ಬಲಿ ಮತ್ತು ತ್ರಿವಿಕ್ರಮ : ಪಾಡ್ಯಮಿ ಕಲಿಸುವ ಪಾಠ

ಬಹಳ ಬಾರಿ ಹೀಗಾಗುತ್ತದೆ. ನಮ್ಮ ಬಲದ ಬಲವಂತೂ ಸರಿಯೇ. ಎದುರಿಗೆ ಇರುವವರ ದೌರ್ಬಲ್ಯವೂ ನಮಗೆ ಹೆಚ್ಚುವರಿ ಬಲವಾಗಿ ಸೇರ್ಪಡೆಯಾಗುತ್ತದೆ. ವಾಮನ ತ್ರಿವಿಕ್ರಮನಾಗಿ ಬೆಳೆದನೆಂಬ ಸಂಕೇತದ ತಿರುಳು ಇದೇ ಆಗಿದೆ. ಇದು ನಮ್ಮೊಳಗೂ ನಡೆಯಬಹುದು ~ ಆನಂದಪೂರ್ಣ

trivikrama

ಭಾಗವತ ಪುರಾಣದಲ್ಲಿ ಒಂದು ಕಥೆ ಬರುತ್ತದೆ. ಈ ಕಥೆ ಮಹಾವಿಷ್ಣುವಿನ ಐದನೇ ಅವತಾರದ ಕುರಿತಾದದ್ದು. ದೈತ್ಯ ರಾಜ ಬಲಿ ಚಕ್ರವರ್ತಿ ಇಂದ್ರಲೋಕವೂ ಸೇರಿದಂತೆ ಭೂಮ್ಯಾಕಾಶಗಳನ್ನು ಗೆದ್ದು ಕೊಂಡಿರುತ್ತಾನೆ. ಅದನ್ನು ಉಪಾಯದಿಂದ ಮರಳಿ ಗಳಿಸಿಕೊಳ್ಳಲು ವಿಷ್ಣುವು ವಾಮನನ ಅವತಾರ ತಾಳಿ ಬರುತ್ತಾನೆ. ಅದಕ್ಕಾಗಿಯೇ ಕಶ್ಯಪ ಪ್ರಜಾಪತಿ ಮತ್ತು ಅದಿತಿಯರ ಮಗನಾಗಿ ಹುಟ್ಟುತ್ತಾನೆ. ಕುಳ್ಳ ಗಾತ್ರದ – ಮುದ್ದು ಮುದ್ದಾದ ಬ್ರಾಹ್ಮಣ ವಟು ವಾಮನ, ಮಹಾಯಾಗ ನಡೆಸುತ್ತಿದ್ದ ಬಲಿ ಚಕ್ರವರ್ತಿಯ ಬಳಿ ಸಾರುತ್ತಾನೆ. ದಾನವಾಗಿ ಮೂರು ಹೆಜ್ಜೆ ಭೂಮಿಯನ್ನು ಕೇಳುತ್ತಾನೆ. ಅಸುರ ಗುರು ಶುಕ್ರಾಚಾರ್ಯರಿಗೆ ಸಂಚಿನ ವಾಸನೆ ಬಡಿಯುತ್ತದೆ. ಬಲಿಯನ್ನು ತಡೆಯುತ್ತಾರೆ. ಬಲಿ ಅವರ ಮಾತು ಕೇಳದೆ ಮೂರು ಹೆಜ್ಜೆ ದಾನ ನೀಡುತ್ತಾನೆ. ಅದನ್ನು ಪಡೆಯುತ್ತಲೇ ತ್ರಿವಿಕ್ರಮನಾಗಿ ಬೆಳೆಯುವ ವಾಮನ, ಎರಡು ಹೆಜ್ಜೆಗಳಿಂದ ಭೂಮ್ಯಾಕಾಶಗಳನ್ನು ಅಳೆದು, ಮೂರನೆಯದನ್ನು ಎಲ್ಲಿಡಲೆಂದು ಕೇಳುತ್ತಾನೆ. ಕೊಟ್ಟ ಮಾತು ತಪ್ಪದ ಬಲಿ ಚಕ್ರವರ್ತಿ, ತನ್ನ ತಲೆಯ ಮೇಲಿಡೆಂದು ಕೋರುತ್ತಾನೆ. ಅದರಂತೆ ಮೂರನೆ ಹೆಜ್ಜೆಯನ್ನು ಬಲಿಯ ತಲೆ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುತ್ತಾನೆ ತ್ರಿವಿಕ್ರಮ. ಅನಂತರ ದೈತ್ಯ ಚಕ್ರವರ್ತಿಯ ಸಜ್ಜನಿಕೆ, ಜನಪ್ರಿಯತೆಗಳಿಂದ ಸಂಪ್ರೀತನಾಗಿ ವರಗಳನ್ನು ನೀಡುವುದು ಬೇರೆ ವಿಷಯ. ಇದು ಭಾಗವತದಲ್ಲಿ ಬರುವ ವಾಮನಾವತಾರದ ಕತೆಯ ಸಾರಾಂಶ.

