ಕರ್ನಾಟಕದಲ್ಲಿ ನಾವು ನವರಾತ್ರಿಯನ್ನು ಹೇಗೆ ಆಚರಿಸುತ್ತೇವೆ ಎಂಬುದು ನಮಗೆ ಗೊತ್ತಿದೆ. ಇದು ನಾಡಹಬ್ಬ ಎಂಬ ಸಂಭ್ರಮಕ್ಕೆ ಪಾತ್ರವಾದ ವೈಭವದ ಉತ್ಸವ. ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ಮಾಹಿತಿ ಇಲ್ಲಿದೆ…
ಅವಿಭಜಿತ ಆಂಧ್ರದಲ್ಲಿ
ತೆಲುಗು ಭಾಷಿಕರ ಪಾಲಿನ ಅತಿ ಮಹತ್ವದ ಹಬ್ಬ ದಸರಾ. ಬದುಕು ಕಟ್ಟಿಕೊಡುವ ವೃತ್ತಿಗಳ ಆರಂಭಕ್ಕೆ, ಹೊಸ ವ್ಯವಹಾರ ಕುದುರಿಸುವುದಕ್ಕೆ, ನವ ಗೃಹ ನಿರ್ಮಾಣ ಶುರು ಮಾಡುವುದಕ್ಕೆ, ಹೊಸ ವಾಹನ ಖರೀದಿಗೆ ವಿಜಯದಶಮಿಯಂಥ ಸುಮುಹೂರ್ತವೇ ಬೇರೆ ಇಲ್ಲವೆಂಬ ನಂಬಿಕೆ ಅಲ್ಲಿದೆ. ಅವರಲ್ಲೂ ‘ಆಯುಧ ಪೂಜೆ’ ಇದೆ. ಭಾರತದ ಎಲ್ಲೆಡೆಯಿಂದ ಬಂದಂಥ ಸರ್ವಭಾಷಿಕರಿರುವ, ಸರ್ವಧರ್ಮೀಯರಿರುವ ಹೈದರಾಬಾದಿನಂಥ ಬೃಹನ್ನಗರಗಳಲ್ಲಿ ನಿಮಗೆ ದಸರೆಯ ಹಲವು ರೀತಿಯ ಆಚರಣೆಗಳು ನೋಡಲು ಸಿಗುತ್ತವೆ.
ನಮ್ಮಲ್ಲಿರುವ ಹಾಗೆಯೇ ಆಂಧ್ರ ಪ್ರದೇಶದಲ್ಲೂ ವಿಜಯದಶಮಿಯ ದಿನ ಬನ್ನಿ ವಿನಿಮಯ, ಮತ್ತು ಶುಭ ಹಾರೈಕೆಯ ಪದ್ಧತಿ ಇದೆ.
ಆಂಧ್ರದಲ್ಲಿ ಎಲ್ಲ ದುರ್ಗಾ ಮಂದಿರಗಳಲ್ಲಿ ದೇವಿಗೆ ಶೋಡಷ ಉಪಚಾರ ಸಮೇತ ಪೂಜೆ ನಡೆಯುತ್ತದೆ. ನವರಾತ್ರಿಯ ಒಂಬತ್ತೂ ದಿನಗಳಲ್ಲಿ ದುರ್ಗಾ ಮಾತೆಯನ್ನು ಅವಳ ಬೇರೆಬೇರೆ ರೂಪಗಳಿಂದ ಅಲಂಕರಿಸಲಾಗುತ್ತದೆ. ಹೀಗಾಗಿ ನಾವು ಬಾಲ ತ್ರಿಪುರ ಸುಂದರಿ, ಮಹಿಷಾಸುರ ಮರ್ದಿನಿ, ಅನ್ನಪೂರ್ಣಾ, ಕಾಳಿ, ರಾಜರಾಜೇಶ್ವರಿ, ಕನಕ ದುರ್ಗಾ, ಲಕ್ಷ್ಮಿ, ಸರಸ್ವತಿ ಹಾಗೂ ಗಾಯತ್ರಿ ದೇವಿಯ ರೂಪಗಳಲ್ಲಿ ದೇವಿಯ ದರ್ಶನ ಪಡೆಯಬಹುದು.
