ಯಾರೂ ತಲುಪಲಾಗದು ಯಾರನ್ನೂ… : ಅತ್ತಾರನ ಸೂಫಿ ಪದ್ಯ

“ತೌಬಾ ಬೋಧಿಸಲು ಬಂದಿರುವೆನು ನಾನು. ಪಶ್ಚಾತಾಪ ಪಟ್ಟು ಮರಳಿದರೆ ಅಧ್ಯಾತ್ಮವ ತೋರಿಸುವೆನು ನಾನು.” ಅಂದವನಿಗೆ ಸಿಕ್ಕ ಉತ್ತರವೇನು ಗೊತ್ತೆ? ಅತ್ತಾರನ ಪದ್ಯ ~ ಫರೀದುದ್ದೀನ್ ಅತ್ತಾರ್ | ಕನ್ನಡಕ್ಕೆ: ಸುನೈಫ್

ದೇವರನ್ನು ನಂಬಿರೆಂದು ಬೋಧಿಸಿ
ಕುಡುಕರನ್ನು ಸರಿದಾರಿಗೆ ತರೋಣವೆಂದು
ಗಡಂಗಿನ ಬಾಗಿಲು ತುಳಿದ ಆ ಮುಂಜಾನೆ
ಎಲ್ಲ ಧಾರ್ಮಿಕರಂತೆ ಕೈಯಲೊಂದು ಜಪಮಣಿಯಿತ್ತು
ಹೆಗಲಲೊಂದು ಮುಸಲ್ಲಾ ಬಿದ್ದುಕೊಂಡಿತ್ತು.

ಕುಡುಕರಲ್ಲಿ ಒಬ್ಬ ಕೇಳಿದ:
“ಶೇಖ್ ಮಹಾಶಯರಿಗೆ ಇಲ್ಲೇನು ತುರ್ತು?”

“ತೌಬಾ ಬೋಧಿಸಲು
ಬಂದಿರುವೆನು ನಾನು.
ಪಶ್ಚಾತಾಪ ಪಟ್ಟು ಮರಳಿದರೆ
ಅಧ್ಯಾತ್ಮವ ತೋರಿಸುವೆನು ನಾನು.”

ಅವನೆಂದ:
“ತೊಲಗಾಚೆ ಮಣಮಣ ಸನ್ಯಾಸಿ,
ಚೂರು ಮದಿರೆಯ ಚರಟದಲ್ಲಾದರೂ
ಮಿಂದೊಮ್ಮೆ ಬಾ ಇಲ್ಲಿ.
ನನ್ನ ಮಧುಪಾತ್ರೆಯಿಂದ
ಒಂದು ಹನಿ ಚಿಮುಕಿಸಿದರೂ
ನಿನ್ನ ಮಸೀದಿ ಮತ್ತು ಪ್ರಾರ್ಥನೆಗಳು
ಅದುರಿ ಬೀಳುವವು ಅದರಲ್ಲಿ.
ನಿನ್ನ ನಂಬಿಕೆ, ವಯ್ಯಾರ, ಗುಣ ಸಂಪತ್ತು
ನಿನ್ನಲ್ಲೇ ಇರಲಿ,
ಖರ್ಚಾಗದು ಅವೆಲ್ಲ ಈ ಮಧುಶಾಲೆಯಲ್ಲಿ.
ಕಾಬಾದೊಳಗೆ ಮೂರ್ತಿಯಿಟ್ಟು
ಪೂಜಿಸುತ್ತಿದ್ದ ಜಾಹಿಲರಿಗೂ
ನಿನಗೂ ಅಂತಹ ವ್ಯತ್ಯಾಸವೇನಿದೆ ಹೇಳು.”

ಮಾತು ಮುಗಿಸಿದ ಆತ
ಒಂದು ಬಟ್ಟಲು ಸುರಿದು ಕೊಟ್ಟ.
ಅಷ್ಟೇ, ಮನಸು ಆರ್ದ್ರವಾಗಿ, ಮಂದವಾಗಿ
ಕರಗಿದವು ಮೂಢನಂಬಿಕೆಗಳು.

ಹರಿದು ಚೂರಾದ ಬದುಕು
ಮತ್ತೆ ತಿಳಿಯಾಗಿ ಹರಿಯಿತು,
ಪ್ರಿಯತಮನೊಳು ಒಂದಾಗಲು
ಕ್ಷಣಗಳಲ್ಲಿ ಸಾಧ್ಯವಾಯಿತು.

ನನ್ನೊಳಗಿನ ಫರೋವನಿಂದ ಮುಕ್ತಿ ಸಿಕ್ಕಾಗ
ತೂರಿಸಿನಾ ಮಲೆಯ ಮೇಲಿನ
ಮೂಸಾ ನಾನಾಗಿದ್ದೆ.
ಎರಡು ಲೋಕಗಳಾಚೆ ನನ್ನ ನಾ ಕಂಡಾಗ
ಎಲ್ಲ ಬಿರುದುಗಳಾಚೆ ನಾ ನಿಂತಿದ್ದೆ.

ಎದೆಯಾಳದಿಂದುಸಿದ ಆ ಸೂರ್ಯನ ಪ್ರಭೆಗೆ
ಸ್ವರ್ಗದಲ್ಲಿ ಬೆತ್ತಲಾಗಿ ನಿಂತಿದ್ದೆ ನಾನು.
“ಓ ರಹಸ್ಯಗಳ ಒಡೆಯನೇ ಹೇಳು,
ನಾ ತಲುಪುವೆ ಎಂದು ನನ್ನ ಪ್ರಿಯತಮನನ್ನು?”

ಉತ್ತರ ಹೀಗೆ ಬಂತು:
“ಲೋ ಪೆದ್ದು ಪೆದ್ದು ದಡ್ಡನೇ,
ಯಾರಾದರೂ ತಲುಪುತ್ತಾರೆಯೇ ಅವನನ್ನು!
ತಲುಪಲಾಗದು ಯಾರನ್ನೂ!”

ನಿನ್ನ ಆಟವನ್ನಂತು ನಿಲ್ಲಿಸಬೇಡ;
ದಣಿದು ಕುಸಿದು ಬೀಳುವೆ ನೀನು,
ಹಾಗೇ ಗೆಲ್ಲುವೆ ನೀನು.

 

Leave a Reply