ಅವತಾರದ ತಾತ್ತ್ವಿಕತೆ
ವಾಮನ ಅಂದರೇನೆ ಕುಳ್ಳ ಎಂದು. ಗಾತ್ರದಲ್ಲಿ, ಆಕಾರದಲ್ಲಿ ಕುಬ್ಜ. ಈ ರೂಪ ಯಾಕೆ? ಎದುರಿಗಿನ ವ್ಯಕ್ತಿಯ ವಿಶ್ವಾಸ ಗಳಿಸಲು. ಆತನ ಅಹಂಕಾರಕ್ಕೆ ಪುಷ್ಟಿ ಒದಗಿಸಲು. ನಾವಾದರೂ ನೋಟಕ್ಕೆ ದುರ್ಬಲನಾಗಿ ಕಾಣುವ, ದೀನನಾಗಿ ಕಾಣುವ ವ್ಯಕ್ತಿಯನ್ನು ನಿರುಪದ್ರವಿ ಎಂದುಕೊಳ್ಳುತ್ತೀವಲ್ಲವೆ? ಈ ಅನ್ನಿಸಿಕೆ ಹುಟ್ಟುವುದು, ನಾವು ದೇಹದೊಂದಿಗೆ ಗುರುತಿಸಿಕೊಂಡಿರುವಾಗ ಮಾತ್ರ. ಹಾಗೂ ಇತರರನ್ನೂ ದೇಹದ ಅಳತೆಯಿಂದಲೇ ಅಳೆಯುವಾಗ ಮಾತ್ರ. ಈ ಆಕಾರ ಏನು ಮಾಡೀತೆಂಬ ಅಹಂಕಾರ ನಮ್ಮೊಳಗೆ ಜಾಗೃತವಾಗುತ್ತದೆ, ನಾವು ಎಚ್ಚರ ತಪ್ಪುತ್ತೇವೆ.

ಬಲಿ ಚಕ್ರವರ್ತಿಗೆ ಆಗಿದ್ದೂ ಹಾಗೆಯೇ. ಆತ ಮೊದಲೇ ಮೂರು ಲೋಕ ಗೆದ್ದವನು. ಆ ಸಂಭ್ರಮಾಚರಣೆಗೆ ಮಹಾಯಾಗವನ್ನು ಮಾಡುತ್ತಿದ್ದವನು. ಈ ಸಂದರ್ಭದಲ್ಲಿ ಚತ್ರಿ ಹಿಡಿದು ಬಂದ ಕುಳ್ಳ ಬ್ರಾಹ್ಮಣ ವಟು ಮೂರು ಹೆಜ್ಜೆ ಭೂಮಿಯನ್ನು ದಾನ ಕೇಳಿದ್ದು ಆತನಿಗೆ ತಮಾಷೆಯಾಗಿ ಕಂಡಿರಬೇಕು. ಗುರು ಶುಕ್ರಾಚಾರ್ಯರು ಆತನನ್ನು ತಡೆಯುತ್ತಾರೆ. ಅವರು ಜ್ಞಾನಿಗಳು. ಹೀಗೆ ಯಾಗದ ವೇಳೆ ಯಾರೋ ಒಬ್ಬ ಬಂದು ಮೂರು ಹೆಜ್ಜೆ ಕೇಳುತ್ತಾನೆ ಎಂದರೆ ಅದು ಸುಮ್ಮನೆ ಇರಲಿಕ್ಕಿಲ್ಲ ಎಂಬುದನ್ನು ಅವರು ಊಹಿಸಬಲ್ಲರು. ಶುಕ್ರಾಚಾರ್ಯರು ದೇಹದ ಹೊರತಾಗಿ ಯೋಚಿಸುತ್ತಿದ್ದಾರೆ. ಅವರು ವಾಮನನ ಮನಸ್ಸನ್ನು ಓದಲು ಯತ್ನಿಸುತ್ತಿದ್ದಾರೆ. ಸ್ಥೂಲದ ಹಿಂದಡಗಿದ ಸೂಕ್ಷ್ಮದ ಸಾಮರ್ಥ್ಯವನ್ನು ಗ್ರಹಿಸುತ್ತಿದ್ದಾರೆ. ಆದ್ದರಿಂದಲೇ ಶುಕ್ರಾಚಾರ್ಯರು ಹೇಳುತ್ತಾರೆ, `ತಡಿ, ಚಕ್ರವರ್ತಿ, ಕುಳ್ಳನಾದರೇನು? ಪ್ರಳಯಾಂತಕನಿವನು!’ ಎಂದು.