ವಾರಂಗಲ್ಲಿನ ಭದ್ರಕಾಳಿಯ ಆಲಯವನ್ನು ಈ ಸಂದರ್ಭದಲ್ಲಿ ದರ್ಶಿಸಲೇಬೇಕು. ಇದು ಬಾದಾಮಿಯ ಇಮ್ಮಡಿ ಪುಲಿಕೇಶಿ ಕಟ್ಟಿಸಿದ ಮಂದಿರವಂತೆ. ಸಾಕ್ಷಾತ್ ಭದ್ರಕಾಳಿ ದಿವ್ಯ ಮತ್ತು ಭವ್ಯ ರೂಪದಲ್ಲಿ ನೆಲೆಸಿದ್ದು, ದೇಶದ ಎಲ್ಲ ಕಡೆಯ ಕಾಳೀ ಭಕ್ತರೂ ಇಲ್ಲಿಗೆ ಆಗಮಿಸುತ್ತಾರೆ. ಭದ್ರಕಾಳಿ ಇಲ್ಲಿ ಶಾಂತಾಕಾರಳಾಗಿ ಕೂತುಕೊಂಡಿದ್ದಾಳೆ. ಶಿವಾಲಯದಲ್ಲಿ ನಂದಿ ಇರುವ ಜಾಗ ನಿಮಗೆ ಗೊತ್ತಲ್ಲ… ಆ ಜಾಗದಲ್ಲಿಯೇ ಇಲ್ಲಿ ತಾಯಿಯ ವಾಹನವಾದ ಸಿಂಹವಿದೆ. ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ‘ಶರನ್ನವರಾತ್ರಿ’, ಚೈತ್ರ ಮಾಸದಲ್ಲಿ ‘ವಸಂತ ನವರಾತ್ರಿ’ ಆಚರಣೆ ಇಲ್ಲಿಯ ವಿಶೇಷ. ಆಗಿನ ಪೂಜಾ ವಿಧಿಗಳೂ ವಿಶೇಷವೆ. ಇನ್ನು ಆಷಾಢದ ಪೌರ್ಣಮಿಯ ದಿನ ಅಮ್ಮನನ್ನು ‘ಶಾಖಾಂಬರೀ ದೇವಿ’ಯ ರೂಪದಲ್ಲಿ ಅಲಂಕರಿಸಿ ಪೂಜಿಸುತ್ತಾರೆ.
ವಿಜಯವಾಡಾದಲ್ಲಿ, ಕೃಷ್ಣಾ ದಡದಲ್ಲಿರುವ ಇಂದ್ರಕೀಲಾದ್ರಿ ಎಂಬ ಬೆಟ್ಟದ ಮೇಲೆ ಶತಮಾನಗಳಷ್ಟು ಪ್ರಾಚೀನವಾದ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ಮಂದಿರವಿದೆ. ಅಲ್ಲಿಯ ನವರಾತ್ರಿ ಮತ್ತು ದಸರೆಗೆ ಆ ನಾಡಿನ ಅತಿ ದೊಡ್ಡ ದೇವಿ ಉತ್ಸವ. ಹತ್ತಾರು ಸಾವಿರ ಭಕ್ತರು ದೇಶ-ವಿದೇಶಗಳಿಂದ ಆಗ ಅಲ್ಲಿಗೆ ಆಗಮಿಸುತ್ತಾರೆ. ವಿಜಯ ದಶಮಿಯ ದಿನ ವಿಜಯವಾಡದಲ್ಲಿ ನಡೆಯುವ ‘ತೆಪ್ಪೋತ್ಸವ’ಕ್ಕಂತೂ ಇನ್ನೂ ಹೆಚ್ಚಿನ ಜನಸಂದಣಿ ಸೇರುತ್ತದೆ. ದೊಡ್ಡದೊಂದು ಪುಷ್ಪಾಲಂಕೃತ ತೆಪ್ಪದಲ್ಲಿ ದುರ್ಗಾ ಮಾತೆಯ ವಿಗ್ರಹವನ್ನಿರಿಸಿ ಮೆರೆಸುತ್ತಾರೆ. ಇದು ರಾತ್ರಿ ನಡೆಯುವುದರಿಂದ ವಿಶೇಷ ವಿದ್ಯುದಲಂಕಾರ ಕಣ್ಣಿಗೆ ಹಬ್ಬವೆನಿಸುತ್ತದೆ.
ಇನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡದ ಶ್ರೀ ಮಹಿಷಾಸುರ ಮರ್ದಿನಿ ಮತ್ತು ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಿಯರ ಮಂದಿರಗಳ ನವರಾತ್ರಿಯ ವೈಭವವಂತೂ ಅನಿರ್ವಚನೀಯ. ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಿ ಲೋಕಪಾವನಿ. ಆಕೆ ವೈಶ್ಯ ಬಾಂಧವರ ಕುಲದೇವಿ. ಅವರ ಏಕಮಾತ್ರ ಪವಿತ್ರ ಕ್ಷೇತ್ರ.
ಉಳಿದಂತೆ, ಆಂಧ್ರ ನಾಡಿನಾದ್ಯಂತ ಆಸ್ತಿಕರು, ಮಹಿಳೆಯರು ದೇವಿ ಸ್ತೋತ್ರ, ಲಲಿತಾ ಸಹಸ್ರನಾಮ ಪಠಣ ಹಾಗೂ ದೇವಿ ಪುರಾಣ ಶ್ರವಣಗಳಲ್ಲಿ ತೊಡಗಿರುತ್ತಾರೆ.
ತಮಿಳು ನಾಡಿನಲ್ಲಿ ನಿರಾಹಾರ ದರ್ಶನ
ತಮಿಳು ನಾಡಿನ ದಸರೆಯಲ್ಲಿ ಲಕ್ಷ್ಮಿ, ಸರಸ್ವತಿ, ಮತ್ತು ಶಕ್ತಿ ದೇವಿಯರ ಪೂಜೆಗೆ ಮಹತ್ವ. ಇಲ್ಲಿಯ ಸಮುದ್ರ ತಟದ ಕುಲಸೇಕರ ಪಟ್ನಂ ಎಂಬಲ್ಲಿ ನಡೆಯುವ ದಸರಾ ಆಚರಣೆ ಬೇರೆಲ್ಲೂ ಕಾಣಸಿಗದಂಥದ್ದು. ಅಲ್ಲಿಯ ಮುತ್ಥರಮ್ಮನ್ ಆಲಯದ ಗರ್ಭಗುಡಿಯಲ್ಲಿ ನಮಗೆ ಶಿವ-ಶಕ್ತಿಯರಿಬ್ಬರೂ ಒಂದೇ ವಿಗ್ರಹದಲ್ಲಿ ದರ್ಶನವೀಯುತ್ತಾರೆ.
ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ 1,500,000 ಕ್ಕೂ ಹೆಚ್ಚು. ಮೊದಲ ದಿನ ಸಂಕಲ್ಪಗೈದು, ಬಲ ಮುಂಗೈಗೆ ಪವಿತ್ರ ಕಂಕಣ (ದಾರ) ಕಟ್ಟಿಕೊಳ್ಳುವ ಭಕ್ತರು ನಂತರದ ಒಂಬತ್ತು ದಿನಗಳಕಾಲ ನಿರಾಹಾರ ವ್ರತ ಆಚರಿಸುತ್ತಾರೆ. ಪ್ರತಿ ದಿನ ಒಬ್ಬೊಬ್ಬ ದೇವರಂತೆ ವೇಷ ಧರಿಸುವ ಹರಕೆಯೂ ಇಲ್ಲುಂಟು. ಉಳಿದವರು ಈ ವೇಷಧಾರಿಗಳಿಗೆ ದಕ್ಷಿಣೆ ನೀಡಿ ನಮಸ್ಕರಿಸುತ್ತಾರೆ. ಹೀಗೆ ಪಡೆದ ದಕ್ಷಿಣೆ ಪಡೆದವರೆಲ್ಲ ಆ ಹಣವನ್ನು ಕೊನೆಯ ದಿನ ದೇವರ ಹುಂಡಿಗೆ ಹಾಕಿ ಕೈಮುಗಿಯುತ್ತಾರೆ. ವಿವಿಧ ದೇವತೆಗಳ ವೇಷದಲ್ಲಿ ನಲಿಯುವ ಮಕ್ಕಳ ಸಂಭ್ರಮ ಕಣ್ಣಿಗೆ ಹಬ್ಬ. ನವರಾತ್ರಿ ಎಂದರೆ ಈ ಸುತ್ತಮುತ್ತಲಿನ ಭಾಗಕ್ಕೆ ಒಂದು ವರ್ಣಮಯ, ಸುಗಂಧಮಯ, ಸಂತೋಷಮಯ ಸಮಯ.
