನು ಸ್ಥಾಪಿಸಿದರು. ಗುರುಗಳ ಆದರ್ಶಗಳನ್ನು ಸಮಾಜದಲ್ಲಿ ಪ್ರಚಾರ ಪಡಿಸುವ ಬಗ್ಗೆ ಒಂದು ಮಂಡಳಿ ರಚಿಸಿದರು. ಅದರ ಹೆಸರೇ ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್.ಎನ್.ಡಿ.ಪಿ) ಆಗಿದ್ದು 1903ರಲ್ಲಿ ರಚನೆಗೊಂಡಿತ್ತು. ಆ ಸಂದರ್ಭದಲ್ಲಿ ಮೈಸೂರು ಮಹಾರಾಜರ ಆಸ್ಥಾನದ ವೈದ್ಯ ಡಾ|| ಪಲ್ಪು ಒಬ್ಬ ಸಂಘಟಿಕರಾಗಿ ಅಲ್ಲಿಗೆ ಬಂದಿದ್ದರು. ಸಿಲೋನ್ ನ ಒಂದು ದೇವಾಲಯದ ಗರ್ಭಗುಡಿಯಲ್ಲಿ ಲಿಂಗ ಪ್ರತಿಷ್ಟಾಪನೆಯ ಬದಲಿಗೆ ಒಂದು ಜ್ಯೋತಿಯನ್ನು ಬೆಳಗಿಸಿದರು. ಅದು ಇಂದಿಗೂ ಕೂಡ ಉರಿಯುತ್ತಿದಲ್ಲಿದೆ. ಅಲ್ಲಿ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿ ಎಂದು ಸಂದೇಶ ನೀಡಿದರು.
1913ರಲ್ಲಿ ಅಲ್ವಾಯಿಯಲ್ಲಿ ಅದ್ವೈತಾಶ್ರಮ ಸ್ಥಾಪಿಸಿ, 1912 ರಲ್ಲಿ ಕರ್ನಾಟಕದ ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇಗುಲ ಸ್ಥಾಪಿಸಿ ಮುಂದೆ ಪ್ರಸಿದ್ಧ ಯಾತ್ರಾಸ್ಥಳವಾಗುವುದೆಂದು ಹೇಳಿದ್ದರು ಅಂತೆಯೇ ಮಂಗಳೂರು ದಸರ ವಿಜೃಂಭಣೆಯಿಂದ ಜರಗುತ್ತದೆ. 1924ರಲ್ಲಿ ಫೆಬ್ರವರಿ 10ರಂದು ಏಷ್ಯಾ ಖಂಡದಲ್ಲಿಯೇ ಪ್ರಥಮ ಬಾರಿಗೆ ಶ್ರೀನಾರಾಯಣ ಗುರುಗಳು ಚಾರಿತ್ರಿಕ ವಿಶ್ವಧರ್ಮ ಸಮ್ಮೇಳನವನ್ನು ನಡೆಸಿದರು.

ಗುರುಗಳು ನಿಂತ ಸ್ಥಳದಿಂದಲೇ ಕಂದಾಚಾರಗಳನ್ನು ಖಂಡಿಸಿ ಮಧ್ಯಪಾನ ವ್ಯಸನಿಗಳನ್ನು – ಮಧ್ಯ ತಯಾರಿಸುವವರು ಮತ್ತು ಮಾರುವವರ ವಿರುದ್ಧ ಟೀಕಿಸಿದ್ದರು “ಮಧ್ಯಪಾನ ವಿಷ ಅದನ್ನು ತಯಾರಿಸಬೇಡಿ ಮತ್ತು ಮಾರಬೇಡಿ, ಕುಡಿಯಬೇಡಿ.”ಎಂದು ಅಲ್ಲದೇ ಅಲ್ಲಲ್ಲಿ ಮರೆಯಲ್ಲಿ ನಡೆಯುತ್ತಿದ್ದ ತೊಟ್ಟಿಲ ಮದುವೆ, ಬಹುಪತ್ನಿತ್ವ, ವರದಕ್ಷಿಣೆಯನ್ನು, ಅಪ್ರಾಪ್ತೆಯರ ಬಾಲ್ಯ ವಿವಾಹನ್ನು ತಡೆದರು, ಕ್ಷುದ್ರ ದೇವತೆಗಳ ಆರಾಧನೆಯ ಹೆಸರಿನಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ವಿರುದ್ಧ ಹೋರಾಟ ನಡೆಸಿ ನಿಲ್ಲಿಸಿದರು. ಎಲ್ಲರನ್ನೂ ಸಾತ್ವಿಕ ಶಿವಾರಾಧನೆಗೆ ತಂದರು. ಗುರುಗಳು ಹೋದಲೆಲ್ಲ ಸಾರ್ವಜನಿಕ ಭಾಷಣ, ಚರ್ಚೆ ಮತ್ತು ಕರಪತ್ರಗಳ ಮೂಲಕ ಜನಜಾಗೃತಿಯನ್ನು ಮೂಡಿಸಿದರು. ಭೂತ-ಪ್ರೇತನಾಗಗಳ ಪೂಜೆ, ದುಂದು ವೆಚ್ಚದಿಂದ ಕೂಡಿದ ಸಂಪ್ರದಾಯ ಮದುವೆಗಳು ಕುಟುಂಬದ ಹಾಗೂ ಸಮಾಜದ ಆರ್ಥಿಕ ಮತ್ತು ನೈತಿಕ ಅಧಃಪತನಕ್ಕೆ ದಾರಿ ಮಾಡುತ್ತದೆ ಎಂದು ತಿಳಿಹೇಳಿದರು. ಸಮಾಜದ ಯೋಗ್ಯ ತರುಣರನ್ನು ಆರಿಸಿ ಅವರಿಗೆ ಬೇಕಾದ ತರಬೇತಿ ಕೊಡಿಸಿ ಸಾಮಾಜಿಕ ಕ್ರಾಂತಿಯ ಕಹಳೆಯನ್ನು ಊದಿದರು.
ಗುರುಗಳ ಈ ಶ್ರಮದ ಹೋರಾಟದ ಫಲವೇ ಕೇರಳ ಮತ್ತು ದಕ್ಷಿಣ ಕನ್ನಡ ಕರಾವಳಿ ಪ್ರದೇಶ ಸಾಕ್ಷರತೆಯಲ್ಲಿ ಸಾಧನಾ ಪಥದಲ್ಲಿ ಸಾಗುತ್ತಿರುವುದು.

ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಜಗತ್ತಿಗೆ ಸಾರಿದರು. ಅಸ್ಪøಶ್ಯತೆಯನ್ನು ಹೋಗಲಾಡಿಸಲು ಶಾಂತಿಯುತ ಜ್ಞಾನಪೂರ್ಣ ಆಂದೋಲನ ನಡೆಸಿ ಆ ಕಾಲಕ್ಕೆ ಯಶಸ್ವಿಯಾದರು. ರವೀಂದ್ರನಾಥ ಠಾಗೋರರು ಭೇಟಿಯಾದರು ಅವರು “ಜಗತ್ತಿನ ಎಷ್ಟೋ ಸಂತರನ್ನು ಸಂಧಿಸಿರುವೆ. ಆದರೆ ನಾರಾಯಣ ಗುರುಗಳಂತಹ ತೇಜಸ್ವಿ ಪ್ರಗತಿಪರ ಕರ್ಮಯೋಗಿಯನ್ನು ನಾನೆಲ್ಲೂ ಕಂಡಿಲ್ಲ.”

ಮಹಾತ್ಮ ಗಾಂಧೀಜಿಯವರು ನಾರಾಯಣ ಗುರುಗಳನ್ನು ತಿರುವಾಂಕೂರಿನಲ್ಲಿ ಭೇಟಿಯಾದರು. ಅವರೂ ಕೂಡ ಗುರುಗಳನ್ನು ತಿರುವಾಂಕೂರಿನಲ್ಲಿ ಭೇಟಿಯಾದರು. ಅವರೂ ಕೂಡ ಗುರುಗಳ ಮಾತಿನಿಂದ ತುಂಬಾ ಪ್ರಭಾವಿತರಾದರು ಅವರ ಎಷ್ಟೋ ಕಾರ್ಯಕ್ರಮಗಳು ಗುರುಗಳ ಸಂದೇಶಗಳನ್ನು ಅಳವಡಿಸಿಕೊಂಡದ್ದನ್ನು ಗಮನಿಸಬಹುದು.
1927ರಲ್ಲಿ ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್.ಎನ್.ಡಿ.ಪಿ) ಆರಂಭಗೊಂಡು ವರ್ಕಳದ ಶಿವಗಿರಿ ಮಠ ಇದರ ಕೇಂದ್ರಸ್ಥಾನವಾಗಿದೆ. ಶಿವಗಿರಿ ಬೆಟ್ಟ, ಶಿವಗಿರಿ ಮಠವನ್ನು ಅಭಿವೃದ್ಧಿ ಪಡಿಸಿದ ಗುರುಗಳು ಆದಿಶಂಕರರು ಜಗತ್ತಿಗೆ ಬೋಧಿಸಿದ ಅದ್ವೈತ ತತ್ವವನ್ನು ತಮ್ಮದಾಗಿಸಿಕೊಂಡರು.