ಆದರೆ ಬಲಿ ಕೊಡುಗೈ ದಾನಿ ಎಂಬ ಹೆಸರು ಪಡೆದವನು. ಹೀಗಿರುವಾಗ ಮಹಾಯಾಗದ ಸಮಯದಲ್ಲಿ ಕೇಳಿದ್ದನ್ನು ಇಲ್ಲ ಎಂದು ಹೇಳಲು ಸಾಧ್ಯವೇ? ಕೆಲವರು ಹೀಗೆ ಹೆಸರನ್ನು ಉಳಿಸಿಕೊಳ್ಳಲು ಹೋಗಿ ಪೆದ್ದುತನದ ಕೆಲಸವನ್ನು ಮಾಡುತ್ತಾರೆ. ಹೆಸರು ಕೆಟ್ಟರೂ ತಾನು ಕೆಡಬಾರದು ಎಂಬ ಯೋಚನೆಗೆ ಅಂಥವರಲ್ಲಿ ಆಸ್ಪದವಿರುವುದಿಲ್ಲ. ತಾನೇ ಶಾಶ್ವತ ಅಲ್ಲ ಎಂದಾದ ಮೇಲೆ ಹೆಸರು ಉಳಿದು ಉಪಯೋಗವಾದರೂ ಏನು? ಇರುವಷ್ಟು ದಿನ ತನಕ ಸ್ವಸ್ಥವಾಗಿ ಇರಬೇಕು. ಯಾರಿಗೂ ತೊಂದರೆ ಕೊಡದೆ ಇದ್ದರೆ ಸಾಕು ಎನ್ನುವುದು ಇಂಥಾ ಧೀರರಿಗೆ ಒಗ್ಗದ ಮಾತು. ಅವರ ಪ್ರಕಾರ ಯಾರಿಗೂ ತೊಂದರೆ ಮಾಡದೆ ಉಳಿಯುವುದರಲ್ಲಿ ಅಂಥಾ ಸ್ವಾರಸ್ಯವೇನಿಲ್ಲ. ಸ್ವಾರಸ್ಯ ಇರುವುದು ಇತರರಿಗೆ `ಉಪಕಾರ’ ಮಾಡುವುದರಲ್ಲಿ. ಏಕೆಂದರೆ ಅಲ್ಲಿ ಅವರ `ಅಹಂ’ ತೃಪ್ತಿಗೊಳ್ಳುತ್ತದೆ. ಬಲಿ ಚಕ್ರವರ್ತಿ ಮಾಡಿದ್ದೂ ಅದನ್ನೇ. `ಈ ಕುಳ್ಳನಿಗೆ ಹೆದರಿ ಹೆಸರು ಕೆಡಿಸಿಕೊಳ್ಳುವುದೇ!?’ ಎಂದವನು ಯೋಚಿಸಿರಬೇಕು. ಆದ್ದರಿಂದಲೇ ಆತ ಗುರುವಿನ ಮಾತನ್ನೂ ಧಿಕ್ಕರಿಸಿ ನಿಂತ. ಬಲಿ ಧರ್ಮಭಿರುವೇ ಆಗಿದ್ದಿದ್ದರೆ, ಗುರುವಾಕ್ಯ ಪರಿಪಾಲನೆಯನ್ನು ಮಾಡಬೇಕಿತ್ತಲ್ಲವೆ? ತನ್ನ ಕೀರ್ತಿ ಚಿಂತನೆಗಿಂತ ಗುರುವಾಕ್ಯಕ್ಕೆ ಮನ್ನಣೆ ಕೊಡುವುದೇ ಹೆಚ್ಚು ಧಾರ್ಮಿಕ ನಡವಳಿಕೆಯಾಗಿರುತ್ತಿತ್ತು. ಇಲ್ಲಿ ಆತನ ಮನಸ್ಸನ್ನು, ಅಸ್ತಿತ್ವವನ್ನು ಅಹಂಕಾರ ನುಂಗಿಹಾಕಿತ್ತು.