ಕೇರಳದಲ್ಲಿ ಸರಸ್ವತಿ ಪೂಜೆ
ಇಲ್ಲಿ ಕೊನೆಯ ಮೂರು ದಿನ ಅಂದರೆ ಅಷ್ಟಮಿ, ನವಮಿ ಹಾಗೂ ದಶಮಿಯಂದು ಮಾತ್ರ ಪೂಜೆ. ‘ಸರಸ್ವತಿ ಪೂಜಾ’ ಎಂದಿದಕ್ಕೆ ಹೆಸರು. ಇದರ ಮೊದಲ ಹಂತವೇ ‘ಪೂಜಾ ವೆಯ್ಪು’. ಪುಸ್ತಕಗಳನ್ನು ಪೂಜೆಗೆಂದು ಓರಣವಾಗಿ ಹೊಂದಿಸಿಡುವುದು ‘ಅಷ್ಟಮಿ’ಯ ದಿನವೇ. ಅವರವರ ಮನೆಯಾಗಿರಬಹುದು, ಓಣಿಯ ಪರಂಪರಾಗತ ಪಾಠಶಾಲೆ ಆಗಿರಬಹುದು, ಇಲ್ಲವೇ ಸಮೀಪದ ಮಂದಿರವೂ ಆಗಿರಬಹುದು… ‘ಪುಸ್ತಕಾಲಂಕಾರ’ ಮತ್ತು ಪೂಜೆ ನೋಡುವಂತಿರುತ್ತದೆ.
ಹೀಗೆ ಪೂಜಿಸಲ್ಪಡುವ ಪುಸ್ತಕಗಳನ್ನು ವಿಜಯದಶಮಿಯ ದಿನ ಬೆಳಗಿನ ಪೂಜೆಯ ನಂತರವಷ್ಟೇ ಓದಲು ತೆಗೆದುಕೊಳ್ಳಬಹುದು. ಹೀಗೆ ಮರಳಿ ತೆಗೆದುಕೊಳ್ಳುವುದನ್ನು ‘ಪೂಜಾ ಎಡುಪ್ಪು’ ಎನ್ನಲಾಗುತ್ತದೆ.
ವಿಜಯದಶಮಿಯ ದಿನವೇ ಕೇರಳದಲ್ಲಿ ‘ವಿದ್ಯಾರಂಭಂ.’ ಇದನ್ನು ‘ಎಳುಥಿನಿರುತು’ ಎಂದೂ ಕರೆಯುವುದಿದೆ. ಅಂದಿನಿಂದಲೇ ಎರಡು-ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸದ ಶುರುವಾತು. ತಟ್ಟೆಯಲ್ಲಿ ಹರಡಿದ ಅಕ್ಕಿಯ ಮೇಲೆ ಮಗುವಿನ ತೋರ್ಬೆರಳಿನಿಂದ ಮೊದಲ ಸಲ ಬರೆಯಿಸುವಿಕೆ.
ಮನೆಯ ಹಿರಿಯರ ಇಲ್ಲವೇ ಗುರುವಿನ ಸಮ್ಮುಖದಲ್ಲಿ ಮಗುವಿನಿಂದ ‘ಹರಿ ಶ್ರೀ ಗಣಪತಯೇ ನಮಃ’ ಎಂದು ಬರೆಯಿಸಿ, ಮಗುವಿನಿಂದ ಅದನ್ನು ಓದಿಸುವುದು ಇಲ್ಲಿಯ ಮುಖ್ಯ ಕ್ರಿಯೆ. ಇದೇ ಸಂದರ್ಭದಲ್ಲಿ ‘ಆಯುಧ ಪೂಜೆ.’ ಕೋಯಿಕೋಡಿನಲ್ಲಿ ವಿಜಯದಶಮಿ ಆಚರಿಸಲ್ಪಡುವುದು ‘ತಾಳಿ ಶ್ರೀ ರೇಣುಕಾ ಮಾರಿಯಮ್ಮನ್ ಕೊವಿಲ್’ನಲ್ಲಿ.