ವೇದವ್ಯಾಸ ವಿರಚಿತ ನವಗ್ರಹ ಶಾಂತಿ ಮಂತ್ರಗಳು : ನಿತ್ಯಪಾಠ #1

ಗ್ರಹ ಬಲಕ್ಕಾಗಿ ಈ ಕೆಳಗೆ ನೀಡಿರುವ ಮಂತ್ರಗಳನ್ನು ಪ್ರತಿದಿನ ಬೆಳಗ್ಗೆ 108 ಬಾರಿ ಭಕ್ತಿಯಿಂದ ಧ್ಯಾನಿಸಿದರೆ ಅಥವಾ ಆಲಿಸಿದರೆ ಶುಭವಾಗುತ್ತದೆ ಎಂದು ಹೇಳಲಾಗಿದೆ. ನಿಮ್ಮ ಪ್ರತಿಯೊಂದು ಪ್ರಯತ್ನ ಮತ್ತು ಕರ್ತವ್ಯಗಳನ್ನು ಪರಿಪೂರ್ಣವಾಗಿ ನಡೆಸಿದರೆ ಮಾತ್ರ ಈ ಮಂತ್ರಗಳು ಫಲ ನೀಡುವವು. ಆದ್ದರಿಂದ ಆಸ್ತಿಕ – ಶ್ರದ್ಧಾವಂತರು ಮನುಷ್ಯಪ್ರಯತ್ನದ ಜೊತೆ ದೈವಾನುಗ್ರಹ ಮತ್ತು ಗ್ರಹಬಲಕ್ಕಾಗಿ ಈ ಮಂತ್ರಗಳನ್ನು ಪಠಿಸುವುದು ಸೂಕ್ತ.

ಸೂರ್ಯ ಗ್ರಹ ಶಾಂತಿ ಮಂತ್ರ
ಓಂ ಜಪಾಕುಸುಮ ಸಂಕಾಶಂ । ಕಾಶ್ಯಪೇಯಂ ಮಹಾದ್ಯುತಿಂ ।
ತಮೋsರಿಮ್ ಸರ್ವಪಾಪಘ್ನಮ್ । ಪ್ರಣತೋsಸ್ಮಿ ದಿವಾಕರಂ ।।

ಭಾವಾರ್ಥ : ದಾಸವಾಳ ಹೂಗಳಂತೆ ಕಂಗೊಳಿಸುವ, ಕಶ್ಯಪನ ಮಗನಾದ, ಶತ್ರುವೋ ಎಂಬಂತೆ ಕತ್ತಲನ್ನು ಅಟ್ಟುವ, ಸಕಲ ಪಾಪಗಳನ್ನು ಪರಿಹರಿಸುವ ದಿವಾಕರನಿಗೆ ನಮಸ್ಕರಿಸುತ್ತೇನೆ.

ಚಂದ್ರ ಗ್ರಹ ಶಾಂತಿ ಮಂತ್ರ
ಓಂ ದಧಿಶಂಖತುಷಾರಾಭಂ । ಕ್ಷೀರೋದಾರ್ಣವಸಂಭವಮ್।
ನಮಾಮಿ ಶಶಿನಂ ಸೋಮಂ । ಶಂಬೋರ್ಮುಕುಟ ಭೂಷಣಂ ।।

ಭಾವಾರ್ಥ : ಮೊಸರು, ಶ೦ಖ, ಹಿಮದ೦ತೆ ಹೊಳೆಯುವ; ಕ್ಷೀರಸಾಗರದಿಂದ ಹೊರಹೊಮ್ಮಿದ, ಕಾಂತಿಯುಕ್ತನಾದ, ಮಹಾದೇವನ ಶಿರಸ್ಸನ್ನು ಅಲಂಕರಿಸಿರುವ ಚಂದ್ರದೇವನಿಗೆ ನಮಸ್ಕರಿಸುತ್ತೇನೆ.

ಕುಜ ಗ್ರಹ ಶಾಂತಿ ಮಂತ್ರ
ಓಂ ಧರಣೀಗರ್ಭ ಸಂಭೂತಂ । ವಿದ್ಯುತ್ ಕಾಂತಿ ಸಮಪ್ರಭಮ್ ।
ಕುಮಾರಂ ಶಕ್ತಿ ಹಸ್ತಾಂಚ । ಮಂಗಳಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಧರಣೀದೇವಿಯ ಗರ್ಭದಲ್ಲಿ ಜನಿಸಿದ, ವಿದ್ಯುತ್ ಕಾಂತಿಗೆ ಸಮನಾದ ಪ್ರಭಾವಳಿಯುಳ್ಳ, ಶಕ್ತ್ಯಾಯುಧದಿಂದ ಶೋಭಿಸುವ, ತರುಣನಾದ ಮಂಗಳನಿಗೆ (ಕುಜ / ಅಂಗಾರಕ) ನಮಸ್ಕರಿಸುತ್ತೇನೆ.