ವಾಮನನ ಕೈಗೆ ಕಮಂಡಲದ ಅರ್ಘ್ಯ ಬೀಳುತ್ತಲೇ ಪವಾಡ ನಡೆಯಿತು. ಮೂರಡಿ ದೇಹದ ಕುಳ್ಳ ಜಗದಾಕಾರ ಬೆಳೆದು ನಿಂತ. ಕೆಲಸವಾಗಬೇಕಾದಾಗ ಯಾರಿಗಾದರೂ ವಿನಯವಂತಿಕೆಯೇ ಮುಖ್ಯ ಅಸ್ತ್ರ. ನಾವು ಗೆಲ್ಲುತ್ತೇವೆ ಎಂಬ ಸುಳಿವು ಸಿಕ್ಕುತ್ತಲೇ ಆತ್ಮವಿಶ್ವಾಸ ಹಿಗ್ಗಿ ನಾವೇ ಮುಗಿಲಾಗಿಬಿಡುತ್ತೇವೆ. ಗೆಲುವಿನ ಸೂಚನೆ ನಮ್ಮಿಂದ ಎಂಥಾ ಕೆಲಸವನ್ನಾದರೂ ಸಾಧ್ಯವಾಗಿಸಿಬಿಡುತ್ತದೆ.
ವಾಮನನಿಗೆ ಬಲ ಬಂತು. ಆತನಲ್ಲಿ ನೈತಿಕತೆಯೂ ಇತ್ತು. ಆದ್ದರಿಂದಲೇ ಆತನ ಬಲಕ್ಕೆ ಮತ್ತಷ್ಟು ಪುಷ್ಠಿ ಬಂತು. ಅವನಲ್ಲಿದ್ದುದು ಎಂಥ ನೈತಿಕತೆ? ಮೂರು ಹೆಜ್ಜೆ ಭೂಮಿ ಕೇಳಿ ಲೋಕಕ್ಕೆ ಲೋಕವನ್ನೆ ಅಳೆಯಬಹುದೆ ಹಾಗೆಲ್ಲ? ಎಂದು ಕೇಳಬಹುದು. ವಾಮನ ದೇವತೆಗಳ ಪರವಾಗಿ ಬಂದವನು. ಆತನದ್ದು ದೇವಕಾರ್ಯ. ದೇವಕಾರ್ಯಗಳೆಲ್ಲವೂ ನೈತಿಕವೇ ಅಲ್ಲವೆ? ಅಲ್ಲೊಂದು ಸಂಕೇತ ಇರುತ್ತದೆ. ಲೋಕ ಕಲ್ಯಾಣದ ಉದ್ದೇಶ ಇರುತ್ತದೆ. ಆ ಹೊತ್ತಿಗೆ ಅದು ನಮ್ಮ ವಿಚಾರಕ್ಕೆ ವಿಕಾರವಾಗಿ ತೋರಬಹುದು. ಆದರೆ ಅದರೊಳಗಿನ ತಿರುಳು ದೀರ್ಘಕಾಲದ ಫಲ ನೀಡುವಂಥದ್ದು.

ಬಲಿಚಕ್ರವರ್ತಿ ಉಳಿದ ದೈತ್ಯರಂತಲ್ಲ. ಆತ ಧರ್ಮ ಪರಾಯಣ. ಪ್ರಜಾಪಾಲಕ. ಸಮರ್ಥ ಆಡಳಿತಗಾರ. ಎಲ್ಲರಿಗೂ ಅವನನ್ನು ಕಂಡರೆ ಪ್ರೀತಿ. ಆತ ತನ್ನ ತೋಳ್ಬಲದಿಂದಲೇ ಇಂದ್ರನನ್ನು ಸೋಲಿಸಿ ದೇವಲೋಕ ಗೆದ್ದುಕೊಂಡಿದ್ದ. ಆದರೆ ಅವನು ದೈತ್ಯರ ಕುಲದವನು. ಅವನೊಬ್ಬ ಉತ್ತಮನಾಗಿದ್ದರೆ ಸಾಕಾಗುವುದಿಲ್ಲ. ಅವನ ಪರಿವಾರವೂ ಆ ಯೋಗ್ಯತೆ ಹೊಂದಿರುವುದು ಮುಖ್ಯವಾಗುತ್ತದಲ್ಲವೆ? ಇದು ಹೇಗೆಂದರೆ, ಪ್ರಜಾಪ್ರಭುತ್ವದಲ್ಲಿ ನಮ್ಮಿಂದ ಪ್ರಧಾನಿಯಾಗಿಯೋ ಮುಖ್ಯಮಂತ್ರಿಯಾಗಿಯೋ ಚುನಾಯಿಸಲ್ಪಟ್ಟವರು ಉತ್ತಮರಾಗಿದ್ದರೆ ಸಂತೋಷವೇ. ಆದರೆ ಅವರ ಸಚಿವ ಸಂಪುಟದ ಸದಸ್ಯರು ಭ್ರಷ್ಟರೂ ದುಷ್ಟರೂ ಆಗಿದ್ದರೆ ಪ್ರಯೋಜನವೆಲ್ಲಿಯದು? ಅಂಥವರ ಕೈಗೆ ಅಧಿಕಾರ ಸಿಕ್ಕು ಮತ್ತಷ್ಟು ದುರ್ಗತಿಯೇ ಒದಗುವುದಲ್ಲವೆ?

