“ಇಂದು ನಾವು ಬಳಸುತ್ತಿರುವ ನಾನಾವಿಧ ಉಪ್ಪುಗಳು ಪ್ರಾಚೀನಕಾಲದಲ್ಲಿರಲಿಲ್ಲ. ಷಡ್ರಸಗಳಲ್ಲಿ ಒಂದಾದ ಉಪ್ಪನ್ನು ಸ್ವಲ್ಪ ಪ್ರಮಾಣದಲ್ಲಿ ಪ್ರತಿಯೊಬ್ಬರೂ ಆಹಾರದಲ್ಲಿ ಬಳಸುವ ಇಚ್ಛೆಯುಳ್ಳವರೇ! ಆದರೆ ಹೆಚ್ಚು ಪ್ರಮಾಣದಲ್ಲಿ ಉಪ್ಪನ್ನು ಬಳಸಿದರೆ ತ್ರಿದೋಷಗಳಾದ ವಾತ ಪಿತ್ಥ ಕಫಗಳು ವೃದ್ಧಿಯಾಗಲು ಹೇತುವಾಗುತ್ತದೆ” ಎನ್ನುತ್ತಾ ಪಂಚಲವಣಗಳ ಬಗ್ಗೆ ಬರೆದಿದ್ದಾರೆ ಚಂದ್ರಶೇಖರ ನಂಗಲಿ
“ಉಪ್ಪಿಗಿಂತ ರುಚಿಯಿಲ್ಲ ; ತಾಯಿಗಿಂತ ಬಂಧುವಿಲ್ಲ” ಎಂಬ ಗಾದೆ ಉಪ್ಪಿನ ರುಚಿಗೆ ತೊಡಿಸಿದ ಭಾವತೇಜದ ಕಿರೀಟ. “ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ, ಊರಿಗೆ ದ್ರೋಹಮಾಡಿ ಬದುಕಲು ಎಳಸಬೇಡ” ಎಂಬ ಕನ್ನಡ ಚಿತ್ರಗೀತೆ ಕೂಡಾ ಉಪ್ಪಿನ ಘನತೆಗೆ ಏರಿಸಿದ ಬಾವುಟ. ಇಂಥ ಉಪ್ಪು ನೈಸರ್ಗಿಕವಾಗಿ ದೊರೆಯುವುದಾದರೂ, ಮನುಷ್ಯ ತನ್ನ ಜಾಣ್ಮೆಯಿಂದ ಕೃತಕವಾಗಿಯೂ ಉಪ್ಪನ್ನು ತಯಾರಿಸಲು ಕಲಿತಿದ್ದಾನೆ. ಈ ಉಪ್ಪಿನ ರುಚಿಗೆ ಬಿದ್ದ ಸಾಕುಪ್ರಾಣಿಗಳು ಉಪ್ಪುಂಡ ಕಾರಣಕ್ಕೆ ಮನುಷ್ಯರಿಗಿಂತ ಹೆಚ್ಚು ನಂಬಿಕೆಯಿಂದ ನಡೆದು ಕೊಳ್ಳುತ್ತಿವೆ. ಮನುಷ್ಯ ಮಾತ್ರ ‘ನಮಕ್ ಹರಾಮ್’ ಆಗಿ (=ಉಪ್ಪುಂಡ ದ್ರೋಹಿ) ಹೆಸರಾಗಿದ್ದಾನೆ.