ಬುಧ ಗ್ರಹ ಶಾಂತಿ ಮಂತ್ರ
ಓಂ ಪ್ರಿಯಂಗುಕಾಲಿಕ ಶ್ಯಾಮಂ । ರೂಪೇಣಾಮ್ ಪ್ರತಿಮಂ ಬುಧಮ್ ।
ಸೌಮ್ಯಮ್ ಸೌಮ್ಯ ಗುಣೋಪೇತಂ । ತಮ್ ಬುಧಮ್ ಪ್ರಣಮಾಮ್ಯಹಮ್ ।।

ಭಾವಾರ್ಥ : ಪ್ರಿಯ೦ಗು ಲತೆಯ ಚಿಗುರಿನ೦ತೆ ಶ್ಯಾಮವರ್ಣದವನೂ ಸುಂದರನೂ ಸೌಮ್ಯಗುಣಸಂಪನ್ನನೂ ಆದ ಬುಧ ದೇವನನ್ನು ನಮಸ್ಕರಿಸುತ್ತೇನೆ.

ಗುರು ಗ್ರಹ ಶಾಂತಿ ಮಂತ್ರ
ಓಂ ದೇವಾನಾಮ್ ಚ ಋಷಿಣಾಮ್ ಚ । ಗುರುಮ್ ಕಾಂಚನ ಸನ್ನಿಭಮ್ ।
ಬುದ್ಧಿ ಭೂತಂ ತ್ರಿಲೋಕೇಶಂ । ತಮ್ ನಮಾಮಿ ಬೃಹಸ್ಪತಿಮ್ ।।

ಭಾವಾರ್ಥ : ದೇವತೆಗಳಿಗೂ ಋಷಿಗಳಿಗೂ ಪ್ರಿಯನಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳಲ್ಲೂ ಸಾಟಿಯಿಲ್ಲದಷ್ಟು ಬುದ್ಧಿಮತ್ತೆ ಹೊಂದಿರುವ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.

ಶುಕ್ರ ಗ್ರಹ ಶಾಂತಿ ಮಂತ್ರ
ಓಂ ಹಿಮಕುಂದ ಮೃಣಾಲಾಭಂ । ದೈತ್ಯಾನಾಮ್ ಪರಮಮ್ ಗುರುಮ್ ।
ಸರ್ವಶಾಸ್ತ್ರ ಪ್ರವಕ್ತಾರಮ್ । ಭಾರ್ಗವಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಸಕಲ ಶಾಸ್ತ್ರ ಪರಿಣತನಾದ, ಭೃಗು ಮಹರ್ಷಿಯ ಕುಲದವನಾದ ಶುಕ್ರನಿಗೆ ನಮಸ್ಕರಿಸುತ್ತೇನೆ.

ಶನಿ ಗ್ರಹ ಶಾಂತಿ ಮಂತ್ರ
ಓಂ ನೀಲಾಂಜನ್ ಸಮಾಭಾಸಂ । ರವಿಪುತ್ರಂ ಯಮಾಗ್ರಜಮ್ ।
ಛಾಯಮಾರ್ತಾಂಡ ಸಮಭೂತಂ । ತಮ್ ನಮಾಮಿ ಶನೈಶ್ಚರಮ್ ।।

ಭಾವಾರ್ಥ : ನೀಲವರ್ಣದಿಂದ ಶೋಭಿಸುವ, ಸೂರ್ಯದೇವನ ಮಗನೂ ಯಮನ ಹಿರಿಯ ಸಹೋದರನೂ ಆದ ಛಾಯಾಪುತ್ರ ಶನಿದೇವನಿಗೆ ನಮಸ್ಕರಿಸುತ್ತೇನೆ.

ರಾಹು ಗ್ರಹ ಶಾಂತಿ ಮಂತ್ರ
ಓಂ ಅರ್ಧಕಾಯಂ ಮಹಾವೀರ್ಯಮ್ । ಚಂದ್ರಾದಿತ್ಯ ವಿಮರ್ದನಂ ।
ಸಿಂಹಿಕಾಗರ್ಭಸಂಭೂತಂ । ತಮ್ ರಾಹುಮ್ ಪ್ರಣಮಾಮ್ಯಹಮ್ ।।

ಭಾವಾರ್ಥ : ಅರ್ಧ ದೇಹವನ್ನು ಹೊಂದಿದ್ದರೂ ವೀರನಾದ, ಸೂರ್ಯ ಚಂದ್ರರನ್ನು ಗ್ರಹಣದ ಮೂಲಕ ಪೀಡಿಸುವ, ಸಿಂಹಿಕೆಯ ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ.

ಕೇತು ಗ್ರಹ ಶಾಂತಿ ಮಂತ್ರ
ಓಂ ಪಲಾಶಪುಷ್ಪ ಸಂಕಾಶಂ । ತಾರಕಾಗ್ರಹ ಮಸ್ತಕಂ ।
ರೌದ್ರಂ ರೌದ್ರಾತ್ಮಕಂ ಘೋರಂ । ತಮ್ ಕೇತುಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು.

ನಮಃ ಸೂರ್ಯಾಯ ಸೋಮಾಯ ಮ೦ಗಲಾಯ ಬುಧಾಯ ಚ|
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||
ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ ಸುಸಮಾಹಿತಃ|
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||
ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಅಥವಾ ರಾತ್ರಿ ವೇಳೆ ಏಕಾಗ್ರತೆಯಿಂದ ಪಠಿಸಿದರೆ ಉತ್ತಮ ಫಲಗಳು ದೊರೆಯುವವು.

1 Comment

Leave a Reply to Kishore kulkarniCancel reply