ಮೂಲ : ಸೂಫಿ ಕವಿ ಜೆಬುನ್ನಿಸಾ (ಮಕ್’ಫಿ) | ಭಾವಾನುವಾದ : ಚೇತನಾ ತೀರ್ಥಹಳ್ಳಿ
ಭಾವಿಸಲಿ ಜನ ನನ್ನನು,
ದೂಳಾಗಿ ನೆಲ ಕಚ್ಚಿದಂತೆ, ಅಪಮಾನದಲಿ ಮುಳುಗಿಹೋದಂತೆ;
ನಾನೇಕೆ ತಲೆ ತಗ್ಗಿಸಲಿ, ಮುಖದಲ್ಲಿ ಲಜ್ಜೆ ಹೊತ್ತು?
ಜಗದ ಮಾನಾಪಮಾನಗಳ ಗೊಡವೆ ಇಲ್ಲ ನನಗೆ!
ಲೋಕ ದುಃಖದ ಭಾರ ಹೊರೆ ಹೊರಿಸಿದಾಗಲೂ
ಕಣ್ಣಾಲಿ ತುಳುಕಿಸದೆ, ಘನತೆಯಲಿ ನಡೆದವಳು;
ಹುಬ್ಬು ಕೊಂಕಿಸದವಳು, ಯಾವ ಯಾತನೆಗೂ.
ಕಾಲವೆಷ್ಟಾಯಿತೋ ನೋವು ಎದೆಗೊಳವ ತುಂಬಿ;
ಈಜಲಾಗದೆ ಸೋಲಲಾರೆ ನಾನು,
ಹೋರಾಡುವ ಕಲೆ ಬಹಳ ಬಲ್ಲೆ!
ಕಠೋರ ವಿಧಿ ಹಗೆ ಸಾಧಿಸಿ ಮುಗಿಬಿದ್ದರೂ,
ಹೆಜ್ಜೆ ಹಿಂದಿಡೆನು;
ಕಾಯುವೆನು,
ಜನ್ನತಿನ ತಂಗಾಳಿ ಬೀಸುವುದು.
ಬಿಡದೆ ಹುಡುಕುವೆನು ಮಕ್’ಫಿ,
ಅದರೊಳಗೂ ಪ್ರಿಯತಮನ ಘಮಲು.