ಇಂದು ನಾವು ಬಳಸುತ್ತಿರುವ ನಾನಾವಿಧ ಉಪ್ಪುಗಳು ಪ್ರಾಚೀನಕಾಲದಲ್ಲಿರಲಿಲ್ಲ. ಷಡ್ರಸಗಳಲ್ಲಿ ಒಂದಾದ ಉಪ್ಪನ್ನು ಸ್ವಲ್ಪ ಪ್ರಮಾಣದಲ್ಲಿ ಪ್ರತಿಯೊಬ್ಬರೂ ಆಹಾರದಲ್ಲಿ ಬಳಸುವ ಇಚ್ಛೆಯುಳ್ಳವರೇ! ಆದರೆ ಹೆಚ್ಚು ಪ್ರಮಾಣದಲ್ಲಿ ಉಪ್ಪನ್ನು ಬಳಸಿದರೆ ತ್ರಿದೋಷಗಳಾದ ವಾತ ಪಿತ್ಥ ಕಫಗಳು ವೃದ್ಧಿಯಾಗಲು ಹೇತುವಾಗುತ್ತದೆ
ಟೇಬಲ್ ಸಾಲ್ಟ್ ಅಥವಾ ಅಯೋಡೈಸ್ಡ್
ಸಾಲ್ಟ್ ಎಲ್ಲರೂ ಬಳಸುತ್ತಾರೆ. ಸೋಡಿಯಂ ಕ್ಲೋರೈಡ್ ಮತ್ತು ಸೋಡಿಯಂ ಅಲುಮಿನೋಸಿಲಿಕೇಟ್ ಗೆ ಅಯೋಡೈನ್ ಮಿಶ್ರಣ ಮಾಡಿದಾಗ ಟೇಬಲ್ ಸಾಲ್ಟ್ ಲಭ್ಯ! ಅಮೆರಿಕಾದಲ್ಲಿ 1924 ರಲ್ಲಿ ಮೊದಲಬಾರಿಗೆ ಉಪ್ಪಿಗೆ ಅಯೋಡೈನ್ ಬೆರೆಸಲಾಯಿತು. ನಮ್ಮ ದೇಹದಲ್ಲಿ ಅಯೋಡೈನ್ ಕೊರತೆಯಿಂದ ಥೈರಾಯಿಡ್ ಗ್ರಂಥಿಗಳಲ್ಲಿ ಆಗುವ ಊತ ರೋಗಕ್ಕೆ ‘ಗವತಲಮ್ಮ’ (Goitre) – ಈ ಮಿಶ್ರಣವನ್ನು ಸೂಚಿಸಲಾಗಿದೆ. ಬಹು ಹಿಂದಿನಿಂದ ಒರಟಾದ ಹರಳುಪ್ಪುಗಳನ್ನು
( Coarse-grained Salts ) ಮಾಂಸ ಕೆಡದಂತೆ ಇರಿಸಲು ( Koshering meat) ಬಳಸುತ್ತಿದ್ದುದರಿಂದ ಇಂಥ ಉಪ್ಪನ್ನು ‘ಕೆಡದ ಉಪ್ಪು’ (koshering salt) ಎಂದೂ ಕರೆಯುವರು. ನೈಸರ್ಗಿಕವಾಗಿ ಸಿಕ್ಕುವ ಉಪ್ಪುಗಳಲ್ಲದೆ ಕೃತಕವಾಗಿಯೂ – ಕನಿಷ್ಠ ಪ್ರಮಾಣದ ಶಾಖದಿಂದ ಹಿಡಿದು ಅತ್ಯಧಿಕ ಪ್ರಮಾಣದ ಶಾಖದ ಬಳಕೆಯ ಮೂಲಕ – ತಯಾರಾಗುವ ಉಪ್ಪುಗಳಿವೆ.
೧ ) ಸಮುದ್ರ ಲವಣ
ಮಹಾತ್ಮ ಗಾಂಧಿಯವರ ಉಪ್ಪಿನ ಸತ್ಯಾಗ್ರಹ ಇತಿಹಾಸ ಪ್ರಸಿದ್ಧವಾದುದು. ಯುಗಯಾತ್ರೀ ಪರಂಪರೆಯ ಮೂಲಕ ಸಮುದ್ರದಿಂದ ನೇರವಾಗಿ ಉಪ್ಪಿನ ಗದ್ದೆಗಳಮೂಲಕ ಉಪ್ಪಿನ ರಾಶಿಯನ್ನು ನೈಸರ್ಗಿಕವಾಗಿ ಪಡೆದುಕೊಳ್ಳುವುದು ಭಾರತೀಯರ ಜೀವನಶೈಲಿಯಾಗಿತ್ತು.