“ಬದುಕು ನಿಂತ ನೀರಾಗಬಾರದು ನಿರಂತರ ಹರಿಯುತ್ತಿರಬೇಕು. ಮತ ಯಾವುದಾದರೇನಂತೆ ಮನುಷ್ಯ ಒಳ್ಳೆಯವನಾದರೆ ಸಾಕು. ವಿದ್ಯೆಯಿಂದ ಪ್ರಬುದ್ಧರಾಗಿ ಸಂಘಟನೆಯಿಂದ ಬಲಿಷ್ಠರಾಗಿ.” ಮೊದಲಾದ ಸಂದೇಶಗಳನ್ನು ನೀಡಿದರು. ತಮ್ಮ 73ನೇ ಜನ್ಮದಿವಸದ ಸಂದರ್ಭದಲ್ಲಿ ಬಹಳ ಬಳಲಿಕೆಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಅವರ ದರ್ಶನಕ್ಕೆ ಬಂದ ಭಕ್ತರಿಗೆ ಉಪದೇಶ ಮಾತುಗಳನ್ನಾಡುತ್ತಿದ್ದರು. ಕೊನೆಯ ಕ್ಷಣ ಸಮೀಪಿಸಿದಾಗ ಜನನ-ಮರಣಗಳು ನಿಸರ್ಗ ನಿಯಂತ್ರಿತ ವ್ಯಾಪಾರಗಳು ಅದಕ್ಕಾಗಿ ಪರಿತಪಿಸಬೇಡಿ, ನಾನು ಹೋಗಿ ಬರುತ್ತೇನೆ. ವಿದ್ಯಾಭ್ಯಾಸ ಮತ್ತು ಸಂಘವನ್ನು ಮರೆಯಬೇಡಿ. ನಿಮಗೆಲ್ಲಾ ಶುಭವಾಗಲಿ ಎಂದು ಹಾರೈಸಿದರು. ನನ್ನ ಮನಸ್ಸಿಗೆ ಸಂಪೂರ್ಣ ಶಾಂತಿ ಲಭ್ಯವಾಗಿದೆ. ದೈವದಶಕಂ ಕೀರ್ತನೆಯನ್ನು ಹಾಡಿ ಎಂದು ಸೂಚನೆಕೊಟ್ಟು ಅದು ಮುಗಿಯುತ್ತಿದ್ದಂತೆಯೇ ಗುರುವರ್ಯರು ಮಹಾಸಮಾಧಿ ಪ್ರವೇಶಿಸಿಬಿಟ್ಟರು. ಆ ದಿನ ನಾಡನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುತ್ತಿದ್ದ ಮಹಾಚೇತನ ವಿಶ್ವಚೇತನದಲ್ಲಿ ಲೀನವಾಗಿಬಿಟ್ಟಿತ್ತು. ಅವರ ನಿಧನದ ಬಗ್ಗೆ ಪ್ರಬುದ್ಧ ಕೇರಳ ಎಂಬ ಹೆಸರಾಂತ ಪತ್ರಿಕೆ “ಬ್ರಹ್ಮಶ್ರೀ ನಾರಾಯಣ ಗುರುಗಳು ಯೋಗದಲ್ಲಿ ಪತಂಜಲಿ, ಜ್ಞಾನದಲ್ಲಿ ಶ್ರೀ ಶಂಕರ, ಧರ್ಮದಲ್ಲಿ ಮನು, ತ್ಯಾಗದಲಿ ಬುದ್ಧ, ಸ್ಥೈರ್ಯದಲ್ಲಿ ಶಿಬಿ, ಕರುಣೆಯಲ್ಲಿ ಏಸುವಿನಂತಿದ್ದ ಗುರುಗಳು ಮುಂದಿನ ತಲೆಮಾರಿನವರು ನಾರಾಯಣ ಗುರುಗಳನ್ನು ಗೌರವದಿಂದ ಪೂಜಿಸುವರು”. ಹೀಗೆ ಬರೆಯುತ್ತದೆ.

ಇಂದಿಗೂ ಕೂಡ ಶ್ರೀ ಗುರುಗಳು ಜ್ಯೋತಿ ಸ್ವರೂಪದಲ್ಲಿ ಶಿವಗಿರಿಯ ಮಠದ ಶಿಖರದಲ್ಲಿ ಸನಾತನ ಧರ್ಮಾಕಾಶಾದಲ್ಲಿ ಉಜ್ವಲ ನಕ್ಷತ್ರವಾಗಿ ಶೋಭಮಾನರಾಗಿದ್ದಾರೆ. ಅವರ ವಿಶ್ವಮಾನ್ಯ ಆದರ್ಶ ನಮ್ಮಗೆಲ್ಲರಿಗೂ ಸ್ಪೂರ್ತಿಯಾಗಲಿ ಸರ್ವರೂ ಪರಸ್ಪರ ಮಾನವೀಯ ಮೌಲ್ಯಗಳೊಂದಿಗೆ ಗೌರವಿಸಲಿ. ವಿದ್ಯೆಯಿಂದ ವಂಚಿತರಾದವರೆಲ್ಲರೂ ವಿದ್ಯಾವಂತರಾಗಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸದ್ಗುಣ ಸೆಲೆಯಾಗಿ ಸಮಾಜದ ಏಳ್ಗೆಗೆ ತಾನು ಏನಾದರು ಒಳಿತನ್ನು ಸಾಧಿಸುವ ಮೂಲಕ ನಾವು ಗುರುಗಳಿಗೆ ಸಲ್ಲಿಸುವ ಗೌರವವಾಗಿದೆ.

Leave a Reply