ಮೂಲ : ಜೆಬುನ್ನಿಸಾ (ಮಕ್’ಫಿ) | ಭಾವಾನುವಾದ : ಚೇತನಾ ತೀರ್ಥಹಳ್ಳಿ
ನನ್ನ ಮುದಗೊಳಿಸುತ್ತಿದ್ದ ಮದಿರೆ ರುಚಿ ಕಳೆದುಕೊಂಡಿತು,
ಮಕ್‍ಫಿ, ಲೋಕದಲ್ಲಿ ನನ್ನಿರುವು ಅರ್ಥ ಕಳೆದುಕೊಂಡಿತು.
ಇನ್ನಿಲ್ಲಿ ಕಳೆಯಲ್ಲದೆ, ಹಿಡಿ ಹುಲ್ಲೂ ಬೆಳೆಯದು,
ಜೀವನದ ಕಡುವಸಂತ ಮತ್ತೆಂದೂ ಮರಳದು.
ಖುಷಿಯನರಸಿ ಕೊನೆತನಕ ಅಂಡಲೆದೆ ನಾನು,
ಚಾಚಿರುವ ಖಾಲಿ ಕೈ, ಗೆಳೆಯರನು ಸೆಳೆಯದು.
ದೇವ ಕರುಣೆಯ ಧಾರೆ ಹರಿಸದಿರೆ ನನ್ನ ಮೇಲೆ,
ಪ್ರಾರ್ಥನೆಯ ಬೆಲೆ ಕವಡೆಗೂ ಕಡೆಯಾಗಿ ಹೋಗುವುದು.
ದುಃಖಿಸಬೇಡ ಮಕ್‍ಫಿ,
ದಿಟ್ಟಿಸಿ ನೋಡು ಅಂತರಂಗದೊಳಗೆ;
ಜಗದ ಸಂಭ್ರಮವೆಲ್ಲ ಸುಳ್ಳು!
ಪ್ರೇಮದ ಹಾದಿಯಲಿ ಪಾದಗಳು ದಣಿದಷ್ಟೂ,
ಹೊಸ ಶಕ್ತಿ ಹೊಮ್ಮುವುದು;
ಹೊಸ ಬಯಕೆ ಚಿಮ್ಮುವುದು.