ಇದರ ಮೇಲೆ ತೆರಿಗೆ ಹಾಕಿದ ಬ್ರಿಟಿಷ್ ಪ್ರಭುತ್ವವನ್ನು ವಿರೋಧಿಸಿ ಗಾಂಧಿ ನಡೆಸಿದ ದಂಡಿಯಾತ್ರೆ ದೇಶದಲ್ಲಿ ಸಂಚಲನವನ್ನೇ ಸೃಷ್ಟಿಸಿತು. ಸಮುದ್ರಮಾತೆ ತನ್ನ ಮಕ್ಕಳಿಗೆ
ಉಣಿಸುವ ಕೈತುತ್ತುಗಳಿಗೆ ಬ್ರಿಟಿಷರಿಗೇಕೆ
ತೆರಿಗೆ ಕಟ್ಟಬೇಕು ? ಎಂಬ ಪ್ರತಿಭಟನೆ ಮುಗಿಲು ಮುಟ್ಟಿತು. ಇದು ಉಪ್ಪಿಗೆ ದೊರೆತ ಘನವಿಜಯ! ಈ ಉಪ್ಪನ್ನೇ ತಾಯಿಗೆ ಹೋಲಿಸಿ ರುಚಿಯನ್ನು ಮಾತೃ ಸಂವೇದನೆಗೊಳಪಡಿಸಲಾಗಿದೆ. ಪಿತ್ಥವನ್ನು ಶಮನಗೊಳಿಸುವ, ಸ್ವಲ್ಪಮಟ್ಟಿಗೆ ರೇಚನ ಕಾರಕವಾದ, ಜೀರ್ಣಕ್ರಿಯೆಗೆ ಸಹಕರಿಸುವ ರುಚಿವರ್ಧಕವಾದ ಈ ಉಪ್ಪು ಹೃದಯಕ್ಕೆ ಒಳ್ಳೆಯದು ಮತ್ತು ಕೋಲಿಕ್ ಎಂಬ ಉದರವ್ಯಾಧಿಗೂ ಉತ್ತಮವಾದುದು!
೨ ) ಸೈಂಧವ ಲವಣ
ನಿಸರ್ಗದತ್ತವಾದ ಈ ಖನಿಜಲವಣವನ್ನು ರಾಕ್ ಸಾಲ್ಟ್ ಅಥವಾ ಹಿಮಾಲಯನ್ ಸಾಲ್ಟ್ ಎಂದು ಕರೆಯುತ್ತಾರೆ. Halite ಎಂಬ ಖನಿಜಮೂಲದಿಂದ ಸೈಂಧವ ಲವಣ ಸಿಗುತ್ತದೆ. ಪಾಕಿಸ್ತಾನದ ಪಂಜಾಬ್ ನಲ್ಲಿರುವ ಉಪ್ಪುಗಣಿಗಳಿಂದ ಬಿಳಿ ಮತ್ತು ಗುಲಾಬಿ ಬಣ್ಣದ ರಾಕ್ ಸಾಲ್ಟ್ ಲಭ್ಯ. ಅಮೆರಿಕದ ಉತಾಹ್ (UTAH) ಉಪ್ಪು ಗಣಿಗಳಲ್ಲೂ ರಾಕ್ ಸಾಲ್ಟ್ ಸಿಗುತ್ತದೆ. ಸಿಂಧ್ ಪ್ರಾಂತ್ಯಜನ್ಯ ಎಂಬರ್ಥದಲ್ಲಿ (=ಸಿಂಧು + ಜ ) ಆಯುರ್ವೇದವು ‘ಸೈಂಧವ ಲವಣ’ ಎಂದು ಕರೆಯುವುದು. ಇದರಲ್ಲಿ ಕೂಲಿಂಗ್ ಎನೆರ್ಜಿ ಇರುವುದರಿಂದ ಪಿತ್ಥ ಸುಧಾರಣೆಗೆ ಪರಿಣಾಮಕಾರಿ. ಇತರ ಉಪ್ಪುಗಳ ತರಹ ಅಲ್ಲದ ಸೈಂಧವ ಲವಣವು ತ್ರಿದೋಷ (=ವಾತ ಪಿತ್ಥ ಕಫ) ನಿವಾರಿಣಿ. ದೃಷ್ಟಿಶಕ್ತಿ – ರುಚಿವರ್ಧಕ – ಕಾಮೋದ್ದೀಪಕ ಪರಿಣಾಮವುಳ್ಳ ಈ ಉಪ್ಪು ಬಿಕ್ಕಳಿಕೆಯನ್ನು ತಡೆದು
ಹೃದಯಕ್ಕೆ ಚೈತನ್ಯ ನೀಡುತ್ತದೆ. ಚರಕ ಸಂಹಿತೆಯು ದೈನಂದಿನ ಬಳಕೆಯಲ್ಲಿ ಸೈಂಧವ ಲವಣವನ್ನು ಅಳವಡಿಸಿ ಕೊಳ್ಳಲು ಸೂಚಿಸಿದೆ.