ಮುಖ್ಯ ಹುದ್ದೆಯಲ್ಲಿ ಇರುವವನಿಗೆ ಅವನದೇ ರಾಜಕಾರ್ಯಗಳಿರುತ್ತವೆ. ಪ್ರಜೆಗಳು ನೇರ ಸಂಪರ್ಕಕ್ಕೆ ಬರುವುದು ಉಸ್ತುವಾರಿಯ ಅಧಿಕಾರಿಗಳು ಹಾಗೂ ಸಚಿವರೊಡನೆ. ಆದ್ದರಿಂದ ಮುಖ್ಯ ಹುದ್ದೆಯ ಆಡಳಿತಗಾರನೊಬ್ಬ ಮಾತ್ರವಲ್ಲ, ಅವನ ಪರಿವಾರವೂ ಸಜ್ಜನಿಕೆ ಹೊಂದಿರುವುದು, ಉತ್ತಮ ಹಿನ್ನೆಲೆ ಹೊಂದಿರುವುದು ಅಗತ್ಯವಾಗುತ್ತದೆ. ಬಲಿಯನ್ನು ಮಟ್ಟಹಾಕುವಲ್ಲಿಯೂ ಇದೇ ತರ್ಕ ಅನ್ವಯವಾಗಿದ್ದು. ಆತನ ಕುಲದ ಹಿನ್ನೆಲೆ ಮತ್ತು ಪರಿವಾರದ ದುಷ್ಟ ಕಾರ್ಯಗಳ ದಾಖಲೆಯೇ ಆತನ ನಿವಾರಣೆಗೆ ಮೂಲವಾಯಿತು. ಜೊತೆಗೆ ಬಲಿಯ ಅಹಂಕಾರದಿಂದ ಉಂಟಾದ ಮೈಮರೆವೂ ಸೇರಿಕೊಂಡಿತು. ಆತನ ಈ ದೌರ್ಬಲ್ಯ ವಾಮನನ ಬಲವಾಯಿತು.

ಬಹಳ ಬಾರಿ ಹೀಗಾಗುತ್ತದೆ. ನಮ್ಮ ಬಲದ ಬಲವಂತೂ ಸರಿಯೇ. ಎದುರಿಗೆ ಇರುವವರ ದೌರ್ಬಲ್ಯವೂ ನಮಗೆ ಹೆಚ್ಚುವರಿ ಬಲವಾಗಿ ಸೇರ್ಪಡೆಯಾಗುತ್ತದೆ. ವಾಮನ ತ್ರಿವಿಕ್ರಮನಾಗಿ ಬೆಳೆದನೆಂಬ ಸಂಕೇತದ ತಿರುಳು ಇದೇ ಆಗಿದೆ. ಇದು ನಮ್ಮೊಳಗೂ ನಡೆಯಬಹುದು. ನಮ್ಮಲ್ಲಿ ನೈತಿಕತೆ ಇದ್ದರೆ, ನಮ್ಮ ಕಾರ್ಯೋದ್ದೇಶ ಒಳಿತಿನೆಡೆಗೆ ಇದ್ದರೆ ಹಾಗೂ ಎದುರಾಳಿಯಲ್ಲಿ ವ್ಯಕ್ತಿಗತ (ದೇಹದ ದೌರ್ಬಲ್ಯವಲ್ಲ) ದೌರ್ಬಲ್ಯವಿದ್ದರೆ, ನಮ್ಮೊಳಗಿ ವಾಮನಾಕಾರದ ಆತ್ಮವಿಶ್ವಾಸ ವರ್ಧಿಸಿ ತ್ರಿವಿಕ್ರಮನೆತ್ತರಕ್ಕೆ ಬೆಳೆಯಬಲ್ಲದು. ಮುಖ್ಯ, ನಾವು ಅಂತಹ ಶುದ್ಧಿ ಮತ್ತು ಸಾಮರ್ಥ್ಯಗಳನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕಷ್ಟೆ.

3 Comments

Leave a Reply