ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಜನ ತಮ್ಮ ಸಮಸ್ಯೆಗಳನ್ನು
ನನ್ನೆದುರು ಹೇಳಿಕೊಳ್ಳುತ್ತಾರೆ.
ಪ್ರತೀಬಾರಿ ಒಂದು ಸಮಸ್ಯೆಗೆ
ಹತ್ತು ಪರಿಹಾರಗಳನ್ನು ಸೂಚಿಸುತ್ತೇನೆ,
ಎಲ್ಲ ತಾಜಾ ಉತ್ತರಗಳೇ.
ನಾನು ಸೂಚಿಸಿದ ಪ್ರತೀ ಸಮಾಧಾನದಲ್ಲಿಯೂ
ಒಂದು ಘನತೆ, ಒಂದು ಸ್ಪಷ್ಟತೆ ಇದೆ.
ಯಾವ ಪುಸ್ತಕಗಳಲ್ಲಿಯೂ
ಇಂಥ ಉತ್ತರಗಳನ್ನು ನೀವು ಕಾಣಲಾರಿರಿ.
ರೂಮಿ ಒಮ್ಮೆ ಹೇಳಿದ,
ನನಗೆ ನಿನ್ನ ಬಗ್ಗೆ ಗೊತ್ತಿರುವುದರಿಂದ ಹೇಳುತ್ತೇನೆ ಶಮ್ಸ್,
ನನಗೆ ಅತ್ಯಂತ ಪ್ರೀಯವಾದ ಈ ಪುಸ್ತಕಗಳು
ಸತ್ತ ಪಠ್ಯದಂತೆ ಓದಿಸಿಕೊಳ್ಳುತ್ತವೆ.
****
ರೂಮಿ
ತನ್ನ ಅಂತಃಕರಣದ ಭಾವಪರವಶತೆಯಲ್ಲಿ
ಮೈಮರೆತುಬಿಟ್ಚಾಗಲೆಲ್ಲ
ಸ್ಪಷ್ಟತೆಯನ್ನು ಕಳೆದುಕೊಂಡುಬಿಡುತ್ತಾನೆ.
ಆ ಸ್ಥಿತಿಗೆ ಶರಣಾಗಿ
ಎಲ್ಲವನ್ನೂ ಮರೆತುಬಿಡುತ್ತಾನೆ.
ಆದರೆ ನಾನು ಹಾಗಲ್ಲ,
ಅರಿವು ನನ್ನ ಕೈ ಬಿಡಿದು ನಡೆಸುತ್ತದೆ,
ನಾನೂ ಅದೇ ಆನಂದ ಅನುಭವಿಸುತ್ತೇನಾದರೂ
ಪ್ರೇಮದ ಭಾವೋನ್ಮಾದ
ನನ್ನ ಯಾವತ್ತೂ ಮೈ ಮರೆಸಿಲ್ಲ.
******
ರೂಮಿಯೊಂದಿಗೆ ನಾನು
ಯಾವತ್ತೂ ಗುರುವಿನ ಹಾಗೆ ನಡೆದುಕೊಂಡಿಲ್ಲ.
ಅವನ ಗುರುವಾಗಲಾರೆ ಎನ್ನುವ
ಪೂರ್ಣ ತಿಳುವಳಿಕೆಯೊಂದಿಗೆಯೇ
ಇಲ್ಲಿ ಬಂದಿದ್ದೇನೆ.
ಅವನಿಗೆ ಗುರುವಾಗಬಲ್ಲವ
ಇನ್ನೂ ಹುಟ್ಟ ಬೇಕಿದೆ.
ಯಾರಿಗಾದರೂ
ಶಿಷ್ಯನಾಗುವ ಹಂತವನ್ನ ದಾಟಿ
ನಾನೂ ಬಹಳ ಮುಂದೆ ಬಂದುಬಿಟ್ಟಿದ್ದೇನೆ.
ಯಾವ ಕಪಟ, ನಟನೆ ಇಲ್ಲದೆಯೇ
ಯಾವ ಮುಜುಗರವೂ ಇಲ್ಲದೆಯೇ
ಯಾರೊಂದಿಗೆ ನಾನು
ಸಾಚಾ ಆಗಿ
ತೆರೆದುಕೊಳ್ಳಬಲ್ಲೆನೋ
ಆ ಗೆಳೆಯನ, ಗೆಳೆತನಕ್ಕೆ ಶರಣಾಗಲು
ನಾನು ಇಲ್ಲಿ ಬಂದದ್ದೇನೆ
– ಶಮ್ಸ್ ತಬ್ರೀಝ್