೩) ವಿಡಾ ಲವಣ
ಇದು ಕೃತಕವಾಗಿ ತಯಾರಾಗುವ ಉಪ್ಪು. ವಿವಾದಾಸ್ಪದವಾಗಿರುವ ಈ ಉಪ್ಪಿನಲ್ಲಿ ಆಲ್ಕಲೈನುಗಳಿರುವುದರಿಂದ ಸ್ವಲ್ಪಮಟ್ಟಿಗೆ ಕಹಿರುಚಿ ಹೊಂದಿದೆ. ವಿಡಾ ಲವಣವು ರೋಮಕ ಲವಣ ಮತ್ತು ಅಮಲಕೀ ಚೂರ್ಣಗಳ ಮಿಶ್ರಣವಾಗಿದ್ದು , 6 ಗಂಟೆಗಳ ಕಾಲ ಹೀಟರುಗಳಲ್ಲಿಟ್ಟು ಕಾಯಿಸುವುದರಿಂದ ಹರಳುಗಟ್ಟಿದ ವಿಡಾ ಲಭಿಸುವುದು (=ರಸತರಂಗಿಣಿ ). ರಸೇಂದ್ರ ಚೂಡಾಮಣಿ ಮತ್ತು ಆಯುರ್ವೇದ ಪ್ರಕಾಶ ಗ್ರಂಥಗಳ ಪ್ರಕಾರ
ಕರೀರ ( Capparis decidua ) ಮತ್ತು ಪೀಲು ( Salvadora Percica) ಮರದ
ಕಟ್ಟಿಗೆಗಳನ್ನು ಸುಟ್ಟು ಬೂದಿಮಾಡಿ ಸಂಸ್ಕರಿಸಿ ಪಡೆಯಲಾಗುವುದು. ಪ್ರಾಚೀನಕಾಲದಲ್ಲಿ ಮಣ್ಣು ಅಥವಾ ಸೆಗಣಿಯನ್ನು ಸುಟ್ಟು ಉಪ್ಪು ತಯಾರಿಸುತ್ತಿದ್ದರೆಂದು ತಿಳಿದು ಬರುತ್ತದೆ. ಇತರೆಡೆಗಳಲ್ಲಿ ಇಟ್ಟಂಗಿ, ಆವಿಗೆ, ಸುಣ್ಣದ ಗೂಡಿನ ಉಳಿಕೆಗಳಿಂದಲೂ ವಿಡಾ ಲವಣ ಪಡೆಯುವುದುಂಟು. ವಿಧಾನವು ಯಾವುದಾದರೂ ಆಗಲಿ ಅಂತಿಮ ಪರಿಣಾಮದ ವಸ್ತು ಸೋಡಿಯಂ ಕ್ಲೋರೈಡ್!
೪) ಸೌವರ್ಚಲ ಲವಣ/ಸೋಚಲ ಲವಣ
ಹಿಂದಿ ಭಾಷೆಯಲ್ಲಿ ‘ಕಾಲಾ ನಮಕ್’
(=ಕಪ್ಪು ಉಪ್ಪು) ಎಂದು ಕರೆಯುತ್ತಾರೆ.
ಸ್ವಲ್ಪಮಟ್ಟಿಗೆ ಗಂಧಕಾಮ್ಲದ ರುಚಿ ಮತ್ತು ವಾಸನೆಯನ್ನು ಹೊಂದಿರುತ್ತದೆ. ಸೈಂಧವ ಲವಣವನ್ನು Halite Ore ನಿಂದ ಹೇಗೋ ಹಾಗೆಯೇ ಸೌವರ್ಚಲ ಲವಣವನ್ನೂ ಪಡೆಯುತ್ತಾರೆ. ಇದರ ಖನಿಜವನ್ನು ಸೆರಾಮಿಕ್ ಕಡಾಯಿಗಳಲ್ಲಿ ಸೀಲುಮಾಡಿ, ಬಾಬುಲ್ ಮರದ ( Akasia gum tree) ‘ತ್ರಿಫಲ’ ತಿರುಳಿನೊಂದಿಗೆ ಬೆರೆಸಿರುತ್ತಾರೆ. 