ಸಹಾಯ ಸ್ವೀಕರಿಸಿದವರಿಗೆ ಕೃತಜ್ಞರಾಗಿರಿ : ಸ್ವಾಮಿ ವಿವೇಕಾನಂದ

ಕೆಲವೊಮ್ಮೆ ನಾವು ಯಾರು ಯಾರಿಗೋ ಮಾಡಿದ ಸಹಾಯವನ್ನು ನೆನೆಯುತ್ತ “ಅವರಿಗೆ ಉಪಕಾರಸ್ಮರಣೆಯೇ ಇಲ್ಲ… ಅವರು ನನಗೆ ಕೃತಜ್ಞರಾಗಿರಬೇಕಿತ್ತು” ಎಂದೆಲ್ಲ ಗೊಣಗುತ್ತಾ ಇರುತ್ತೇವೆ. ವಾಸ್ತವದಲ್ಲಿ ಸಹಾಯ ಮಾಡುವುದು ನಮ್ಮ ಹೆಚ್ಚುಗಾರಿಕೆಯಲ್ಲ, ಅದು ಸಮಾಜಕ್ಕೆ ಪ್ರತಿಯಾಗಿ ನಮ್ಮ ಕರ್ತವ್ಯ. ಆದ್ದರಿಂದ, ಮತ್ತೊಬ್ಬರು ನಮ್ಮ ಸಹಾಯ ಸ್ಮರಿಸುತ್ತಾ ನಮ್ಮ ಹಿಡಿತದಲ್ಲಿ, ನಮ್ಮ ಮುಲಾಜಿನಲ್ಲಿ ಇರಬೇಕೆಂದು ಬಯಸುವುದು ನಮ್ಮ ವ್ಯಕ್ತಿತ್ವಕ್ಕೆ ಕುಂದು ತರುವ ಸಂಗತಿ.

ಇದಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ:

swami_vivekananda_76_400x400

ಸಮಾಜ ನಮಗೆ ಏನೆಲ್ಲವನ್ನೂ ನೀಡಿದೆ. ಅದಕ್ಕೆ ಪ್ರತಿಯಾಗಿ ನಮ್ಮ ಕರ್ತವ್ಯವೆಂದರೆ, ನಾವು ಇತರರಿಗೆ ಸಹಾಯಮಾಡುವುದು, ಸಮಾಜಕ್ಕೆ ಒಳ್ಳೆಯದನ್ನು ಮಾಡುವುದು. ಸಮಾಜಕ್ಕೆ ನಾವು ಒಳ್ಳೆಯದನ್ನು ಏಕೆ ಮಾಡಬೇಕು? ಮೇಲುನೋಟಕ್ಕೆ ಮಾತ್ರ ನಾವು ಸಮಾಜಕ್ಕೆ ಸಹಾಯ ಮಾಡುತ್ತಿರುತ್ತೇವೆ; ಆದರೆ, ಆ ಮೂಲಕ ನಾವು ನಿಜವಾಗಿಯೂ ನಮಗೆ ನಾವೇ ಸಹಾಯ ಮಾಡಿಕೊಳ್ಳುತ್ತಿರುತ್ತೇವೆ. ಹೀಗೆ ಸ್ವತಃ ನಾವು ಪ್ರಗತಿ ಹೊಂದಲು ಸಮಾಜಕ್ಕೆ ಸಹಾಯ ಮಾಡಬೇಕು.

ಎತ್ತರದ ಸ್ಥಾನದಲ್ಲಿ ನಿಂತು ಕೈಯಲ್ಲಿ ಮೂರು ಕಾಸನ್ನು ಹಿಡಿದುಕೊಂಡು ‘ಎಲಾ ಬಡವ, ಹಿಡಿ’ ಎಂದು ಹೇಳುವುದು ಸಹಾಯವಲ್ಲ. ಅದು ಸೇವೆಯಲ್ಲ. ಹಣ ಕೊಡುವ ಮೂಲಕ ನೀವು ಆತನಿಗೆ ಸಹಾಯ ಮಾಡುತ್ತಿರುವಂತೆ ಕಂಡರೂ ಅದರಿಂದ ಹೊಮ್ಮುವ ಸಕಾರಾತ್ಮಕತೆ ಸ್ವತಃ ನಿಮಗೆ ಉಪಕರಿಸುತ್ತಿರುತ್ತದೆ. ಆದ್ದರಿಂದ, ನಿಮ್ಮಿಂದ ಹಣ ಸ್ವೀಕರಿಸಿ ಸಕಾರಾತ್ಮಕ ಶಕ್ತಿ ಹರಡಲು ಸಹಾಯ ಮಾಡಿದ ಆ ಬಡವನಿಗೆ ಕೃತಜ್ಞರಾಗಿರಿ. ವಾಸ್ತವದಲ್ಲಿ ಧನ್ಯನಾಗುವವನು ದಾನ ಸ್ವೀಕಾರ ಮಾಡುವವರಲ್ಲ, ದಾನ ಕೊಡುವವರು.

ಜಗತ್ತಿನಲ್ಲಿ ನಿಮ್ಮ ದಯೆ – ಕರುಣೆಗಳನ್ನು ತೋರಿಸಲು, ಆ ಮೂಲಕ ನೀವು ಶುದ್ಧರೂ ಸಿದ್ಧರೂ ಆಗಲು ಅವಕಾಶ ದೊರೆತುದಕ್ಕಾಗಿ ನಿಮಗೆ ಉಪಕಾರ ಸ್ಮರಣೆ ಇರಲಿ. ಸತ್ಕಾರ್ಯಗಳಿಗೆಲ್ಲ ನಮ್ಮನ್ನು ಪವಿತ್ರರನ್ನಾಗಿಯೂ, ಪರಿಪೂರ್ಣರನ್ನಾಗಿಯೂ ಮಾಡುವ ಶಕ್ತಿ ಇರುತ್ತದೆ. ಅದನ್ನು ಹೊಂದಲು ಸಹಕಾರ ನೀಡಿದವರನ್ನು ಪ್ರೀತಿ ಗೌರವಗಳಿಂದ ನಮಿಸಿ. ಆಗ ಮಾತ್ರ ನಿಮ್ಮ ಸಹಾಯ, ನಿಮ್ಮ ಸೇವೆ ಸಾರ್ಥಕವಾಗುತ್ತದೆ.

Leave a Reply