24 ಗಂಟೆಗಳ ಕಾಲ ಕುಲುಮೆಯಲ್ಲಿಟ್ಟು ಸುಟ್ಟು ಬೂದಿ ಮಾಡಿ ಸಂಸ್ಕರಿಸಿ ಈ ಲವಣವನ್ನು ಪಡೆಯಲಾಗುವುದು. ಆಯುರ್ವೇದ ಶಾಸ್ತ್ರದಲ್ಲಿ ‘ಶುದ್ಧ ಸ್ವಾರ್ಜಿಕ ಕ್ಷಾರ’ ಎಂಬ ಹೆಸರುಳ್ಳ ಈ ಲವಣವನ್ನು ವಾಷಿಂಗ್ ಸೋಡಾದಲ್ಲಿ ಬಳಸುತ್ತಾರೆ. ಸೋಡಿಯಂ ಕಾರ್ಬೊನೇಟ್ ಮತ್ತು ರಾಕ್ ಸಾಲ್ಟ್ ಎರಡನ್ನೂ ನೀರಿನಲ್ಲಿ ಬೆರೆಸಿ ಚೆನ್ನಾಗಿ ಕಾಯಿಸಿ ಕಪ್ಪು ಹರಳುಗಳಾಗುವ ವರೆಗೂ ಇಟ್ಟು ‘ಕಾಲಾ ನಮಕ್’ ಸಂಗ್ರಹ ಮಾಡುತ್ತಾರೆ. ದೇಹದ ನಾಳಗಳನ್ನು ಶುದ್ಧಮಾಡಿ ಜೀರ್ಣ ಕ್ರಿಯೆಗೆ ನೆರವಾಗುವ ಈ ಕಾಲಾ ನಮಕ್ ಉದರಸಂಬಂಧಿಯಾದ ಕೋಲಿಕ್/ಮಲಬದ್ಧತೆ ನಿವಾರಿಸುತ್ತದೆ. ಹೃದಯಕ್ಕೆ ಒಳ್ಳೆಯದು ಮತ್ತು ಗಂಟಲನ್ನು ಸೋಂಕಿನಿಂದ ಕಾಪಾಡುವುದು.
೫ ) ರೋಮಕ ಲವಣ/ಸಾಂಬಾರ್ ಸಾಲ್ಟ್
ರಾಜಾಸ್ತಾನದ ಸುಪ್ರಸಿದ್ಧ ‘ಸಾಂಬಾರ್ ಸರೋವರ’ ದ ತೀರಗಳ ಉಪ್ಪಿನ ಗದ್ದೆಗಳಿಂದ ಪಡೆದುಕೊಳ್ಳುವ ಉಪ್ಪೇ ಸಾಂಬಾರ್ ಉಪ್ಪು ! ಇದಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ‘ವ್ಯಾವಯೀ’ = ದೇಹದಾದ್ಯಂತ ಬೇಗನೆ ಹರಡಿಕೊಳ್ಳುವ ಲವಣ ಎನ್ನುತ್ತಾರೆ. ವಾತಹರ ಗುಣವನ್ನು ಹೊಂದಿರುವ ಈ ಸಾಂಬಾರ್ ಉಪ್ಪು ನಮ್ಮ ಶರೀರದ ಅಂತರ್ ನಾಳಗಳನ್ನು ಶುದ್ಧೀಕರಿಸುವುದು.
ಔದ್ಭಿಡ ಲವಣ : ಇದು ಭೂಮಿಯಿಂದ ಲಭಿಸುವ ಲವಣ. ಉಪ್ಪುಪ್ಪಾಗಿರುವ ಆಲ್ಕಲೈನ್ ಮಣ್ಣಿನಿಂದ ತಯಾರಿಸುವರು. ದೇಹದ ಸೂಕ್ಷ್ಮನಾಳಗಳಿಗೆ ಒಳ್ಳೆಯದು. ರೋಮಕ ಮತ್ತು ಔದ್ಭಿಡ ಲವಣಗಳನ್ನು ಒಂದೇ ಎಂದು ಪರಿಗಣಿಸಲಾಗಿದೆ.
ಟಿಪ್ಪಣಿ : ಈ ಐದು ತರಹದ ಉಪ್ಪುಗಳ ಬಗ್ಗೆ ತಿಳಿಯುವ ಕುತೂಹಲದಿಂದ ಗೂಗಲ್ ಸರ್ಚ್ ಮಾಡಿದ್ದಕ್ಕೆ ಲಂಡನ್ ನಲ್ಲಿರುವ ಆಯುರ್ವೇದಿಕ್ ಮೆಡಿಸಿನ್ ಶಾಲೆಯ ಸ್ಥಾಪಕಿ ಅಲಕಾನಂದ ಮಾ MBBS ಅವರು ಕೊಟ್ಟಿರುವ ವಿವರಣೆ ನನಗೆ ಇಷ್ಟವಾಯಿತು. ಮುಂದೆ ಇವರ ವಿವರಣೆಯನ್ನು ಆಧರಿಸಿ, ಸಾಂಸ್ಕೃತಿಕ ದೃಷ್ಟಿಯಿಂದ ಕನ್ನಡೀಕರಿಸಿದ್ದೇನೆ : ವಿ.ಚಂದ್ರಶೇಖರ ನಂಗಲಿ,